ಚನ್ನಪಟ್ಟಣ ಉಪ ಚುನಾವಣೆ ಚರ್ಚೆಯಿಂದ ಬಿ.ವೈ.ವಿಜಯೇಂದ್ರ ದೂರ: ಕುತೂಹಲ

By Kannadaprabha NewsFirst Published Aug 31, 2024, 9:42 AM IST
Highlights

ಕಳೆದ ಎರಡು ದಿನಗಳಿಂದ ಮುಂಬರುವ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಸಂಬಂಧ ರಾಜ್ಯ ಬಿಜೆಪಿಯ ಹಲವು ಹಿರಿಯ ನಾಯಕರು ದೆಹಲಿಯಲ್ಲಿ ವರಿಷ್ಠರ ಜತೆ ಸರಣಿ ಸಭೆಗಳನ್ನು ನಡೆಸಿದರೂ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಕಾಣಿಸಿಕೊಳ್ಳದೇ ಇರುವುದು ಚರ್ಚೆಗೆ ಗ್ರಾಸವಾಗಿದೆ. 

ಬೆಂಗಳೂರು (ಆ.31): ಕಳೆದ ಎರಡು ದಿನಗಳಿಂದ ಮುಂಬರುವ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಸಂಬಂಧ ರಾಜ್ಯ ಬಿಜೆಪಿಯ ಹಲವು ಹಿರಿಯ ನಾಯಕರು ದೆಹಲಿಯಲ್ಲಿ ವರಿಷ್ಠರ ಜತೆ ಸರಣಿ ಸಭೆಗಳನ್ನು ನಡೆಸಿದರೂ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಕಾಣಿಸಿಕೊಳ್ಳದೇ ಇರುವುದು ಚರ್ಚೆಗೆ ಗ್ರಾಸವಾಗಿದೆ. ಪಕ್ಷದ ನಾಯಕ ರಾದ ಬಸವರಾಜ ಬೊಮ್ಮಾಯಿ, ಆರ್.ಅಶೋಕ್, ಡಾ. ಸಿ.ಎನ್.ಅಶ್ವತ್ಥ ನಾರಾಯಣ, ಅರವಿಂದ್ ಬೆಲ್ಲದ, ಸಿ.ಪಿ. ಯೋಗೇಶ್ವ‌ರ್ ದೆಹಲಿಗೆ ತೆರಳಿದ್ದಾರೆ. ಅವರು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ಎಚ್.ಡಿ.ಕುಮಾರ ಸ್ವಾಮಿ, ವಿ.ಸೋಮಣ್ಣ ಅವರನ್ನು ಭೇಟಿಯಾಗಿ ಸುದೀರ್ಘ ಮಾತುಕತೆ ನಡೆಸಿದರು. 

ಆದರೆ, ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ದೆಹಲಿಗೆ ತೆರಳದೆ ಬೆಂಗಳೂರಿನಲ್ಲಿಯೇ ಉಳಿಯುವ ಮೂಲಕ ಅಂತರ ಕಾಪಾಡಿಕೊಂಡಿದ್ದು ಕುತೂಹಲಕ್ಕೆ ಕಾರಣವಾಗಿದೆ. ಈಗ ಕೇಂದ್ರದ ಸಚಿವರಾಗಿರುವ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಅವರಿಂದ ತೆರವಾದ ಚನ್ನಪಟ್ಟಣ ಕ್ಷೇತ್ರದ ಉಪಚುನಾವಣೆಗೆ ಸ್ಪರ್ಧಿಸಲು ಸಿ.ಪಿ.ಯೋಗೇಶ್ವರ್‌ಬಯಸಿದ್ದಾರೆ. ಆದರೆ, ಜೆಡಿಎಸ್ ಈ ಕ್ಷೇತ್ರವನ್ನು ಬಿಟ್ಟುಕೊಡುವ ಬಗ್ಗೆ ಮೀನಮೇಷ ಎಣಿಸುತ್ತಿದೆ. ಇನ್ನು ವಿಜಯೇಂದ್ರ ಮತ್ತು ಯೋಗೇಶ್ವರ್‌ ಅವರ ನಡುವಿನ ರಾಜಕೀಯ ಸಂಬಂಧ ಅಷ್ಟಕಷ್ಟೇ ಎಂಬಂತಿದೆ. 

Latest Videos

ಇದಕ್ಕೆ ಹಿಂದೆ ಬಿ.ಎಸ್.ಯಡಿಯೂರಪ್ಪ ಅವರು ಚನ್ನಪಟ್ಟಣ ಜೆಡಿಎಸ್ ತೆರವುಗೊಳಿಸಿದ ಕ್ಷೇತ್ರವಾಗಿದ್ದರಿಂದ ವಿಜಯೇಂದ್ರ ಅವರು ಆ ಕ್ಷೇತ್ರದ ಉಪಚುನಾವಣೆಯ ಟಿಕೆಟ್ ಬಗ್ಗೆ ತಟಸ್ಥ ನಿಲುವು ಅನುಸರಿಸುತ್ತಿದ್ದಾರೆ ಎನ್ನಲಾಗಿದೆ. ಇನ್ನು, ಯೋಗೇಶ್ವರ್‌ ಕೂಡ ಈ ವಿಷಯದಲ್ಲಿ ವಿಜಯೇಂದ್ರ ಅವರನ್ನು ದೂರವಿಡುವ ಪ್ರಯತ್ನ ಮಾಡುತ್ತಿದ್ದಾರೆ. ಪಕ್ಷದ ಇತರ ನಾಯಕರೊಂದಿಗೆ ತಮ್ಮ ಟಿಕೆಟ್ ಬಗ್ಗೆ ಚರ್ಚಿಸಿದರೂ ಉದ್ದೇಶ ಪೂರ್ವಕವಾಗಿಯೇ ವಿಜಯೇಂದ್ರ ಅವರ ಬಳಿ ಈ ವಿಷಯ ಪ್ರಸ್ತಾಪಿಸಿಲ್ಲ. 

ಬಿಜೆಪಿಯವರು ಪಶ್ಚಾತಾಪ ಪಡುವ ಸ್ಥಿತಿ ಬರಲಿದೆ, ಸಿದ್ದರಾಮಯ್ಯಗೆ ನ್ಯಾಯ ಸಿಕ್ಕೇ ಸಿಗುತ್ತದೆ: ಸಚಿವ ಎಂ.ಬಿ.ಪಾಟೀಲ್

ಈ ಕಾರಣದಿಂದಲೂ ವಿಜಯೇಂದ್ರ ಅವರು ದೆಹಲಿಗೆ ತೆರಳದೆ ಏನಾದರೂ ಆಗಲಿ ಎಂಬ ಧೋರಣೆ ತಳೆದಿದ್ದಾರೆ ಎಂಬ ಮಾತು ಬಿಜೆಪಿ ಪಾಳೆಯದಿಂದಲೇ ಕೇಳಿಬರುತ್ತಿದೆ. ಆದರೆ, ಪಕ್ಷದ ಇತರ ಹಿರಿಯ ನಾಯಕರು ದೆಹಲಿಗೆ ತೆರಳಿ ವರಿಷ್ಠರೊಂದಿಗೆ ಸರಣಿ ಸಭೆ ನಡೆಸುತ್ತಿರುವಾಗ ರಾಜ್ಯಾಧ್ಯಕ್ಷರಾಗಿರುವ ವಿಜಯೇಂದ್ರ ಅವರು ಇದರಿಂದ ದೂರ ಉಳಿಯದೆ ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ಭಿನ್ನಾಭಿಪ್ರಾಯ ಸಂದೇಶ ರವಾನೆಯಾಗುವುದನ್ನು ತಡೆಗಟ್ಟಬಹುದಿತ್ತು.

click me!