
ಮಂಗಳೂರು (ಫೆ.01): ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಮನೆ ಕಟ್ಟಲು, ವಿದ್ಯುತ್ ಸಂಪರ್ಕ ಪಡೆಯಲು ಜನ ಚದರಡಿಗೆ 100 ರು.ನಂತೆ ಲಂಚ ಪಾವತಿಸುವ ಪರಿಸ್ಥಿತಿ ಇದೆ. ಮುಂದೆ ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆ ವೇಳೆ ಚದರಡಿ ಮಂತ್ರಿ ಎಂಬ ಹೊಸ ಖಾತೆ ಸೃಷ್ಟಿಸಿದರೂ ಅಚ್ಚರಿ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದರು. ಬಿಜೆಪಿ ನೂತನ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅವರ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿ, ಹಿಂದಿನ ಬಿಜೆಪಿ ಸರ್ಕಾರದ ಮೇಲೆ ಕಾಂಗ್ರೆಸ್ಸಿಗರು 40 ಪರ್ಸೆಂಟ್ ಭ್ರಷ್ಟಾಚಾರ ಆರೋಪ ಮಾಡಿದ್ದರು.
ಆದರೆ ಈಗ ಬೆಂಗಳೂರು ನಗರದಲ್ಲಿ ಮನೆ ಕಟ್ಟಲು ಅನುಮತಿ ತೆಗೆದುಕೊಳ್ಳಬೇಕೆಂದರೆ ಚದರಡಿಗೆ 100 ರು.ನಂತೆ ಲಂಚ ಕೊಡಬೇಕು. ಮನೆಗೆ ಅನುಮತಿ ಸಿಕ್ಕಮೇಲೂ ವಿದ್ಯುತ್ ಸಂಪರ್ಕಕ್ಕೆ ಚದರಡಿಗೆ 100 ರು.ಕೊಡಬೇಕು. ರಾಜ್ಯದಲ್ಲಿ ಬಡವರು, ರೈತರು, ದಲಿತ ವಿರೋಧಿ, ಭ್ರಷ್ಟ ಸರ್ಕಾರ ಅಧಿಕಾರದಲ್ಲಿದೆ ಎಂದರು. ರಾಜ್ಯದಲ್ಲಿ ಬರ ಪರಿಸ್ಥಿತಿ ಇದ್ದರೂ ಸಂಕಷ್ಟದಲ್ಲಿರುವ ರೈತರಿಗೆ ಯಾವ ಸಹಾಯವನ್ನೂ ರಾಜ್ಯ ಸರ್ಕಾರ ಮಾಡಿಲ್ಲ. ಹಿಂದೆ ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಬರದಿಂದ ಸಂಕಷ್ಟದಲ್ಲಿದ್ದ ರೈತರ ಅಕೌಂಟಿಗೆ 13 ಸಾವಿರ ರು. ಹಾಕಿದ್ದರು. ಪ್ರವಾಹ ಪರಿಸ್ಥಿತಿ ಇದ್ದಾಗ 5 ಲಕ್ಷ ರು. ಪರಿಹಾರ ಒದಗಿಸಿದ್ದರು ಎಂದರು.
‘ಅಹಿಂದ ಸಿದ್ದು, ‘ಹಿಂದ’ ಹಿಂದಿಕ್ಕಿ ಅಲ್ಪಸಂಖ್ಯಾತರ ಜಪ ಮಾಡ್ತಿದ್ದಾರೆ’: ವಿಜಯೇಂದ್ರ ಆರೋಪ
ಅಹಿಂದ ಎನ್ನುತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಇದೀಗ ಅಹಿಂದದಲ್ಲಿ ಹಿಂದುಳಿದ ವರ್ಗವನ್ನು ಕೈಬಿಟ್ಟು ‘ಅ’ ಅಂದರೆ ಅಲ್ಪಸಂಖ್ಯಾತರ ಹಿಂದೆ ಓಡುತ್ತಿದ್ದಾರೆ. ಅದರಿಂದ ಯಾವ ಉಪಯೋಗವೂ ಇಲ್ಲ. ಮೂರನೇ ಬಾರಿಗೆ ಮೋದಿ ಪ್ರಧಾನಿಯಾಗುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಲೋಕಸಭೆ ಚುನಾವಣೆಯಲ್ಲಿ ರಾಜ್ಯದ ಎಲ್ಲ 28 ಸೀಟುಗಳನ್ನು ಬಿಜೆಪಿ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಧರ್ಮಸ್ಥಳ ಕ್ಷೇತ್ರ ಭೇಟಿ: ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ ವಿಜಯೇಂದ್ರ ಬುಧವಾರ ಬೆಳಗ್ಗೆ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಶ್ರೀ ಮಂಜುನಾಥ ಸ್ವಾಮಿ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ದ.ಕ.ಜಿಲ್ಲಾ ಬಿಜೆಪಿ ನೂತನ ಅಧ್ಯಕ್ಷ ಸತೀಶ್ ಕುಂಪಲ ಅವರ ನೂತನ ಪದಗ್ರಹಣ ಹಿನ್ನೆಲೆ ಮಂಗಳೂರು ಆಗಮಿಸಿ ಮಂಗಳವಾರ ಅಡ್ಯಾರ್ ಗಾರ್ಡನ್‌ನಲ್ಲಿ ನಡೆದ ಸಮಾರಂಭದಲ್ಲಿ ಪಾಲ್ಗೊಂಡು ಬುಧವಾರ ರಾತ್ರಿಯೇ ಧರ್ಮಸ್ಥಳದಲ್ಲಿ ತಂಗಿದ್ದರು.
ಬ್ಲಾಕ್‌ಮೇಲ್ ಅಲ್ಲದೇ ಮತ್ತೇನು, ಕಾಂಗ್ರೆಸ್‌ನವರಿಗೆ ನಾಚಿಕೆಯಾಗಬೇಕು: ಬಿ.ವೈ.ವಿಜಯೇಂದ್ರ ಹೇಳಿದ್ದೇನು?
ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಮೊದಲ ಬಾರಿಗೆ ಬೆಳ್ತಂಗಡಿ ಕ್ಷೇತ್ರಕ್ಕೆ ಆಗಮಿಸುತ್ತಿರುವ ಹಿನ್ನೆಲೆ ಶಾಸಕ ಹರೀಶ್ ಪೂಂಜ ನೇತೃತ್ವದಲ್ಲಿ ಕಾರ್ಯಕರ್ತರು ಮಂಗಳವಾರ ರಾತ್ರಿ ಪುಂಜಾಲಕಟ್ಟೆಯಲ್ಲಿ ಭವ್ಯ ಸ್ವಾಗತ ಕೋರಿ ಬಳಿಕ ಧರ್ಮಸ್ಥಳದ ವರೆಗೆ ಕಾರ್ಯಕರ್ತರ ಬೈಕ್ ಜಾಥಾದಲ್ಲಿ ಸ್ವಾಗತಿಸಿದರು. ಧರ್ಮಸ್ಥಳದಲ್ಲಿ ಶ್ರೀ ಮಂಜುನಾಥ ಸ್ವಾಮಿ ದರ್ಶನ ಪಡೆದರು. ಈ ವೇಳೆ ಬಿಜೆಪಿ ಜಿಲ್ಯಾಧ್ಯಕ್ಷ ಸತೀಶ್ ಕುಂಪಲ, ಶಾಸಕ ಹರೀಶ್ ಪೂಂಜ, ವಿಧಾನಪರಿಷತ್ ಸದಸ್ಯ ಕೆ.ಪ್ರತಾಪಸಿಂಹ ನಾಯಕ್, ರಾಜ್ಯ ಕಾರ್ಯದರ್ಶಿ ಬ್ರಿಜೇಶ್ ಚೌಟ ಸೇರಿದಂತೆ ಪ್ರಮುಖರು ರಾಜ್ಯಾಧ್ಯಕ್ಷರ ಜತೆಗಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.