
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು (ಜ.27): ರಾಜಕಾರಣದಲ್ಲಿ ನಿಯತ್ತು ಮತ್ತು ನೀತಿ ಒಂದೇ ಇರಬೇಕು. ಅದು ಪದೇ ಪದೇ ಬದಲಾಗುವುದು ಒಳ್ಳೆ ನೇತೃತ್ವದ ಲಕ್ಷಣವಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಟಾಂಗ್ ನೀಡಿದರು. ಯಾದಗಿರಿಯಲ್ಲಿ ಸಿದ್ದರಾಮಯ್ಯ ಅವರಿಗೆ ವಿವಿಧ ಬಿರುದು ನೀಡಿ ಪೋಸ್ಟರ್ ಅಂಟಿಸಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಓಟು ನಿಮಿತ್ತಂ ಬಹುಕೃತ ವೇಷಂ ಎಂಬುದನ್ನು ಸಿದ್ದರಾಮಯ್ಯ ಒಪ್ಪಿಕೊಂಡಿದ್ದಾರೆ. ನೀತಿ ಘಳಿಗೆಗೊಂದು ಬದಲಾಗಬಾರದು. ಜಾತಿ ಸಭೆಗೆ ಹೋಗಿ ಜಾತಿವಾದಿ ರೀತಿ ಮಾತನಾಡುವುದು, ಹೊರಗೆ ಬಂದು ಜಾತ್ಯತೀತರ ರೀತಿ ಫೋಸು ಕೊಡುವುದು, ಒಂದೆಡೆ ಹಿಂದುತ್ವದ ವಿರುದ್ಧ ಮಾತನಾಡುವುದು, ಮತ್ತೊಂದು ಕಡೆ ನಾನೂ ಹಿಂದೂ ಅಲ್ಲವಾ ಎನ್ನುವುದು.
ಇದೆಲ್ಲವೂ ನೀತಿ, ನಿಯ್ಯತ್ತು ಇಲ್ಲದಿರುವುದನ್ನು ತೋರಿಸುತ್ತದೆ ಎಂದು ಟೀಕಿಸಿದರು. ನಾನು ಹಿಂದೂ ಎಂದರೆ ಹಿಂದೂನೇ ಎಂದು ಹೇಳುವುದು ನಿಯ್ಯತ್ತು. ಉದಾಹರಣೆಗೆ ಸಂಗೊಳ್ಳಿ ರಾಯಣ್ಣ ಅವರು ಅವರ ನಿಯ್ಯತ್ತು ರಾಣಿ ಚೆನ್ನಮ್ಮ ಮತ್ತು ಕಿತ್ತೂರು ಸಂಸ್ಥಾನಕ್ಕಿತ್ತು ಅದಕ್ಕಾಗಿ ಜೀವಕೊಟ್ಟರು. ಈ ಕಾರಣಕ್ಕೆ ಊರೂರಿನಲ್ಲಿ ಅವರನ್ನು ಆರಾಧಿಸುತ್ತೇವೆ ಎಂದರು. ರಾಜ್ಯ, ದೇಶದ ಜನ ನೀತಿ ನಿಯ್ಯತ್ತು ಇರುವರನ್ನು ಆರಾಧಿಸುತ್ತಾರೆ. ಇಲ್ಲದವರನ್ನಲ್ಲ. ರಾಜಕಾರಣದಲ್ಲಿ ಇಲ್ಲೊಂದು ರೀತಿ, ಅಲ್ಲೊಂದು ರೀತಿ ಮಾತನಾಡಿದರೆ ಜನ ನಂಬುವುದಿಲ್ಲ. ಹಿಂದೂ ಸಭೆಗೆ ಬಂದು ಹಿಂದೂಗಳನ್ನ ಹೊಗಳುವುದು, ಜಾತಿ ಸಭೆಗೆ ಹೋಗಿ ಜಾತಿ ಹೊಗಳುವುದು, ಇನ್ನೊಂದು ಸಭೆಗೆ ಹೋಗಿ ಜಿನ್ನಾನನ್ನು ಹೊಗಳುವುದು ಮಾಡಿದರೆ ಯಾರೂ ನಂಬಲ್ಲ ಎಂದರು.
ನಾನು ಪಕ್ಷಾಂತರಿಯಾದರೆ ಏಳು ಪಕ್ಷ ಬದಲಿಸಿರುವ ಸಿದ್ದರಾಮಯ್ಯ ಯಾರು?: ಪ್ರಮೋದ್ ಮಧ‍್ವರಾಜ್
ಸಂಸದೆ ಸುಮಲತ ಬಿಜೆಪಿ ಸೇರಿದ್ರೆ ಸಂತೋಷ: ನಮ್ಮ ಪಕ್ಷದ ನೀತಿ ಒಪ್ಪಿಕೊಂಡು ಸೇರ್ಪಡೆಗೊಳ್ಳುವವರೆಲ್ಲರಿಗೂ ಮುಕ್ತ ಅವಕಾಶವಿದೆ. ಸುಮಲತ ಅವರು ಜನಪ್ರಿಯ ವ್ಯಕ್ತಿಗಳಲ್ಲೊಬ್ಬರು, ಅವರ ಪತಿ ಜನಪ್ರಿಯ ನಟ ಮತ್ತು ರಾಜಕೀಯ ನಾಯಕ ಅಂಬರೀಶ್ ಅವರು ಪಕ್ಷೇತರವಾಗಿ ನಿಂತು ಗೆದ್ದು ಬಂದವರು ಹೀಗಿರುವಾಗ ಅವರು ಪಕ್ಷಕ್ಕೆ ಸೇರ್ಪಡೆಗೊಂಡರೆ ಸಂತೋಷದ ವಿಷಯ, ಅವರು ಯಾವಾಗ ಸೇರ್ಪಡೆಗೊಳ್ಳುತ್ತಾರೆ ಮಾಹಿತಿ ಇಲ್ಲ ಎಂದರು. ಆರ್.ಅಶೋಕ್ ಮಂಡ್ಯ ಉಸ್ತುವಾರಿ ಬಗ್ಗೆ ಮಂಡ್ಯದಲ್ಲೇ ಅಪಸ್ವರ ಇರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅಶೋಕ್ ಅವರು ನಮ್ಮ ಪಕ್ಷದ ಹಿರಿಯ ನಾಯಕರಲ್ಲೊಬ್ಬರು. ಯಾರು ಯಾಕೆ ಹೀಗೆ ಮಾಡುತ್ತಿದ್ದಾರೆ ಗೊತ್ತಿಲ್ಲ. ರಾಜ್ಯಾಧ್ಯಕ್ಷರ ಈ ಗಮನಕ್ಕೆ ತರುತ್ತೇವೆ ಎಂದರು.
ಬ್ರಹ್ಮಕ್ಷತ್ರಿಯ ಖತ್ರಿ ಸಮಾಜದ ಆರಾಧ್ಯದೈವ ಹಿಂಗ್ಲಾಜ್ ಮಾತಾಜಿ ಮಂದಿರಕ್ಕೆ ಅದ್ದೂರಿ ಚಾಲನೆ!
ಭವಾನಿ ರೇವಣ್ಣ ಟಿಕೆಟ್ ಆಫರ್ ನೀಡಿದ ಸಿ.ಟಿ ರವಿ: ಹಾಸನ ಕ್ಷೇತ್ರದ ಜೆಡಿಎಸ್‌ನಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಹಾಸನ ಜಿಲ್ಲೆ ಹಲವು ದಶಕಗಳಿಂದ ರಾಜ್ಯ ಮತ್ತು ರಾಷ್ಟ್ರಕ್ಕೆ ನೇತೃತ್ವ ನೀಡಿದ ಜಿಲ್ಲೆ. ಅಲ್ಲಿ ಪ್ರೀತಂ ಗೌಡ ಅವರು ರಾಜಕೀಯ ಆಯಸ್ಸು ಕಡಿಮೆ ಇದ್ದರೂ ಕೆಲಸ ಮಾಡಿ, ಜನರ ವಿಶ್ವಾಸ ಗಳಿಸಿ ಸವಾಲು ಸ್ವೀಕರಿಸುವ ಮನೋಭಾವದ ಕಾರಣಕ್ಕೆ ಕಡಿಮೆ ಅವಧಿಯಲ್ಲಿ ಬೇರು ಗಟ್ಟಿ ಮಾಡಿಕೊಂಡು, ಅತ್ಯಂತ ಜನಪ್ರಿಯರಾಗಿ ಬೆಳೆದಿದ್ದಾರೆ. ಯಾರೇ ಯಾವುದೇ ಪಕ್ಷದಿಂದ ಅಭ್ಯರ್ಥಿ ಆದರೂ ಅಲ್ಲಿ ಬಿಜೆಪಿಯೇ ಗೆಲ್ಲುವುದು ಎಂದರು. ಹೊಳೇನರಸೀಪುರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಲು ಭವಾನಿ ಅಕ್ಕ ಒಳ್ಳೆಯ ಅಭ್ಯರ್ಥಿ. ನೀವೇ ನಮ್ಮ ಅಭ್ಯರ್ಥಿ ಆಗಬೇಕು ಎಂದು ಹೇಳಬೇಕೆಂದು ನನ್ನ ಮನಸ್ಸಿನಲ್ಲಿತ್ತು. ಆದರೆ ನಾನ್ಯಾಕೆ ಭವಾನಿ ಅಕ್ಕ ಮತ್ತು ರೇವಣ್ಣ ಅವರ ನಡುವೆ ಜಗಳ ಹಚ್ಚಲಿ, ಹಾಗಾಗಿ ನಾನೇನು ಹೇಳುವುದಿಲ್ಲ ಎಂದು ರವಿ ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.