ಶಾಸಕ ಯತ್ನಾಳ್‌ ನೇತೃತ್ವದ ಭಿನ್ನರ ಬಣ ವಾರದಲ್ಲಿ 2ನೇ ಬಾರಿಗೆ ದೆಹಲಿಗೆ ದಂಡಯಾತ್ರೆ

Published : Feb 10, 2025, 07:26 AM IST
ಶಾಸಕ ಯತ್ನಾಳ್‌ ನೇತೃತ್ವದ ಭಿನ್ನರ ಬಣ ವಾರದಲ್ಲಿ 2ನೇ ಬಾರಿಗೆ ದೆಹಲಿಗೆ ದಂಡಯಾತ್ರೆ

ಸಾರಾಂಶ

ರಾಜ್ಯ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ ನೇತೃತ್ವದ ಭಿನ್ನರ ಬಣ ವಾರದಲ್ಲಿ ಎರಡನೇ ಬಾರಿಗೆ ದೆಹಲಿಗೆ ದಂಡಯಾತ್ರೆ ಕೈಗೊಂಡಿದೆ.

ಬೆಂಗಳೂರು (ಫೆ.10): ರಾಜ್ಯ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ ನೇತೃತ್ವದ ಭಿನ್ನರ ಬಣ ವಾರದಲ್ಲಿ ಎರಡನೇ ಬಾರಿಗೆ ದೆಹಲಿಗೆ ದಂಡಯಾತ್ರೆ ಕೈಗೊಂಡಿದೆ. ಸೋಮವಾರ ಕೇಂದ್ರ ರೇಲ್ವೆ ಮತ್ತು ಜಲಶಕ್ತಿ ಖಾತೆಯ ರಾಜ್ಯ ಸಚಿವ ವಿ.ಸೋಮಣ್ಣ ಅವರ ನಿವಾಸದಲ್ಲಿ ಪೂಜಾ ಕಾರ್ಯಕ್ರಮ ಇರುವುದರಿಂದ ಅದನ್ನೇ ನೆಪವಾಗಿಸಿಕೊಂಡು ಪಕ್ಷದ ಲಿಂಗಾಯತ ನಾಯಕರ ಸಭೆ ನಡೆಸಲು ಯತ್ನಾಳ್‌ ಬಣ ಮುಂದಾಗಿದೆ. ಈ ಮೂಲಕ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನು ದೂರವಿಟ್ಟು ಪಕ್ಷ ಮುನ್ನಡೆಸಬಹುದು ಎಂಬ ಸಂದೇಶವನ್ನು ವರಿಷ್ಠರಿಗೆ ರವಾನಿಸುವ ಉದ್ದೇಶ ಅಡಗಿದೆ ಎಂದು ಮೂಲಗಳು ತಿಳಿಸಿವೆ.

ಭಾನುವಾರ ಸಂಜೆ ಯತ್ನಾಳ್, ರಮೇಶ್ ಜಾರಕಿಹೊಳಿ ಸೇರಿ ಅವರ ಬಣದ ಹಲವು ಮುಖಂಡರು ದೆಹಲಿ ತಲುಪಿದರು. ಇನ್ನೂ ಕೆಲವರು ಸೋಮವಾರ ಬೆಳಗ್ಗೆ ಪ್ರಯಾಣಿಸಲಿದ್ದಾರೆ.ಕಳೆದ ವಾರ ದೆಹಲಿಗೆ ತೆರಳಿದ್ದ ಯತ್ನಾಳ್‌ ಬಣದ ಮುಖಂಡರಿಗೆ ದೆಹಲಿ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ವರಿಷ್ಠರ ಭೇಟಿ ಸಾಧ್ಯವಾಗಲಿಲ್ಲ. ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್ ಅವರು ಮಾತ್ರ ಲಭ್ಯವಾಗಿದ್ದರು. ಇನ್ನುಳಿದಂತೆ ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರ ಸಚಿವರು ಹಾಗೂ ಸಂಸದರನ್ನು ಭೇಟಿ ಮಾಡಿ ವಾಪಸಾಗಿದ್ದರು. ಈ ಬಾರಿ ಮತ್ತೊಮ್ಮೆ ವರಿಷ್ಠರ ಭೇಟಿಗೆ ಯತ್ನಾಳ್ ಬಣದ ಮುಖಂಡರು ಪ್ರಯತ್ನ ನಡೆಸಲಿದ್ದಾರೆ. 

ಮುಖ್ಯವಾಗಿ ರಾಷ್ಟ್ರೀಯ ಬಿಜೆಪಿಯ ಪ್ರಭಾವಿ ನಾಯಕರೂ ಆಗಿರುವ ಕೇಂದ್ರ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಲು ಯತ್ನಿಸುತ್ತಿದ್ದಾರೆ. ಈ ಬಾರಿಯಾದರೂ ಭೇಟಿ ಸಿಗಬಹುದೇ ಎಂಬುದನ್ನು ಕಾದು ನೋಡಬೇಕು.ಸೋಮಣ್ಣ ಅವರ ನಿವಾಸದಲ್ಲಿನ ಪೂಜಾ ಕಾರ್ಯಕ್ರಮ ಹಿನ್ನೆಲೆಯಲ್ಲಿ ರಾಜ್ಯದ ಹಲವು ಮುಖಂಡರು ಸೋಮವಾರ ದೆಹಲಿ ತಲುಪುತ್ತಿದ್ದಾರೆ. ಹೀಗಾಗಿ, ಇದನ್ನೇ ಬಳಸಿಕೊಂಡು ಪಕ್ಷದ ಲಿಂಗಾಯತ ನಾಯಕರ ಸಭೆ ನಡೆಸಬೇಕು. ಈ ಮೂಲಕ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದಿಂದ ವಿಜಯೇಂದ್ರ ಅವರನ್ನು ಕೈಬಿಟ್ಟು ಬೇರೊಬ್ಬರನ್ನು ನೇಮಿಸಬೇಕು ಎಂಬ ಬೇಡಿಕೆ ಮುಂದಿಡಲು ಯತ್ನಾಳ್‌ ಬಣ ತಂತ್ರಗಾರಿಕೆ ರೂಪಿಸುತ್ತಿದೆ.

ಹೈಕಮಾಂಡ್‌ನಿಂದ ವಿಜಯದ ಸಂಕೇತ ಸಿಕ್ಕಿದೆ: ಶಾಸಕ ಯತ್ನಾಳ

ದಾವಣಗೆರೆಯಲ್ಲಿ ರೆಬೆಲ್‌ ನಾಯಕರ ಸಭೆ: ಬಿಜೆಪಿ ರಾಜ್ಯಾಧ್ಯಕ್ಷರ ವಿರುದ್ಧ ಬಂಡೆದ್ದಿರುವ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಮತ್ತು ಅವರ ತಂಡದ ನಾಯಕರು ಶನಿವಾರ ರಾತ್ರಿ ಕೇಂದ್ರದ ಮಾಜಿ ಸಚಿವ ಡಾ। ಜಿ.ಎಂ.ಸಿದ್ದೇಶ್ವರ ಕುಟುಂಬದ ಒಡೆತನದ ದಾವಣಗೆರೆ ಜಿಎಂಐಟಿ ಅತಿಥಿ ಗೃಹದಲ್ಲಿ ಮಹತ್ವದ ಸಭೆ ನಡೆಸಿದ್ದಾರೆ.

ಬಿಜೆಪಿಯಲ್ಲಿ ನಾನೂ ಮುಖ್ಯಮಂತ್ರಿ ಅಭ್ಯರ್ಥಿ. ಅದೇ ರೀತಿ ರಾಜ್ಯಾಧ್ಯಕ್ಷ ಸ್ಥಾನ ಆಕಾಂಕ್ಷಿ. ದೆಹಲಿಯಲ್ಲಿ ಕೇಂದ್ರ ಸಚಿವ ವಿ.ಸೋಮಣ್ಣ ಗೃಹಪ್ರವೇಶಕ್ಕೆ ನಾವೆಲ್ಲಾ ಹೋಗುತ್ತಿದ್ದೇವೆ. ರಾಷ್ಟ್ರೀಯ ನಾಯಕರು ಸಿಗುತ್ತಾರೋ-ಇಲ್ಲವೋ ಪ್ರಯತ್ನ ಮುಂದುವರಿಸುತ್ತೇವೆ.
-ಬಸನಗೌಡ ಪಾಟೀಲ ಯತ್ನಾಳ್

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಬಿಹಾರದಲ್ಲಿ NDA ಗೆಲುವು ನಿಜ, ಆದ್ರೆ ಸೋತಿದ್ದು ಪ್ರಜಾಪ್ರಭುತ್ವ: ತೇಜಸ್ವಿ ಯಾದವ್
ಒಂದೇ ಕಾರಲ್ಲಿ ಪ್ರಯಾಣಿಸಿದ ಖರ್ಗೆ, ಡಿಕೆಶಿ: ತೀವ್ರ ರಾಜಕೀಯ ಕುತೂಹಲ