ರಾಮನ ಹೆಸರಿದ್ದರೆ ಕಾಂಗ್ರೆಸ್ಸಿಗರಿಗೆ ಅಲರ್ಜಿನಾ: ಯೋಗೇಶ್ವರ್

By Girish GoudarFirst Published Oct 26, 2023, 10:59 AM IST
Highlights

ರಾಮನಗರ ಜಿಲ್ಲೆಗೆ ಈಗಿರುವ ರಾಮನಗರ ಹೆಸರೇ ಸೂಕ್ತವಾಗಿದೆ. ರಾಮನ ಹೆಸರಿನಲ್ಲಿ ಶ್ರೀರಾಮಚಂದ್ರ ಆಡಳಿತ ಮಾಡಿದಂತೆ ಆಡಳಿತ ಮಾಡಲು ಇನ್ಯಾರಿಗೆ ಆಗುತ್ತದೆ. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರು ಆಡಳಿತವನ್ನು ಸುಧಾರಣೆ ಮಾಡುವತ್ತಾ ಗಮನ ಹರಿಸಲಿ ಎಂದು ಸಲಹೆ ನೀಡಿದ ವಿಧಾನ ಪರಿಷತ್‌ ಸದಸ್ಯ ಸಿ.ಪಿ.ಯೋಗೇಶ್ವರ್‌ 

ರಾಮನಗರ(ಅ.26): ರಾಮ ಅಂದರೆ ಕಾಂಗ್ರೆಸ್‌ನವರಿಗೆ ಅಲರ್ಜಿನಾ. ರಾಮನ ಹೆಸರು ಅವರಿಗೆ ಇಷ್ಟ ಇಲ್ವಾ. ರಾಮನಗರ ಜಿಲ್ಲೆ ಹೆಸರನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಮಾಡುವುದರಿಂದ ಏನು ಬದಲಾವಣೆ ಆಗುತ್ತದೆ. ಅದರ ಅವಶ್ಯಕತೆ ಇಲ್ಲ ಅನಿಸುತ್ತಿದೆ. ಜಿಲ್ಲೆಯ ಯಾವುದೇ ಭಾಗವನ್ನು ಸೇರಿಸುವ ಬೇರ್ಪಡಿಸುವ ಕೆಲಸ ಮಾಡಿದರೆ ಜನರ ಪ್ರತಿಭಟನೆ ಎದುರಿಸಬೇಕಾಗುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಎಚ್ಚರಿಕೆ ನೀಡಿದ್ದಾರೆ.

ಈ ಸಂಬಂಧ ಪ್ರತಿಕ್ರಿಯಿಸಿರುವ ಅವರು, ರಾಮನಗರ ಜಿಲ್ಲೆಗೆ ಈಗಿರುವ ರಾಮನಗರ ಹೆಸರೇ ಸೂಕ್ತವಾಗಿದೆ. ರಾಮನ ಹೆಸರಿನಲ್ಲಿ ಶ್ರೀರಾಮಚಂದ್ರ ಆಡಳಿತ ಮಾಡಿದಂತೆ ಆಡಳಿತ ಮಾಡಲು ಇನ್ಯಾರಿಗೆ ಆಗುತ್ತದೆ. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರು ಆಡಳಿತವನ್ನು ಸುಧಾರಣೆ ಮಾಡುವತ್ತಾ ಗಮನ ಹರಿಸಲಿ ಎಂದು ಸಲಹೆ ನೀಡಿದರು.

ಚೂರುಚೂರು ಮಾಡುವುದಕ್ಕೆ ರಾಮನಗರವೇನು ಕಲ್ಲುಬಂಡೆಯೇ?: ಡಿಕೆಶಿಗೆ ಎಚ್‌ಡಿಕೆ ಟಾಂಗ್‌

ರಾಮನಗರಕ್ಕೆ ಮಂಜೂರಾಗಿರುವ ರಾಜೀವ್‌ ಗಾಂಧಿ ಆರೋಗ್ಯ ವಿವಿಯಲ್ಲಿನ ಮೆಡಿಕಲ್‌ ಕಾಲೇಜನ್ನು ಕನಕಪುರಕ್ಕೆ ಸ್ಥಳಾಂತರ ಮಾಡುವ ನಿರ್ಧಾರ ಮಾಡಿದಾಗ ಇಡೀ ಜಿಲ್ಲೆ ಪ್ರತಿಭಟನೆ ಮಾಡಿತು. ಬೆಂಗಳೂರಿನ ಕಸವನ್ನು ರಾಮನಗರಕ್ಕೆ ತಂದು ಹಾಕುವ ತೀರ್ಮಾನಕ್ಕೂ ಜಿಲ್ಲೆಯಲ್ಲಿ ತೀವ್ರ ವಿರೋಧ ವ್ಯಕ್ತ ಪಡಿಸಿದ್ದಾರೆ. ಈಗ ರಾಮನಗರ ಜಿಲ್ಲೆಯನ್ನು ಸೇರಿಸುವ ಬೇರ್ಪಡಿಸುವ ಕೆಲಸ ಮಾಡಿದರೆ ಮುಂದಿನ ದಿನಗಳಲ್ಲಿ ಜಿಲ್ಲೆಯ ಜನರ ಪ್ರತಿರೋಧ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ರಾಮನಗರ ಜಿಲ್ಲೆ ಆಡಳಿತಾತ್ಮಕವಾಗಿ ಸರಿಯಾಗಿದೆ. 25 - 30 ವರ್ಷಗಳ ಹಿಂದೆ ಬೆಂಗಳೂರು ಬೆಳೆದಿರಲಿಲ್ಲ. ಆಗ ನಮ್ಮ ಎಲ್ಲ ತಾಲೂಕುಗಳು ಬೆಂಗಳೂರು ಗ್ರಾಮಾಂತರ ಜಿಲ್ಲೆಯೊಂದಿಗೆ ಸೇರಿಕೊಂಡಿತ್ತು. ಅಧಿಕಾರ ವಿಕೇಂದ್ರಿಕರಣ ಹಾಗೂ ಬೆಂಗಳೂರು ಬೆಳೆಯುತ್ತಿದ್ದ ಕಾರಣ ಅದರ ಮೇಲಿನ ಒತ್ತಡವನ್ನು ಕಡಿಮೆ ಮಾಡುವ ಉದ್ದೇಶದಿಂದ ರಾಮನಗರ ಜೊತೆಗೆ ಚಿಕ್ಕಬಳ್ಳಾಪುರ ಜಿಲ್ಲೆ ಅಸ್ತಿತ್ವಕ್ಕೆ ಬಂದಿತು. ಆ ಜಿಲ್ಲೆಗಳು ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿವೆ.
ರಾಮನಗರ ಜಿಲ್ಲೆಯ ಜನರು ಯಾವುದೇ ಸರ್ಕಾರಿ ಕೆಲಸ ಕಾರ್ಯ ಆಗಬೇಕೆಂದರೆ ಬೆಂಗಳೂರಿಗೆ ಬಂದು ಹೋಗುವುದೇ ದೊಡ್ಡ ಸವಾಲು. ಬೆಂಗಳೂರಿಗೆ ಬಂದು ಹೋಗಲು ಒಂದು ದಿನ ಆಗಿ ಹೋಗುತ್ತದೆ. ಹಾಗಾಗಿ ಆಡಳಿತ ದೃಷ್ಟಿಯಿಂದ ರಾಮನಗರ ಜಿಲ್ಲೆ ಇರುವುದು ಸೂಕ್ತ . ಆ ಜಿಲ್ಲೆಯಲ್ಲಿ ಏನಾದರು ಸುಧಾರಣೆ ತರಬೇಕಿದೆ. ಅದನ್ನು ಬಿಟ್ಟು ಡಿ.ಕೆ.ಶಿವಕುಮಾರ್ ಇಂತಹ ಹೇಳಿಕೆ ಏಕೆ ಕೊಟ್ಟರು ಎಂಬುದು ನನಗೂ ಆಶ್ಚರ್ಯವಾಗುತ್ತಿದೆ ಎಂದರು.

ಎಚ್‌ಡಿಕೆ ವಿರುದ್ಧ ತೊಡೆ ತಟ್ಟಿದ ಡಿಕೆಶಿ ಶಪಥದ ಹಿಂದಿದೆ ಭಾರೀ ರಾಜಕೀಯ ಲೆಕ್ಕಾಚಾರ!

ರಾಮನಗರ ಜಿಲ್ಲೆ ರಾಮನಗರಕ್ಕೆ ಸೂಕ್ತವಾಗಿದ್ದು, ಇದರಿಂದ ಯಾರಿಗೂ ತೊಂದರೆ ಆಗುತ್ತಿಲ್ಲ. ಜನಸಾಮಾನ್ಯರಿಗೆ ಏನು ತೊಂದರೆ ಇಲ್ಲ. ಆದರೆ, ಡಿ.ಕೆ.ಶಿವಕುಮಾರ್ ಅವರಿಗೆ ಏನು ತೊಂದರೆ ಆಗುತ್ತಿದೆ ಎಂಬುದನ್ನು ಅವರೇ ಹೇಳಬೇಕು. ಇದನ್ನು ವಿವಾದ ಮಾಡುವುದರಲ್ಲಿ ಅರ್ಥವಿಲ್ಲ ಎಂದು ಸಿ.ಪಿ.ಯೋಗೇಶ್ವರ್‌ ತಿಳಿಸಿದರು.

ಬಹುಶಃ ಬೆಂಗಳೂರಲ್ಲಿ ಒಕ್ಕಲಿಗರು ಹೆಚ್ಚಾಗಿದ್ದಾರೆ. 25 - 30 ಶಾಸಕರು ಕೈ ಸಿಗುತ್ತಾರೆ. ಆಡಳಿತದ ಹತೋಟಿ ಒಕ್ಕಲಿಗರ ಹಿಡಿತದಿಂದ ತಪ್ಪಿ ಹೋಗುತ್ತದೆ. ಹಾಗಾಗಿ ನಾವು ಮತ್ತೆ ಬೆಂಗಳೂರಿಗೆ ಸೇರಿಕೊಳ್ಳಬೇಕೆಂಬುದು ಡಿ.ಕೆ.ಶಿವಕುಮಾರ್ ಅವರ ಮನಸ್ಸಿನಲ್ಲಿ ಇರಬಹುದು ಅನಿಸುತ್ತಿದೆ. ಅದು ರಾಜಕೀಯ ಮಹತ್ವಕಾಂಕ್ಷಿ ಇರುವಂತಹ ವ್ಯಕ್ತಿ ಆಡುವ ಮಾತು. ಆದರೆ, ಆಡಳಿತ ದೃಷ್ಟಿಕೋನದಲ್ಲಿ ನೋಡುವುದಾದರೆ ಈಗಿರುವ ಆಡಳಿತ ವ್ಯವಸ್ಥೆ ಸರಿಯಾಗಿದೆ ಎಂದು ವಿಧಾನ ಪರಿಷತ್‌ ಸದಸ್ಯ ಸಿ.ಪಿ.ಯೋಗೇಶ್ವರ್‌ ತಿಳಿಸಿದ್ದಾರೆ.  

click me!