
ಬೆಂಗಳೂರು (ಫೆ.10): ರಾಜ್ಯ ಬಿಜೆಪಿಯ ಭಿನ್ನರ ದೆಹಲಿ ಯಾತ್ರೆ ಬೆನ್ನಲ್ಲೇ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರೂ ಭಾನುವಾರ ದಿಢೀರ್ ದೆಹಲಿಗೆ ತೆರಳಿದ್ದು ತೀವ್ರ ಕುತೂಹಲ ಮೂಡಿಸಿದೆ.ಪಕ್ಷದ ವರಿಷ್ಠರ ಬುಲಾವ್ ಮೇರೆಗೆ ದೆಹಲಿಗೆ ಹೋಗಿದ್ದಾರೆ ಎನ್ನಲಾಗುತ್ತಿದ್ದರೂ ಇದನ್ನು ವಿಜಯೇಂದ್ರ ಅವರ ಆಪ್ತರು ನಿರಾಕರಿಸಿದ್ದಾರೆ. ಖಾಸಗಿ ಕೆಲಸದ ನಿಮಿತ್ತ ತೆರಳಿದ್ದಾರೆ ಎಂಬ ಸಮಜಾಯಿಷಿ ನೀಡುತ್ತಿದ್ದಾರೆ.
ವಿಜಯೇಂದ್ರ ಅವರು ಮಧ್ಯಾಹ್ನ ರಾಜನಹಳ್ಳಿಯಲ್ಲಿ ನಡೆಯಲಿರುವ ಮಹರ್ಷಿ ವಾಲ್ಮೀಕಿ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವ ಸಂಬಂಧ ಚಿತ್ರದುರ್ಗಕ್ಕೆ ತೆರಳಬೇಕಿತ್ತು. ಆದರೆ, ಕೊನೆ ಕ್ಷಣದಲ್ಲಿ ತಮ್ಮ ಪ್ರವಾಸ ರದ್ದುಪಡಿಸಿ ದೆಹಲಿಗೆ ತೆರಳಿದ್ದಾರೆ ಎನ್ನಲಾಗಿದೆ. ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಣದ ಮುಖಂಡರು ಕಳೆದ ವಾರ ದೆಹಲಿಗೆ ತೆರಳಿ ಪಕ್ಷದ ಸಂಸದರನ್ನು ಭೇಟಿ ಮಾಡಿ ವಾಪಸಾಗಿದ್ದರು. ಇದೀಗ ಭಾನುವಾರ ಎರಡನೇ ಬಾರಿ ದೆಹಲಿಗೆ ತೆರಳಿದ್ದಾರೆ. ಸೋಮವಾರ ಮತ್ತೊಂದು ಸುತ್ತಿನ ಸಭೆಯನ್ನೂ ನಡೆಸಲಿದ್ದಾರೆ. ಹೀಗಾಗಿ, ವಿಜಯೇಂದ್ರ ಅವರ ದಿಢೀರ್ ದೆಹಲಿ ಭೇಟಿ ಸಹಜವಾಗಿಯೇ ಕುತೂಹಲ ಮೂಡಿಸಿದೆ.
ಹಿರಿಯರು ಸುಮ್ಮನಿರುವುದು ಅಪರಾಧ: ಕಳೆದ ಒಂದು ವರ್ಷದಿಂದ ಪಕ್ಷದ ಕೆಲವರು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಬಗ್ಗೆ ಬಹಿರಂಗವಾಗಿ ತೇಜೋವಧೆ ಮಾಡುತ್ತಿದ್ದರೂ ಪಕ್ಷದ ಹಿರಿಯರು ಸುಮ್ಮನಿರುವುದು ದುರ್ದೈವದ ಸಂಗತಿ. ಈ ವಿಚಾರದಲ್ಲಿ ಸುಮ್ಮನೆ ಕುಳಿತುಕೊಳ್ಳುವುದೂ ಒಂದು ಅಪರಾಧವೇ ಸರಿ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತೀಕ್ಷ್ಣವಾಗಿ ಹೇಳಿದ್ದಾರೆ. ‘ನನ್ನ ಕೆಲಸದ ಬಗ್ಗೆ ಪಕ್ಷದ ಲಕ್ಷಾಂತರ ಕಾರ್ಯಕರ್ತರಿಗೆ ತೃಪ್ತಿ ಇದೆ. ರಾಷ್ಟ್ರೀಯ ನಾಯಕರು ಕೆಲ ತೀರ್ಮಾನ ಮಾಡುವಾಗ ಕಾರ್ಯಕರ್ತರ ಅಭಿಪ್ರಾಯಗಳನ್ನೂ ಪರಿಗಣಿಸುತ್ತಾರೆ’ ಎಂದು ಹೇಳುವ ಮೂಲಕ ಅವರು ಪರೋಕ್ಷವಾಗಿ ರಾಜ್ಯಾಧ್ಯಕ್ಷ ಸ್ಥಾನದಲ್ಲಿ ತಾವೇ ಮುಂದುವರೆಯುವ ವಿಶ್ವಾಸವನ್ನೂ ವ್ಯಕ್ತಪಡಿಸಿದ್ದಾರೆ.
ನನ್ನ, ಜನಾರ್ದನ ರೆಡ್ಡಿ ಸಂಬಂಧ ಅಂತ್ಯ, ಅದು ಎಂದೂ ಸರಿಹೋಗಲ್ಲ: ಶ್ರೀರಾಮುಲು
ಪಕ್ಷದ ಕಚೇರಿಯಲ್ಲಿ ದಿಢೀರ್ ಪತ್ರಿಕಾಗೋಷ್ಠಿ ನಡೆಸಿದ ಅವರು ಯಡಿಯೂರಪ್ಪ ಅವರ ವಿರುದ್ಧ ಪಕ್ಷದ ಕೆಲ ನಾಯಕರು ನೀಡುತ್ತಿರುವ ಹೇಳಿಕೆಗಳ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿ ವಾಗ್ದಾಳಿ ನಡೆಸಿದರು. ತಮ್ಮ ವಿರುದ್ಧದ ಟೀಕೆಗಳಿಗೂ ಉತ್ತರ ನೀಡುವ ಪ್ರಯತ್ನ ಮಾಡಿದರು. ರಾಜ್ಯದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿದ ಯಡಿಯೂರಪ್ಪ ಅವರನ್ನು ಪಕ್ಷದ ಕೆಲವರು ಕಳೆದ ಒಂದು ವರ್ಷದಿಂದ ಅವಮಾನಿಸುವ ಹಾಗೂ ತೇಜೋವಧೆ ಮಾಡುವ ಕೆಲಸ ಮಾಡುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.