ವಿಷಕನ್ಯೆ ಅಷ್ಟೇ ಅಲ್ಲ, ಮಟ್ಯಾಷ್ ಲೆಗ್ ಮತ್ತು ರಕ್ತಕಣ್ಣೀರು ಎಂದು ಬೆಳಗಾವಿ ಜನರೇ ಮಾತನಾಡುತ್ತಾರೆ. ನಮ್ಮ ಕುಟುಂಬದ ವಿರುದ್ಧ ಷಡ್ಯಂತ್ರ ಮೊದಲಿನಿಂದ ಇದೆ. ಚುನಾವಣೆ ಆರು ತಿಂಗಳು ಇರುತ್ತಲೇ ಜೋರಾಗಿರುತ್ತದೆ: ಲಖನ್ ಜಾರಕಿಹೊಳಿ
ಗೋಕಾಕ(ಫೆ.01): ಸಿಡಿ ತಯಾರಿಕೆ ಕಾರ್ಖಾನೆ ಬೆಳಗಾವಿಯಲ್ಲಿಯೇ ಇದೆ. ಸಿಡಿ ಬೆಳಗಾವಿಯಲ್ಲಿ ತಯಾರಾಗಿ ಕನಕಪುರ ಮತ್ತು ಬೆಂಗಳೂರಿನಲ್ಲಿ ರಿಲೀಸ್ ಆಗುತ್ತದೆ. 2000ನೇ ಇಸ್ವಿಯಿಂದ ಸಿಡಿ ಕಾರ್ಖಾನೆ ಚಾಲ್ತಿಯಲ್ಲಿದ್ದು, ಸಿಬಿಐ ತನಿಖೆ ನಡೆದರೆ ಎಲ್ಲವೂ ಹೊರಬರಲಿದೆ ಎಂದು ವಿಧಾನ ಪರಿಷತ್ ಸದಸ್ಯ ಲಖನ್ ಜಾರಕಿಹೊಳಿ ವ್ಯಂಗ್ಯವಾಡಿದರು.
ಬೆಳಗಾವಿ ಜಿಲ್ಲೆಯ ಗೋಕಾಕನಲ್ಲಿ ಮಂಗಳವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕೆಪಿಸಿಸಿ ಅಂದ್ರೆ, ಕರ್ನಾಟಕ ಪ್ರದೇಶ್ ಸಿಡಿ ಕಮಿಟಿ. ಖರ್ಗೆ, ಪರಮೇಶ್ವರ, ಸಿದ್ದರಾಮಯ್ಯ ಸಾಹೇಬರು ಇದ್ದಾಗ ಕಾಂಗ್ರೆಸ್ ಬೇರೆ ಇತ್ತು. ಸಿದ್ದರಾಮಯ್ಯ, ಖರ್ಗೆ ಸಾಹೇಬರು ನಮ್ಮ ಗುರುಗಳು ಅಂತಾ ನಾವು ಒಪ್ಪುತ್ತೇವೆ. ಕಾಂಗ್ರೆಸ್‌ನಲ್ಲಿ ಡಿಕೆಶಿ ಬಗ್ಗೆ ಯಾರೂ ಮಾತನಾಡಲ್ಲ. ಏಕೆಂದರೆ ಎಲ್ಲರ ಸಿಡಿಗಳು ಅವನ ಬಳಿ ಇವೆ ಎಂದು ಸಹೋದರ ರಮೇಶ ಹೇಳಿಕೆಯನ್ನೇ ಸಮರ್ಥಿಸಿಕೊಂಡರು.
ನನ್ನನ್ನು ಸೋಲಿಸುತ್ತೇವೆ ಎಂಬುದು ಬಿಜೆಪಿ ಭ್ರಮೆ: ಸತೀಶ ಜಾರಕಿಹೊಳಿ
ಸಿಡಿ ಪ್ರಕರಣ ಮಾರ್ಚ್ 3ನೇ ತಾರೀಖಿಗೆ ಎರಡು ವರ್ಷ ಆಯ್ತು. ಎಲ್ಲ ಷಡ್ಯಂತ್ರ ನಡೆದಿದೆ. 2000ನೇ ಇಸವಿಯಿಂದ ಸಿಡಿ ಷಡ್ಯಂತ್ರ ಜೋರಾಗಿದೆ. ಬಹಳ ಜನರಿಗೆ ಅನ್ಯಾಯ ಆಗಿದೆ. ಬಹಳಷ್ಟು ನೊಂದ ಅಧಿಕಾರಿಗಳು, ರಾಜಕಾರಣಿಗಳು, ಬ್ಯುಸಿನೆಸ್‌ಮೆನ್‌ಗಳಿದ್ದಾರೆ. ಸಿಡಿ ಲೇಡಿ ಟೀಮ್‌ಗೆ ಕೊಟ್ಟಿದ್ದೇವೆ. ಅದಕ್ಕೆ ಬಿಜೆಪಿ ಕಾರ್ಯಕರ್ತರಿಗೆ ಹೇಳುತ್ತೇವೆ. ಅವನು ಪೇಸಿಎಂ ಅಭಿಯಾನ ಮಾಡ್ತಿದ್ದಾನೆ. ನೀವು ಕರ್ನಾಟಕ ಪ್ರಚಾರ ಸಿಡಿ ಕಮೀಟಿ ಅಭಿಯಾನ ಆರಂಭ ಮಾಡಿ 150 ಸೀಟ್ ಬರುತ್ತೆ ಎಂದ ಅವರು, ಇದಕ್ಕೆ ಸಿಬಿಐ ತನಿಖೆ ಒಂದೇ ಪರಿಹಾರ. ಈಗ ಸ್ಯಾಂಟ್ರೋ ರವಿ ಅಂತಾ ಏನು ತೋರಿಸುತ್ತಿದ್ದಾರಲ್ಲ. ಹಾಗೆಯೇ ಮಾರುತಿ 800ನಿಂದ ಬಿಎಂಡಬ್ಲ್ಯೂವರೆಗೂ ಇದೆ. ಒಂಟಿತೋಳ ಅಂದ್ರು ಒಂಟಿತೋಳ ಏನ್ ಮಾಡಿತು? ಕಾಂಗ್ರೆಸ್ ಸರ್ಕಾರ ಬೀಳಲು ಬೆಳಗಾವಿಯವರೇ ಕಾರಣ. ನಾವು ಸಿಂಪಲ್ ಆಗಿಯೇ ಇರ್ತಿವಿ, ಜನ ನಮ್ಮ ಜೊತೆ ಇರ್ತಾರೆ ಎಂದರು.
ಶಾಸಕ ರಮೇಶ ಜಾರಕಿಹೊಳಿ ಅವರು ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅವರಿಗೆ ವಿಷಕನ್ಯೆ ಎಂದು ಹೇಳಿದ ವಿಚಾರಕ್ಕೆ, ವಿಷಕನ್ಯೆ ಅಷ್ಟೇ ಅಲ್ಲ, ಮಟ್ಯಾಷ್ ಲೆಗ್ ಮತ್ತು ರಕ್ತಕಣ್ಣೀರು ಎಂದು ಬೆಳಗಾವಿ ಜನರೇ ಮಾತನಾಡುತ್ತಾರೆ. ನಮ್ಮ ಕುಟುಂಬದ ವಿರುದ್ಧ ಷಡ್ಯಂತ್ರ ಮೊದಲಿನಿಂದ ಇದೆ. ಚುನಾವಣೆ ಆರು ತಿಂಗಳು ಇರುತ್ತಲೇ ಜೋರಾಗಿರುತ್ತದೆ. ಆ ಮಟ್ಯಾಷ್ ಲೆಗ್‌ನಿಂದ ಸಿದ್ದರಾಮಯ್ಯ ಮಾಜಿ ಆದರು. ಕುಮಾರಸ್ವಾಮಿ ಸರ್ಕಾರ ಹೋಯಿತು. ಡಿಕೆಶಿ ಕೆಪಿಸಿಸಿ ಅಧ್ಯಕ್ಷರಾದ ಬಳಿಕ ನಾನು ಕಾಂಗ್ರೆಸ್‌ನಿಂದ ದೂರವಾದೆ ಎಂದರು.
ಕೆಪಿಸಿಸಿ ಅಧ್ಯಕ್ಷ ಅಂದರೆ ಕರ್ನಾಟಕ ಪ್ರದೇಶ ಸಿಡಿ ಕಂಪನಿ ಅಧ್ಯಕ್ಷ. ರಮೇಶ ಜಾರಕಿಹೊಳಿಗೆ ಶಕ್ತಿ ಇದೆ ಬಹಿರಂಗವಾಗಿ ಮಾತನಾಡಿದ್ದಾರೆ. ಧೈರ್ಯ ಇಲ್ಲದೇ ಇರೋರು ಮನೆಯಲ್ಲಿ ಕುಳಿತುಕೊಳ್ಳುತ್ತಾರೆ. ಒಂದು ವರ್ಷದಿಂದ ನಮ್ಮ ಬೇಡಿಕೆ ಇದೆ. ಈ ಕೇಸನ್ನು ಸಿಬಿಐ ವಹಿಸಬೇಕು ಅಂತ ಇದೆ. ಅನೇಕರು ನೊಂದು, ಬೆಂದು ಹೋಗಿದ್ದಾರೆ. ಬೆಂಗಳೂರು, ಮುಂಬೈ, ಕೇರಳದವರೆಗೆ ಇವರ ಲಿಂಕ್ ಇದೆ. ರಮೇಶ ಜಾರಕಿಹೊಳಿ ಅವರಿಗೆ ದಾಖಲೆ ಬಿಡುಗಡೆ ಮಾಡಬೇಡಿ ಸಿಬಿಐ ಕೊಡಿ ಎಂದು ಹೇಳಿದ್ದೇನೆ. ಕಾಂಗ್ರೆಸ್ ಸರ್ಕಾರ ಬೀಳಿಸಲು ಬೆಳಗಾವಿ ಗ್ರಾಮೀಣ ಶಾಸಕಿಯೇ ಕಾರಣ. ಆ ಕ್ಷೇತ್ರದಲ್ಲಿ 20 ಸಾವಿರಕ್ಕೂ ಹೆಚ್ಚು ಜನ ನಮ್ಮ ಕುಟುಂಬದ ಅಭಿಮಾನಿಗಳು ಇದ್ದಾರೆ ಎಂದರು.
ಸಂತ್ರಸ್ತರೋ, ಸಂತೃಪ್ತರೋ ಗೊತ್ತಾಗಲಿದೆ. ಬೇರೆಯವರಿಗೆ ಈ ರೀತಿ ಆಗಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರು. ಕುಟುಂಬಸ್ಥರು, ಕ್ಷೇತ್ರದ ಜನ ಬೆನ್ನಿಗೆ ನಿಂತಿದ್ದಾರೆ. ರಮೇಶ ಜಾರಕಿಹೊಳಿ ನಿವೃತ್ತಿಗೆ ಜನ ಅವಕಾಶ ಕೊಡಲ್ಲ. ಸಿಬಿಐ ತನಿಖೆ ಆದರೆ, ಲಂಚ, ಮಂಚ ಎಲ್ಲ ಹೊರಗೆ ಬರಲಿದೆ. ಯಾರು ಎಲ್ಲಿ ಪ್ಯಾಂಟ್ ಬಿಚ್ಚುತ್ತಾರೆ, ಲುಂಗಿ ಬಿಚ್ಚುತ್ತಾರೆ ಗೊತ್ತಾಗಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಿಡಿ ವಿಚಾರದಲ್ಲಿ ವೈಯಕ್ತಿಕ ಟೀಕೆ ಬೇಡ: ಬಾಲಚಂದ್ರ ಜಾರಕಿಹೊಳಿ
ಉದ್ದ ಅಂಗಿ ನಾಯಕರು ಯಾರು ಅಂತಾ ಎಲ್ಲರಿಗೂ ಗೊತ್ತಿದೆ. ಒಂದು ಪಕ್ಷದಲ್ಲಿ ಇರೋದು ಬೇರೆ ಪಕ್ಷದ ಪರ ಕೆಲಸ ಮಾಡುವುದು. ಅವರ ಇತಿಹಾಸ ನೋಡಿದರೆ ಜೆ.ಎಚ್.ಪಟೇಲ… ಸಿಎಂ ಇದ್ದಾಗ, ಯಡಿಯೂರಪ್ಪ ಸಿಎಂ ಇದ್ದಾಗ ಎಲ್ಲಾ ಹಾಳು ಮಾಡುತ್ತಾ ಬಂದಿದ್ದಾರೆ ಎಂದು ಲಖನ್ ಅವರು ಪರೋಕ್ಷವಾಗಿ ಲಕ್ಷ್ಮಣ ಸವದಿ ವಿರುದ್ಧ ಕಿಡಿಕಾರಿದರು.
ಇರುವುದು ಒಂದು ಪಕ್ಷದಲ್ಲಿ ಅಧಿಕಾರ ಅನುಭವಿಸೋದು, ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ಮಾಡುತ್ತಾ ಹೋಗೋದು ಎಂದ ಅವರು, ಪ್ರಧಾನಿ ಮೋದಿ, ಅಮಿತ್ ಶಾ, ಸಿಎಂ ಬೊಮ್ಮಾಯಿ ಅಳತೆ ಇದ್ದಿದ್ದ ಅಂಗಿ ಹಾಕಿಕೊಳ್ಳುತ್ತಾರೆ. ಅಳತೆ ಇಲ್ಲದ ಉದ್ದ ಅಂಗಿ ಹಾಕಿಕೊಳ್ಳುತ್ತಾರೆ ಇವರು. ಅಳತೆ ಇರಲ್ಲ ಏನೂ ಇರಲ್ಲ. ಎಬ್ಬಿಸಿಕೊಂಡು ಹೋಗಿಬಿಡೋದು. ಎಂಎಲ್‌ಸಿ ಚುನಾವಣೆಯಲ್ಲಿ ಸೋಲಿಸಿದ್ದು ಇವರೇ ಅಂತಾ ಮಹಾಂತೇಶ ಕವಟಗಿಮಠಗೆ ಗೊತ್ತಾಗಿದೆ. ಅರುಣ ಶಹಾಪುರ ಸೋಲಿಸಿದ್ದು ಇವರೇ ಎಂದು ದೂರಿದರು.