
ಬೆಂಗಳೂರು(ನ.27): ‘ಬಿಜೆಪಿಯವರು ಸಂವಿಧಾನ ತಿರುಚಲು ಏಕರೂಪ ನಾಗರಿಕ ಸಂಹಿತೆ ಬಗ್ಗೆ ಮಾತನಾಡುತ್ತಿದ್ದಾರೆ. ಗೊಂದಲ ಸೃಷ್ಟಿಸುವ ಮೂಲಕ ಜನರ ಭಾವನೆ ಕೆರಳಿಸಿ ಸಂವಿಧಾನದ ಆಶಯಗಳನ್ನು ಹಾಳು ಮಾಡಲು ಮುಂದಾಗಿದ್ದಾರೆ. ಬಿಜೆಪಿಯವರು ಸಂವಿಧಾನದ ಆಶಯಗಳನ್ನು ಬದಲಿಸುವ ಪ್ರಯತ್ನ ಮಾಡದೆ ದೇಶ ಉಳಿಸಬೇಕು’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಗ್ರಹಿಸಿದ್ದಾರೆ. ಸಂವಿಧಾನ ದಿನದ ಅಂಗವಾಗಿ ಕೆಪಿಸಿಸಿ ಕಚೇರಿಯಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಅವರು, ಪರೋಕ್ಷವಾಗಿ ಏಕರೂಪ ನಾಗರಿಕ ಸಂಹಿತೆ ಕುರಿತು ಮಾತನಾಡುತ್ತಿರುವ ಬಿಜೆಪಿಯವರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ವ್ಯಕ್ತಿಗೆ ಆಯಾ ಧರ್ಮದ ಪವಿತ್ರ ಗ್ರಂಥಗಳಿರುತ್ತವೆ. ಆದರೆ, ಪ್ರತಿಯೊಬ್ಬ ಭಾರತೀಯನಿಗೂ ಸಂವಿಧಾನ ಪವಿತ್ರ ಗ್ರಂಥ. ಅಂಬೇಡ್ಕರ್ ನೀಡಿದ ಈ ಗ್ರಂಥದ ಹೆಸರಿನಲ್ಲೇ ಪ್ರಧಾನಮಂತ್ರಿ ನರೇಂದ್ರ ಮೋದಿ, ಬಸವರಾಜ ಬೊಮ್ಮಾಯಿ ಪ್ರಮಾಣ ವಚನ ತೆಗೆದುಕೊಂಡಿದ್ದಾರೆ. ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ಕೆಲಸ ಮಾಡುವ ಪ್ರತಿಜ್ಞೆ ಮಾಡಿ ಅದನ್ನೇ ಬದಲಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಕಿಡಿಕಾರಿದರು.
ಮತದಾರರ ಪಟ್ಟಿಅಕ್ರಮ ಕಾಂಗ್ರೆಸ್ ಸಂಸ್ಕೃತಿ: ಸಚಿವ ಅಶ್ವತ್ಥನಾರಾಯಣ
ಇವರು ಸಂವಿಧಾನ ತಿರುಚಲು ಏಕರೂಪ ನಾಗರಿಕ ಕಾಯ್ದೆ ಎಂದು ಮಾತನಾಡುತ್ತಿದ್ದಾರೆ. ಈ ವಿಚಾರವಾಗಿ ಗೊಂದಲ ಸೃಷ್ಟಿಸಿ, ಜನರ ಭಾವನೆ ಕೆರಳಿಸುತ್ತಿದ್ದಾರೆ. ಬಿಜೆಪಿಯವರು ಜನರ ವಿಶ್ವಾಸ ಕಳೆದುಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಇಂತಹ ಭಾವನಾತ್ಮಕ ವಿಷಯಗಳನ್ನು ಮುನ್ನೆಲೆಗೆ ತರುತ್ತಿದ್ದಾರೆ. ನಮ್ಮ ರಾಜ್ಯದ ಒಂದೊಂದು ಭಾಗದಲ್ಲೂ ವಿಭಿನ್ನ ಆಹಾರ ಪದ್ಧತಿ, ದೈವ ನಂಬಿಕೆಗಳು, ಆಚಾರ-ವಿಚಾರ ಇದೆ. ಈ ವಿವಿಧತೆಯಲ್ಲಿ ಏಕತೆಯ ತತ್ವಕ್ಕೆ ಧಕ್ಕೆ ತರುವಂತೆ ಮಾಡಬಾರದು ಎಂದು ಒತ್ತಾಯಿಸಿದರು.
ನಮ್ಮ ದೇಶದ ಈಶಾನ್ಯ ರಾಜ್ಯಗಳಲ್ಲಿ ದೇವರಿಗೆ ನೈವೇದ್ಯಕ್ಕೆ ಮಾಂಸ ಇಡುತ್ತಾರೆ. ಅದು ಅವರ ಪದ್ಧತಿ. ಈ ದೇಶದಲ್ಲಿ ಅವರವರ ಪದ್ಧತಿ ಪಾಲನೆಗೆ ಸಂವಿಧಾನದಲ್ಲಿ ರಕ್ಷಣೆ ಇದೆ. ಅಲ್ಲಿ ಬಿಜೆಪಿ ಸರ್ಕಾರವೇ ಇದೆ. ಅಲ್ಲಿ ಅದನ್ನು ಬದಲಿಸಲು ಬಿಜೆಪಿಗೆ ಯಾಕೆ ಸಾಧ್ಯವಿಲ್ಲ? ಎಂದು ಪ್ರಶ್ನಿಸಿದರು. ಆದರೆ, ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಏಕರೂಪ ನಾಗರಿಕ ಸಂಹಿತೆ ಕುರಿತು ಮಾತನಾಡಲು ನಿರಾಕರಿಸಿದರು. ‘ಈ ಕುರಿತು ನಾವು ಖಂಡಿತ ಪ್ರತಿಕ್ರಿಯೆ ನೀಡುತ್ತೇವೆ. ಈಗ ಏಕರೂಪ ನಾಗರಿಕ ಸಂಹಿತೆಯ ಚರ್ಚೆ ಬೇಡ’ ಎಂದರು.
ಈ ವೇಳೆ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸಲೀಂ ಅಹಮದ್, ಧ್ರುವನಾರಾಯಣ, ಮಾಜಿ ಸಚಿವ ಎಚ್.ಎಂ. ರೇವಣ್ಣ ಹಾಜರಿದ್ದರು.
ಬಿಜೆಪಿ ಸಂವಿಧಾನ ನಂಬಲ್ಲ: ಸಿದ್ದು
ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, ಬಿಜೆಪಿಯವರಿಗೆ ಅಂಬೇಡ್ಕರ್ ಹಾಗೂ ಸಂವಿಧಾನದ ಮೇಲೆ ನಂಬಿಕೆಯಿಲ್ಲ. ಅವರಿಗೆ ಮನುಸ್ಮೃತಿಯಲ್ಲಿ ಮಾತ್ರ ನಂಬಿಕೆಯಿದೆ. ಅಂಬೇಡ್ಕರ್ ಅವರನ್ನು ಸಂವಿಧಾನದ ಕರಡು ರಚನಾ ಸಮಿತಿ ಅಧ್ಯಕ್ಷರನ್ನಾಗಿ ಮಾಡಿದ್ದು ಕಾಂಗ್ರೆಸ್. ಜತೆಗೆ ಈವರೆಗೆ ಸಂವಿಧಾನದ ಆಶಯಗಳಂತೆ ನಡೆದುಕೊಂಡುಬಂದಿದೆ. ಆದರೆ, ಬಿಜೆಪಿಯವರು ಒಂದು ದೇಶ, ಒಂದು ಭಾಷೆ. ಒಂದು ನಾಯಕ, ಒಂದು ಸಿದ್ಧಾಂತದ ಮೇಲೆ ನಂಬಿಕೆ ಹೊಂದಿದ್ದಾರೆ. ಪ್ರಜಾಪ್ರಭುತ್ವ, ಸಂವಿಧಾನದ ಬದಲಿಗೆ ಸರ್ವಾಧಿಕಾರಿ ತತ್ವದ ಮೇಲೆ ವಿಶ್ವಾಸ ಹೊಂದಿದ್ದಾರೆ ಎಂದು ಟೀಕಿಸಿದರು.
ಬಿಜೆಪಿ ಸರ್ಕಾರ ಬಂದಾಗಲೇ ಗಡಿ ಗಲಾಟೆ: ಎಚ್.ಡಿ.ಕುಮಾರಸ್ವಾಮಿ
ಬಿಜೆಪಿಯವರು ಮೊದಲಿನಿಂದಲೂ ಮೀಸಲಾತಿಗೆ ವಿರುದ್ಧ. ಕಾಂಗ್ರೆಸ್ ಪಕ್ಷವು ಎಸ್ಸಿ, ಎಸ್ಟಿಮೀಸಲಾತಿ ತಂದಾಗ, ಮಹಿಳೆಯರಿಗೆ ಮೀಸಲಾತಿ ತಂದಾಗ ಎಲ್ಲ ವೇಳೆಯಲ್ಲೂ ಬಿಜೆಪಿ ವಿರೋಧಿಸಿದೆ. ಕಳೆದ ಬಾರಿ ತಾವು ಅಧಿಕಾರಕ್ಕೆ ಬಂದರೆ ಎಸ್ಸಿ, ಎಸ್ಟಿಮೀಸಲಾತಿಯನ್ನು 24 ಗಂಟೆಯಲ್ಲಿ ಹೆಚ್ಚಳ ಮಾಡುತ್ತೇವೆ ಎಂದು ಬಿಜೆಪಿಯವರು ಹೇಳಿದ್ದರು. ಆದರೆ, ಮೂರೂವರೆ ವರ್ಷಗಳಿಂದ ಜಾರಿ ಮಾಡುವ ಪ್ರಯತ್ನವೇ ಮಾಡಿರಲಿಲ್ಲ ಎಂದು ಕಿಡಿಕಾರಿದರು.
ಎಸ್‌ಸಿ, ಎಸ್ಟಿಮೀಸಲಾತಿ ಹೆಚ್ಚಳಕ್ಕೆ ನಾವು ನಾಗಮೋಹನ್‌ದಾಸ್ ಸಮಿತಿ ರಚಿಸಿದ್ದೆವು. ಅವರು ವರದಿ ಕೊಟ್ಟು 3 ವರ್ಷ 4 ತಿಂಗಳಾದರೂ ಜಾರಿ ಮಾಡಿಲ್ಲ. ಈಗ ಜಾರಿ ಮಾಡಿ ದೊಡ್ಡ ಭಾಷಣ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.