
ಹಾಸನ (ಮಾ.01): ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕಾಂಗ್ರೆಸ್ ತೊರೆದು ಬಿಜೆಪಿಗೆ ಬಂದೆ ಬಿಡ್ತಾರೆ ಅಂತಾ ಗುಸು, ಗುಸು ಶುರುವಾಗಿದೆ. ಇದರಲ್ಲಿ ಯಾವುದೇ ಅರ್ಥವಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು. ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯ ಸರ್ಕಾರದಲ್ಲಿ ದಿನೇ ದಿನೇ ಮುಖ್ಯಮಂತ್ರಿ ಸ್ಥಾನಕ್ಕೆ ಪೈಪೋಟಿ ಹೆಚ್ಚಾಗುತ್ತಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ಕೊಡಬೇಕು. ತಾವು ಮುಖ್ಯಮಂತ್ರಿ ಆಗಬೇಕು ಅಂತ ಅನೇಕರು ಕಾಯ್ತಾ ಇದ್ದಾರೆ. ಕಾಂಗ್ರೆಸ್ ಒಂದು ರೀತಿ ತಾಲಿಬಾನ್ ಸರ್ಕಾರ. ಹಿಂದುತ್ವಕ್ಕೆ, ಹಿಂದೂಗಳಿಗೂ ಗೌರವವಿಲ್ಲ.
ಪ್ರಯಾಗ್‌ರಾಜ್‌ನಲ್ಲಿ ಮಹಾ ಕುಂಭಮೇಳಕ್ಕೆ ಕಾಂಗ್ರೆಸ್ ಅವರು ತಕರಾರು ಎತ್ತಿದ್ರು. ಇದರ ಮಧ್ಯೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕುಟುಂಬ ಸಮೇತ ಕುಂಭಮೇಳಕ್ಕೆ ಹೋಗಿ ಬಂದಿದ್ದಾರೆ. ನಮ್ಮ ಪ್ರಾಚೀನತೆ, ಪರಂಪರೆ ಆಧಾರದ ಮೇಲೆ ಹೋಗಿ ಬಂದಿದ್ದಾರೆ ಎಂದರು. ಈಶ ಫೌಂಡೇಶನ್ ಕಾರ್ಯಕ್ರಮದಲ್ಲಿ ಕೇಂದ್ರ ಗೃಹಸಚಿವರ ಜೊತೆ ಡಿ.ಕೆ ಶಿವಕುಮಾರ್ ಅವರು ಭಾಗವಹಿಸಿದ್ದರು. ಶಿವರಾತ್ರಿ ಸಂದರ್ಭದಲ್ಲಿ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಡಿ.ಕೆ.ಶಿವಕುಮಾರ್ ಬಿಜೆಪಿಗೆ ಬಂದು ಬಿಡ್ತಾರೆ ಎಂಬ ಗುಸುಗುಸು ಶುರುವಾಗಿದೆ. ಇದಕ್ಕೆ ಯಾವ ರೀತಿಯೂ ಅರ್ಥವಿಲ್ಲ ಎಂದು ಹೇಳಿದರು.
ಕನ್ನಡ ವಿರುದ್ಧ ಪಿತೂರಿ ಸಹಿಸಲಸಾಧ್ಯ: ಈ ನೆಲದ ನೀರು, ಅನ್ನ, ಗಾಳಿ ಸೇವಿಸಿ ಕನ್ನಡದ ವಿರುದ್ಧ ಮಾತನಾಡುವುದು, ರಾಜ್ಯದ ವಿರುದ್ಧ ಪಿತೂರಿ ನಡೆಸುವುದನ್ನು ಸಹಿಸಲು ಸಾಧ್ಯವಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕಿಡಿಕಾರಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿ, ನಮ್ಮ ನೆಲದಲ್ಲಿ ಇದ್ದುಕೊಂಡು ಕನ್ನಡಿಗರ ತೇಜೋವಧೆ ಮಾಡುವುದು ಅಕ್ಷಮ್ಯ. ಅನೇಕ ಕನ್ನಡಪರ ಹೋರಾಟಗಾರರ ಹೇಳಿಕೆಗಳನ್ನು ಗಮನಿಸಿದ್ದೇನೆ. ಕಂಡಕ್ಟರ್ ಮೇಲಿನ ಹಲ್ಲೆ ವಿರುದ್ಧ ಕನ್ನಡಿಗರು ಧ್ವನಿ ಎತ್ತಬೇಕು. ಷಡ್ಯಂತ್ರ, ಪಿತೂರಿ ಮಾಡುವವರನ್ನು ಸರ್ಕಾರ ಹತ್ತಿಕ್ಕಬೇಕು ಎಂದು ಆಗ್ರಹಿಸಿದರು.
ಇಡ್ಲಿಯ ಡೆಡ್ಲಿ ಪ್ಲಾಸ್ಟಿಕ್ ಆಯ್ತು, ಈಗ ಟ್ಯಾಟೂಗೆ ನಿಷೇಧದೇಟು?: ಸಚಿವ ದಿನೇಶ್
ಉದಯಗಿರಿ ಘಟನೆ ಹಿನ್ನೆಲೆಯಲ್ಲಿ ಸೋಮವಾರ ಮೈಸೂರು ಚಲೋ ಕಾರ್ಯಕ್ರಮ ನಡೆಯಲಿದೆ. ನಾನು ಮೈಸೂರಿಗೆ ತೆರಳಲಿದ್ದೇನೆ. ರಾಜ್ಯ ಸರ್ಕಾರ ಕಾನೂನು-ಸುವ್ಯವಸ್ಥೆ ವಿಚಾರದಲ್ಲಿ ಸಂಪೂರ್ಣ ವಿಫಲವಾಗಿದೆ. ಉದಯಗಿರಿ ಘಟನೆ, ಪೊಲೀಸ್ ಠಾಣೆಗೆ ಪುಡಾರಿಗಳು ನುಗ್ಗಿ ದಾಂಧಲೆ ಮಾಡಿದವರನ್ನು ರಕ್ಷಿಸುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ ಎಂದು ವಿಜಯೇಂದ್ರ ಆಕ್ಷೇಪಿಸಿದರು. ಅಪರಾಧ ಪ್ರಕರಣಗಳ ಬಗ್ಗೆ ಗೃಹ ಸಚಿವರ ಹೇಳಿಕೆಯನ್ನು ಗಮನಿಸಿದ್ದೇನೆ. ನಾನು ರಾಜೀನಾಮೆ ಕೊಡಬೇಕೇ? ಅಥವಾ ಕೊಡುತ್ತೇನೆ ಎಂಬ ಧಾಟಿಯಲ್ಲಿ ಮಾತನಾಡಿದ್ದಾರೆ. ಇದು ಅವಿವೇಕತನದ ಪರಮಾವಧಿ. ಕಾನೂನು- ಸುವ್ಯವಸ್ಥೆ ಕಾಪಾಡಿ ಅಭಿವೃದ್ಧಿ ಮಾಡಬೇಕೆಂದು ನಿಮಗೆ ರಾಜ್ಯದ ಜನ ಆಶೀರ್ವಾದ ಮಾಡಿದ್ದಾರೆ. ಅದನ್ನು ಮಾಡದೇ ಈ ರೀತಿ ಹೇಳಿಕೆ ನೀಡಿದರೆ ದೇಶದ್ರೋಹಿಗಳು, ಕೊಲೆಗಡುಕರಿಗೆ ಆನೆ ಬಲ ಬಂದಂತಾಗುತ್ತದೆ ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.