ಸಂಪುಟ ವಿಸ್ತರಣೆ ಹಾಗೂ ನಿಗಮ-ಮಂಡಳಿಗಳ ನೇಮಕಾತಿ ವಿಚಾರದಲ್ಲಿ ಚಾಮರಾಜನಗರ ಸಂಸದ ವಿ. ಶ್ರೀನಿವಾಸಪ್ರಸಾದ್ ಗರಂ ಆಗಿದ್ದಾರೆ.
ಮೈಸೂರು, (ನ.25): ಯಡಿಯೂರಪ್ಪ ಸಿಎಂ ಆಗುವಾಗ ನನ್ನ ಪಾತ್ರ ಇತ್ತು. ಈಗ ಸಿಎಂ ಆದರಲ್ಲ, ಇನ್ನೇನು? ಆ ದರ್ದು ಅವರಿಗೆ ಇಲ್ಲ, ಈಗ ಆರಾಮಾಗಿ ಇದ್ದಾರೆ. ನೋಡ್ಕೋತೀವಿ ಬಿಡಿ ಎಂದು ಚಾಮರಾಜನಗರ ಸಂಸದ ವಿ. ಶ್ರೀನಿವಾಸ್ ಪ್ರಸಾದ್ ಅಚ್ಚರಿ ಹೇಳಿಕೆ ಕೊಟ್ಟಿದ್ದಾರೆ.
ಸುತ್ತೂರು ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲು ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀನಿವಾಸ್ ಪ್ರಸಾದ್, ಸಿಎಂ ವಿರುದ್ಧ ಹರಿಹಾಯ್ದರು. ಸಂಪುಟ ವಿಸ್ತರಣೆ ಬಗ್ಗೆ ಸಿಎಂ ನಿಮ್ಮ ಸಲಹೆ ಪಡೆದಿದ್ದಾರಾ ಎಂಬ ಪ್ರಶ್ನೆಗೆ ಖಾರವಾಗಿಯೇ ಪ್ರತಿಕ್ರಿಯಿಸಿದ ಶ್ರೀನಿವಾಸ್ ಪ್ರಸಾದ್, ಯಡಿಯೂರಪ್ಪ ಸಿಎಂ ಆಗುವಾಗ ನನ್ನ ಪಾತ್ರ ಇತ್ತು. ಈಗ ಸಿಎಂ ಆದರಲ್ಲ, ಇನ್ನೇನು? ಆ ದರ್ದು ಅವರಿಗೆ ಇಲ್ಲ, ಈಗ ಆರಾಮಾಗಿ ಇದ್ದಾರೆ, ನೋಡ್ಕೋತೀವಿ ಬಿಡಿ ಎಂದು ಹೇಳುವ ಮೂಲಕ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದರು.
ರಾಜ್ಯ ಬಿಜೆಪಿಯಲ್ಲಿ ಶುರುವಾಯ್ತು ಮೂಲ-ವಲಸಿಗ: ಅಸಮಾಧಾನ ಸ್ಫೋಟ
ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನಗಳನ್ನು ಮುಖ್ಯಮಂತ್ರಿ ಯಡಿಯೂರಪ್ಪ ಒಂದೊಂದಾಗೇ ತುಂಬಿಸುತ್ತಿದ್ದಾರೆ. ಈ ನಡುವೆ ಬಿಜೆಪಿಯಲ್ಲಿ ಅಸಮಾಧಾನದ ಹೊಗೆ ಕೂಡ ಜೋರಾಗೇ ಎದ್ದಿದೆ.
ಅದರಲ್ಲೂ ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ಬಹಿರಂಗವಾಗೇ ಸಿಎಂ ವಿರುದ್ಧ ಅಸಮಾಧಾನ ಹೊರಹಾಕಿದ್ದು, ಮುಂದೆ ನೋಡಿಕೊಳ್ಳುತ್ತೇವೆ ಬಿಡಿ ಎಂದು ಸವಾಲು ಹಾಕಿದ್ದಾರೆ. ಯಡಿಯೂರಪ್ಪನವರ ಸರ್ಕಾರ ಬರಲು ಪ್ರಮುಖ ಪಾತ್ರ ವಹಿಸಿದ ಶ್ರೀನಿವಾಸ್ ಪ್ರಸಾದ್ ಹೇಳಿಕೆ ಇದೀಗ ರಾಜ್ಯ ಬಿಜೆಪಿಯಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.