ಬಿಜೆಪಿ ಎಂಎಲ್‌ಸಿ ಪುಟ್ಟಣ್ಣ ಕಾಂಗ್ರೆಸ್ಸಿಗೆ: ವಿಧಾನಸಭಾ ಚುನಾವಣೆಗೆ ಸ್ಪರ್ಧೆ

Published : Mar 10, 2023, 07:11 AM IST
ಬಿಜೆಪಿ ಎಂಎಲ್‌ಸಿ ಪುಟ್ಟಣ್ಣ ಕಾಂಗ್ರೆಸ್ಸಿಗೆ: ವಿಧಾನಸಭಾ ಚುನಾವಣೆಗೆ ಸ್ಪರ್ಧೆ

ಸಾರಾಂಶ

ಬಿಜೆಪಿ ಸದಸ್ಯತ್ವ ಹಾಗೂ ವಿಧಾನ ಪರಿಷತ್‌ ಸದಸ್ಯ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಬೆನ್ನಲ್ಲೇ ಗುರುವಾರ ಕೆಪಿಸಿಸಿ ಕಚೇರಿಯಲ್ಲಿ ಪ್ರತ್ಯಕ್ಷರಾದ ಪುಟ್ಟಣ್ಣ ಅವರು ಕಾಂಗ್ರೆಸ್‌ ಸೇರುವ ಇಂಗಿತ ವ್ಯಕ್ತಪಡಿಸಿದರು.

ಬೆಂಗಳೂರು (ಮಾ.09): ಬಿಜೆಪಿ ಸದಸ್ಯತ್ವ ಹಾಗೂ ವಿಧಾನ ಪರಿಷತ್‌ ಸದಸ್ಯ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಬೆನ್ನಲ್ಲೇ ಗುರುವಾರ ಕೆಪಿಸಿಸಿ ಕಚೇರಿಯಲ್ಲಿ ಪ್ರತ್ಯಕ್ಷರಾದ ಪುಟ್ಟಣ್ಣ ಅವರು ಕಾಂಗ್ರೆಸ್‌ ಸೇರುವ ಇಂಗಿತ ವ್ಯಕ್ತಪಡಿಸಿದರು. ಅವರ ರಾಜೀನಾಮೆ ಅಂಗೀಕಾರವಾದ ಕೂಡಲೇ ಅಧಿಕೃತವಾಗಿ ಕಾಂಗ್ರೆಸ್‌ ಸೇರುವುದು ಬಹುತೇಕ ಖಚಿತವಾಗಿದೆ. ರಾಜಾಜಿನಗರ ವಿಧಾನಸಭಾ ಕ್ಷೇತ್ರಕ್ಕೆ ಪಕ್ಷದ ಟಿಕೆಟ್‌ ನೀಡುವ ಬಗ್ಗೆ ಕಾಂಗ್ರೆಸ್‌ ನಾಯಕರಿಂದ ಖಚಿತ ಭರವಸೆ ಸಿಕ್ಕ ಹಿನ್ನೆಲೆಯಲ್ಲಿ ಅವರು ಇನ್ನೂ ನಾಲ್ಕು ವರ್ಷ ಅವಧಿ ಇರುವ ವಿಧಾನ ಪರಿಷತ್‌ ಸದಸ್ಯತ್ವಕ್ಕೂ ರಾಜೀನಾಮೆ ನೀಡಿ ಕಾಂಗ್ರೆಸ್‌ ಸೇರ್ಪಡೆಗೆ ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.

ಗುರುವಾರ ಕೆಪಿಸಿಸಿ ಕಚೇರಿಗೆ ಆಗಮಿಸಿದ ಅವರು ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ ಸುರ್ಜೇವಾಲಾ ಸೇರಿದಂತೆ ಕಾಂಗ್ರೆಸ್‌ನ ಹಲವು ನಾಯಕರೊಂದಿಗೆ ಜಂಟಿ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡು ತಾವು ಕಾಂಗ್ರೆಸ್‌ ಸೇರುವ ಮಾಹಿತಿ ನೀಡಿದರು. ಅವರ ನಿರ್ಧಾರವನ್ನು ಸ್ವಾಗತಿಸಿದ ಪಕ್ಷದ ನಾಯಕರು ಅಭಿನಂದನೆ ತಿಳಿಸಿದರು.

ಸಚಿವ ನಾರಾಯಣ ಗೌಡ ಮಾ.21ಕ್ಕೆ ಕಾಂಗ್ರೆಸ್‌ ಸೇರ್ಪಡೆ ಅಧಿಕೃತ

ಈ ವೇಳೆ ಮಾತನಾಡಿದ ಪುಟ್ಟಣ್ಣ, ಗುರುವಾರ ಸಂಜೆ 4.30ಕ್ಕೆ ನಾನು ಕಾಂಗ್ರೆಸ್‌ ಸೇರುವ ತೀರ್ಮಾನ ಕೈಗೊಂಡು ಬಿಜೆಪಿ ಸದಸ್ಯತ್ವ ಮತ್ತು ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದೇನೆ. ಶಿಕ್ಷಕರು, ವಿದ್ಯಾರ್ಥಿಗಳ ಪರವಾಗಿ, ಶಿಕ್ಷಣ ಸಂಸ್ಥೆಗಳ ಪರವಾಗಿ ಬಹಳಷ್ಟುಹೋರಾಟ ಮಾಡಿಕೊಂಡು ಬಂದಿದ್ದೇನೆ. ಯಾವ ಉದ್ದೇಶದಿಂದ ಬಿಜೆಪಿ ಸೇರಿದ್ದೆನೋ ಅದು ಯಾವುದೂ ಆಗಲಿಲ್ಲ. ಶಿಕ್ಷಕರು, ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಮುಖ್ಯಮಂತ್ರಿಗಳು, ಸರ್ಕಾರ ಸ್ಪಂದಿಸಲಿಲ್ಲ. ಅಲ್ಲಿ ಇದ್ದೂ ಸತ್ತಂತೆ ಇರಬೇಕಾದ ಸ್ಥಿತಿ ಇತ್ತು. ಯಾಕಾದರೂ ಈ ಪಕ್ಷ ಸೇರಿದೆನೋ ಎಂದು ನನ್ನ ಆತ್ಮಸಾಕ್ಷಿ ಪ್ರಶ್ನಿಸುತ್ತಿತ್ತು ಎಂದು ಹೇಳಿದರು.

ಎನ್‌ಪಿಎಸ್‌ ವಿಚಾರದಲ್ಲಿ ಹೋರಾಟ ಮಾಡುತ್ತಿದ್ದ ಮೂವರು ಶಿಕ್ಷಕರು ವಿಷ ಸೇವಿಸಿ, ಆ ಪೈಕಿ ಇಬ್ಬರು ಮೃತಪಟ್ಟರು. ಆಗಲೂ ಸರ್ಕಾರ ಸ್ಪಂದಿಸಲಿಲ್ಲ. ಅನೇಕ ಸಮಸ್ಯೆ ಎದುರಿಸಬೇಕಾಯಿತು. ಆದರೆ, ಡಿ.ಕೆ.ಶಿವಕುಮಾರ್‌ ಅವರನ್ನು ಭೇಟಿ ಮಾಡಿದಾಗ ಅವರು ಸ್ಥಳಕ್ಕೆ ಬಂದು ಮುಂದೆ ನಮ್ಮ ಸರ್ಕಾರ ಬಂದರೆ ಬೇಡಿಕೆ ಈಡೇರಿಸುವ ಭರವಸೆ ನೀಡಿದರು. ಹಾಗಾಗಿ ಕಾಂಗ್ರೆಸ್‌ ತತ್ವ ಸಿದ್ಧಾಂತವನ್ನು ಒಪ್ಪಿ ಸೇರ್ಪಡೆಯಾಗಲು ಬಂದಿದ್ದೇನೆ. ಪಕ್ಷದ ನಾಯಕರೂ ಮುಕ್ತ ಆಹ್ವಾನ ಕೊಟ್ಟಿದ್ದಾರೆ. ನನ್ನನ್ನು ಹೇಗೆ ಬಳಸಿಕೊಳ್ಳಬೇಕೆಂದು ಪಕ್ಷ ತೀರ್ಮಾನಿಸುತ್ತದೆ. ರಾಜೀನಾಮೆ ಅಂಗೀಕಾರದ ಬಳಿಕ ಅಧಿಕೃತವಾಗಿ ಕಾಂಗ್ರೆಸ್‌ ಸೇರುತ್ತೇನೆ ಎಂದರು.

ನಾಲ್ಕು ಬಾರಿ ಎಂಎಲ್‌ಸಿಯಾಗಿರುವ ಪುಟ್ಟಣ್ಣ ಅವರು ಬಿಜೆಪಿ ಬಿಟ್ಟು ಕಾಂಗ್ರೆಸ್‌ ಸೇರುತ್ತಿರುವುದು ದೊಡ್ಡ ಬೆಳವಣಿಗೆ. ಶಿಕ್ಷಣ ಕ್ಷೇತ್ರಕ್ಕೆ ಅವರ ದೊಡ್ಡ ಕೊಡುಗೆ ಇದೆ. ತಮ್ಮ ಸದಸ್ಯತ್ವದ ಅವಧಿ ಬಾಕಿ ಇದ್ದರೂ ಬಿಜೆಪಿಯ ಆಡಳಿತದ ವಿರುದ್ಧ ಬೇಸರ ಹಾಗೂ ಶಿಕ್ಷಕರ ಸಮಸ್ಯೆಗಳಿಗೆ ನ್ಯಾಯ ಒದಗಿಸಲು ಸಾಧ್ಯವಾಗದ ನೋವಿಂದ ಕಾಂಗ್ರೆಸ್‌ ಸೇರಲು ತೀರ್ಮಾನಿಸಿದ್ದಾರೆ. ಯಾವುದೇ ಷರತ್ತಿಲ್ಲದೆ ಅವರು ಕಾಂಗ್ರೆಸ್‌ಗೆ ಬರುತ್ತಿದ್ದಾರೆ. ಟಿಕೆಟ್‌ಗಾಗಿ ಅರ್ಜಿಯನ್ನೂ ಸಲ್ಲಿಸಿಲ್ಲ. ಅವರನ್ನು ಹೇಗೆ ಬಳಸಿಕೊಳ್ಳಬೇಕೆಂದು ಪಕ್ಷ ಮುಂದೆ ನಿರ್ಧರಿಸುತ್ತದೆ.
- ಡಿ.ಕೆ.ಶಿವಕುಮಾರ್‌, ಕೆಪಿಸಿಸಿ ಅಧ್ಯಕ್ಷ

ಸುಮಲತಾ ಟು 'ಕಮಲ'ತಾ: ಇಂದು ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಸೇರ್ಪಡೆಯ ಕುರಿತು ಘೋಷಣೆ?

ಬಿಜೆಪಿಯ ಭ್ರಷ್ಟಾಚಾರ, ಕೋಮುವಾದ ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ತಿಲಾಂಜಲಿ ಇಟ್ಟು ಜನರ ಭಾವನೆಗಳನ್ನು ಹಿಂದುತ್ವದ ಆಧಾರದ ಮೇಲೆ ಕೆರಳಿಸುವಂತಹ ವಿಚಾರಗಳಿಂದ ಬೇಸತ್ತು ಪುಟ್ಟಣ್ಣ ಅವರು ತಮ್ಮ ಎಂಎಲ್‌ಸಿ ಸ್ಥಾನದ ಅವಧಿ ಇನ್ನೂ ನಾಲ್ಕು ವರ್ಷ ಇದ್ದರೂ ಬಿಜೆಪಿಗೆ ರಾಜೀನಾಮೆ ನೀಡಿದ್ದಾರೆ. ಸುಮಾರು 20 ವರ್ಷ ವಿಧಾನ ಪರಿಷತ್‌ ಸದಸ್ಯರಾಗಿ, ಉಪಸಭಾಪತಿಯಾಗಿಯೂ ಕೆಲಸ ಮಾಡಿ ಅಪಾರ ಅನುಭವವಿರುವ ಪುಟ್ಟಣ್ಣ ಅವರು ಕಾಂಗ್ರೆಸ್‌ ಸೇರುವುದರಿಂದ ಪಕ್ಷದ ಶಕ್ತಿ ಹೆಚ್ಚುತ್ತದೆ ಎಂದು ಭಾವಿಸಿದ್ದೇನೆ. ಅವರ ಅನುಭವ ಮತ್ತು ಹಿರಿತನವನ್ನು ಪಕ್ಷ ಉತ್ತಮ ರೀತಿಯಲ್ಲಿ ನಡೆಸಿಕೊಳ್ಳುತ್ತದೆ.
- ಸಿದ್ದರಾಮಯ್ಯ, ಪ್ರತಿಪಕ್ಷ ನಾಯಕ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
ಬೆಳಗಾವಿ ಸುವರ್ಣ ಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಸೇರಿ 50ಕ್ಕೂ ಅಧಿಕ ನಾಯಕರು ವಶಕ್ಕೆ