ಜೆಡಿಎಸ್‌ಗೆ ಕೈಕೊಟ್ಟು ಕಾಂಗ್ರೆಸ್‌ ಸೇರಿದ ಸಿದ್ದರಾಮಯ್ಯ ಶಕುನಿ: ಬಸವರಾಜ ಬೊಮ್ಮಾಯಿ

By Kannadaprabha News  |  First Published Nov 8, 2024, 12:31 PM IST

ಉಪಚುನಾವಣೆ ಹೊತ್ತು ಅಂತ ಅಲ್ಲ. ವಕ್ಫ್ ಕಾಯ್ದೆಯನ್ನು ತಿದ್ದುಪಡಿ ಮಾಡಬೇಕು ಎಂಬ ನಿಲವಿಗೆ ಕೇಂದ್ರ ಸರ್ಕಾರ ಬಂದಾಗ ತರಾತುರಿಯಲ್ಲಿ ಎಲ್ಲ ಜಮೀನನ್ನು ವಕ್ಫ್ ಹೆಸರಿನಲ್ಲಿ ನೋಂದಾಯಿಸಿದರೆ ವಾಪಸ್ ಬರುತ್ತದೆ ಎಂಬ ಹುನ್ನಾರದಿಂದ ವಕ್ಫ್ ಅದಾಲತ್ ಮಾಡಿ ರೈತರ ಸಾವಿರಾರು ಎಕರೆ ಜಮೀನನ್ನು ನಿಗದೀಕರಣ ಮಾಡುವುದಕ್ಕೆ ರಾಜ್ಯ ಸರ್ಕಾರ ಚಾಲನೆ ಕೊಟ್ಟಿದೆ. ಹೀಗಾಗಿ, ರೈತರು ಪ್ರತಿರೋಧ ವ್ಯಕ್ತಪಡಿಸುತ್ತಿದ್ದಾರೆ: ಬಸವರಾಜ ಬೊಮ್ಮಾಯಿ 
 


ವಿಜಯ್‌ ಮಲಗಿಹಾಳ

ಬೆಂಗಳೂರು(ನ.08):  ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಪೈಕಿ ಶಿಗ್ಗಾಂವಿ ಮತ್ತು ಚನ್ನಪಟ್ಟಣ ತೀವ್ರ ಕುತೂಹಲ ಮೂಡಿಸಿವೆ. ಇಬ್ಬರು ಮಾಜಿ ಮುಖ್ಯಮಂತ್ರಿಗಳು ತಮ್ಮ ಪುತ್ರರನ್ನು ಕಣಕ್ಕಿಳಿಸಿ ರಾಜಕೀಯದ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಈ ಪೈಕಿ ಶಿಗ್ಗಾವಿ ಕ್ಷೇತ್ರದಿಂದ ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಸಂಸದ ಬಸವರಾಜ ಬೊಮ್ಮಾಯಿ ತಮ್ಮ ಪುತ್ರ ಭರತ್ ಬೊಮ್ಮಾಯಿ ಅವರನ್ನು ಮೊದಲ ಬಾರಿಗೆ ಚುನಾವಣಾ ಆಖಾಡಕ್ಕೆ ಇಳಿಸಿದ್ದಾರೆ. ಇಲ್ಲಿ ಹೆಸರಿಗೆ ಮಾತ್ರ ಭರತ್‌ ಬಿಜೆಪಿ ಅಭ್ಯರ್ಥಿ. ಆದರೆ, ಇಡೀ ಚುನಾವಣೆ ಬಸವರಾಜ ಬೊಮ್ಮಾಯಿ ಅವರ ಹೆಸರಲ್ಲೇ ನಡೆಯುತ್ತಿದೆ. ಪರೋಕ್ಷವಾಗಿ ಅವರೇ ಅಭ್ಯರ್ಥಿ ಎಂದರೂ ಉತ್ಪ್ರೇಕ್ಷೆಯಾಗುವುದಿಲ್ಲ. ಚುನಾವಣೆ ಹಿನ್ನೆಲೆಯಲ್ಲಿ ಬಸವರಾಜ ಬೊಮ್ಮಾಯಿ ಅವರು ‘ಕನ್ನಡಪ್ರಭ’ದೊಂದಿಗೆ ‘ಮುಖಾಮುಖಿ’ಯಾಗಿದ್ದು ಹೀಗೆ..

Tap to resize

Latest Videos

ನಿಮ್ಮ ಪಕ್ಷದ ಅಭ್ಯರ್ಥಿಯ ಚುನಾವಣಾ ಭರಾಟೆ ಹೇಗೆ ಸಾಗಿದೆ?

ಎಲ್ಲ ಸಮುದಾಯಗಳ ಆಶೀರ್ವಾದ ಭರತ್‌ಗೆ ಸಿಗುತ್ತಿದೆ. ನಾವು ಮಾಡಿರುವ ಅಭಿವೃದ್ಧಿ ಕೆಲಸಗಳನ್ನು ಜನರು ನೆನಪಿನಲ್ಲಿ ಇಟ್ಟುಕೊಂಡು ಬೆಂಬಲಿಸುತ್ತಿರುವುದು ಬಹಳ ಸ್ಪಷ್ಟವಾಗಿ ಕಂಡು ಬರುತ್ತಿದೆ.

ರಾಜ್ಯದಲ್ಲಿ ಈಗ ಪೇ ಡಬಲ್ ಸಿಎಂ ವ್ಯವಸ್ಥೆ, ಸಚಿವರಿಗೊಂದು ಪಾಲು, ಸಿದ್ದುಗೆ ಒಂದು ಪಾಲು: ಬೊಮ್ಮಾಯಿ

ನೀವು ಹಿಂದೆ ಎದುರಿಸಿದ ಚುನಾವಣೆಗೂ, ಈಗಿನದ್ದಕ್ಕೂ ವ್ಯತ್ಯಾಸ ಇದೆಯೇ?

ನಾನು ಇಲ್ಲಿ ಎದುರಿಸಿದ ಹಿಂದಿನ ನಾಲ್ಕು ಚುನಾವಣೆಗಳನ್ನು ಹೋಲಿಸಿದರೆ ಈ ಬಾರಿ ದೊಡ್ಡ ಪ್ರಮಾಣದಲ್ಲಿ ಯುವಕರು ಬೆಂಬಲ ನೀಡುತ್ತಿದ್ದಾರೆ. ಒಂದು ವಿಶೇಷ ಉತ್ಸಾಹ ಕಂಡು ಬರುತ್ತಿದೆ.

ಪುತ್ರನ ಕಣಕ್ಕಿಳಿಸಿದ್ದು ನಿಮಗೆ ವೈಯಕ್ತಿಕವಾಗಿ ಪ್ರತಿಷ್ಠೆಯ ಕಣವಾದಂತಿದೆ?

ಪ್ರತಿ ಚುನಾವಣೆಯನ್ನೂ ಗೆಲ್ಲಬೇಕು ಎಂಬ ಒಂದು ಗುರಿ ಇದ್ದೇ ಇರುತ್ತದೆ. ಅದಕ್ಕಾಗಿ ಎಲ್ಲ ಶ್ರಮ ಹಾಕಬೇಕಾಗುತ್ತದೆ. ಅದನ್ನು ಮಾಡುತ್ತಿದ್ದೇವೆ. ನನ್ನ ಪುತ್ರನಾಗಲಿ ಅಥವಾ ಬೇರೆ ಯಾರೇ ಆಗಲಿ. ಬಿಜೆಪಿ ಗೆಲ್ಲಬೇಕು ಎಂಬುದು ಮುಖ್ಯ. ಬಿಜೆಪಿ ಗೆಲ್ಲುವ ಅಭ್ಯರ್ಥಿ ಎಂಬ ಉದ್ದೇಶದಿಂದ ಪಕ್ಷ ವರಿಷ್ಠರು ಟಿಕೆಟ್‌ ನೀಡಿದ್ದರಿಂದ ಅದಕ್ಕಾಗಿ ಸಂಪೂರ್ಣ ಶ್ರಮ ಹಾಕುತ್ತಿದ್ದೇವೆ.

ಶಿಗ್ಗಾಂವಿಯಲ್ಲಿ ಸಮರ್ಥರಿಲ್ಲ ಎಂದು ಭರತ್‌ಗೆ ಪಕ್ಷ ಟಿಕೆಟ್ ಕೊಟ್ಟಿತಾ?

ಸುಮಾರು ಐವತ್ತು ಮಂದಿ ಇದ್ದರು. ಅವರ ಹೆಸರಿನಲ್ಲಿ ಮೂರು ಸಮೀಕ್ಷೆಗಳು ನಡೆದವು. ಅದರ ಆಧಾರದ ಮೇಲೆ ಭರತ್ ಬೊಮ್ಮಾಯಿ ಅವರಿಗೆ ಟಿಕೆಟ್ ಕೊಟ್ಟರೆ ಜನರು ಹಾಗೂ ಕಾರ್ಯಕರ್ತರ ಸಹಮತ ಸುಲಭ‍ವಾಗಿ ಆಗುತ್ತದೆ, ಚುನಾವಣೆ ನಡೆಸುವುದೂ ಸುಗಮವಾಗುತ್ತದೆ, ಗೆಲ್ಲುವು ಕೂಡ ಸಾಧ್ಯವಾಗಲಿದೆ ಎಂಬುದನ್ನು ಮನಗಂಡು ವರಿಷ್ಠರು ಟಿಕೆಟ್ ತೀರ್ಮಾನ ಕೈಗೊಂಡರು.

ಪುತ್ರನಿಗೆ ಟಿಕೆಟ್ ಕೊಡಿಸಲು ನೀವು ಪ್ರಯತ್ನ ಮಾಡಲಿಲ್ಲವೇ?

ಇಲ್ಲ. ನಾನು ಟಿಕೆಟ್ ಬೇಡ ಎಂದು ಕೊನೆಯ ಕ್ಷಣದವರೆಗೂ ವರಿಷ್ಠರಿಗೆ ಹೇಳಿದೆ. ಆದರೆ, ಗೆಲ್ಲುವ ದೃಷ್ಟಿಯಿಂದ ಭರತ್‌ ಅವರನ್ನು ಕಣಕ್ಕಿಳಿಸಬೇಕು. ಇದಕ್ಕೆ ನೀವು ಒಪ್ಪಿಕೊಳ್ಳಬೇಕು ಎಂದು ಹೇಳಿದ್ದರಿಂದ ನಾನು ಪಕ್ಷದ ವರಿಷ್ಠರ ಆದೇಶವನ್ನು ಒಪ್ಪಿದೆ.

ಮೋದಿ ಕುಟುಂಬ ರಾಜಕಾರಣ ವಿರೋಧಿಸುತ್ತಾರೆ. ಆದರೆ, ಶಿಗ್ಗಾಂವಿಯಲ್ಲಿ ಕುಟುಂಬ ರಾಜಕಾರಣಕ್ಕೇ ಮಣೆ ಹಾಕಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ಸಿಗರು ಆರೋಪಿಸುತ್ತಿದ್ದಾರೆ?

ಕುಟುಂಬ ರಾಜಕಾರಣದ ಬಗ್ಗೆ ಮಾತನಾಡಲು ಸಿದ್ದರಾಮಯ್ಯ ಅವರಿಗಾಗಲಿ ಅಥವಾ ಕಾಂಗ್ರೆಸ್ ಪಕ್ಷಕ್ಕಾಗಲಿ ಯಾವ ನೈತಿಕತೆ ಇದೆ. ಅವರ ಪಕ್ಷದಲ್ಲೇ ಕುಟುಂಬ ರಾಜಕಾರಣವಿದೆ. ಜವಾಹರಲಾಲ್ ನೆಹರು, ಇಂದಿರಾ ಗಾಂಧಿ, ರಾಜೀವ್‌ ಗಾಂಧಿ, ರಾಹುಲ್ ಗಾಂಧಿ ಅಂಥ ದೊಡ್ಡ ಕುಟುಂಬ ರಾಜಕಾರಣದ ಪರಂಪರೆ ಕಾಂಗ್ರೆಸ್ ಪಕ್ಷದಲ್ಲಿದೆ. ಅಂಥವರು ಇದರ ಬಗ್ಗೆ ಮಾತನಾಡುವುದು ಸರಿಯಲ್ಲ.

ಭರತ್‌ಗೆ ಪಕ್ಷದ ವಿವಿಧ ಹಂತದಲ್ಲಿ ಕೆಲಸದ ಅನುಭವ ಇಲ್ಲ ಎಂಬ ಮಾತು ಕೇಳಿಬರುತ್ತಿದೆ?

ಅವರು ಪಕ್ಷದ ಸದಸ್ಯರಾಗಿ, ಕಾರ್ಯಕರ್ತರಾಗಿ ಐದು ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಚುನಾವಣೆ ಸಂದರ್ಭದಲ್ಲಿಯೂ ಕೆಲಸ ಮಾಡಿದ್ದಾರೆ. ಹೀಗಾಗಿ, ಕ್ಷೇತ್ರದ ಜನರ ಜತೆ ನಿಕಟ ಸಂಪರ್ಕವಿದೆ. ಒಡನಾಟವಿದೆ. ಹೀಗಾಗಿ, ಪಕ್ಷದ ಸಮೀಕ್ಷೆಗಳಲ್ಲಿ ಅವರ ಹೆಸರಿಗೆ ಹೆಚ್ಚಿನ ಬೆಂಬಲ ಲಭಿಸಿದೆ.

ಮತದಾರರು ಭರತ್‌ಗೇ ಯಾಕೆ ಮತ ನೀಡಬೇಕು?

ನಾನು ಇಲ್ಲಿ ಶಾಸಕನಾದ ಬಳಿಕ ನಂಜುಂಡಪ್ಪ ವರದಿ ಪ್ರಕಾರ ಅತಿ ಹಿಂದುಳಿದ ತಾಲೂಕು ಎಂಬ ಹಣೆಪಟ್ಟಿ ಇದ್ದುದನ್ನು ಹೋಗಲಾಡಿಸಿ ಅಭಿವೃದ್ಧಿಪರವಾಗಿರುವ ತಾಲೂಕನ್ನಾಗಿ ಮಾಡಿದ್ದೇನೆ. ಜನರು ಅಭಿವೃದ್ಧಿಯನ್ನು ನೋಡಿದ್ದಾರೆ. ಅನುಭವಿಸುತ್ತಿದ್ದಾರೆ. ಇನ್ನೂ ನಿರಂತರವಾಗಿ ಅಭಿವೃದ್ಧಿ ನಡೆಯಬೇಕು ಎಂಬ ಆಶಯ ಹೊಂದಿದ್ದಾರೆ. ಈಗ ಕಳೆದ ಒಂದೂವರೆ ವರ್ಷಗಳಿಂದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಅಭಿವೃದ್ಧಿ ಸ್ಥಗಿತಗೊಂಡಿದೆ. ಕಾಂಗ್ರೆಸ್ ಪಕ್ಷಕ್ಕೆ ಎಚ್ಚರಿಕೆ ಗಂಟೆ ಬಾರಿಸಬೇಕು. ಬಿಜೆಪಿ ಮತ್ತು ನಾನು ಅಭಿವೃದ್ಧಿ ಪರವಾಗಿದ್ದೇವೆ ಎಂಬ ಕಾರಣಕ್ಕಾಗಿ ಭರತ್‌ಗೆ ಮತದಾರರು ಮತ ನೀಡಬೇಕು.

ಕಾಂಗ್ರೆಸ್‌ ಅಭ್ಯರ್ಥಿ ಆಯ್ಕೆಯ ಗೊಂದಲ ಬಿಜೆಪಿಗೆ ಲಾಭ ತರುತ್ತಾ?

ನಾನು ಯಾವಾಗಲೂ ನಮ್ಮ ಸಾಮರ್ಥ್ಯದ ಮೇಲೆ ಚುನಾವಣೆ ಮಾಡುತ್ತೇನೆ. ಕಾಂಗ್ರೆಸ್ ಅಥವಾ ಎದುರಾಳಿಯ ದೌರ್ಬಲ್ಯವನ್ನು ನೆಚ್ಚಿಕೊಳ್ಳುವುದಿಲ್ಲ. ಅದು ಆ ಪಕ್ಷಕ್ಕೆ ಬಿಟ್ಟ ವಿಚಾರ. ಖಂಡಿತವಾಗಿಯೂ ಒಂದು ಪಕ್ಷದಲ್ಲಿ ದೊಡ್ಡ ಪ್ರಮಾಣದಲ್ಲಿ ಒಡಕು ಕಂಡು ಬಂದಾಗ ಅದನ್ನು ಅವರಿಗೆ ನಿಭಾಯಿಸುವುದಕ್ಕೆ ಸಮಯ ಹಿಡಿಯಬಹುದು. ಆದರೆ, ನಾನು ಅದರ ಮೇಲೆ ಚುನಾವಣೆ ಮಾಡುವುದಿಲ್ಲ. ನಾನು ಇಡೀ ಜೀವನದಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೋಮು ಸೌಹಾರ್ದದಿಂದ ಕೆಲಸ ಮಾಡಿದ್ದೇನೆ. ಅದಕ್ಕಾಗಿ ಜನರು ನಮಗೆ ಬೆಂಬಲ ನೀಡುತ್ತಿದ್ದಾರೆ. ಆ ಸಾಮರ್ಥ್ಯದ ಮೇಲೆ ಚುನಾವಣೆ ಮಾಡುತ್ತೇನೆ.

3 ಕ್ಷೇತ್ರಗಳ ಫಲಿತಾಂಶ ಆಡಳಿತಾರೂಢ ಕಾಂಗ್ರೆಸ್ಸಿಗೆ ಮುಖ್ಯವೋ ಅಥವಾ ಪ್ರತಿಪಕ್ಷಗಳಿಗೆ ಮುಖ್ಯವೋ?

ನೋಡಿ ಒಂದೂವರೆ ವರ್ಷದ ಬಳಿಕ ಸರ್ಕಾರವನ್ನು ಕಿತ್ತೆಸೆಯಬೇಕು ಎಂಬ ಜನಸಾಮಾನ್ಯರಲ್ಲಿ ಬಂದಿದೆ. ಅದರ ಮೊದಲ ಮುನ್ಸೂಚನೆ ಲೋಕಸಭಾ ಚುನಾವಣೆಯಲ್ಲೇ ಸಿಕ್ಕಿದೆ. ಈಗ ಉಪಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಜನರು ಸ್ಪಷ್ಟ ಸಂದೇಶ ರವಾನಿಸುವ ವಿಶ್ವಾಸವಿದೆ.

ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ಬದಲಾವಣೆ ಕೂಗು ಪಕ್ಷದಲ್ಲಿ ಹೆಚ್ಚುತ್ತಿದೆಯಲ್ಲ?

ಈಗಾಗಲೇ ಈ ಬಗ್ಗೆ ಹಲವು ಸುತ್ತಿನ ಮಾತುಕತೆ ಆಗಿದೆ. ಈ ವಿಷಯ ವರಿಷ್ಠರ ಗಮನಕ್ಕೂ ಬಂದಿದೆ. ವರಿಷ್ಠರು ಎಲ್ಲರನ್ನೂ ಕರೆದು ಮಾತನಾಡಿ ಸಮಾಧಾನಪಡಿಸುವ ಮೂಲಕ ಒಗ್ಗಟ್ಟನ್ನು ಸಾಧಿಸುವ ವಿಶ್ವಾಸವಿದೆ.

ಯಡಿಯೂರಪ್ಪ ಅವರನ್ನು ರಾಜಕೀಯವಾಗಿ ಮುಗಿಸಲು ನೀವು ಪ್ಲ್ಯಾನ್ ಮಾಡಿದ್ದಿರಂತೆ? ನೀವೊಬ್ಬ ಶಕುನಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರಲ್ಲ?

ತಮ್ಮನ್ನು ಉಪಮುಖ್ಯಮಂತ್ರಿ ಮಾಡಿ ರಾಜಕೀಯವಾಗಿ ಬೆಳೆಸಿದ ದೇವೇಗೌಡರಿಗೆ ಕೈಕೊಟ್ಟು ನಿರಂತರ ವಿರೋಧಿಸಿರುವ ಕಾಂಗ್ರೆಸ್ ಕೈ ಹಿಡಿದಿರುವ ಸಿದ್ದರಾಮಯ್ಯ ನಿಜವಾದ ಶಕುನಿ ಎಂದು ಜನರು ಮಾತನಾಡುತ್ತಿದ್ದಾರೆ. ಜೆಡಿಎಸ್‌ನಿಂದ ಹೊರ ಬಂದಾಗ ಪ್ರಗತಿಪರ ಜನತಾದಳ ಪಕ್ಷದ ಅಡಿಯಲ್ಲಿ ತಾ.ಪಂ. ಹಾಗೂ ಜಿ.ಪಂ. ಚುನಾವಣೆ ಮಾಡಿ ಅವರ ಅಸ್ತಿತ್ವ ಉಳಿಸಿದ್ದು ಇದೇ ಬಸವರಾಜ ಬೊಮ್ಮಾಯಿ ಎನ್ನುವುದನ್ನು ಮರೆತಿದ್ದಾರೆ. ಸಿದ್ದರಾಮಯ್ಯ ಅವರು ಅಹಿಂದ ಮಾಡಿದಾಗ ಅವರ ಜೊತೆಗೆ ಬಹಿರಂಗವಾಗಿ ಗಟ್ಟಿಯಾಗಿ ನಿಂತ ವೀರಶೈವ ಸಮುದಾಯದ ನಾಯಕ ನಾನೊಬ್ಬನೇ. ಅವರು 2006 ರಲ್ಲಿ ಜೆಡಿಎಸ್ ಗೆ ರಾಜಿನಾಮೆ ಕೊಟ್ಟು ಚಾಮುಂಡೇಶ್ವರಿ ಉಪ ಚುನಾವಣೆಯಲ್ಲಿ ಸ್ಪರ್ಧಿಸಿದಾಗ ನಾನು ಯಾವ ರೀತಿ ಸಹಾಯ ಮಾಡಿದ್ದೇನೆ ಎಂಬುದನ್ನು ಅವರು ನೆನಪಿಸಿಕೊಳ್ಳಬೇಕು.

ಉಪಚುನಾವಣೆ ಹೊತ್ತಿನಲ್ಲೇ ರಾಜ್ಯದಲ್ಲಿ ವಕ್ಫ್‌ ಗದ್ದಲ ಜೋರಾಗಿದೆಯಲ್ಲ?

ಉಪಚುನಾವಣೆ ಹೊತ್ತು ಅಂತ ಅಲ್ಲ. ವಕ್ಫ್ ಕಾಯ್ದೆಯನ್ನು ತಿದ್ದುಪಡಿ ಮಾಡಬೇಕು ಎಂಬ ನಿಲವಿಗೆ ಕೇಂದ್ರ ಸರ್ಕಾರ ಬಂದಾಗ ತರಾತುರಿಯಲ್ಲಿ ಎಲ್ಲ ಜಮೀನನ್ನು ವಕ್ಫ್ ಹೆಸರಿನಲ್ಲಿ ನೋಂದಾಯಿಸಿದರೆ ವಾಪಸ್ ಬರುತ್ತದೆ ಎಂಬ ಹುನ್ನಾರದಿಂದ ವಕ್ಫ್ ಅದಾಲತ್ ಮಾಡಿ ರೈತರ ಸಾವಿರಾರು ಎಕರೆ ಜಮೀನನ್ನು ನಿಗದೀಕರಣ ಮಾಡುವುದಕ್ಕೆ ರಾಜ್ಯ ಸರ್ಕಾರ ಚಾಲನೆ ಕೊಟ್ಟಿದೆ. ಹೀಗಾಗಿ, ರೈತರು ಪ್ರತಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಬಿಜೆಪಿ ಮತ್ತು ಜೆಡಿಎಸ್ ಸರ್ಕಾರದಲ್ಲೂ ವಕ್ಫ್ ಮಂಡಳಿಗೆ ಖಾತೆ ಬದಲಾವಣೆಗೆ ನೋಟೀಸ್ ನೀಡಿದ ದಾಖಲೆಗಳನ್ನು ಬಿಡುಗಡೆ ಮಾಡುವುದಾಗಿ ಸಿದ್ದರಾಮಯ್ಯ ಗುಡುಗಿದ್ದಾರಲ್ಲ?

ಅಂಥ ದಾಖಲೆಗಳು ಇದ್ದರೆ ತೋರಿಸಲಿ. ನಾವು ಯಾವ ರೈತರಿಗೆ ನೋಟೀಸ್ ಕೊಟ್ಟಿದ್ದೇವೆ ಎಂಬುದನ್ನು ಹೇಳಲಿ. ಕಾಂಗ್ರೆಸ್ಸಿನವರು ದೊಡ್ಡ ದೊಡ್ಡ ವಕ್ಫ್ ಆಸ್ತಿಯನ್ನು ಅತಿಕ್ರಮಣ ಮಾಡಿಕೊಂಡಿದ್ದಾರೆ. ಎಂಟು ಸಾವಿರ ಪುಟಗಳ ಅನ್ವರ್ ಮಾಣಪ್ಪಾಡಿ ವರದಿಯಲ್ಲಿ ಎಲ್ಲವೂ ಪ್ರಸ್ತಾಪವಾಗಿದೆ. ಅದರ ಮೇಲೆ ಉಪಲೋಕಾಯಕ್ತರ ವರದಿಯಿದೆ. ಆ ಬಗ್ಗೆ ಕ್ರಮ ಕೈಗೊಳ್ಳಿ ಎಂಬ ಮಾತನ್ನು ಹೇಳುತ್ತಿದ್ದೇವೆ. ಸಿದ್ದರಾಮಯ್ಯ ಅವರಿಗೆ ವಕ್ಫ್ ಆಸ್ತಿ ಉಳಿಸುವ ಬಗ್ಗೆ ಆಸಕ್ತಿ ಇದ್ದರೆ ಕಾಂಗ್ರೆಸ್ ನಾಯಕರು ಒತ್ತುವರಿ ಮಾಡಿರುವ ವಕ್ಫ್ ಆಸ್ತಿಯನ್ನು ವಾಪಸ್ ಪಡೆಯಲಿ. ಅದನ್ನು ಬಿಟ್ಟು ರೈತರ ಮೇಲೆ ಗದಾಪ್ರಹಾರ ಮಾಡುವುದು ಯಾವ ನ್ಯಾಯ.

ಬೊಮ್ಮಾಯಿ ಕಾಲದಲ್ಲೇ 40 ಪರ್ಸೆಂಟ್‌ ಕಮಿಷನ್‌ ಬಂದದ್ದು: ಸಿದ್ದರಾಮಯ್ಯ

ರೈತರಿಗೆ ನೀಡಿರುವ ನೋಟಿಸ್‌ ವಾಪಸ್‌ಗೆ ಸಿಎಂ ಸೂಚನೆ ನೀಡಿದ್ದಾರಲ್ಲ?

ಇದು ಕೇವಲ ಕಣ್ಣೊರೆಸುವ ತಂತ್ರ. ನೋಟಿಸ್ ವಾಪಸ್ ಪಡೆದು ಚುನಾವಣೆ ಮುಗಿದ ನಂತರ ಮತ್ತೆ ನೋಟೀಸ್ ಕೊಡುವುದಿಲ್ಲ ಅನ್ನುವುದು ಏನು ಗ್ಯಾರಂಟಿ ಇದೆ ಹೇಳಿ. ಮುಖ್ಯಮಂತ್ರಿಗಳಿಗೆ ರೈತರ ಬಗ್ಗೆ ನಿಜವಾಗಲೂ ಕಾಳಜಿ, ಗೌರವ ಇದ್ದರೆ ತಕ್ಷಣ ವಕ್ಫ್‌ ಗೆಜೆಟ್ ನೊಟಿಫಿಕೇಶ್ ರದ್ದುಗೊಳಿಸಬೇಕು.

ಗ್ಯಾರಂಟಿಗಳಿಂದ ಕರ್ನಾಟಕ ಆರ್ಥಿಕ ವಿನಾಶ ಹೊಂದಿದೆ ಎಂಬ ಆತಂಕದ ಮಾತನ್ನು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರಲ್ಲ?

ಹೌದು. ಈ ಗ್ಯಾರಂಟಿ ಯೋಜನೆಗಳು ಅವತ್ತು ಚುನಾವಣಾ ರಾಜಕೀಯ ಲಾಭಕ್ಕಾಗಿ ಮಾಡಿದ್ದು. ಇದಕ್ಕೆ ಯಾವುದೇ ಪೂರ್ವ ತಯಾರಿ ಇರಲಿಲ್ಲ. ಕೇವಲ ಜನಪ್ರಿಯತೆಗೆ ಮಾಡಿದ್ದಾರೆ. ಈಗ ಅವರ ಹಣಕಾಸಿನ ಪರಿಸ್ಥಿತಿ ಸರಿಯಿಲ್ಲ. ಅವರ ಶಾಸಕರೇ ಅವರನ್ನು ದೂರುತ್ತಿದ್ದಾರೆ. ಈಗ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಗ್ಯಾರಂಟಿ ಪರಿಷ್ಕರಣೆ ಮಾಡುವುದಾಗಿ ಹೇಳುತ್ತಿದ್ದಾರೆ. ಇದರಿಂದ ಆರ್ಥಿಕ ಸಂಕಷ್ಟ ಎದುರಾಗಿದೆ. ಅಭಿವೃದ್ಧಿ ಕಾರ್ಯಗಳಿಗೆ ಹಣವೇ ಇಲ್ಲದಂತಾಗಿದೆ.

click me!