ಸ್ವಾತಂತ್ರ್ಯ ಹೋರಾಟದಲ್ಲಿ ಕಾಂಗ್ರೆಸ್ಸಿಗನೂ ಗಲ್ಲಿಗೇರಿಲ್ಲ: ಸಿ.ಟಿ. ರವಿ

By Kannadaprabha NewsFirst Published Sep 4, 2022, 6:27 AM IST
Highlights

ವಿರೋಧಿಗಳು ನಮ್ಮ ರಾಷ್ಟ್ರ ಜಾಗರಣೆಗೆ ಅವಕಾಶ ಮಾಡಿಕೊಡುತ್ತಿದ್ದಾರೆ. ಕೆಲವರು ಅರಿವಿಲ್ಲದೆ ಹಾಗೂ ದುರುದ್ದೇಶಪೂರಿತವಾಗಿ ಸಾವರ್ಕರ್‌ ಕುರಿತು ಮಾತನಾಡುತ್ತಾರೆ: ಸಿ.ಟಿ. ರವಿ 

ಹುಬ್ಬಳ್ಳಿ(ಸೆ.04): ಬ್ರಿಟಿಷರಿಗೆ ಕಾಂಗ್ರೆಸ್‌ ಹಾಗೂ ಮಹಾತ್ಮ ಗಾಂಧಿ ಬಗ್ಗೆ ಇರದ ಭಯ ವೀರ ಸಾವರ್ಕರ್‌ ಕುರಿತು ಇತ್ತು. ಸ್ವಾತಂತ್ರ್ಯ ಹೋರಾಟದಲ್ಲಿ ಯಾವ ಕಾಂಗ್ರೆಸ್ಸಿಗರೂ ಗಲ್ಲಿಗೇರಲಿಲ್ಲ. ಕಾಲಪಾನಿ ಶಿಕ್ಷೆಗೆ ಒಳಗಾಗಿಲ್ಲ. ಆದರೆ ಸಾವರ್ಕರ್‌ ಅಂಡಮಾನ್‌-ನಿಕೋಬಾರ್‌ನಲ್ಲಿ ವರ್ಷಾನುಗಟ್ಟಲೇ ಸೆರೆಮನೆ ವಾಸ ಅನುಭವಿಸಿದರು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದರು.

ಅರಿವು ವೇದಿಕೆ ಮತ್ತು ನಿರಾಮಯ ಫೌಂಡೇಶನ್‌ ಹಾಗೂ ಹುಬ್ಬಳ್ಳಿ-ಧಾರವಾಡದ ವಿವಿಧ ಸಾರ್ವಜನಿಕ ಗಣೇಶೋತ್ಸವ ಮಂಡಳಿ, ಸಂಘ- ಸಂಸ್ಥೆಗಳ ಸಹಯೋಗದಲ್ಲಿ ನಗರದ ಕೆಎಲ್‌ಇ ತಾಂತ್ರಿಕ ವಿವಿ ಆವರಣದ ಸಭಾಂಗಣದಲ್ಲಿ ಶನಿವಾರ ಸಂಜೆ ನಡೆದ ‘ಜಯೋಸ್ತುತೇ ಅಮರ ಸಾವರ್ಕರ್‌-ಅಜೇಯ ಭಾರತ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಭಾರತ್‌ ಜೋಡೋ’ ಮಾಡಲು ಕಾಂಗ್ರೆಸ್‌ಗೆ ನೈತಿಕ ಹಕ್ಕಿಲ್ಲ: ಸಿ.ಟಿ.ರವಿ

ವಿರೋಧಿಗಳು ನಮ್ಮ ರಾಷ್ಟ್ರ ಜಾಗರಣೆಗೆ ಅವಕಾಶ ಮಾಡಿಕೊಡುತ್ತಿದ್ದಾರೆ. ಕೆಲವರು ಅರಿವಿಲ್ಲದೆ ಹಾಗೂ ದುರುದ್ದೇಶಪೂರಿತವಾಗಿ ಸಾವರ್ಕರ್‌ ಕುರಿತು ಮಾತನಾಡುತ್ತಾರೆ. ಬ್ರಿಟಿಷರ ಬೂಟು ನೆಕ್ಕಿದ್ದ ವ್ಯಕ್ತಿ ಎನ್ನುತ್ತಾರೆ. ಆದರೆ 1885ರಲ್ಲಿ ಆರಂಭವಾದ ಕಾಂಗ್ರೆಸ್‌ ಬ್ರಿಟಿಷರಿಗೆ ಕೇವಲ ಅರ್ಜಿ ಸಲ್ಲಿಸುವ ಸಂಘಟನೆಯಾಗಿತ್ತು. 1905ರಲ್ಲಿ ಸಾವರ್ಕರ್‌ ಹೋಳಿ ಹಬ್ಬದಲ್ಲಿ ವಿದೇಶಿ ಬಟ್ಟೆಸುಟ್ಟು ಅಭಿನವ ಸಂಘಟನೆ ಕಟ್ಟಿದ್ದರು. ಬ್ರಿಟಿಷರ ಬೂಟು ನೆಕ್ಕಿ ಅವರೊಂದಿಗೆ ರಾಜಿಯಾಗಿದ್ದರೆ ದೇಶದ ಮೊದಲ ಪ್ರಧಾನಿ ಆಗುತ್ತಿದ್ದರು. ಟೇಬಲ್‌, ಫ್ಯಾನ್‌, ಎಸಿ ಎಲ್ಲವೂ ಸಿಗುತ್ತಿತ್ತು ಎಂದರು.

ಸ್ವರ್ಣ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಡಾ. ವಿ.ಎಸ್‌.ವಿ. ಪ್ರಸಾದ ಮಾತನಾಡಿ, ನಿಜವಾದ ದೇಶಪ್ರೇಮಿಗಳ ವಿರುದ್ಧ ಇಂದು ಅಪಪ್ರಚಾರ ಮಾಡಲಾಗುತ್ತಿದೆ. ಅಂಡಮಾನ್‌ ನಿಕೋಬಾರ್‌ ಜೈಲಿನಲ್ಲಿದ್ದ ಸಾವರ್ಕರ್‌ ಹೆಸರನ್ನು ಅಳಿಸಿ ಗಾಂಧಿ ಹೆಸರು ಬರೆದವರು ದೇಶದ್ರೋಹಿಗಳಾಗಿದ್ದಾರೆ. ದೇಶಕ್ಕಾಗಿ ಹೋರಾಡಿದ ಸಾವರ್ಕರ್‌ ಜೀವನ ಸಂದೇಶವನ್ನು ಪಠ್ಯದಲ್ಲಿ ಅಳವಡಿಸಬೇಕು ಎಂದರು.

ಪ್ರಜ್ಞಾ ಪ್ರವಾಹ ದಕ್ಷಿಣ ಮಧ್ಯ ಕ್ಷೇತ್ರದ ಸಂಯೋಜಕ ರಘುನಂದನ ಮಾತನಾಡಿ, ಸಾವರ್ಕರ್‌ ಅಂದರೆ ಹಿಂದುತ್ವ. ಹಿಂದುತ್ವ ವಿರೋಧಿಗಳಿಗೆ ಅವರು ವಿರೋಧಿಯಾಗಿದ್ದಾರೆ. ಇಂದು ಅವರನ್ನೇ ಕೋಮುವಾದಿ ಮಾಡಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಆರ್‌ಎಸ್‌ಎಸ್‌ನ ಜೇಷ್ಠ ಪ್ರಚಾರಕ ಸು. ರಾಮಣ್ಣ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ಜಿಲ್ಲಾಧ್ಯಕ್ಷ ಸಂಜಯ ಕಪಟಕರ, ಕವಿವಿ ಸಿಂಡಿಕೇಟ್‌ ಸದಸ್ಯ ಸಂದೀಪ ಬೂದಿಹಾಳ, ಡಾ. ಮಲ್ಲಿಕಾರ್ಜುನ ಬಾಳಿಕಾಯಿ, ಶರತ್‌ ದೇಶಪಾಂಡೆ, ಶಿವಾನಂದ ಪಾಟೀಲ, ಸಂಜಯ ಬಡಸ್ಕರ, ವಿಶಾಲ ಜಾಧವ, ಕೃಷ್ಣರಾಜ ಶ್ಯಾಗೋಟಿ, ಅಜಿತ ಬಸಾಪೂರ, ವಿನೋದ ಮೊಕಾಶಿ, ಮಂಜುನಾಥ ಹೆಬಸೂರ ಮತ್ತಿರರಿದ್ದರು.

Hosapete: ಜಿಲ್ಲೆಗಾಗಿ ರಾಜಕೀಯ ನಿವೃತ್ತಿಗೂ ಸಿದ್ಧನಾಗಿದ್ದೆ: ಸಚಿವ ಆನಂದ್‌ ಸಿಂಗ್‌

ಇದಕ್ಕೂ ಮುನ್ನ ನೃತ್ಯ ಅಕಾಡೆಮಿಯ ವಿದ್ಯಾರ್ಥಿನಿಯರಿಂದ ಸಾವರ್ಕರ್‌ ವಿರಚಿತ ಗೀತೆ ಆಧರಿಸಿದ ಭರತ ನಾಟ್ಯ ನೃತ್ಯ ನಡೆಯಿತು. ಜಾನಪದ ಗಾಯಕ ರಮೇಶ ಮಲ್ಲೇದಿ ಸಾವರ್ಕರ್‌ ಜೀವನ ತಿಳಿಸುವ ಗೀತೆ ಪ್ರಸ್ತುತಪಡಿಸಿದರು. ಪವನ ಹೊಂಬಳ ಸಾವರ್ಕರ್‌ ರಚಿಸಿದ ಗೀತೆ ಹಾಡಿದರು.

ಗಾಂಧಿ ತತ್ವ ಕೊಂದಿದ್ದು ಯಾರು?

ನಾಥೋರಾಮ್‌ ಗೋಡ್ಸೆ ಗಾಂಧಿ ಕೊಂದಿದ್ದರೆ ಅವರ ತತ್ವ ಕೊಂದಿದ್ದು ಯಾರು? ಅದನ್ನು ಅವರ ವಾರಸುದಾರರೇ ಹೇಳಬೇಕಾಗಿದೆ. ಗಾಂಧಿ ಹತ್ಯೆಯಲ್ಲಿ ಸಂಘ ಪರಿವಾರದ ಕೈವಾಡ ಇಲ್ಲವೆಂದು ಅಂದಿನ ತನಿಖಾ ಆಯೋಗ ಹೇಳಿದ್ದರೂ, ಈಗಲೂ ಯಾಕೆ ಸುಳ್ಳು ಹೇಳಲಾಗುತ್ತಿದೆ ಎಂದು ಸಿ.ಟಿ. ರವಿ ಪ್ರಶ್ನಿಸಿದರು.
 

click me!