ಸಚಿವ ನಾರಾಯಣ ಗೌಡ ಮಾ.21ಕ್ಕೆ ಕಾಂಗ್ರೆಸ್‌ ಸೇರ್ಪಡೆ ಅಧಿಕೃತ

By Kannadaprabha News  |  First Published Mar 10, 2023, 6:50 AM IST

ಬಿಜೆಪಿ ಸರ್ಕಾರದಲ್ಲಿ ಯುವಜನ ಸೇವೆ ಮತ್ತು ಕ್ರೀಡಾ ಸಚಿವರಾಗಿರುವ ಕೆ.ಆರ್‌. ಪೇಟೆ ಶಾಸಕ ಕೆ.ಸಿ.ನಾರಾಯಣಗೌಡ ಅವರು ಕಾಂಗ್ರೆಸ್‌ ಪಕ್ಷ ಸೇರುವುದು ಇದೀಗ ಅಧಿಕೃತ. 
 


ಬೆಂಗಳೂರು (ಮಾ.09): ಬಿಜೆಪಿ ಸರ್ಕಾರದಲ್ಲಿ ಯುವಜನ ಸೇವೆ ಮತ್ತು ಕ್ರೀಡಾ ಸಚಿವರಾಗಿರುವ ಕೆ.ಆರ್‌. ಪೇಟೆ ಶಾಸಕ ಕೆ.ಸಿ.ನಾರಾಯಣಗೌಡ ಅವರು ಕಾಂಗ್ರೆಸ್‌ ಪಕ್ಷ ಸೇರುವುದು ಇದೀಗ ಅಧಿಕೃತ. ಸಚಿವ ನಾರಾಯಣಗೌಡ ಅವರ ಪಕ್ಷ ಸೇರ್ಪಡೆಗೆ ವಿರೋಧ ವ್ಯಕ್ತಪಡಿಸಿದ್ದ ಕೆ.ಆರ್‌.ಪೇಟೆ ಕಾಂಗ್ರೆಸ್‌ ನಾಯಕರ ಮನವೊಲಿಸುವಲ್ಲಿ ಪಕ್ಷದ ನಾಯಕತ್ವ ಯಶಸ್ವಿಯಾಗಿದೆ. ಇದರಿಂದ ಅವರ ಪಕ್ಷ ಸೇರ್ಪಡೆ ಸಲೀಸಾಗಿದ್ದು, ಮಾ.21ರಂದು ನಾರಾಯಣಗೌಡ ಕಾಂಗ್ರೆಸ್‌ ಸೇರಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಮಾ.12ರಂದು ಮಂಡ್ಯಕ್ಕೆ ಆಗಮಿಸಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ಹೆದ್ದಾರಿ ಉದ್ಘಾಟಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಸಚಿವ ನಾರಾಯಣಗೌಡ ಅವರು ಕೂಡ ಪಾಲ್ಗೊಳ್ಳಲಿದ್ದು, ಬಳಿಕ ಪಕ್ಷಾಂತರದ ಬಗ್ಗೆ ಅಧಿಕೃತವಾಗಿ ಘೋಷಿಸುವ ಸಾಧ್ಯತೆ ಇದೆ. ಈಗಾಗಲೇ ಬಿಜೆಪಿ ಜೊತೆ ಅಂತರ ಕಾಯ್ದುಕೊಳ್ಳುತ್ತಿರುವ ಸಚಿವರು, ಮಾ.21ರಂದು ಕೆ.ಆರ್‌.ಪೇಟೆಯಲ್ಲಿ ಬೃಹತ್‌ ಕಾರ್ಯಕ್ರಮ ಆಯೋಜಿಸಲಿದ್ದಾರೆ. 

Tap to resize

Latest Videos

ಸುಮಲತಾ ಟು 'ಕಮಲ'ತಾ: ಇಂದು ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಸೇರ್ಪಡೆಯ ಕುರಿತು ಘೋಷಣೆ?

ಅಲ್ಲಿ ನೂತನವಾಗಿ ನಿರ್ಮಿಸಿರುವ ಒಳಾಂಗಣ ಕ್ರೀಡಾಂಗಣ ಮತ್ತು ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜಿಗೆ ಮಾಜಿ ಸ್ಪೀಕರ್‌ ಕೃಷ್ಣ ಅವರ ಹೆಸರು ನಾಮಕರಣ ಮಾಡುವ ಕಾರ್ಯಕ್ರಮ ಏರ್ಪಡಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಭಾರೀ ಸಂಖ್ಯೆಯಲ್ಲಿ ಜನರನ್ನು ಸೇರಿಸಿ ಶಕ್ತಿ ಪ್ರದರ್ಶಿಸಲು ಅವರು ಸಜ್ಜಾಗಿದ್ದಾರೆ. ಈ ವೇಳೆ ಬಿಜೆಪಿ ಸದಸ್ಯತ್ವಕ್ಕೆ ಹಾಗೂ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್‌ ಪಕ್ಷ ಸೇರ್ಪಡೆ ಘೋಷಿಸಲಿದ್ದಾರೆ ಎಂದು ತಿಳಿದು ಬಂದಿದೆ. 

ಈ ಮಧ್ಯೆ, ನಾರಾಯಣಗೌಡ ಅವರ ಕಾಂಗ್ರೆಸ್‌ ಸೇರ್ಪಡೆಗೆ ಸ್ಥಳೀಯ ಕಾಂಗ್ರೆಸ್‌ ಮುಖಂಡರಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರೇ ಸ್ಥಳೀಯ ಮುಖಂಡರೊಂದಿಗೆ ಸಭೆ ನಡೆಸಿ, ನಾರಾಯಣಗೌಡ ಅವರಿಗೆ ಪಕ್ಷ ಟಿಕೆಟ್‌ ನೀಡಿದರೆ ಸಹಕರಿಸುವಂತೆ ಸೂಚಿಸಿದರು. ಕೆ.ಆರ್‌.ಪೇಟೆ ಮಾಜಿ ಶಾಸಕ ಬಿ.ಕೆ.ಚಂದ್ರಶೇಖರ್‌ ಸೇರಿದಂತೆ ಇತರೆ ಸ್ಥಳೀಯ ಮುಖಂಡರು ಅಧ್ಯಕ್ಷರ ಮಾತಿಗೆ ಒಪ್ಪಿಗೆ ಸೂಚಿಸಿದ್ದು, ಪಕ್ಷದ ಹಿತದೃಷ್ಟಿಯಿಂದ ತಾವು ಕೈಗೊಳ್ಳುವ ನಿರ್ಧಾರಕ್ಕೆ ಬದ್ಧರಾಗುವುದಾಗಿ ತಿಳಿಸಿದರು ಎಂದು ಮೂಲಗಳು ಹೇಳಿವೆ.

ರಾಜ್ಯದಲ್ಲಿ ಮತ್ತೆ ಮೋದಿ ಹವಾ: ಮಾ.12ರಂದು ಜಗತ್ತಿನ ಅತಿ ಉದ್ದದ ರೈಲ್ವೆ ಪ್ಲಾಟ್‌ಫಾರ್ಮ್‌ ಉದ್ಘಾಟನೆ

21ಕ್ಕೆ ಬೃಹತ್‌ ಕಾರ್ಯಕ್ರಮ: ಬಿಜೆಪಿ ತೊರೆಯಲು ಮಾನಸಿಕವಾಗಿ ಸಿದ್ಧರಾಗಿರುವ ಕೆ.ಸಿ.ನಾರಾಯಣಗೌಡರು ಕೆ.ಆರ್‌.ಪೇಟೆಯಲ್ಲಿ ಮಾ.21ರಂದು ಬೃಹತ್‌ ಕಾರ್ಯಕ್ರಮ ಆಯೋಜಿಸುತ್ತಿದ್ದಾರೆ. ಪಟ್ಟಣದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಒಳಾಂಗಣ ಕ್ರೀಡಾಂಗಣ ಮತ್ತು ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜಿಗೆ ವಿಧಾನಸಭೆ ಮಾಜಿ ಸಭಾಪತಿ ಕೃಷ್ಣ ಹೆಸರನ್ನು ನಾಮಕರಣ ಮಾಡಿ ತಮ್ಮ ಅವಧಿಯ ಅಂತಿಮ ಕಾರ್ಯಕ್ರಮ ನಡೆಸುತ್ತಿದ್ದಾರೆ. ಭಾರೀ ಸಂಖ್ಯೆಯಲ್ಲಿ ಜನರ ಸೇರಿಸುವುದಕ್ಕೆ ಸಿದ್ಧತೆ ಮಾಡಿಕೊಂಡಿದ್ದಾರೆ. ಈ ಕಾರ್ಯಕ್ರಮ ಮುಗಿದ ಮರು ದಿನವೇ ಶಾಸಕ ಹಾಗೂ ಸಚಿವ ಸ್ಥಾನಕ್ಕೆ ನಾರಾಯಣಗೌಡರು ರಾಜೀನಾಮೆ ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ.

click me!