
ಬೆಂಗಳೂರು/ಚಿತ್ರದುರ್ಗ(ಜೂ.18): ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಗೆ ಆಡಳಿತಾರೂಢ ಬಿಜೆಪಿ ಈಗಿನಿಂದಲೇ ಪರೋಕ್ಷವಾಗಿ ಸಿದ್ಧತೆ ಆರಂಭಿಸಿರುವ ಹಿನ್ನೆಲೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ಅವರು ಶನಿವಾರ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ. ಬೆಳಗ್ಗೆ ಆಗಮಿಸಲಿರುವ ನಡ್ಡಾ ಅವರು ಪಕ್ಷದ ಸಂಘಟನೆಗೆ ಸಂಬಂಧಿಸಿದಂತೆ ಎರಡು ಸಭೆಗಳಲ್ಲಿ ಪಾಲ್ಗೊಂಡು ಸಂಜೆ ದೆಹಲಿಗೆ ವಾಪಸಾಗಲಿದ್ದಾರೆ.
ದೆಹಲಿಯಿಂದ ಮಧಾಹ್ನ 12 ಗಂಟೆಗೆ ನೇರವಾಗಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಲಿರುವ ಅವರು 12.30ಕ್ಕೆ ಬೆಂಗಳೂರಿನ ಯಲಹಂಕದ ಹೊಟೇಲ್ ರಮಡಾದಲ್ಲಿ ನಡೆಯುತ್ತಿರುವ ಒಬಿಸಿ ಮೋರ್ಚಾದ ಮೂರು ದಿನಗಳ ರಾಷ್ಟ್ರೀಯ ಪ್ರಶಿಕ್ಷಣ ವರ್ಗದ ಸಮಾರೋಪ ಸಮಾರಂಭದಲ್ಲಿ ಮುಖಂಡರು ಹಾಗೂ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ರಾಜಕೀಯ ಸಂಸ್ಕೃತಿ ಬದಲಾಯಿಸಿದ್ದು ಮೋದಿ ಹೆಗ್ಗಳಿಕೆ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಬಣ್ಣನೆ
ಚಿತ್ರದುರ್ಗದಲ್ಲಿ ಭಾರಿ ಸಿದ್ಧತೆ:
ನಡ್ಡಾ ಆಗಮನ ಹಿನ್ನೆಲೆ ಬಿಜೆಪಿ ಮುಖಂಡರು ಚಿತ್ರದುರ್ಗದ ಕಾರ್ಯಕ್ರಮವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಸಮಾವೇಶ ನಡೆಯುವ ಬಸವಕೇಂದ್ರ ಮುರುಘಾಮಠದ ಆವರಣದಲ್ಲಿರುವ ಅನುಭವ ಮಂಟಪಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್ ಶುಕ್ರವಾರ ಖುದ್ದು ಹಾಜರಿದ್ದು ಪೂರ್ವ ಸಿದ್ಧತೆಗಳನ್ನು ಪರಿಶೀಲಿಸಿದರು.
ಇಡೀ ನಗರವನ್ನು ಬಿಜೆಪಿ ಬಾವುಟಗಳಿಂದ ಸಿಂಗರಿಸಲಾಗಿದೆ. ಪ್ರತಿಯೊಂದು ವೃತ್ತಗಳೂ ಕೇಸರಿಮಯವಾಗಿದೆ. ರಾಜ್ಯದ ವಿವಿಧ ಮೂಲೆಗಳಿಂದ ಹತ್ತು ಸಾವಿರಕ್ಕೂ ಹೆಚ್ಚು ಸ್ಥಳೀಯ ಸಂಸ್ಥೆ ಪ್ರತಿನಿಧಿಗಳು ಆಗಮಿಸುತ್ತಿರುವ ಹಿನ್ನೆಲೆ ಪೊಲೀಸರು ವಾಹನ ನಿಲುಗಡೆ, ಸುಗಮ ಸಂಚಾರಕ್ಕೆ ಸಂಬಂಧಿಸಿದ ಪೂರ್ವ ತಯಾರಿಗಳನ್ನು ಅಂತಿಮಗೊಳಿಸಿದ್ದಾರೆ. ದಾವಣಗೆರೆ, ಶಿವಮೊಗ್ಗ, ಹೊಸಪೇಟೆ, ಬಳ್ಳಾರಿ, ಬೆಂಗಳೂರು ಕಡೆಯಿಂದ ಜನಪ್ರತಿನಿಧಿಗಳು ಆಗಮಿಸುತ್ತಿರುವುದರಿಂದ ನಗರ ಪ್ರವೇಶಿಸುವ ಎಲ್ಲ ಕಡೆ ಸ್ವಾಗತದ ಕಮಾನುಗಳನ್ನು ಕಟ್ಟಲಾಗಿದೆ.
Karnataka Cabinet Expansion: ಸಂಪುಟ ಪುನಾರಚನೆಗೆ ಹೈಕಮಾಂಡ್ ಅಸ್ತು: ಬೊಮ್ಮಾಯಿಗೆ ನಡ್ಡಾ ಬುಲಾವ್
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಪಕ್ಷದ ರಾಜ್ಯಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹಾಗೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಕೂಡಾ ಸಮಾವೇಶಕ್ಕೆ ಆಗಮಿಸುತ್ತಿದ್ದು, ಇವರ ಭಾವಚಿತ್ರವಿರುವ ಬ್ಯಾನರುಗಳು ಎಲ್ಲ ಕಡೆ ರಾರಾಜಿಸುತ್ತಿವೆ. ಅನುಭವ ಮಂಟಪದ ಪ್ರಾಂಗಣದಲ್ಲಿ ಹತ್ತು ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗಿದ್ದು ವೇದಿಕೆ ಕೂಡ ವಿಶಾಲವಾಗಿದೆ. ರಾಜ್ಯ ಮಟ್ಟದ ಸಮಾವೇಶ ಇದಾಗಿರುವುದರಿಂದ 50ಕ್ಕೂ ಹೆಚ್ಚು ಶಾಸಕರು ಸಮಾವೇಶಕ್ಕೆ ಆಗಮಿಸುವ ನಿರೀಕ್ಷೆ ಇದೆ ಎನ್ನಲಾಗಿದೆ.
ನಡ್ಡಾ ವೇಳಾಪಟ್ಟಿ
ಮಧ್ಯಾಹ್ನ 12: ದೆಹಲಿಯಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಆಗಮನ
12.30: ಯಲಹಂಕದಲ್ಲಿ ಒಬಿಸಿ ಮೋರ್ಚಾ ಪ್ರಶಿಕ್ಷಣ ವರ್ಗದಲ್ಲಿ ಭಾಗಿ
3.55: ಬೆಂಗಳೂರಿನಿಂದ ಚಿತ್ರದುರ್ಗಕ್ಕೆ ಹೆಲಿಕಾಪ್ಟರ್‌ನಲ್ಲಿ ಪ್ರಯಾಣ
ಸಂಜೆ 4.00: ಚಿತ್ರದುರ್ಗದಲ್ಲಿ ಬಿಜೆಪಿ ಜನಪ್ರತಿನಿಧಿ ಸಮಾವೇಶಕ್ಕೆ ಹಾಜರಿ
ಸಂಜೆ 5.30: ಚಿತ್ರದುರ್ಗದಿಂದ ಹೊರಟು ಬೆಂಗಳೂರು ತಲುಪಿ ದಿಲ್ಲಿಗೆ ಪ್ರಯಾಣ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.