ಒಂದು ಕಡೆ ಉಪಚುನಾವಣೆ ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದ್ರೆ ಮತ್ತೊಂದೆಡೆ ರಾಜ್ಯ ನಾಯಕರ ಆರೋಪ-ಪ್ರತ್ಯಾರೋಪಗಳು ಜೋರಾಗಿವೆ. ಇದರ ಮಧ್ಯೆ ಬಿಜೆಪಿ ವಿಧಾನ ಪರಿಷತ್ ಸದಸ್ಯರೊಬ್ಬರು ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ನಾಲಿಗೆ ಹರಿಬಿಟ್ಟಿದ್ದಾರೆ.
ದಾವಣಗೆರೆ/ಬೆಳಗಾವಿ, [ನ.26]: ಅಥಣಿ ವಿಧಾಸಭಾ ಉಪಚುನಾವಣೆಯ ಉಸ್ತುವಾರಿ ಹೊತ್ತಿರುವ ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ತಮ್ಮ ಅಭ್ಯರ್ಥಿ ಪರ ಭರ್ಜರಿ ಪ್ರಚಾರದಲ್ಲಿ ತೊಡಗಿದ್ದಾರೆ.
ಈ ವೇಳೆ ಬಿಜೆಪಿ ನಾಯಕರ ವಿರುದ್ಧ ಕಿಡಿಕಾರುತ್ತಿದ್ದಾರೆ. ಜತೆಗೆ ಸವಾಲುಗಳ ಮೇಲೆ ಸವಾಲು ಎಸೆಯುತ್ತಿದ್ದಾರೆ. ಇದಕ್ಕೆ ಇದೀಗ ಬಿಜೆಪಿ ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ, ಲಕ್ಷ್ಮೀ ಹೆಬ್ಬಾಳ್ಕರ್ ಗೆ ಟಾಂಗ್ ಕೊಟ್ಟಿದ್ದಾರೆ.
ಬಿಜೆಪಿ ಅಭ್ಯರ್ಥಿ ಕಮಟಳ್ಳಿಗೆ ತಪ್ಪುತ್ತಿಲ್ಲ ಲಕ್ಷ್ಮೀ ಕಾಟ..!
ಮಂಗಳವಾರ ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರನ್ನು ಭಸ್ಮಾಸುರ ಎಂಬುದಾಗಿ ಲೇವಡಿ ಮಾಡಿರುವ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಏನು ಮೋಹಿನಿ ಆಗ್ತಾರಾ? ಮೋಹಿನಿ ಅವತಾರದಲ್ಲಿದ್ದಾರಾ? ಎಂದು ಪ್ರಶ್ನಿಸಿದರು.
ಲಕ್ಷ್ಮೀ ಹೆಬ್ಬಾಳಕರ್ ಮೊದಲ ಬಾರಿಗೆ ಗೆದ್ದು, ಶಾಸಕಿಯಾಗಿದ್ದಾರೆ. ಹಸುವಿಗೆ ಮೊದಲ ಬಾರಿಗೆ ಕೋಡು ಬಂದಾಗ ತುರಿಕೆ ಜಾಸ್ತಿ ಇರುತ್ತಂತೆ, ಹೀಗಾಗಿ ಅದಕ್ಕೆ ಕಂಡ ಕಂಡ ಕಡೆಗೆಲ್ಲಾ ಹಾಯಬೇಕು ಅನಿಸುತ್ತದೆ. ಇದೇ ಪರಿಸ್ಥಿತಿ ಲಕ್ಷ್ಮೀ ಹೆಬ್ಬಾಳ್ಕರ್ ಅವರದ್ದಾಗಿದೆ ಎಂದು ವ್ಯಂಗ್ಯವಾಡಿದರು.
ಬೈ ಎಲೆಕ್ಷನ್ ಬಿಸಿ ನಡುವೆ ಮಹಾಲಕ್ಷ್ಮೀಗೆ ಭಾರೀ ಮೊತ್ತದ ಚಿನ್ನದ ಹಾರ, ಕಾರಣ?
ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಇತಿಮಿತಿ ಮೀರಿ ಮಾತನಾಡುತ್ತಿದ್ದಾರೆ. ಮಾತನಾಡಲಿ, ನಾವೇನೂ ತಪ್ಪು ಭಾವಿಸಲ್ಲ. ತಮ್ಮನ್ನು ತಾವೇ ಕಿತ್ತೂರು ಚನ್ನಮ್ಮ ಅಂದುಕೊಂಡಿದ್ದರೆ, ಅದು ಅವರ ಭ್ರಮೆಯಷ್ಟೇ. ಅವರ ಮಾತಿಗೆ ಯಾರೂ ಸಹ ಬೆಲೆಯನ್ನೂ ಕೊಡುವುದಿಲ್ಲ ಎಂದರು.
ಕಾಂಗ್ರೆಸ್ ಪಕ್ಷದಲ್ಲಿ ಲಕ್ಷ್ಮೀ ಹೆಬ್ಬಾಳಕರ್‍ಗೆ ಅವಕಾಶ ನೀಡಿ, ಬೆಳೆಸಿದವರೂ ಆ ಪಕ್ಷದಲ್ಲಿದ್ದಾರೆ. ಲಕ್ಷ್ಮೀ ಹೆಬ್ಬಾಳ್ಕರ್ ಸ್ವಂತ ಶಕ್ತಿ ಮೇಲೆ ಮಾತನಾಡುತ್ತಿಲ್ಲ. ಶಾಸಕಿ ಹೀಗೆಲ್ಲಾ ಮಾತನಾಡಲು ಬೇರೆ ನಾಯಕರು ಶಕ್ತಿ ಧಾರೆ ಎರೆದಿದ್ದಾರಷ್ಟೇ. ಈ ಕಾರಣಕ್ಕೆ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ಹೇಳಿದರು.