ಬಿಜೆಪಿ ಟಿಕೆಟ್ ಕೈ ತಪ್ಪಿದ್ದಕ್ಕೆ ಹೈಕಮಾಂಡ್ ವಿರುದ್ಧ ಸಿಡಿದೆದ್ದು ಕಾಂಗ್ರೆಸ್ ಸೇರಿರುವ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಪ್ರತಿನಿಧಿಸುತ್ತಿರುವ ‘ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರ’ವನ್ನು ಉಳಿಸಿಕೊಳ್ಳಲು ಬಿಜೆಪಿ ಈ ಚುನಾವಣಾ ರಣಕಣದಲ್ಲಿ ತನ್ನೆಲ್ಲ ಶಕ್ತಿಯನ್ನು ಧಾರೆ ಎರೆಯುತ್ತಿದೆ.
ಮಲ್ಲಿಕಾರ್ಜುನ ಸಿದ್ದಣ್ಣವರ
ಹುಬ್ಬಳ್ಳಿ (ಏ.25) : ಬಿಜೆಪಿ ಟಿಕೆಟ್ ಕೈ ತಪ್ಪಿದ್ದಕ್ಕೆ ಹೈಕಮಾಂಡ್ ವಿರುದ್ಧ ಸಿಡಿದೆದ್ದು ಕಾಂಗ್ರೆಸ್ ಸೇರಿರುವ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಪ್ರತಿನಿಧಿಸುತ್ತಿರುವ ‘ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರ’ವನ್ನು ಉಳಿಸಿಕೊಳ್ಳಲು ಬಿಜೆಪಿ ಈ ಚುನಾವಣಾ ರಣಕಣದಲ್ಲಿ ತನ್ನೆಲ್ಲ ಶಕ್ತಿಯನ್ನು ಧಾರೆ ಎರೆಯುತ್ತಿದೆ.
ಲಿಂಗಾಯತರ ಪ್ರಶ್ನಾತೀತ ನಾಯಕ ಬಿ.ಎಸ್.ಯಡಿಯೂರಪ್ಪ(BS Yadiyurappa) ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಇಳಿಸಿ ಎದುರಾದ ವಿರೋಧವನ್ನು ಸಹಜವಾಗಿ ಜೀರ್ಣಿಸಿಕೊಂಡಿದ್ದ ಬಿಜೆಪಿಗೆ ಜಗದೀಶ ಶೆಟ್ಟರ್(Jagadish shettar) ಬಂಡಾಯ ಊಹೆಗೆ ನಿಲುಕುತ್ತಿಲ್ಲ. ಯಡಿಯೂರಪ್ಪ, ಈಶ್ವರಪ್ಪ(KS Eshwarappa) ಅವರಂತೆ ಪಕ್ಷದ ನಿರ್ಧಾರವನ್ನು ಶೆಟ್ಟರೂ ಶಿರಸಾವಹಿಸಿ ಪಾಲಿಸುತ್ತಾರೆ ಎನ್ನುವ ಬಿಜೆಪಿ ಲೆಕ್ಕಾಚಾರ ಬುಡಮೆಲಾಗಿದೆ.
'ಹಡದ್ ತಾಯಿಗೆ ದ್ರೋಹ ಮಾಡೂದು ಹ್ಯಾಂಗ್ ಅಂದ್ರ ಅದಕ್ ಈ ಶೆಟ್ರ ಉದಾಹರಣೆ' -ಬಸನಗೌಡ ಪಾಟೀಲ ಯತ್ನಾಳ
ಇದು ಚುನಾವಣಾ ಯುದ್ಧಕಾಲ. ಶೆಟ್ಟರ್ ಬಂಡಾಯದಿಂದÜ ಪಕ್ಷದ ಮೇಲೆ ಆಗುತ್ತಿರುವ ಡ್ಯಾಮೇಜ್ ಕಂಟ್ರೋಲ್‌ಗೆ ಬಿಜೆಪಿ ಇನ್ನಿಲ್ಲದ ಸರ್ಕಸ್ ಮಾಡುತ್ತಿದೆ. ಎದುರಾಗುವ ಫಲಿತಾಂಶ ಪಕ್ಷದ ಮೇಲೆ ಧೀರ್ಘಕಾಲದ ಪರಿಣಾಮ ಉಂಟು ಮಾಡಲಿದೆ ಎನ್ನುವ ವಾಸ್ತವ ಅರಿತಿರುವ ಬಿಜೆಪಿ, ಶೆಟ್ಟರ್ ಬೆಂಬಲಿಗರು ಪಕ್ಷ ಬಿಟ್ಟು ಹೋಗದಂತೆ ತಡೆದು ನಿಲ್ಲಿಸುವುದು ಮತ್ತು ಶೆಟ್ಟರ್ ಅವರನ್ನು ಆರು ಬಾರಿ ಗೆಲ್ಲಿಸಿದÜ ಕ್ಷೇತ್ರವನ್ನು ಉಳಿಸಿಕೊಳ್ಳುವುದಕ್ಕೆ ತನ್ನಿಡೀ ಶಕ್ತಿಯನ್ನು ಧಾರೆ ಎರೆದು ಹೆಜ್ಜೆ ಹೆಜ್ಜೆಗೂ ಬಿಗುವಿನ ಜಾಲ ಹೆಣೆಯುತ್ತಿದೆ.
ಬಿಜೆಪಿ ಶಕ್ತಿಕೇಂದ್ರ:
ಹುಬ್ಬಳ್ಳಿಯನ್ನು ಕೇಂದ್ರವಾಗಿ ಇಟ್ಟುಕೊಂಡು ಬಿಜೆಪಿ ಈ ವರೆಗೆ ಹಲವು ಚುನಾವಣೆಗಳನ್ನು ಎದುರಿಸಿದ್ದರೂ ಎಂದೂ ತನ್ನ ರಾಷ್ಟ್ರೀಯ ಅಧ್ಯಕ್ಷ, ರಾಜ್ಯಾಧ್ಯಕ್ಷ, ಮುಖ್ಯಮಂತ್ರಿ, ಕೇಂದ್ರ ಸಚಿವರು, ರಾಜ್ಯ ಸಚಿವರನ್ನು ಇಲ್ಲಿ ಮೇಲಿಂದ ಮೇಲೆ ಠಿಕಾಣಿ ಹೂಡಿಸಿದ ನಿದರ್ಶನಗಳಿಲ್ಲ. ಆದರೆ ಜಗದೀಶ ಶೆಟ್ಟರ್ ಬಂಡಾಯದ ಬಳಿಕ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಮೊನ್ನೆ ಎರಡು ದಿನ ಹುಬ್ಬಳ್ಳಿಯಲ್ಲಿ ಇದ್ದರು. ಈಗ ಗೃಹ ಸಚಿವ ಅಮಿತ್ ಶಾ ಎರಡು ದಿನ ವಾಸ್ತವ ಮಾಡಿದ್ದಾರೆ. ರಾಜ್ಯಾಧ್ಯಕ್ಷ ನಳೀನಕುಮಾರ್ ಕಟೀಲ್ ಹಲವು ಬಾರಿ ಬಂದು ಹೋಗಿದ್ದಾರೆ. ಕ್ಷೇತ್ರ ಉಳಿಸಿಕೊಳ್ಳುವ ಹೊಣೆ ಹೊತ್ತಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಂತೂ ಒಂದರ್ಥದಲ್ಲಿ ಹುಬ್ಬಳ್ಳಿಯಿಂದಲೇ ರಾಜ್ಯಭಾರ ಮಾಡುತ್ತಿದ್ದಾರೆ. ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕಾಲಿಗೆ ಗಾಲಿ ಕಟ್ಟಿಕೊಂಡು ಹಗಲು-ರಾತ್ರಿಯ ಪರಿವೆ ಇಲ್ಲದೇ ಕ್ಷೇತ್ರದಲ್ಲಿ ಓಡಾಡುತ್ತಿದ್ದಾರೆ. ಹತ್ತಾರು ಜನ ಲಿಂಗಾಯತ ಸಚಿವರು, ಸಂಸದರು ಕ್ಷೇತ್ರದಲ್ಲಿ ಗಿರಕಿ ಹೊಡೆಯುತ್ತಿದ್ದಾರೆ.
ನಡ್ಡಾ, ಅಮಿತ್Ü ಶಾ ಅವರು ಮೇಲಿಂದ ಮೇಲೆ ಉನ್ನತ ಮಟ್ಟದ ಸಭೆ ನಡೆಸುತ್ತಿದ್ದರಿಂದ ಹುಬ್ಬಳ್ಳಿ ಅಕ್ಷರಶಃ ಬಿಜೆಪಿ ಶಕ್ತಿಕೇಂದ್ರವಾಗಿ ಪರಿಣಮಿಸಿದೆ.
22 ಪಾಲಿಕೆ ಸದಸ್ಯರು:
ಸೆಂಟ್ರಲ್ ಕ್ಷೇತ್ರದಲ್ಲಿ ಮಹಾನಗರ ಪಾಲಿಕೆಯ 16 ಜನ ಬಿಜೆಪಿ, 6 ಜನ ಕಾಂಗ್ರೆಸ್ ಸದಸ್ಯರಿದ್ದಾರೆ. ಶೆಟ್ಟರ್ ಈಗ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದರಿಂದ ಕಾಂಗ್ರೆಸ್ ಸದಸ್ಯರು ಸಹಜವಾಗಿಯೇ ಶೆಟ್ಟರ್ ಪರ ಇದ್ದಾತ್ತಾರೆ. ಬಿಜೆಪಿ ಸದಸ್ಯರು ಯಾರ ಪರವಾಗಿದ್ದಾರೆ ಎನ್ನುವುದು ಈಗ ಯಕ್ಷಪ್ರಶ್ನೆಯಾಗಿದೆ. ಕಾರಣ ಅವರಲ್ಲಿನ ಬಹುತೇಕರು ಶೆಟ್ಟರ್ ಬೆಂಬಲಿಗರು ಮತ್ತು ಅವರ ಸಂಬಂಧಿಕರು ಕೂಡ.
ಇವರನ್ನು ಬಿಜೆಪಿಯಲ್ಲಿ ಉಳಿಸಿಕೊಳ್ಳುವುದು ಬಿಜೆಪಿಗೆ ಸವಾಲಾಗಿ ಪರಿಣಮಿಸಿದೆ. ಹಾಗಾಗಿ ಶೆಟ್ಟರ್ ಸೇರಿದಂತೆ ಅವರ ಬೆಂಬಲಿಗರ ಚಲನವಲನದ ಮೇಲೆ ಭಾರೀ ನಿಗಾ ಇಟ್ಟದೆ. ಸಾಲದ್ದಕ್ಕೆ ನಾಗಪುರದಿಂದ ಬಂದಿದೆ ಎನ್ನಲಾದ ಆರೆಸ್ಸೆಸ್ ತಂಡವೂ ಸಹ ಇವರ ಮೇಲೆ ನಿಗಾ ಇಟ್ಟಿದೆ ಎನ್ನುವ ಮಾತುಗಳು ಬಿಜೆಪಿ ವಲಯದಲ್ಲಿ ಹರಿದಾಡುತ್ತಿದೆ.
ಶೆಟ್ಟರಿಗೆ ಟಿಕೆಟ್ ಕೈ ತಪ್ಪಿದ ದಿನ 16 ಜನ ಪಾಲಿಕೆ ಸದಸ್ಯರು ಬಿಜೆಪಿ ರಾಜ್ಯಾಧ್ಯಕ್ಷರಿಗೆ ತಮ್ಮ ರಾಜೀನಾಮೆ ಸಲ್ಲಿಸಿ ಆಕ್ರೋಶ ವ್ಯಕ್ತಪಡಿಸಿದ್ದರು. ಎರಡೇ ದಿನದಲ್ಲಿ ಹುಬ್ಬಳ್ಳಿಗೆ ಆಗಮಿಸಿದ್ದ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ‘ವ್ಯಕ್ತಿಗಿಂತ ಪಕ್ಷ ಮುಖ್ಯ, ಪಕ್ಷ ವಿರೋಧಿ ಚಟುವಟಿಕೆ ಮಾಡಿದರೆ ಸಹಿಸುವುದಿಲ್ಲ’ ಎಂದು ಎಚ್ಚರಿಸುವ ಜತೆಗೆ ‘ನಿಮ್ಮ ರಾಜಕೀಯ ಭವಿಷ್ಯ ರಾಷ್ಟ್ರೀಯ ಪಕ್ಷದಲ್ಲಿದೆ’ ಎನ್ನುವ ಕಿವಿಮಾತನ್ನು ಹೇಳಿ ತಕ್ಷಣಕ್ಕೆ ಅಸಮಾಧಾನ ಶಮನಗೊಳಿಸಿದರು.
ಬಳಿಕ ಯಾರೂ ರಾಜೀನಾಮೆಯ ಮಾತು ಆಡಿಲ್ಲ. ಶೆಟ್ಟರ್ ಸಹೋದರ ವಿಧಾನಪರಿಷತ್ ಸದಸ್ಯ ಪ್ರದೀಪ ಶೆಟ್ಟರ್ ಕೂಡ ತಾವು ಬಿಜೆಪಿಯಲ್ಲೇ ಮುಂದುವರಿಯುವುದಾಗಿ ಹೇಳಿ, ಪಕ್ಷದ ಅಧಿಕೃತ ಅಭ್ಯರ್ಥಿ ಮಹೇಶ ಟೆಂಗಿನಕಾಯಿ ಪರ ಪ್ರಚಾರದಲ್ಲಿ ತೊಡಗಿದ್ದಾರೆ.
ಆದರೆ, ತಮ್ಮ ಮೇಲಿನ ‘ಅತಿಯಾದ ನಿಗಾ’ ಶೆಟ್ಟರ್ ಬೆಂಬಲಿಗರನ್ನು ಕೆರಳಿಸಿದೆ. ಅವರ ಆಕ್ರೋಶ, ಅಸಮಾಧಾನ ಇಡೀ ಕ್ಷೇತ್ರದಲ್ಲಿ ಗುಪ್ತಗಾಮಿನಿಯಂತೆ ಪ್ರವಹಿಸುತ್ತಿದೆ. ಇದನ್ನು ನಿಯಂತ್ರಿಸುವುದು ಬಿಜೆಪಿಗೆ ಮತ್ತೊಂದು ಸವಾಲು.
ಯಾರು ಏನೇ ತಂತ್ರಗಾರಿಕೆ ಮಾಡಿದರೂ ಗೆಲುವು ನನ್ನದೇ: ಜಗದೀಶ್ ಶೆಟ್ಟರ್
ನಾವು ಮೊದಲಿನಿಂದಲೂ ಜಗದೀಶ್ ಶೆಟ್ಟರ್ ಬೆಂಬಲಿಗರು. ಅವರು ನಮ್ಮನ್ನೆಲ್ಲ ಬೆಳೆಸಿದ್ದಾರೆ. ಶೆಟ್ಟರಿಗೆ ಟಿಕೆಟ್ ನಿರಾಕರಿಸಿದ್ದು ಬೇಸರ ತರಿಸಿದೆ. ಪಕ್ಷದ ಕೆಲವರು ಮತ್ತು ನಾಗಪುರದಿಂದ ಬಂದಿರುವ ಸಂಘದ ಕಾರ್ಯಕರ್ತರು ವಿಪರೀತವಾಗಿ ನಮ್ಮ ಮೇಲೆ ನಿಗಾ ವಹಿಸುತ್ತಿರುವುದು ಮುಜುಗರ ಹುಟ್ಟಿಸಿದೆ. ಉತ್ತರ ಕೊಡುವ ಸಮಯ ನಮಗೂ ಬರುತ್ತದೆ.
-ಹೆಸರು ಹೇಳಲಿಚ್ಚಿಸದ ಪಾಲಿಕೆ ಸದಸ್ಯ
ಕರ್ನಾಟಕ ವಿಧಾನಸಭೆ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಮೇ 10 ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13 ರಂದು ಮತ ಎಣಿಕೆ ನಡೆಯಲಿದೆ.