ಅಂಗನವಾಡಿ, ಶಾಲೆ, ಕಾಲೇಜುಗಳ ಮೇಲೆ ಬಿಜೆಪಿ ಪೋಸ್ಟರ್
ಒತ್ತಾಯ ಪೂರ್ವಕವಾಗಿ ತೆಗೆಸಿದ ಕಾಂಗ್ರೆಸ್ ಮುಖಂಡರು
ಕಾಂಗ್ರೆಸ್ ದಾದಾಗಿರಿ ಸಹಿಸಲ್ಲ ಎಂದು ಶಾಸಕ ಅಪ್ಪಚ್ಚು ರಂಜನ್ ಎಚ್ಚರಿಕೆ
ವರದಿ: ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ಮಾ.05): ಚುನಾವಣೆಗೆ ಇನ್ನೆರಡು ತಿಂಗಳು ಇದ್ದು, ಚುನಾವಣಾ ರಂಗ ಕಾವು ಪಡೆಯುತ್ತಿದೆ. ಆದರೆ ಚುನಾವಣೆಗೆ ಕೆಲವೇ ದಿನಗಳು ಘೋಷಣೆಗೆ ಬಾಕಿ ಇರುವುದಕ್ಕೂ ಮುಂಚಿತವಾಗಿಯೇ ಕೊಡಗು ಜಿಲ್ಲೆಯಲ್ಲಿ ರಾಜಕೀಯ ನಾಯಕರ ಪೋಸ್ಟರ್ ವಾರ್ ತೀವ್ರವಾಗಿದೆ.
ಒಂದೆಡೆ ಚುನಾವಣೆಗಾಗಿ ಬಿಜೆಪಿ ಪ್ರಚಾರ ಸಭೆಗಳನ್ನು ನಡೆಸುತ್ತಿದ್ದರೆ, ಮತ್ತೊಂದೆಡೆ ಎಲ್ಲೆಡೆ ಬಿಜೆಪಿಯೇ ಭರವಸೆ ಎನ್ನುವ ಪೋಸ್ಟರ್‌ಗಳನ್ನು ಅಂಟಿಸಿದೆ. ಆದರೆ ಕಾಂಗ್ರೆಸ್ ಈ ಪೋಸ್ಟರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹಸಚಿವ ಅಮಿತ್ ಷಾ ಮತ್ತು ರಾಜು ಬಿಜೆಪಿ ಮುಖಂಡರಿರುವ ಪೋಸ್ಟರ್‌ಗಳನ್ನು ಬಿಜೆಪಿ ಎಲ್ಲೆಡೆ ಅಂಟಿಸಿದೆ. ಆದರೆ ಶಾಲಾ, ಕಾಲೇಜು, ಅಂಗನವಾಡಿ, ಸಮುದಾಯ ಭವನಗಳನ್ನು ಸೇರಿದಂತೆ ಸರ್ಕಾರಿ ಕಟ್ಟಡಗಳ ಮೇಲೂ ಬಿಜೆಪಿ ಪೋಸ್ಟರ್‌ಗಳನ್ನು ಅಂಟಿಸಿರುವುದಕ್ಕೆ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.
undefined
ಹುಲಿ ಉಗುರು, ನಕ್ಷತ್ರ ಆಮೆ ಮಾರಾಟಕ್ಕೆ ಯತ್ನ: ಇಬ್ಬರ ಬಂಧನ
ಪಿಡಿಓಗೆ ಕರೆ ಮಾಡಿ ಕಾಂಗ್ರೆಸ್ ತರಾಟೆ: ಸೋಮವಾರಪೇಟೆ ತಾಲ್ಲೂಕಿನ ಬೇಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಳಗುಂದ ಗ್ರಾಮದ ವ್ಯಾಪ್ತಿಯಲ್ಲಿ ಅಂಗನವಾಡಿ, ಶಾಲಾ ಕಾಂಪೌಂಡ್ ಮತ್ತು ಸಮುದಾಯ ಭವನಗಳ ಕಟ್ಟಡಗಳ ಗೋಡೆಗಳ ಮೇಲೆ ಈ ಪೋಸ್ಟರ್‌ಗಳನ್ನು ಅಂಟಿಸಲಾಗಿದೆ. ಇವುಗಳನ್ನು ಕಂಡ ಕಾಂಗ್ರೆಸ್ ಮುಖಂಡರು, ಕೆಪಿಸಿಸಿ ಸದಸ್ಯ ಯಾಕೂಬ್ ಸೇರಿದಂತೆ ಇವುಗಳನ್ನು ತೆರವುಗೊಳಿಸುವಂತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೇಳೂರು ಗ್ರಾಮ ಪಂಚಾಯಿತಿ ಗ್ರಾಮ ಪಂಚಾಯಿರಿ ಅಭಿವೃದ್ಧಿ ಅಧಿಕಾರಿಗೆ (ಪಿಡಿಒ) ಕರೆ ಮಾಡಿದ ಕೆಪಿಸಿಸಿ ಸದಸ್ಯ ಯಾಕೂಬ್ ಮೊದಲು ಇವುಗಳನ್ನು ತೆರವುಗೊಳಿಸಿ ಎಂದು ಒತ್ತಾಯಿಸಿದ್ದಾರೆ.
ಪೋಸ್ಟರ್ ತೆರವುಗೊಳಿಸಿದ ಪಂಚಾಯಿತಿ ಸಿಬ್ಬಂದಿ: ಗ್ರಾಮ ಪಂಚಾಯಿತಿಗೆ ದೂರು ನೀಡಿದ ಬಳಿಕ ಸ್ಥಳಕ್ಕೆ ಬಂದ ಪಂಚಾಯಿತಿ ಸಿಬ್ಬಂದಿ ಶಾಲಾ ಕಾಂಪೌಂಡ್, ಅಂಗನವಾಡಿ, ಕಾಂಪೌಂಡ್‌ಗಳ ಮೇಲೆ ಅಂಟಿಸಿರುವ ಎಲ್ಲಾ ಪೋಸ್ಟರ್‌ಗಳನ್ನು ತೆರವು ಮಾಡಿದರು. ಈ ಕುರಿತು ಮಾತನಾಡಿರುವ ಯಾಕೂಬ್ ಸರ್ಕಾರಿ ಕಟ್ಟಡಗಳ ಮೇಲೆ ಹೀಗೆ ಅಂಟಿಸುವುದು ತಪ್ಪು. ಹಾಗಿದ್ದರೂ ತೆರವುಗೊಳಿಸಿದಂತೆಲ್ಲಾ ಮೂರು ಮೂರು ಬಾರಿ ಬಿಜೆಪಿ ಪೋಸ್ಟರ್‌ಗಳನ್ನು ಅಂಟಿಸಲಾಗಿದೆ. ಸರ್ಕಾರದ ವಿವಿಧ ಯೋಜನೆಗಳು, ಸ್ವಚ್ಛತೆ ಬಗ್ಗೆ ಇರುವ ಮಾಹಿತಿ ಫಲಕಗಳ ಮೇಲೆ ಈ ರೀತಿ ಪೋಸ್ಟರ್ ಅಂಟಿಸಿರುವುದು ಎಷ್ಟು ಸರಿ. ಇದರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕೆಪಿಸಿಸಿ ಸದಸ್ಯ ಯಾಕೂಬ್ ಒತ್ತಾಯಿಸಿದ್ದಾರೆ. ಇದೇ ರೀತಿ ಮತ್ತೆ ಪೋಸ್ಟರ್ ಅಂಟಿಸುವುದು ಮುಂದುವರಿದರೆ ಮೇಲಿನ ಅಧಿಕಾರಿಗಳಿಗೆ ದೂರು ನೀಡಲಾಗುವುದು ಎಂದಿದ್ದಾರೆ.
Kodagu Sahitya Sammelana: ಕನ್ನಡ ಭಾಷೆ ಜೊತೆಗೆ ಸಹೋದರ ಭಾಷೆ ಪ್ರೀತಿಸಿ, ಗೌರವಿಸಿ: ರೇಖಾ ವಸಂತ್
ಪೋಸ್ಟರ್ ತೆರವಿಗೆ ಶಾಸಕ ಆಕ್ರೋಶ: ಈ ಕುರಿತು ಪ್ರತಿಕ್ರಿಯಿಸಿರುವ ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಪೋಸ್ಟರ್‌ಗಳನ್ನು ಅಂಟಿಸುವ ಸಂಸ್ಕೃತಿ ಕಲಿಸಿಕೊಟ್ಟಿದ್ದೇ ಕಾಂಗ್ರೆಸ್. ಜಿಲ್ಲೆಯ ಎಲ್ಲಿಯಾಗಲಿ ಬಿಜೆಪಿಯ ಪೋಸ್ಟರ್‌ಗಳು ಇವೆಯೇ ಎಂದು ಪ್ರಶ್ನಿಸಿದ್ದಾರೆ. ಸರ್ಕಾರಿ ಕಟ್ಟಡಗಳ ಮೇಲೆ ಅಂಟಿಸಿದ್ದರೆ ತಪ್ಪಿರಬಹುದು, ಆದರೆ ನೀರಿನ ಟ್ಯಾಂಕ್ ಮುಂತಾದವುಗಳ ಮೇಲೆ ಕಾಂಗ್ರೆಸ್ ಅಂಟಿಸಿರುವುದು ತಪ್ಪಲ್ಲವೇ. ಅವರು ಸರ್ಕಾರಿ ಸ್ವತ್ತುಗಳ ಮೇಲೆ ಅಂಟಿಸಿದರೆ ಸರಿ, ನಾವು ಅಂಟಿಸಿದರೆ ತಪ್ಪೇ.? ಇನ್ನೂ ಚುನಾವಣಾ ನೀತಿ ಸಂಹಿತೆ ಜಾರಿಯಾದರೆ ಅದನ್ನು ಸರ್ಕಾರವೇ ತೆರವುಗೊಳಿಸಲು ಸೂಚಿಸುತ್ತದೆ. ಬಿಜೆಪಿ ಪೋಸ್ಟರ್‌ಗಳನ್ನು ತೆರವು ಮಾಡುವುದಕ್ಕೆ ಇವರು ಯಾರು ಎಂದು ಕಿಡಿಕಾರಿದ್ದಾರೆ.
ಈಗ ಜಿಲ್ಲೆಯಲ್ಲಿ ಅಂಟಿಸಲಾಗಿರುವ ಸರ್ಕಾರದ ಪೋಸ್ಟರ್‌ಗಳನ್ನು ತೆರವುಗೊಳಿಸುವವರು ಮೂರ್ಖರು, ಮುಠ್ಠಾಳರು ಎಂದು ಕಟುವಾಗಿ ಶಾಸಕ ಅಪ್ಪಚ್ಚು ರಂಜನ್ ತಿರುಗೇಟು ನೀಡಿದರು. ಒತ್ತಾಯ ಪೂರ್ವಕವಾಗಿ ಪೋಸ್ಟರ್ ತೆರವು ಮಾಡಿದರೆ ನಾವು ತಕ್ಕ ಉತ್ತರ ನೀಡಬೇಕಾಗುತ್ತದೆ. ಒಟ್ಟಿನಲ್ಲಿ ಕೊಡಗು ಜಿಲ್ಲೆಯಲ್ಲಿ ಚುನಾವಣಾ ಕಣ ನಿಧಾನವಾಗಿ ರಂಗೇರುತ್ತಿದ್ದು, ಜಿಲ್ಲೆಯಲ್ಲಿ ಜಿದ್ದಾಜಿದ್ದಿನ ಕ್ಷಣಗಳು ಸೃಷ್ಟಿಯಾಗುತ್ತಿದೆ. ಬೇರೆಡೆ ಕುಕ್ಕರ್ ಮತ್ತು ವಿವಿಧ ವಸ್ತುಗಳನ್ನು ಕೊಡುಗೆಯಾಗಿ ನೀಡಲಾಗುತ್ತಿದೆ. ಆದರೆ, ಇಲ್ಲಿ ಪೋಸ್ಟರ್ ವಾರ್ ಆರಂಭವಾಗಿದ್ದು, ಎಲ್ಲಿಗೆ ನಿಲ್ಲತ್ತದೆ ಎಂದು ಕಾದು ನೋಡಬೇಕು.