ಪುತ್ತಿಲ ಪರಿವಾರ ಮತ್ತು ಬಿಜೆಪಿ ನಡುವಿನ ಮನಸ್ತಾಪ ಸರಿಪಡಿಸಲು ಸಾಕಷ್ಟು ಪ್ರಯತ್ನ ನಡೆದಿದೆ. ಬಿಜೆಪಿ ರಾಜ್ಯಮಟ್ಟದ ನಾಯಕರು, ಸಂಘ ಪರಿವಾರದ ಪ್ರಪಮುಖರು ಕೂಡ ಇತ್ಯರ್ಥಕ್ಕೆ ಹಲವು ಬಾರಿ ಅರುಣ್ ಕುಮಾರ್ ಪುತ್ತಿಲ ಜತೆ ಮಾತುಕತೆ ನಡೆಸಿದ್ದರು. ಇದು ಇತ್ಯರ್ಥವಾಗಲು ವಿಳಂಬವಾಗುತ್ತಿದ್ದಂತೆ ಪುತ್ತಿಲ ಪರಿವಾರ ಪುತ್ತೂರಿನಿಂದ ಜಿಲ್ಲೆಗೆ ವಿಸ್ತರಿಸತೊಡಗಿತ್ತು. ಹೀಗಾಗಿ ಯಾವುದೇ ಮಾತುಕತೆ ನಡೆಸಿದರೂ ಅದು ಅಂತಿಮ ರೂಪ ಪಡೆಯುತ್ತಿರಲಿಲ್ಲ.
ಆತ್ಮಭೂಷಣ್
ಮಂಗಳೂರು(ಜ.09): ಅಸೆಂಬ್ಲಿ ಚುನಾವಣೆಯಲ್ಲಿ ಪುತ್ತೂರಲ್ಲಿ ಪಕ್ಷೇತರನಾಗಿ ಸ್ಪರ್ಧಿಸಿ ಬಿಜೆಪಿಯನ್ನು ಮೂರನೇ ಸ್ಥಾನಕ್ಕೆ ತಳ್ಳಿ ಇಡೀ ರಾಜ್ಯದ ಗಮನ ಸೆಳೆದಿದ್ದ ಹಿಂದು ಸಂಘಟಕ ಅರುಣ್ ಕುಮಾರ್ ಪುತ್ತಿಲ ಅವರನ್ನು ಬಿಜೆಪಿಗೆ ಮರಳಿ ಕರೆತರುವ ಪ್ರಯತ್ನ ಭಾಗಶಃ ಕೈಬಿಟ್ಟಂತೆ ಆಗಿದೆ. ಕಳೆದ ಐದು ತಿಂಗಳಿಂದ ಅರುಣ್ ಕುಮಾರ್ ಪುತ್ತಿಲ ಅವರನ್ನು ಬಿಜೆಪಿ ಪಾಳಯ ಸೇರಿಸಿಕೊಳ್ಳಲು ನಡೆಸಿದ ಎಲ್ಲ ಪ್ರಯತ್ನಗಳು ಕೈಗೂಡದೇ ಇರುವ ಹಿನ್ನೆಲೆಯಲ್ಲಿ ಸಂಧಾನ ಬಾಗಿಲು ಬಂದ್ ಮಾಡಲು ಬಿಜೆಪಿ ಮುಖಂಡರು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ಹಿಂದೆ ಬಿಜೆಪಿ ಪರವಾಗಿ ಸಕ್ರಿಯವಾಗಿ ಕೆಲಸ ಮಾಡುತ್ತಿದ್ದ ಅರುಣ್ ಕುಮಾರ್ ಪುತ್ತಿಲ ನಾನಾ ಕಾರಣಗಳಿಂದ ಪಕ್ಷದಿಂದ ದೂರವಾಗಿದ್ದರು. ಅಸೆಂಬ್ಲಿ ಚುನಾವಣೆಗೆ ಪಕ್ಷೇತರನಾಗಿ ಸ್ಪರ್ಧಿಸಿ ಗೆಲ್ಲದಿದ್ದರೂ, ಅತ್ಯಧಿಕ ಮತ ಪಡೆದು ದ್ವಿತೀಯ ಸ್ಥಾನಿಯಾಗಿದ್ದರು. ಬಳಿಕ ಎರಡು ಗ್ರಾಮ ಪಂಚಾಯ್ತಿ ಉಪ ಚುನಾವಣೆಗಳಲ್ಲಿ ಪುತ್ತಿಲ ಪರಿವಾರ ಹೆಸರಲ್ಲಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿ ಬಿಜೆಪಿಗೆ ಸೆಡ್ಡು ಹೊಡೆದಿದ್ದರು. ನಂತರ ನಡೆದ ಸಹಕಾರಿ ಬ್ಯಾಂಕ್‌ಗಳ ಆಡಳಿತ ಮಂಡಳಿ ಚುನಾವಣೆಯಲ್ಲಿ ಬಿಜೆಪಿ ಜತೆ ಹೊಂದಾಣಿಕೆ ಮಾಡಿಕೊಂಡು ಎರಡಕ್ಕೂ ಅಧಿಕ ಸೊಸೈಟಿಗಳಲ್ಲಿ ಪುತ್ತಿಲ ಪರಿವಾರವೂ ಪ್ರವೇಶ ಪಡೆದಿತ್ತು. ಈ ಹೊಂದಾಣಿಕೆ ಬಿಜೆಪಿ ಪ್ರವೇಶಕ್ಕೆ ಪುತ್ತಿಲ ಪರಿವಾರದ ಮುನ್ನುಡಿ ಎಂದೇ ಹೇಳಲಾಗಿತ್ತು.
ಮೋದಿ ಭೇಟಿ ನೀಡಿದ ಬೆನ್ನಲ್ಲೇ ಮಂಗಳೂರು-ಲಕ್ಷದ್ವೀಪ ಪ್ರವಾಸಿ ಹಡಗು ಸಂಚಾರಕ್ಕೆ ಸಂಸದ ನಳೀನ್ ಸೂಚನೆ!
ಇವೆಲ್ಲದರ ನಡುವೆ ಪುತ್ತಿಲ ಪರಿವಾರ ಮತ್ತು ಬಿಜೆಪಿ ನಡುವಿನ ಮನಸ್ತಾಪ ಸರಿಪಡಿಸಲು ಸಾಕಷ್ಟು ಪ್ರಯತ್ನ ನಡೆದಿದೆ. ಬಿಜೆಪಿ ರಾಜ್ಯಮಟ್ಟದ ನಾಯಕರು, ಸಂಘ ಪರಿವಾರದ ಪ್ರಪಮುಖರು ಕೂಡ ಇತ್ಯರ್ಥಕ್ಕೆ ಹಲವು ಬಾರಿ ಅರುಣ್ ಕುಮಾರ್ ಪುತ್ತಿಲ ಜತೆ ಮಾತುಕತೆ ನಡೆಸಿದ್ದರು. ಇದು ಇತ್ಯರ್ಥವಾಗಲು ವಿಳಂಬವಾಗುತ್ತಿದ್ದಂತೆ ಪುತ್ತಿಲ ಪರಿವಾರ ಪುತ್ತೂರಿನಿಂದ ಜಿಲ್ಲೆಗೆ ವಿಸ್ತರಿಸತೊಡಗಿತ್ತು. ಹೀಗಾಗಿ ಯಾವುದೇ ಮಾತುಕತೆ ನಡೆಸಿದರೂ ಅದು ಅಂತಿಮ ರೂಪ ಪಡೆಯುತ್ತಿರಲಿಲ್ಲ.
ಪುತ್ತೂರು ಬಿಜೆಪಿ ಅಧ್ಯಕ್ಷ ಸ್ಥಾನ ಆಫರ್:
ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಅರುಣ್ ಕುಮಾರ್ ಪುತ್ತಿಲ ಬಿಕ್ಕಟ್ಟು ಶಮನಗೊಳಿಸಲು ಬಿಜೆಪಿ ಹಾಗೂ ಸಂಘಪರಿವಾರ ತೀವ್ರ ಪ್ರಯತ್ನಕ್ಕೆ ಇಳಿದಿತ್ತು. ಅರುಣ್ ಕುಮಾರ್ ಪುತ್ತಿಲಗೆ ಪುತ್ತೂರು ನಗರ, ಗ್ರಾಮಾಂತರ ಸೇರಿಸಿ ಬಿಜೆಪಿ ಮಂಡಲ ಅಧ್ಯಕ್ಷ ಪಟ್ಟ ನೀಡಲು ಮಾತುಕತೆ ನಡೆಸಿತ್ತು. ರಾಜ್ಯ ಬಿಜೆಪಿ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಈ ಬಗ್ಗೆ ಪ್ರಯತ್ನ ನಡೆಸಿದ್ದರು. ಪುತ್ತೂರು ನಗರ ಹಾಗೂ ಗ್ರಾಮಾಂತರ ಬಿಜೆಪಿ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಜಿಲ್ಲಾ ಬಿಜೆಪಿಯ ಒಪ್ಪಿಗೆ ಮೇರೆಗೆ ಮಾತುಕತೆಯೂ ಅಂತಿಮಗೊಂಡಿತ್ತು. ಆದರೆ ಕೊನೆಕ್ಷಣದಲ್ಲಿ ಸಂಧಾನ ಮಾತುಕತೆ ಮುರಿದುಬಿದ್ದಿತ್ತು. ಕೊನೆಗೆ ಜಿಲ್ಲಾಧ್ಯಕ್ಷ ಅಥವಾ ಉನ್ನತ ಸ್ಥಾನಕ್ಕೆ ಅರುಣ್ ಕುಮಾರ್ ಪುತ್ತಿಲ ಇರಿಸಿದ ಬೇಡಿಕೆಗೆ ಬಿಜೆಪಿ ಮುಖಂಡರು ನಕಾರಾತ್ಮಕವಾಗಿ ಸ್ಪಂದಿಸಿದ್ದರು.
ಕಾಂಗ್ರೆಸ್‌ಗೆ ರಾಮ ಮಂದಿರ ಭೀತಿ ಶುರುವಾಗಿದೆ: ವಿಪಕ್ಷ ನಾಯಕ ಆರ್.ಅಶೋಕ್
ಈ ಎಲ್ಲ ಸಂಧಾನ ಮಾತುಕತೆಗಳ ನಡುವೆಯೇ ಪುತ್ತೂರು ನಗರ ಪಂಚಾಯ್ತಿ ಉಪ ಚುನಾವಣೆಯಲ್ಲಿ ಒಮ್ಮತದ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲು ಬಿಜೆಪಿ ನಡೆಸಿದ ಪ್ರಯತ್ನ ವಿಫಲಗೊಂಡಿತ್ತು. ಈ ವೇಳೆ ಪುತ್ತಿಲ ಪರಿವಾರದ ಮಾರ್ಗದರ್ಶಕರೂ ಒಮ್ಮತದ ಸ್ಪರ್ಧೆಗೆ ಮಾತುಕತೆ ನಡೆಸಿದರೂ ಪ್ರಯೋಜನವಾಗಲಿಲ್ಲ. ಕೊನೆಗೂ ಎರಡು ಕಡೆ ಸ್ಪರ್ಧಿಸಿದ ಪುತ್ತಿಲ ಪರಿವಾರ ಮೊದಲ ಬಾರಿಗೆ ಸೋತಿತ್ತು. ಈ ಎಲ್ಲ ಬೆಳವಣಿಗೆಗಳು ಬಿಜೆಪಿ ಹಾಗೂ ಸಂಘಪರಿವಾರದ ಅಸಮಾಧಾನಕ್ಕೆ ಕಾರಣವಾಗಿದ್ದು, ಅರುಣ್ ಕುಮಾರ್ ಪುತ್ತಿಲ ಅವರನ್ನು ಬಿಜೆಪಿಗೆ ಸೇರ್ಪಡೆಗೊಳಿಸಲು ಹಿಂದಡಿ ಇಡುವಂತೆ ಮಾಡಿದೆ ಎಂದು ಮೂಲಗಳು ಹೇಳುತ್ತಿವೆ. ಸಂಧಾನ ಮಾತುಕತೆಗಳು ವಿಫಲಗೊಂಡ ಹಿನ್ನೆಲೆಯಲ್ಲಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧವೇ ಅರುಣ್ ಕುಮಾರ್ ಪುತ್ತಿಲ ಅವರನ್ನು ಕಣಕ್ಕೆ ಇಳಿಸಲು ಪುತ್ತಿಲ ಪರಿವಾರ ಸಜ್ಜಾಗುತ್ತಿದೆ.
ಅರುಣ್ ಪುತ್ತಿಲ ಸ್ಪರ್ಧೆ ಪರಿಣಾಮ ಏನು?
ಅರುಣ್ ಕುಮಾರ್ ಪುತ್ತಿಲ ಅವರು ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದರೆ ಗೆಲವು ಹೇಗೆ ಎಂಬ ಬಗ್ಗೆ ಎರಡೂ ಕಡೆ ಗಂಭೀರ ಚರ್ಚೆಗಳು ನಡೆಯುತ್ತಿದೆ. ನಳಿನ್ ಕುಮಾರ್ ಕಟೀಲ್ ವಿರುದ್ಧ ಸ್ಪರ್ಧಿಸಲು ಪುತ್ತಿಲ ಪರಿವಾರ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ ಅದರ ಪರಿಣಾಮದ ಬಗ್ಗೆ ಬಿಜೆಪಿ ಲೆಕ್ಕಹಾಕುತ್ತಿದೆ. ಇನ್ನೊಂದೆಡೆ ನಳಿನ್ ಕುಮಾರ್ ಹೊರತು ಬೇರೊಬ್ಬರನ್ನು ಬಿಜೆಪಿ ಕಣಕ್ಕೆ ಇಳಿಸಿದರೆ ಏನು ಮಾಡುವುದು ಎಂಬ ಗೊಂದಲವೂ ಪುತ್ತಿಲ ಪರಿವಾರನ್ನು ಕಾಡುತ್ತಿದೆ.
ಪುತ್ತೂರು, ಸುಳ್ಯ, ಬೆಳ್ತಂಗಡಿ, ಬಂಟ್ವಾಳಗಳಲ್ಲಿ ನಮಗೆ ಬೆಂಬಲ ಇದೆ ಎಂದು ಪುತ್ತಿಲ ಪರಿವಾರ ವಿಶ್ವಾಸ ವ್ಯಕ್ತಪಡಿಸುತ್ತಿದೆ. ಇತ್ತ ಬಿಜೆಪಿ ಪಾಳಯ ಲೋಕಸಭಾ ಚುನಾವಣೆಯಲ್ಲಿ ಮೋದಿಗಾಗಿ ಜನತೆ ಬಿಜೆಪಿ ಬೆಂಬಲಿಸುತ್ತದೆ ಎಂಬ ಆತ್ಮವಿಶ್ವಾಸದಲ್ಲಿದೆ. ಅಂತು ಪುತ್ತಿಲ ಹಾಗೂ ಬಿಜೆಪಿ ನಡುವಿನ ಬಿಕ್ಕಟ್ಟು ಮುಂದಿನ ದಿನಗಳಲ್ಲಿ ಯಾವ ಹಂತಕ್ಕೆ ತಲುಪುತ್ತದೆ ಎನ್ನುವುದು ಕುತೂಹಲದ ಸಂಗತಿಯಾಗಿದೆ.