ಲೋಕಸಭೆ ಸಮರಕ್ಕೆ ನಡ್ಡಾ ಹೊಸ ಟೀಂ: ಇಬ್ಬರು ಮುಸ್ಲಿಮರಿಗೆ ಸ್ಥಾನ; ಸಿ.ಟಿ.ರವಿ ಲೋಕಸಭೆಗೆ?

Published : Jul 30, 2023, 08:12 AM IST
ಲೋಕಸಭೆ ಸಮರಕ್ಕೆ ನಡ್ಡಾ ಹೊಸ ಟೀಂ: ಇಬ್ಬರು ಮುಸ್ಲಿಮರಿಗೆ ಸ್ಥಾನ; ಸಿ.ಟಿ.ರವಿ ಲೋಕಸಭೆಗೆ?

ಸಾರಾಂಶ

ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌ ಅವರನ್ನು ಅದೇ ಸ್ಥಾನದಲ್ಲಿ ಮುಂದುವರಿಸಲಾಗಿದೆ. ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ಮಾಜಿ ಕುಲಪತಿ ತಾರೀಖ್‌ ಮನ್ಸೂರ್‌ ಅವರನ್ನು ಪಕ್ಷದ ಉಪಾಧ್ಯಕ್ಷರನ್ನಾಗಿ ನೇಮಕ ಮಾಡುವ ಮೂಲಕ ಪಾಸ್ಮಾಂದ ಮುಸ್ಲಿಮರನ್ನು ಓಲೈಸುವ ಯತ್ನ ಮಾಡಲಾಗಿದೆ.

ನವದೆಹಲಿ (ಜುಲೈ 30, 2023): ಮುಂದಿನ ಏಪ್ರಿಲ್‌- ಮೇನಲ್ಲಿ ನಡೆಯಬೇಕಿರುವ ಲೋಕಸಭೆ ಚುನಾವಣೆಗೆ ಪಕ್ಷವನ್ನು ಅಣಿಗೊಳಿಸುವ ಉದ್ದೇಶದಿಂದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಪಕ್ಷದ ಕೇಂದ್ರೀಯ ಘಟಕವನ್ನು ಪುನಾರಚನೆಗೊಳಿಸಿದ್ದಾರೆ. ಕರ್ನಾಟಕದ ಮಾಜಿ ಸಚಿವ ಸಿ.ಟಿ. ರವಿ ಸೇರಿದಂತೆ ಇಬ್ಬರು ಪ್ರಧಾನ ಕಾರ್ಯದರ್ಶಿಗಳನ್ನು ಕೈಬಿಟ್ಟಿರುವ ಅವರು, ತ್ರಿಪುರದಲ್ಲಿ ಬಿಜೆಪಿ ಮೊದಲ ಬಾರಿಗೆ ಅಧಿಕಾರಕ್ಕೇರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸುನೀಲ್‌ ದೇವಧರ್‌ ಸೇರಿದಂತೆ ಮೂವರು ಕಾರ್ಯದರ್ಶಿಗಳಿಗೆ ಕೊಕ್‌ ನೀಡಿದ್ದಾರೆ.

ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌ ಅವರನ್ನು ಅದೇ ಸ್ಥಾನದಲ್ಲಿ ಮುಂದುವರಿಸಲಾಗಿದೆ. ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ಮಾಜಿ ಕುಲಪತಿ ತಾರೀಖ್‌ ಮನ್ಸೂರ್‌ ಅವರನ್ನು ಪಕ್ಷದ ಉಪಾಧ್ಯಕ್ಷರನ್ನಾಗಿ ನೇಮಕ ಮಾಡುವ ಮೂಲಕ ಪಾಸ್ಮಾಂದ ಮುಸ್ಲಿಮರನ್ನು ಓಲೈಸುವ ಯತ್ನ ಮಾಡಲಾಗಿದೆ.

ಇದನ್ನು ಓದಿ: ಮೋದಿ ನೇತೃತ್ವದಲ್ಲಿ ಇಂದು ಎನ್‌ಡಿಎ ಸಭೆ: 38 ಪಕ್ಷ ಭಾಗಿ; ಹ್ಯಾಟ್ರಿಕ್‌ ಜಯಕ್ಕೆ ರಣತಂತ್ರ

ಮಾಜಿ ಮುಖ್ಯಮಂತ್ರಿಗಳಾದ ರಮಣ್‌ ಸಿಂಗ್‌, ವಸುಂಧರಾ ರಾಜೇ, ರಘುಬರ್‌ ದಾಸ್‌ ಅವರು ಉಪಾಧ್ಯಕ್ಷ ಹುದ್ದೆಯಲ್ಲಿ ಮುಂದುವರಿದಿದ್ದಾರೆ. ಅರುಣ್‌ ಸಿಂಗ್‌, ಕೈಲಾಸ್‌ ವಿಜಯವರ್ಗೀಯ, ವಿನೋದ್‌ ತಾವಡೆ ಅವರು ಪ್ರಧಾನ ಕಾರ್ಯದರ್ಶಿ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಕಾಂಗ್ರೆಸ್‌ ನಾಯಕ ಎ.ಕೆ. ಆ್ಯಂಟನಿ ಪುತ್ರ ಅನಿಲ್‌ ಆ್ಯಂಟನಿಗೆ ಕಾರ್ಯದರ್ಶಿ ಸ್ಥಾನ ಕೊಡಲಾಗಿದೆ.
ಪುನಾರಚಿತ ಪಟ್ಟಿಯಲ್ಲಿ 9 ಪ್ರಧಾನ ಕಾರ್ಯದರ್ಶಿಗಳಿದ್ದು, ಮಹಿಳೆಯರಿಗೆ ಸ್ಥಾನ ದೊರೆತಿಲ್ಲ. ಆದರೆ 13 ಉಪಾಧ್ಯಕ್ಷ ಹುದ್ದೆಗಳಲ್ಲಿ ಐವರು ಮಹಿಳೆಯರು, 13 ಕಾರ್ಯದರ್ಶಿಗಳ ಪಟ್ಟಿಯಲ್ಲಿ 4 ಮಹಿಳೆಯರಿಗೆ ಸ್ಥಾನ ಸಿಕ್ಕಿದೆ.

ಸಿ.ಟಿ.ರವಿ ಲೋಕಸಭೆಗೆ?:
ಕರ್ನಾಟಕದ ಮಾಜಿ ಸಚಿವ ಸಿ.ಟಿ.ರವಿ ಹಾಗೂ ಅಸ್ಸಾಂನ ಲೋಕಸಭೆ ಸದಸ್ಯ ದಿಲೀಪ್‌ ಸೈಕಿಯಾ ಅವರನ್ನು ಪ್ರಧಾನ ಕಾರ್ಯದರ್ಶಿಗಳ ಪಟ್ಟಿಯಿಂದ ಕೈಬಿಡಲಾಗಿದೆ. 4 ಬಾರಿ ಶಾಸಕರಾಗಿದ್ದ ರವಿ ಅವರು ಮೇ ತಿಂಗಳಿನಲ್ಲಿ ನಡೆದ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಪರಾಭವಗೊಂಡಿದ್ದರು. ಅವರು ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಸಾಧ್ಯತೆ ಇದ್ದು, ಕ್ಷೇತ್ರಕ್ಕೆ ಹೆಚ್ಚು ಗಮನಹರಿಸಲಿ ಎಂಬ ಕಾರಣಕ್ಕೆ ಕೈಬಿಡಲಾಗಿದೆ ಎಂದು ಪಕ್ಷದ ನಾಯಕರೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: ದಕ್ಷಿಣ ಭಾರತದಲ್ಲಿ 50 ಸೀಟ್‌ ಟಾರ್ಗೆಟ್: ತಮಿಳುನಾಡಿನ ರಾಮನಾಥಪುರದಿಂದ ಪ್ರಧಾನಿ ಮೋದಿ ಸ್ಪರ್ಧೆ?

ಮತ್ತೊಂದೆಡೆ ಡಿ.ಪುರಂದೇಶ್ವರಿ ಅವರಿಗೆ ತೆಲಂಗಾಣ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಪಟ್ಟ ಬಿಟ್ಟುಕೊಟ್ಟಿದ್ದ ಬಂಡಿ ಸಂಜಯ್‌ ಕುಮಾರ್‌ ಅವರನ್ನು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮಾಡಲಾಗಿದೆ. ಪಶ್ಚಿಮ ಬಂಗಾಳದ ಸಂಸದ ದಿಲೀಪ್‌ ಘೋಷ್‌ ಅವರನ್ನು ಉಪಾಧ್ಯಕ್ಷ ಪಟ್ಟದಿಂದ ಕೈಬಿಡಲಾಗಿದ್ದು, ವರ್ಷಾಂತ್ಯಕ್ಕೆ ವಿಧಾನಸಭೆ ಚುನಾವಣೆ ನಡೆಯಲಿರುವ ಛತ್ತೀಸ್‌ಗಢ ರಾಜ್ಯಸಭೆ ಸದಸ್ಯ ಸರೋಜ್‌ ಪಾಂಡೆ ಅವರಿಗೆ ಉಪಾಧ್ಯಕ್ಷ ಸ್ಥಾನ ನೀಡಲಾಗಿದೆ. ಇದೇ ವೇಳೆ ಛತ್ತೀಸ್‌ಗಢದ ಬುಡಕಟ್ಟು ನಾಯಕಿ ಲತಾ ಉಸೇಂಡಿ ಅವರಿಗೆ ಉಪಾಧ್ಯಕ್ಷ ಪಟ್ಟ ಕೊಡಲಾಗಿದೆ.
ಬಿಹಾರದ ಕೇಂದ್ರದ ಮಾಜಿ ಸಚಿವ ರಾಧಾ ಮೋಹನ ಸಿಂಗ್‌ ಅವರನ್ನು ಉಪಾಧ್ಯಕ್ಷ ಸ್ಥಾನದಿಂದ ತೆಗೆದು ಹಾಕಲಾಗಿದೆ. ಉತ್ತರಪ್ರದೇಶ ರಾಜ್ಯಸಭಾ ಸದಸ್ಯ ಲಕ್ಷ್ಮೇಕಾಂತ ಬಾಜಪೇಯಿ ಅವರಿಗೆ ಉಪಾಧ್ಯಕ್ಷ ಸ್ಥಾನ ಸಿಕ್ಕಿದೆ.

ಅಲಿಗಢ ಮುಸ್ಲಿಂ ವಿವಿಯ ಮಾಜಿ ಕುಲಪತಿ ಹಾಗೂ ಉತ್ತರಪ್ರದೇಶ ವಿಧಾನಪರಿಷತ್‌ ಸದಸ್ಯ ತಾರೀಖ್‌ ಮನ್ಸೂರ್‌ ಅವರು ಪಕ್ಷದ ಉಪಾಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಕೇರಳ ನಾಯಕ ಅಬ್ದುಲ್ಲಾ ಕುಟ್ಟಿ ಉಪಾಧ್ಯಕ್ಷರಾಗಿ ಮುಂದುವರಿದಿದ್ದು, ಬಿಜೆಪಿಯಲ್ಲಿ ಇಬ್ಬರು ಮುಸ್ಲಿಮರಿಗೆ ಸ್ಥಾನ ಸಿಕ್ಕಂತಾಗಿದೆ.
 

ಇದನ್ನೂ ಓದಿ: ನಾನು ಬಿಜೆಪಿ ಶಾಸಕ; ಅಮಿತ್ ಶಾ ಭೇಟಿಯಾಗ್ಬೇಕು ಎಂದ ಟಿಎಂಸಿ ನಾಯಕ ಮುಕುಲ್ ರಾಯ್

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಗೃಹಸಚಿವರು ಏನು ಬೇಕಾದ್ರೂ ಮಾಡಬಹುದು, ಅವರ ಕಣ್ಣುಗಳನ್ನು ನೋಡಿದರೆ ನನಗೆ ಭಯವಾಗುತ್ತೆ: ಮಮತಾ ಬ್ಯಾನರ್ಜಿ
ಅಣ್ಣಾ ಹಜಾರೆ ಮತ್ತೆ ಉಪವಾಸ ಸತ್ಯಾಗ್ರಹ ಘೋಷಣೆ: ಸ್ಥಳ, ದಿನಾಂಕ ನಿಗದಿ, ಕಾರಣವೇನು ಗೊತ್ತಾ?