
ಕುಶಾಲನಗರ (ಮಾ.01): ಕೋರ್ಟ್ ಆದೇಶ ಪಾಲಿಸಬೇಕಾಗಿರೋದು ರಾಜ್ಯ ಸರ್ಕಾರದ ಕರ್ತವ್ಯ ಎಂದು ಸಂಸದ ಯದುವೀರ್ ಒಡೆಯರ್ ಹೇಳಿದ್ದಾರೆ. ಅವರು ತಮ್ಮ ಕುಟುಂಬಕ್ಕೆ 3400 ಕೋಟಿ ರು. ನೀಡಲು ರಾಜ್ಯ ಸರ್ಕಾರಕ್ಕೆ ಸುಪ್ರೀಂ ಸೂಚನೆ ವಿಚಾರಕ್ಕೆ ಸಂಬಂಧಿಸಿದಂತೆ ಕುಶಾಲನಗರ ತಾಲೂಕಿನ ಕಣಿವೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕಾದ ಬಗ್ಗೆ ಸುಪ್ರೀಂಕೋರ್ಟ್ ಬಹಳ ಸ್ಪಷ್ಟವಾಗಿ ಆದೇಶದಲ್ಲಿ ತಿಳಿಸಿದೆ. ಇದೀಗ ರಾಜ್ಯ ಸರ್ಕಾರಕ್ಕೆ ತೀವ್ರ ಹಿನ್ನಡೆಯಾಗಿದ್ದು, ತಮಗೆ 3400 ಕೋಟಿ ರು. ನೀಡಲು ವಾರದ ಗಡುವು ನೀಡಿದ್ದಾರೆ.
ಆದರೆ ನಮಗೆ ಇದು ಸಂತೋಷದ ವಿಚಾರ ಅಲ್ಲ. ಕಾನೂನು ನ್ಯಾಯವನ್ನು ಎತ್ತಿ ಹಿಡಿದಿದೆ ಅಷ್ಟೇ ಎಂದರು. ರಾಜ್ಯ ಸರ್ಕಾರ ಖಜಾನೆಯಿಂದ ಒಂದು ಪೈಸೆ ಕೊಡುವ ಅವಶ್ಯಕತೆ ಇಲ್ಲ, ಕೇವಲ ಒಂದು ಸರ್ಟಿಫಿಕೇಟ್ ಕೊಡಬೇಕಾಗಿದೆ. ಇಷ್ಟು ಟಿಡಿಆರ್‌ನ ಮಾಲೀಕರು ನಾವು ಅಂತ ಅಷ್ಟೇ. ಅದರ ಮೂಲಕ ರಸ್ತೆ ಅಭಿವೃದ್ಧಿ, ಅಗಲಿಕರಣ ಮಾಡಬಹುದು. 2009ರಲ್ಲಿ ಟಿಡಿಆರ್ ಕೊಡುತ್ತೇವೆ ಎಂದು ಸರ್ಕಾರ ನಿರ್ಣಯ ಕೈಗೊಂಡಿತ್ತು. ಅವತ್ತಿನಿಂದ ಇವತ್ತಿನ ವರೆಗೆ 15 ವರ್ಷ ಸುಪ್ರೀಂಕೋರ್ಟ್‌ನಲ್ಲಿ ವಾದ ಮಾಡಿಕೊಂಡು ಬಂದಿದ್ದೇವೆ ಎಂದು ತಿಳಿಸಿದರು.
ರಾಜ್ಯದಲ್ಲಿ ಎಲ್ಲೇ ಆಗಲಿ ಅಭಿವೃದ್ಧಿ ಕೆಲಸ ನಿರಂತರವಾಗಿ ನಡೆಯಬೇಕು ಎಂದು ಹೇಳಿದ ಯದುವೀರ್, ರಾಜ್ಯ ಸರ್ಕಾರಕ್ಕೆ ಕೆಟ್ಟ ಹೆಸರು ಬರಬೇಕು ಎಂಬ ಯಾವುದೇ ದುರುದ್ದೇಶ ತಮ್ಮಲ್ಲಿ ಇಲ್ಲ. ರಾಜ್ಯ ಸರ್ಕಾರಕ್ಕೂ ಒಳ್ಳೆಯ ಹೆಸರು ಬರಬೇಕು, ಒಳ್ಳೆಯ ಕೆಲಸ ಮಾಡಬೇಕು ಎನ್ನುವುದು ನನ್ನ ಅಭಿಪ್ರಾಯವಾಗಿದೆ ಎಂದು ಹೇಳಿದರು. 2009ರಲ್ಲಿ ಟಿಡಿಅರ್ ಕೊಟ್ಟು ರಸ್ತೆ ಅಗಲೀಕರಣ ಮಾಡುವ ಬಗ್ಗೆ ಸರ್ಕಾರ ಒಪ್ಪಿಕೊಂಡಿತ್ತು. ರಾಜ್ಯ ಸರ್ಕಾರ ನಂತರ ಟಿಡಿಆರ್ ನೀಡಲು ನಿರಾಕರಿಸಿದೆ. ಸರ್ಕಾರ ಟಿಡಿಆರ್ ನೀಡದೆ, ಯಾವುದೇ ಪರಿಹಾರ ನೀಡದೆ ಬಳ್ಳಾರಿ ಮತ್ತು ಜಯಮಹಲ್ ರಸ್ತೆಗಳ ಅಭಿವೃದ್ಧಿ, ಅಗಲೀಕರಣ ಸಾಧ್ಯವಿಲ್ಲ ಎಂದರು.
ರಾಜ್ಯದಲ್ಲಿ ಉತ್ಪಾದನೆ, ಬಿಕರಿ ಆಗುವ ಉತ್ಪನ್ನಗಳಲ್ಲಿ 'ಕನ್ನಡ' ಬಳಕೆ ಕಡ್ಡಾಯ: ಸರ್ಕಾರ ಆದೇಶ
ಬೆಂಗಳೂರಿನ ನಾಗರಿಕರಿಗೆ ದಿನ ನಿತ್ಯ ಸಮಸ್ಯೆ ಅಗುತ್ತಿದೆ. ಅಭಿವೃದ್ಧಿ ಹಕ್ಕು ಪ್ರಮಾಣ ಪತ್ರವನ್ನು ನೀಡಿದಲ್ಲಿ 8000 ಕೋಟಿ ರು. ವೆಚ್ಚ ಮಾಡುವ ಬದಲು ಇದೊಂದು 120 ಕೋಟಿ ರು. ವೆಚ್ಚದಲ್ಲಿ ರಸ್ತೆ ಅಗಲಿಕರಣ ಮಾಡಬಹುದು. ಅದರೆ ಜನರಿಗೆ ರಾಜ್ಯ ಸರ್ಕಾರ ಅನನುಕೂಲ ಮಾಡಲು ಮುಂದಾಗಿದೆ ಎಂದು ತಮ್ಮ ಆಕ್ರೋಶ ಹೊರ ಹಾಕಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.