ಹಾನಗಲ್‌ನಲ್ಲಿ ಕಾಂಗ್ರೆಸ್ ಗೆದ್ದಿದೆ ಅಂತ ಬೀಗೋ ಹಾಗಿಲ್ಲ: ಸಿ.ಟಿ.ರವಿ

By Suvarna NewsFirst Published Nov 6, 2021, 8:13 AM IST
Highlights

*  ನಮ್ಮ ಅಭಿವೃದ್ಧಿ ಕೆಲಸ, ಮುಂದಿನ ಯೋಜನೆಗಳನ್ನ ಮುಂದಿಟ್ಟುಕೊಂಡು ಓಟು ಕೇಳ್ತೇವೆ
*  ನಾವು ಜನಾದೇಶವನ್ನು ಸಮಾನವಾಗಿ ಸ್ವೀಕಾರ ಮಾಡುತ್ತೇವೆ 
*  ಕಾಂಗ್ರೆಸ್‌ ವಿರುದ್ಧ ಹರಿಹಾಯ್ದ ಸಿ.ಟಿ. ರವಿ 
 

ಹಾಸನ(ನ.06):  ಪ್ರತಿ ವರ್ಷದಂತೆ ಈ ವರ್ಷವೂ ತಾಯಿ ಹಾಸನಾಂಬೆಯ(Hasanambe) ದರ್ಶನವನ್ನ ಮಾಡಿದ್ದೇನೆ. ಆ ತಾಯಿ ಸರ್ವರಿಗೂ ಮಂಗಳ‌ವನ್ನುಂಟು ಮಾಡಲಿ. ಭಾರತ(India) ಬಲಶಾಲಿಯಾಗಲಿ, ಆ ಮೂಲಕ‌ ಸನಾತನ ಧರ್ಮದ ಮೌಲ್ಯಗಳು ವಿಶ್ವದ ಎಲ್ಲೆಡೆ ಪಸರಿಸುವಂತಾಗಲಿ ಎಂದು ತಾಯಿ ಪಾದರವಿಂದಗಳಲ್ಲಿ ಅರಿಕೆ ಮಾಡಿಕೊಂಡಿದ್ದೇನೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ(CT Ravi) ತಿಳಿಸಿದ್ದಾರೆ.  

ಶುಕ್ರವಾರ ಹಾಸನಾಂಬೆ ದೇವಿ ದರ್ಶನ ಪಡೆದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ವರ್ಷ ಮಳೆ(Rain) ಚೆನ್ನಾಗಿ ಆಗಿದೆ. ಬೆಳೆಯೂ ಕೈ ಹಿಡಿದರೆ ರೈತ(Farmers) ಸಂತೃಪ್ತಿ ನಗುವನ್ನು ನಗಲು ಸಾಧ್ಯವಾಗುತ್ತೆ. ಬೆಳೆಯೂ ಬರಬೇಕು, ಬೆಲೆಯೂ ಬರಬೇಕು ಆಗ ಮಾತ್ರ ಸಂತೃಪ್ತಿ ಆಗುತ್ತದೆ ಅಂತ ಹೇಳಿದ್ದಾರೆ. 

ಹಾನಗಲ್‌ನಲ್ಲಿ ಕಾಂಗ್ರೆಸ್ ಗೆಲುವು ಅಂತಾ ಬೀಗೋ ಹಾಗಿಲ್ಲ

ಹಾನಗಲ್-ಸಿಂದಗಿ(Hanagal-Sindagi) ಉಪಚುನಾವಣೆ(Byelection) ಫಲಿತಾಂಶದ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಟಿ ರವಿ ಅವರು, ಈ‌ ಚುನಾವಣೆಯಲ್ಲಿ ಸೋಲಿಗೂ‌ ಕಾರಣ ಇರುತ್ತೆ, ಗೆಲುವಿಗೂ ಕಾರಣ ಇರುತ್ತೆ. ಸಿಂದಗಿಯಲ್ಲಿ 31 ಸಾವಿರ ಲೀಡಲ್ಲಿ ಗೆದ್ದಿದ್ದೇವೆ. ಆ ಲೀಡ್ ನೋಡಿದಾಗ ಅಲೆ ಬಿಜೆಪಿ(BJP) ಪರ‌ ಇದೆ ಅಂತ ಅರ್ಥ. ಹಾನಗಲ್‌ನಲ್ಲಿ ಕಾಂಗ್ರೆಸ್(Congress) ಗೆಲುವು ಅಂತಾ ಬೀಗುವ ಹಾಗಿಲ್ಲ, ಕಾಂಗ್ರೆಸ್ ಪರವಾಗಿ ಅಲೆ ಇದ್ರೆ ಅವರು ಸಿಂದಗಿಯಲ್ಲೂ ಗೆಲ್ಲಬೇಕಿತ್ತು, ಏಕೆ ಗೆಲ್ಲಲಿಲ್ಲ?. ಅಲ್ಲಿ ಮಾನೆ ಪರವಾಗಿ ಅಲೆ ಇತ್ತು, ಕಳೆದ ಚುನಾವಣೆಯಲ್ಲಿ ಸೋತ ದಿನದಿಂದ ಅಲ್ಲಿ ಕೆಲಸ ಮಾಡುತ್ತಿದ್ದರು. ಅದು ಅವರನ್ನು ಕೈ ಹಿಡಿದಿದೆ. ಬಿಜೆಪಿಯೂ ಕೂಡ 80 ಸಾವಿರಕ್ಕೂ ಹೆಚ್ಚು ಮತಗಳನ್ನ ಪಡೆದಿದೆ. ಕೆಲವು ಪಕ್ಷದವರು ಫೋರ್ ಡಿಜಿಟ್ ಕ್ರಾಸ್ ಆಗಕೆ ಆಗಿಲ್ಲ, ಹಾಗೇನು ನಮ್ಮದಾಗಿಲ್ಲ. ಉದಾಸಿ ಅವರ ಸ್ಥಾನವನ್ನು ತಕ್ಷಣ ತುಂಬೋದಕ್ಕೆ ನಮ್ಮ‌ ಕೈಯಲ್ಲಿ ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾರೆ. 

ರಾಜಸ್ತಾನ, ಮಹಾರಾಷ್ಟ್ರದಲ್ಲಿ ಡೀಸೆಲ್ ದರ ಕಡಿಮೆ ಮಾಡುವಂತೆ ಕಾಂಗ್ರೆಸ್‌ಗೆ ಸಿ ಟಿ ರವಿ ಸವಾಲ್!

ಬಿಜೆಪಿಯಲ್ಲಿ ಯಾವುದೇ ಒಳ ಜಗಳವಿಲ್ಲ. ಕಳೆದ ಬಾರಿ ಉದಾಸಿ(CM Udasi) ಅವರು ತೆಗೆದುಕೊಂಡಿದ್ದಕ್ಕಿಂತ ಹೆಚ್ಚು ಓಟು ತಗೊಂಡಿದ್ದೇವೆ. ನಮಗಿಂತ ಮಾನೆಯವರು ಜಾಸ್ತಿ ಓಟು ತಗೊಂಡ್ರು ಅಷ್ಟೇ, ಗೆಲುವಿಗೆ ಮಾತ್ರ ನೂರಾರು ಜನ ಅಪ್ಪಂದಿರು ಗೆಲುವು ಪಾರ್ಟಿದು, ಸೋಲು ಪಾರ್ಟಿದು. ಹಿಂದಗಡೆ ತುತ್ತೂರಿ ಊದುವವರು ಬಹಳ‌ ಜನ ಇರ್ತಾರೆ. ಸೋಲು ಯಾವತ್ತು ಅನಾಥ. ನಾವು ಒಂದು ಪಕ್ಷವಾಗಿ ಗೆದ್ದಾಗ ಬೀಗಿಲ್ಲ, ಸೋತಾಗ ಕುಗ್ಗಿಲ್ಲ. ಸಮಾನ ಮನಸ್ಸಿನಿಂದ ಸ್ವೀಕಾರ ಮಾಡಿದ್ದೇವೆ. ನಮ್ಮದೇನಾದ್ರು ತಪ್ಪುಗಳಾಗಿದ್ದರೆ ತಿದ್ದಿಕೊಳ್ಳುತ್ತೇವೆ. ಜೀವನದಲ್ಲಿ ಒಂದೇ ಸಾರಿ ಚುನಾವಣೆ(Election)  ಬರಲ್ಲ. ಐದು ವರ್ಷಕ್ಕೆ ಕಡ್ಡಾಯವಾಗಿ ಚುನಾವಣೆ ಬಂದೇ ಬರುತ್ತೆ. ನಡುವೆ ನಡುವೆ ಉಪಚುನಾವಣೆಗಳು ಬರುತ್ತಿರುತ್ತವೆ. ತಿದ್ದಿಕೊಳ್ಳೊಕೆ ಅವಕಾಶ ಇದ್ದೇ ಇರುತ್ತದೆ ಎಂದಿದ್ದಾರೆ. 

ನಾನು ಇವಿಎಂ ಮೇಲೆ‌ ದೂರಲ್ಲ

ನಾನು ಇವಿಎಂ(EVM)  ಮೇಲೆ‌ ದೂರಲ್ಲ. ಕೆಲವು ಪಾರ್ಟಿಗಳಿಗೆ ಅದೊಂದು ರೋಗ ಅಂಟಿಕೊಂಡಿದೆ. ಗೆದ್ರೆ ಜನಾದೇಶ ಅಂಥಾ ಹೇಳದು, ಸೋತ್ರೆ ಇವಿಎಂ ಕಾರಣ ಅಂತಾ ಹೇಳೋದು. ಆ ರೋಗ ಅಂಟಿಕೊಂಡಿರುವ ಪಾರ್ಟಿಗೆ ಬಿಡ್ತಿವಿ. ನಮಗೆ ಆ ರೋಗ ಹತ್ರಕ್ಕೂ‌ ಬರಲ್ಲ. ನಾವು ಜನಾದೇಶವನ್ನು ಸಮಾನವಾಗಿ ಸ್ವೀಕಾರ ಮಾಡುತ್ತೇವೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಕಾಂಗ್ರೆಸ್‌ ವಿರುದ್ಧ ಹರಿಹಾಯ್ದಿದ್ದಾರೆ. 

ಸಿದ್ದರಾಮಯ್ಯಗೆ ಟಾಂಗ್‌

ಪೆಟ್ರೋಲ್(Petrol), ಡಿಸೇಲ್(Diesel) ಬೆಲೆ ದೀಪಾವಳಿ ಗಿಫ್ಟ್ ಅಲ್ಲ, ಉಪಚುನಾವಣೆ ಗಿಫ್ಟ್ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ(Siddaramaiah) ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಸಿ.ಟಿ. ರವಿ ಅವರು, ಕಳೆದ ಉಪಚುನಾವಣೆಯಲ್ಲಿ ಆರು ಇತ್ತು ಈಗ ಒಂಬತ್ತು ಗೆದ್ವಿ. ಎನ್‌ಡಿಎ ಹನ್ನೊಂದಿತ್ತು, ಹದಿನೈದು ಗೆದ್ವಿ, ನಾಲ್ಕು‌ ಜಾಸ್ತಿ ಗೆಲ್ತು. ಆ ಜನರ ಋಣ ತೀರಿಸುವಂತಹ  ಕೆಲಸವನ್ನು ಪ್ರಧಾನಮಂತ್ರಿ ಮೋದಿಯವರು(Narendra Modi) ಮಾಡುತ್ತಿದ್ದಾರೆ. ಕಾಂಗ್ರೆಸ್ ಎಲ್ಲಿ ಅಧಿಕಾರದಲ್ಲಿದೆಯೋ ಮಹಾರಾಷ್ಟ್ರ, ರಾಜಸ್ಥಾನ, ಜಾರ್ಖಾಂಡ್, ಛತ್ತಿಸ್‌ಗಡ್, ಪಂಜಾಬ್‌ನಲ್ಲಿ ಇಂಧನ ಬೆಲೆಯನ್ನು ಅವರು ಇಳಿಸಿಲ್ಲ. ಅವರಿಗೆ ಪೂರ್ತಿ ಸೋಲಿಸದ ಮೇಲೆ ಮಾತ್ರ ಸಾಧ್ಯವಾಗುತ್ತೆ ಅನ್ಸುತ್ತೆ. ಪಂಜಾಬ್, ಸೇರಿದಂತೆ ಉಳಿದ ಎಲ್ಲಾ ರಾಜ್ಯಗಳಲ್ಲೂ ಸೋಲಿಸಬೇಕು. ಪಶ್ಚಿಮ ಬಂಗಾಳದಲ್ಲೂ ಆ ಸ್ಥಿತಿಗೆ ತಗೊಂಡು ಹೋಗಿ‌ ನಿಲ್ಲಿಸಿದರೆ ಅವರಿಗೆ ಬುದ್ದಿ ಬರುತ್ತದೆ ಎಂದು ಸಿದ್ದರಾಮಯ್ಯಗೆ ಸಿಟಿ ರವಿ ಟಾಂಗ್‌ ಕೊಟ್ಟಿದ್ದಾರೆ. 

ಅವಹೇಳನಕಾರಿ ಟ್ವೀಟ್: ಸಿಟಿ ರವಿ ವಿರುದ್ಧ ಸಿಡಿದೆದ್ದ ಕುರುಬ ಸಮುದಾಯ

ನಮ್ಮಲ್ಲಿ ಒಂದೇ ಕಮಲ‌ ಬಣ

ಬಿಜೆಪಿಯಲ್ಲಿ ಬಣಗಳಿವೆ ಎಂಬ ಕಾಂಗ್ರೆಸ್ ನಾಯಕರ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಸಿ.ಟಿ. ರವಿ ಅವರು, ಯಡಿಯೂರಪ್ಪನವರು ನನಗಿಂತ ಮುಂಚೆ ಆರ್‌ಎಸ್‌ಎಸ್‌ ಸ್ವಯಂ‌ಸೇವಕರಾಗಿದ್ದವರು. ಅವರು ವಿಸ್ತಾರಕ ಆಗಿದ್ರು, ಕಾರ್ಯವಾಹಕ ಆಗಿದ್ರು, ಅವರನ್ನ ಬೇರೆ ಬಣ ಅಂತಾ ಹೇಳುತ್ತೀರಾ ಅಂದರೆ ನಿಮಗಿನ್ನು ಆರ್‌ಎಸ್‌ಎಸ್‌ ಬಗ್ಗೆ ಆಳವಾದ ಜ್ಞಾನ ಇದ್ದಂಗಿಲ್ಲ. ಕಾಂಗ್ರೆಸ್‌ನಲ್ಲಿ ಖರ್ಗೆ, ಪರಮೇಶ್ವರ್, ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಅವರದ್ದು ಒಂದು ಬಣ. ಕೆಳಗಡೆ ಮರಿ‌ ಲೀಡರ್‌ಗಳದ್ದೆಲ್ಲ ಹಲವು ಬಣಗಳು, ಆ ಬಣಗಳದ್ದೇ ರಾಜಕಾರಣ. ಹಾಗಾಗಿ ಅವರು ಹಾಗೇ ಹೇಳ್ತಾರೆ. ನಮ್ಮಲ್ಲಿ ಒಂದೇ ಕಮಲ‌ ಬಣ, ಭಾಜಪ ಬಣ, ನಾವೆಲ್ಲರೂ ಭಾಜಪ. ಒಳಗೊಂದು, ಹೊರಗೊಂದು ಇಲ್ಲಾ. ನಾವೇನಿದ್ದರೂ ಕಮಲ‌ ಪರವಾಗಿ ಓಟು ಕೇಳೋದು. ಒಂದೊಂದು ಚುನಾವಣೆಗೆ ಒಂದೊಂದು ಸಿಂಬಲ್‌ಗೆ ಏನಾದ್ರು ಓಟು ಕೇಳಿದ್ದೀವಾ, ಕೇಳಿಲ್ಲ, ಏನಿದ್ದರೂ ಕಮಲವೇ ಅಂತ ತಿಳಿಸಿದ್ದಾರೆ. 

ಬಿಜೆಪಿ ಅಧ್ಯಕ್ಷರ ಬದಲಾವಣೆ ‌ವಿಚಾರದ ಬಗ್ಗೆ ಮಾತನಾಡಿದ ಅವರು, ಮಾಧ್ಯಮಗಳಲ್ಲಿ ರೆಕ್ಕೆ ಪುಕ್ಕ ಇಲ್ಲದೇ ಸುದ್ದಿಗಳು ಬರುತ್ತಿರುತ್ತವೆ. ಆ ಸುದ್ದಿಗಳಿಗೆಲ್ಲಾ ನಾನು ಪ್ರತಿಕ್ರಿಯಿಸಲು ಹೋಗಲ್ಲ ಅಂತ ಅಷ್ಟೇ ಪ್ರತಿಕ್ರಿಯೆ ನೀಡಿದ್ದಾರೆ. 
ಮುಂದಿನ ಚುನಾವಣೆಯಲ್ಲಿ ಜೆಡಿಎಸ್(JDS) ಮಿಷನ್ 123 ವಿಚಾರದ ಬಗ್ಗೆಯೂ ಮಾತನಾಡಿದ ಸಿ.ಟಿ. ರವಿ ಅವರು, ನಮ್ಮ ರಾಜ್ಯದಲ್ಲಿ 224 ಕ್ಷೇತ್ರಗಳಿವೆ, ಅವರ ಹಂಬಲ ಅದಕ್ಕಿಂತ ಜಾಸ್ತಿ ಇರುತ್ತದೆ. ಅವರ ಕೆಲಸ ಅವರು ಮಾಡುತ್ತಾರೆ, ನಮ್ಮ‌ ಕೆಲಸ ನಾವು ಮಾಡುತ್ತೇವೆ. ಜನ ತಾವೇ ತೀರ್ಮಾನ ಮಾಡುತ್ತಾರೆ ಎಂದು ಹೇಳಿದ್ದಾರೆ. 

ಸಿದ್ದು, ಎಚ್‌ಡಿಕೆ ರಾಜಕೀಯ ದಾಯಾದಿಗಳು

ಸಿಂದಗಿ, ಹಾನಗಲ್‌ನಲ್ಲಿ ಬಿಜೆಪಿಗೆ ಏನು ಓಟು ಕೊಡಬೇಕು ಕೊಟ್ಟಿದ್ದಾರೆ. ಜನರ ಹತ್ತಿರ ಹೋಗ್ತಿವಿ, ಜನರ ಕೆಲಸ‌ ಮಾಡ್ತಿವಿ. ಸಿದ್ದರಾಮಯ್ಯ, ಕುಮಾರಸ್ವಾಮಿ ರಾಜಕೀಯವಾಗಿ ದಾಯಾದಿಗಳು, ನಮಗೇನು ಅವರು ದಾಯಾದಿಗಳಲ್ಲ. ನಮಗೆ ಜನರೇ ಆಸ್ತಿಯಾಗಿದ್ದಾರೆ. ನಮ್ಮದೇನಿದ್ರೂ ಸಿದ್ಧಾಂತ, ಹೋರಾಟ, ಜನಪರ ಕಾರ್ಯ ಮುಂದಿಟ್ಟುಕೊಂಡು ಓಟು ಕೇಳುತ್ತೇವೆ. ನಮ್ಮ ಸಿದ್ದಾಂತಕ್ಕೆ ಸಂಬಂಧ ಇಲ್ದೆ ಇದ್ದವರ ಬಗ್ಗೆ ನಾವ್ಯಾಕೆ ತಲೆಕೆಡಿಸಿಕೊಳ್ಳೋಣ. ನಮ್ಮ ಅಭಿವೃದ್ಧಿ ಕೆಲಸ, ಮುಂದಿನ ಯೋಜನೆಗಳನ್ನ ಮುಂದಿಟ್ಟುಕೊಂಡು ಓಟು ಕೇಳುತ್ತೇವೆ. ತೀರ್ಮಾನ ಜನ ಮಾಡುತ್ತಾರೆ ಎಂದು ಹೇಳಿದ್ದಾರೆ. 

ಭಾರೀ ಮಳೆಯಿಂದ ಬೆಂಗಳೂರಿನಲ್ಲಿ(Bengaluru) ಅಪಾರ ಆಸ್ತಿಪಾಸ್ತಿ ಹಾನಿ ವಿಚಾರದ ಬಗ್ಗೆ ಮಾತನಾಡಿದ ಸಿ.ಟಿ. ರವಿ ಅವರು, ಈ‌ ವರ್ಷ ಸ್ವಲ್ಪ‌ ಜಾಸ್ತಿ ಮಳೆಯಾಗಿದೆ. ಕೆಲವು ಪ್ರದೇಶ ಹೊರತುಪಡಿಸಿದರೆ, ಮಹಾರಾಜರು ಹೋದಮೇಲೆ ಬೆಂಗಳೂರನ್ನ ಯೋಜನಾಬದ್ಧವಾಗಿ ಕಟ್ಟುವಂತಹ ಕೆಲಸ ಪ್ರದೇಶಗಳಲ್ಲಿ ಮಾತ್ರ ಆಗಿದೆ. ಇನ್ನೂ ಬಾಕಿ ಕಡೆಗಳಲ್ಲಿ ರೆವಿನ್ಯೂ ಪ್ಯಾಕೇಜ್ಸ್,‌ ಯಾರೋ ಗಂಟು ಮಾಡಿಕೊಳ್ಳಲು ಅಧಿಕಾರದಲ್ಲಿದ್ದವರು ಸಹಾಯ ಮಾಡುತ್ತಾ ಮಾಡುತ್ತಾ ಬಂದಿದ್ದಾರೆ. ಜಾಗತಿಕ ಮಟ್ಟದಲ್ಲಿ ಒಂದು ಒಳ್ಳೆಯ, ಸುವ್ಯವಸ್ಥಿತವಾಗಿ ನಗರವನ್ನಾಗಿ ಮಾಡುವಂತಹ ಅವಕಾಶವನ್ನ ಬೆಂಗಳೂರಿನಲ್ಲಿ ‌ನಾವು ಕಳೆದುಕೊಂಡಿದ್ದೇವೆ ಎಂದು ತಿಳಿಸಿದ್ದಾರೆ. 
 

click me!