ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಅಧಿಕೃತ ಅಭ್ಯರ್ಥಿಗಳ ವಿರುದ್ಧ ಚಟುವಟಿಕೆ ನಡೆಸಿದ ಆರೋಪದ ಮೇರೆಗೆ ರಾಮನಗರ ಜಿಲ್ಲೆಯ ಮಾಜಿ ಅಧ್ಯಕ್ಷ ಎಂ.ರುದ್ರೇಶ್ ಸೇರಿದಂತೆ ರಾಜ್ಯಾದ್ಯಂತ ಸುಮಾರು 15ಕ್ಕೂ ಹೆಚ್ಚು ಮುಖಂಡರಿಗೆ ಪಕ್ಷದ ಶಿಸ್ತು ಸಮಿತಿ ನೋಟಿಸ್ ನೀಡಿದೆ.
ಬೆಂಗಳೂರು (ಜು.06): ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಅಧಿಕೃತ ಅಭ್ಯರ್ಥಿಗಳ ವಿರುದ್ಧ ಚಟುವಟಿಕೆ ನಡೆಸಿದ ಆರೋಪದ ಮೇರೆಗೆ ರಾಮನಗರ ಜಿಲ್ಲೆಯ ಮಾಜಿ ಅಧ್ಯಕ್ಷ ಎಂ.ರುದ್ರೇಶ್ ಸೇರಿದಂತೆ ರಾಜ್ಯಾದ್ಯಂತ ಸುಮಾರು 15ಕ್ಕೂ ಹೆಚ್ಚು ಮುಖಂಡರಿಗೆ ಪಕ್ಷದ ಶಿಸ್ತು ಸಮಿತಿ ನೋಟಿಸ್ ನೀಡಿದೆ. ಚಾಮರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಮಾಜಿ ಸಚಿವ ವಿ.ಸೋಮಣ್ಣ ವಿರುದ್ಧ ರುದ್ರೇಶ್ ಅವರು ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಆರೋಪ ಕೇಳಿಬಂದಿತ್ತು. ಈ ಬಗ್ಗೆ ಸೋಮಣ್ಣ ಅವರು ಪಕ್ಷದ ನಾಯಕರಿಗೆ ದೂರು ನೀಡಿದ್ದರು. ಜತೆಗೆ ಪಕ್ಷದ ಚಾಮರಾಜನಗರ ಜಿಲ್ಲಾ ಘಟಕದಿಂದಲೂ ಮಾಹಿತಿ ನೀಡಲಾಗಿತ್ತು.
ಈ ಹಿನ್ನೆಲೆಯಲ್ಲಿ ರುದ್ರೇಶ್ ಅವರಿಗೆ ಶಿಸ್ತು ಸಮಿತಿ ನೋಟಿಸ್ ನೀಡಿದ್ದು, ಒಂದು ವಾರದೊಳಗಾಗಿ ಉತ್ತರ ನೀಡುವಂತೆ ಸೂಚಿಸಿದೆ ಎಂದು ತಿಳಿದು ಬಂದಿದೆ. ಆದರೆ, ತಮಗೆ ಪಕ್ಷದಿಂದ ಈವರೆಗೆ ಯಾವುದೇ ನೋಟಿಸ್ ತಲುಪಿಲ್ಲ ಎಂದು ರುದ್ರೇಶ್ ಸ್ಪಷ್ಟಪಡಿಸಿದ್ದಾರೆ. ಕಳೆದ ವಾರ ಮಾಜಿ ಸಚಿವ ಹಾಗೂ ಹೊನ್ನಾಳಿ ವಿಧಾನಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿ ಎಂ.ಪಿ.ರೇಣುಕಾಚಾರ್ಯ ಅವರು ಪಕ್ಷದ ನಾಯಕತ್ವದ ವಿರುದ್ಧ ಬಹಿರಂಗವಾಗಿಯೇ ವಾಗ್ದಾಳಿ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಅವರಿಗೆ ನೋಟಿಸ್ ಜಾರಿಗೊಳಿಸಲಾಗಿತ್ತು. ನೋಟಿಸ್ ಸಂಬಂಧ ಪ್ರತಿಕ್ರಿಯೆ ನೀಡಿದ್ದ ರೇಣುಕಾಚಾರ್ಯ, ಪಕ್ಷದ ನಾಯಕತ್ವದ ವಿರುದ್ಧ ಅನೇಕರು ಮಾತನಾಡಿದ್ದಾರೆ.
ಗೋಹತ್ಯೆ ನಿಷೇಧ ವಾಪಸಿಲ್ಲ, ದೂರು ಬಂದರೆ ಕಾನೂನು ಕ್ರಮ: ಸಚಿವ ವೆಂಕಟೇಶ್ ಸ್ಪಷ್ಟನೆ
ಇನ್ನೂ ಹಲವರು ಚುನಾವಣೆಯಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿಗಳ ವಿರುದ್ಧ ಕೆಲಸ ಮಾಡಿದ್ದಾರೆ. ಅಂಥವರನ್ನೆಲ್ಲ ಬಿಟ್ಟು ಕೇವಲ ನನಗೊಬ್ಬನಿಗೇ ನೋಟಿಸ್ ನೀಡಿದ್ದು ಯಾಕೆ ಎಂದು ಹರಿಹಾಯ್ದಿದ್ದರು. ಇದಲ್ಲದೆ, ಪಕ್ಷದ ಹಿರಿಯ ನಾಯಕರು ಚುನಾವಣೆಯ ಹಿನ್ನೆಲೆಯಲ್ಲಿ ಅಸಮಾಧಾನ ಹೊಂದಿದ ಮುಖಂಡರನ್ನು ಪಕ್ಷದ ಕಚೇರಿಗೆ ಕರೆಸಿ ಅವರ ಅಸಮಾಧಾನದ ಬಗ್ಗೆ ಚರ್ಚೆ ನಡೆಸಿದ್ದರು. ವಿವರಣೆಯನ್ನೂ ಪಡೆದಿದ್ದರು. ಅದರ ಆಧಾರದ ಮೇಲೆ ರಾಜ್ಯಾದ್ಯಂತ ಸುಮಾರು 15ಕ್ಕೂ ಹೆಚ್ಚು ಮುಖಂಡರಿಗೆ ನೋಟಿಸ್ ಜಾರಿಗೊಳಿಸಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ನನಗೂ ಸ್ಥಾನಮಾನ ಬೇಕು: ಅಧಿಕಾರದ ಆಸೆ ಬಹಿರಂಗಪಡಿಸಿದ ಸಿಎಂ ಪುತ್ರ ಯತೀಂದ್ರ ಸಿದ್ದರಾಮಯ್ಯ!
ರೇಣುಕಾಚಾರ‍್ಯಗೆ ಬಿಜೆಪಿ ನೋಟಿಸ್: ಪಕ್ಷದ ಮುಖಂಡರ ವಿರುದ್ಧ ಟೀಕಾಪ್ರಹಾರ ನಡೆಸಿರುವ ಮಾಜಿ ಸಚಿವ ರೇಣುಕಾಚಾರ್ಯ ಅವರಿಗೆ ಕಾರಣ ಕೇಳಿ ಬಿಜೆಪಿ ನೋಟಿಸ್ ಜಾರಿ ಮಾಡಿದೆ. ಪಕ್ಷದ ರಾಜ್ಯ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ್ ಪಾಟೀಲ್ ಅವರು ನೋಟಿಸ್ ಜಾರಿ ಮಾಡಿದ್ದಾರೆ. ಪಕ್ಷದ ವಿರೋಧಿ ಹೇಳಿಕೆ ನೀಡಿರುವ ಕಾರಣ ತಮ್ಮ ವಿರುದ್ಧ ಯಾಕೆ ಶಿಸ್ತು ಕ್ರಮ ಕೈಗೊಳ್ಳಬಾರದು ಎಂಬುದಕ್ಕೆ ಒಂದು ವಾರದೊಳಗಾಗಿ ಲಿಖಿತ ಉತ್ತರ ನೀಡಬೇಕು ಎಂದು ಸೂಚಿಸಲಾಗಿದೆ. ಪಕ್ಷವು ಹಲವು ಬಾರಿ ತಿಳಿ ಹೇಳಿದರೂ ಪದೇ ಪದೇ ರಾಜ್ಯ ಮತ್ತು ರಾಷ್ಟ್ರೀಯ ನಾಯಕರುಗಳ ವಿರುದ್ಧ ಮಾಧ್ಯಮಗಳ ಮುಂದೆ ಪಕ್ಷಕ್ಕೆ ಮುಜುಗರವಾಗುವ ರೀತಿಯಲ್ಲಿ ಹೇಳಿಕೆಗಳನ್ನು ನೀಡುತ್ತಿರುವುದನ್ನು ರಾಜ್ಯ ಶಿಸ್ತು ಸಮಿತಿ ಗಂಭೀರವಾಗಿ ಪರಿಗಣಿಸಿದೆ. ಈ ಹಿನ್ನೆಲೆಯಲ್ಲಿ ಯಾವ ಕಾರಣಕ್ಕಾಗಿ ತಮ್ಮ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬಾರದು ಎಂಬುದಕ್ಕೆ ಕಾರಣ ನೀಡುವಂತೆ ನೋಟಿಸ್‌ನಲ್ಲಿ ತಿಳಿಸಲಾಗಿದೆ.