ಕೆ.ಎಸ್ ಈಶ್ವರಪ್ಪ ಅವರು ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ ನಾನು ಸ್ವಇಚ್ಚೆಯಿಂದಲೇ ರಾಜಕೀಯ ನಿವೃತ್ತಿ ಘೋಷಿಸಿದ್ದೇನೆ. ನನ್ನ ಮೇಲೆ ಯಾರ ಒತ್ತಡವೂ ಇಲ್ಲ ಎಂದಿದ್ದಾರೆ.
ಶಿವಮೊಗ್ಗ (ಏ.11): ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ಕೈ ತಪ್ಪಲಿದೆ ಎನ್ನುವ ಸೂಚನೆ ಬೆನ್ನಲ್ಲೇ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಅವರು ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ. ಇದರ ಬೆನ್ನಲ್ಲೇ ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಈಶ್ವರಪ್ಪ ಅವರು ನಾನು ಸ್ವಇಚ್ಚೆಯಿಂದಲೇ ರಾಜಕೀಯ ನಿವೃತ್ತಿ ಘೋಷಿಸಿದ್ದೇನೆ. ನನ್ನ ಮೇಲೆ ಯಾವುದೇ ಒತ್ತಡ ಇರಲಿಲ್ಲ. ಟಿಕೆಟ್ ಕೈತಪ್ಪುವ ಭೀತಿಯಲ್ಲಿ ನಾನು ನಿವೃತ್ತಿ ಘೋಷಿಸಿಲ್ಲ. ಯಾವುದೇ ಕ್ಷೇತ್ರದಿಂದ ನನ್ನನ್ನು ಪರಿಗಣಿಸಬೇಡಿ ಎಂದು ನಾನು ನನ್ನ ನಿವೃತ್ತಿ ಪತ್ರದಲ್ಲಿ ಸ್ಪಷ್ಟವಾಗಿ ತಿಳಿಸಿದ್ದೇನೆ ಎಂದಿದ್ದಾರೆ.
ಈ ಬಾರಿ ಟಿಕೆಟ್ ಬೇಡ ಎಂದು ನಾಯಕರಿಗೆ ಈ ಹಿಂದೆಯೇ ತಿಳಿಸಿದ್ದೆ. ಪಕ್ಷದ ಮಾತನ್ನು ಪರಿಗಣಿಸರಲಿಲ್ಲ. ಹೀಗಾಗಿ ನನಗೆ ಸಮಾಧಾನವಾಗಿರಲಿಲ್ಲ. ನನ್ನ ಮೇಲೆ ಯಾವ ಒತ್ತಡವೂ ಇರಲಿಲ್ಲ. ಹೈಕಮಾಂಡ್ ಒತ್ತಡ ಹಾಕಿಲ್ಲ. 40 ವರ್ಷಗಳಿಂದ ಪಕ್ಷಕ್ಕಾಗಿ ದುಡಿದಿದ್ದೇನೆ. ಪಕ್ಷ ನನಗೆ ಎಲ್ಲವನ್ನೂ ನೀಡಿದೆ. ಮುಂದೆ ಸಂಘಟನೆ ಹೇಳಿದಂತೆ ಕೆಲಸ ಮಾಡುತ್ತೇನೆ. ರಾಜ್ಯದಲ್ಲಿ ಬಹುಮತದಿಂದ ಪಕ್ಷವನ್ನು ಅಧಿಕಾರಕ್ಕೆ ತರುತ್ತೇವೆ.
ಬಿಜೆಪಿ ನಾಯಕರು ಕಾಂಗ್ರೆಸ್‌ಗೆ ಬಂದರೆ ಸೇರಿಸಿಕೊಳ್ತೇವೆ: ಡಿಕೆ ಶಿವಕುಮಾರ್
ಇದರ ಬೆನ್ನಲ್ಲೇ ಈಶ್ವರಪ್ಪ ಬೆಂಬಲಿಗರು ಅವರ ನಿವಾಸಕ್ಕೆ ದೌಡಾಯಿಸಿದ್ದಾರೆ. ಇನ್ನು ತಂದೆಯ ನಿರ್ಧಾರವನ್ನು ಸಮರ್ಥಿಸಿಕೊಂಡಿರುವ ಪುತ್ರ ಕಾಂತೇಶ್ ಅವರು ತಂದೆ ಸರಿಯಾದ ನಿರ್ಧಾರವನ್ನೇ ಕೈಗೊಳ್ಳುತ್ತಾರೆ ಎಂದಿದ್ದಾರೆ. ಇನ್ನು ಈಶ್ವರಪ್ಪ ನಿವಾಸದಲ್ಲಿ ಬೆಂಬಲಿಗರು ಪುತ್ರನನ್ನು ಹೆಗಲ ಮೇಲೆ ಕೂರಿಸಿಕೊಂಡು ಜೈಕಾರ ಹಾಕಿದ್ದಾರೆ. ಮಾತ್ರವಲ್ಲ ಕೆಲ ಅಭಿಮಾನಿಗಳು ನ್ಯಾಯಬೇಕು ಎಂದು ಟಯರ್ ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಸಿದ್ದಾರೆ.
ಚುನಾವಣಾ ರಾಜಕೀಯ ನಿವೃತ್ತಿ ಘೋಷಿಸಿದ ಕೆ.ಎಸ್. ಈಶ್ವರಪ್ಪ: ಮಾಜಿ ಸಿಎಂ ಜಗದೀಶ್
ಕಾರ್ಯಕರ್ತರ ಜೊತೆ ಸಮಾಲೋಚನೆ ನಡೆಸಿದರೂ ಯಾರು ಒಪ್ಪಲ್ಲ ಎಂದು ನನಗೆ ಗೊತ್ತಿತ್ತು. ಕೇಂದ್ರ ಮತ್ತು ರಾಜ್ಯ ಚುನಾವಣಾ ಸಮಿತಿ ವಹಿಸುವ ಜವಾಬ್ದಾರಿ ನಿರ್ವಹಿಸಲು ಸಿದ್ಧನಿದ್ದೇನೆ. ರಾಜ್ಯದಲ್ಲಿ ಪೂರ್ಣಬಹುಮತ ಸರ್ಕಾರ ತರಲು ನನ್ನ ಆಸೆ ಇದೆ. ಸರ್ಕಾರ ತರುವ ನಿಟ್ಟಿನಲ್ಲಿ ನಾನು ಕಳಿಸಿರುವ ಪತ್ರದಿಂದ ಲಕ್ಷ ಲಕ್ಷ ಕಾರ್ಯಕರ್ತರು ಇದನ್ನು ಮೆಚ್ಚುತ್ತಾರೆ. ಕೇಂದ್ರ ಚುನಾವಣಾ ಸಮಿತಿ ಶಿವಮೊಗ್ಗ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾನು ಬದ್ಧನಾಗಿದ್ದೇನೆ. ಶಿವಮೊಗ್ಗ ವಿಧಾನಸಭಾ ಕ್ಷೇತ್ರದಲ್ಲಿ ಯಾರಿಗೆ ಟಿಕೆಟ್ ನೀಡಿದರು ನಾನು ಕೆಲಸ ಮಾಡುತ್ತೇನೆ. ಪುತ್ರ ಕಾಂತೇಶ್ ಗೆ ಟಿಕೆಟ್ ಕೊಡುವ ವಿಚಾರ ನನಗೆ ತಿಳಿದಿಲ್ಲ. ಪುತ್ರನಿಗೆ ಟಿಕೆಟ್ ಕೊಡುವ ನಿರ್ಧಾರ ಹೈಕಮಾಂಡ್ ಗೆ ಬಿಟ್ಟದ್ದು ಎಂದಿದ್ದಾರೆ.