ಡಿ.ಕೆ.ಶಿವಕುಮಾರ್ ಅವರಿಗೆ ಮನೆ ಹಾಳು ಬುದ್ಧಿ ಬಂದಿದೆ: ಆರ್.ಅಶೋಕ್ ವ್ಯಂಗ್ಯ

Published : May 17, 2025, 10:54 PM IST
ಡಿ.ಕೆ.ಶಿವಕುಮಾರ್ ಅವರಿಗೆ ಮನೆ ಹಾಳು ಬುದ್ಧಿ ಬಂದಿದೆ: ಆರ್.ಅಶೋಕ್ ವ್ಯಂಗ್ಯ

ಸಾರಾಂಶ

ರೈತರು ನಮ್ಮ ಭೂಮಿ ನಮ್ಮ ಹಕ್ಕು ಎನ್ನುತ್ತಿದ್ದರೆ, ಈ ಸರ್ಕಾರ ಕಂಡವರ ಭೂಮಿ ನಮ್ಮ ಹಕ್ಕು ಎಂಬಂತೆ ವರ್ತಿಸುತ್ತಿದೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ವ್ಯಂಗ್ಯವಾಡಿದರು. 

ರಾಮನಗರ (ಮೇ.17): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಲೂಗಡ್ಡೆ ಹಾಕಿ ಚಿನ್ನ ತೆಗೆಯುತ್ತೇವೆ ಎಂದಿದ್ದರು. ಡಿಸಿಎಂ ಡಿ.ಕೆ.ಶಿವಕುಮಾರ್ ಚಿನ್ನದ ಬಿಸ್ಕತ್ ತೋರಿಸಿ ಜಮೀನು ಕೊಡಿ ಎನ್ನುತ್ತಿದ್ದಾರೆ. ರೈತರು ನಮ್ಮ ಭೂಮಿ ನಮ್ಮ ಹಕ್ಕು ಎನ್ನುತ್ತಿದ್ದರೆ, ಈ ಸರ್ಕಾರ ಕಂಡವರ ಭೂಮಿ ನಮ್ಮ ಹಕ್ಕು ಎಂಬಂತೆ ವರ್ತಿಸುತ್ತಿದೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ವ್ಯಂಗ್ಯವಾಡಿದರು. ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಮೀಪದ ಖಾಸಗಿ ಬಡಾವಣೆಯಲ್ಲಿ ಬೈರಮಂಗಲ - ಕಂಚುಗಾರನಹಳ್ಳಿ ಗ್ರಾಮ ಪಂಚಾಯಿತಿಗಳ ರೈತರ ಭೂ ಹಿತರಕ್ಷಣಾ ಸಂಘ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಭೂ ಸ್ವಾಧೀನ ವಿರೋಧಿಸಿ ಆಯೋಜಿಸಿದ್ದ ಪ್ರತಿಭಟನಾ ಸಭೆ ಉದ್ಘಾಟಿಸಿ ಮಾತನಾಡಿದರು.

ಎಚ್.ಡಿ.ಕುಮಾರಸ್ವಾಮಿರವರು ಸಹ ಟೌನ್‌ಶಿಪ್ ಮಾಡಲು ಮುಂದಾಗಿದ್ದರು. ರೈತರು ವಿರೋಧಿಸಿದ್ದರಿಂದ ಅವರು ಆ ಯೋಜನೆಯನ್ನು ಕೈಬಿಟ್ಟಿದ್ದರು. 20 ವರ್ಷ ಹಿಂದಿನ ನೋಟಿಫಿಕೇಷನ್ ಗೆ ಈಗ 20 ಪೈಸೆಯ ಬೆಲೆ ಇಲ್ಲ. ಬಿಜೆಪಿ ಸರ್ಕಾರದಲ್ಲಿ ನಾನೇ ಕಂದಾಯ ಸಚಿವನಾಗಿದ್ದೆ, ಇಲ್ಲಿಗೆ ಒಮ್ಮೆಯೂ ಬರಲಿಲ್ಲ. ಆದರೆ, ಡಿ.ಕೆ.ಶಿವಕುಮಾರ್ ಅವರಿಗೆ ಮನೆ ಹಾಳು ಬುದ್ಧಿ ಬಂದಿದೆ ಎಂದು ಟೀಕಿಸಿದರು. ಕುಮಾರಸ್ವಾಮಿ ಹೆಸರು ಹೇಳಿಕೊಂಡು ಭೂಸ್ವಾಧೀನಕ್ಕೆ ಮುಂದಾಗಿದ್ದಾರೆ. ಆ ಜಾಗದಲ್ಲಿ ರೈತರು ಮತ್ತು ಯುವಕರಿಗೆ ಅನುಕೂಲವಾಗುವಂತೆ ಕೈಗಾರಿಕೆ ಸ್ಥಾಪನೆ ಮಾಡುವುದಾದರೆ ಸ್ವಾಗತಿಸುತ್ತೇವೆ. ಕುಮಾರಸ್ವಾಮಿರವರೇ ಯೋಜನೆ ಬೇಡ ಎಂದ ಮೇಲೆ ಕಂಡವರ ಮಕ್ಕಳನ್ನು ನೀವೇಕೆ ಸಾಕುತ್ತೀರಾ ಎಂದು ಡಿ.ಕೆ.ಶಿವಕುಮಾರ್ ಅವರನ್ನು ಅಶೋಕ್ ಪ್ರಶ್ನೆ ಮಾಡಿದರು.

ಬಿಡದಿ ಟೌನ್ ಶಿಪ್ ಮಾತ್ರವಲ್ಲದೆ ನೈಸ್ ರಸ್ತೆ ಪಕ್ಕ ಮತ್ತೊಂದು ನೈಸ್ ರಸ್ತೆ ಮಾಡಲು ಕಾಂಗ್ರೆಸ್ ಸರ್ಕಾರ ಮುಂದಾಗಿದೆ. ಈಗಿರುವ ನೈಸ್ ರಸ್ತೆಯೇ ಬೋಗಸ್ ಆಗಿದೆ. ಹೀಗಿರುವಾಗ ಮತ್ತೊಂದು ನೈಸ್ ರಸ್ತೆಗೆ ಅಧಿಸೂಚನೆ ಹೊರಡಿಸಿದ್ದಾರೆ. ಇದು ಹೆಸರಿಗೆ ಮಾತ್ರ ಅಧಿಸೂಚನೆ, ಮುಖ್ಯ ಉದ್ದೇಶ ಹಣ ವಸೂಲಿ. ರೈತರು ಹೋರಾಟ ಮಾಡದಿದ್ದರೆ ಕೃಷಿ ಭೂಮಿ ಉಳಿಯುವುದಿಲ್ಲ ಎಂದು ಹೇಳಿದರು. ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿರುವ ಬಿಜೆಪಿ ಸರ್ಕಾರವಾಗಲಿ ಅಥವಾ ಕುಮಾರಸ್ವಮಿ ಅವರಾಗಲಿ ಟೌನ್ ಶಿಪ್ ಮಾಡುವುದಿಲ್ಲ. ಭೂಮಿಗೆ ಬದಲಾಗಿ ಚಿನ್ನ ಕೊಟ್ಟರೆ ಆಭರಣ ಮಾಡಿಸಿಕೊಂಡು ಮೈ ಮೇಲೆ ಹಾಕಿಕೊಳ್ಳಬಹುದು ಅಷ್ಟೆ. ಅದರಿಂದ ಹೊಟ್ಟೆ ತುಂಬಲ್ಲ. ಟೌನ್ ಶಿಪ್ ನಿಂದಾಗಿ ಶೇ‌95ರಷ್ಟು ರೈತರ ಮನೆ ಹಾಳಾಗುತ್ತದೆ. 

ಬೆಲೆ ಏರಿಕೆ ಖಂಡಿಸಿ ಪಾಲಿಕೆ ಕಚೇರಿ ಬಳಿ ಬಿಜೆಪಿ ಹೋರಾಟ: ಅಶೋಕ್‌

ನಿಮ್ಮ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ. ಭೂಮಿ ಉಳಿಸಿಕೊಳ್ಳಬೇಕಾದರೆ ಬುತ್ತಿ ಕಟ್ಟಿಕೊಂಡು ಪಾದಯಾತ್ರೆ ಮೂಲಕ ವಿಧಾನಸೌಧಕ್ಕೆ ಬಂದು ಹೋರಾಟ ನಡೆಸುವಂತೆ ಅಶೋಕ್ ತಿಳಿಸಿದರು.ಬಿಜೆಪಿ ರಾಜ್ಯ ವಕ್ತಾರ ಅಶ್ವತ್ಥ ನಾರಾಯಣಗೌಡ, ಮಾಜಿ ಶಾಸಕ ಎ.ಮಂಜುನಾಥ್ , ಸಂಘದ ಅಧ್ಯಕ್ಷ ಅರಳಾಳಸಂದ್ರ ಕೆ. ರಾಮಯ್ಯ, ಪದಾಧಿಕಾರಿ ಮಂಡಲಹಳ್ಳಿ ನಾಗರಾಜು, ಕರ್ನಾಟಕ ಪ್ರಾಂತ ರೈತಸಂಘ ಪ್ರಧಾನ ಕಾರ್ಯದರ್ಶಿ ಟಿ.ಯಶವಂತ, ವೆಂಕಟಾಚಲಯ್ಯ, ಜೆಡಿಎಸ್ ತಾಲೂಕು ಅಧ್ಯಕ್ಷ ಸಬ್ಬಕೆರೆ ಶಿವಲಿಂಗಯ್ಯ, ಮುಖಂಡರಾದ ಭರತ್ ಕೆಂಪಣ್ಣ, ಬಿಜೆಪಿ ಮುಖಂಡರಾದ ಗೌತಮ್ ಗೌಡ, ಪ್ರಸಾದ್ ಗೌಡ ಮತ್ತಿತರರು ಹಾಜರಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಡಿ.ಕೆ.ಶಿವಕುಮಾರ್ 30 ದಿನಗಳ ಮೌನ ತಪ್ಪಿಸ್ಸಿಗೆ ಒಲಿಯುತ್ತಾ ಪಟ್ಟಾಭಿಷೇಕ; ಜನವರಿ 9ಕ್ಕೆ ಮುಹೂರ್ತ!
ರಾಜ್ಯದಲ್ಲಿ 'ನಾಯಕತ್ವ ಬದಲಾವಣೆ ಇಲ್ಲ'- ಯತೀಂದ್ರ ಹೇಳಿಕೆಗೆ ಡಿ.ಕೆ. ಶಿವಕುಮಾರ್ ಕೆಂಡಾಮಂಡಲ!