ಸಿದ್ದರಾಮಯ್ಯ ವಿರುದ್ಧ 62 ಕೇಸುಗಳು ಬಾಕಿ: ಬಾಂಬ್ ಸಿಡಿಸಿದ ಬಿಜೆಪಿ MLC

By Web DeskFirst Published Nov 4, 2019, 4:39 PM IST
Highlights

ಸಿದ್ದರಾಮಯ್ಯ ವಿರುದ್ಧ 62 ಕೇಸುಗಳು ಎಸಿಬಿಯಲ್ಲಿ ಬಾಕಿ ಇದ್ದು, ಅವರೇ ರಾಜಿನಾಮೆ ನೀಡಬೇಕಾಗಿದೆ ಎಂದು ಬಿಜೆಪಿ ವಿಧಾನಪರಿಷತ್ ಸದಸ್ಯ ಹೊರ ಬಾಂಬ್ ಸಿಡಿಸಿದರು.

ಶಿವಮೊಗ್ಗ, (ನ.4): ಆಡಿಯೋ ಮೂಲಕ ಬಿಎಸ್‌ವೈ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜೀನಾಮೆಗೆ ಒತ್ತಾಯಿಸಿದ್ದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯಗೆ ಬಿಜೆಪಿ ವಿಧಾನಪರಿಷತ್ ಸದಸ್ಯ ಆಯನೂರು ಮಂಜುನಾಥ್ ತಿರುಗೇಟು ನೀಡಿದ್ದಾರೆ.

ಇಂದು (ಸೋಮವಾರ) ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಬಾಯಿಗೆ ಬಂದಂತೆ ಮಾತನಾಡಬಲ್ಲ ಏಕೈಕ ರಾಜಕಾರಣಿ ಎಂದರೆ ಅದು ಸಿದ್ಧರಾಮಯ್ಯ. ಸಿದ್ದರಾಮಯ್ಯ ವಿರುದ್ಧ 62 ಕೇಸುಗಳು ಎಸಿಬಿಯಲ್ಲಿ ಬಾಕಿ ಇವೆ. ಅವರೇ ರಾಜಿನಾಮೆ ನೀಡಬೇಕಾಗಿದೆ.  ಇಂಥವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಕೇಂದ್ರ ಗೃಹಸಚಿವ ಅಮಿತ್ ಷಾ ರಾಜಿನಾಮೆ ಬಗ್ಗೆ ಮಾತನಾಡುತ್ತಾರೆ ಎಂದು ತಿರುಗೇಟು ನೀಡಿದರು.

ಅಮಿತ್ ಶಾ, ಬಿಎಸ್‌ವೈ ರಾಜೀನಾಮೆಗೆ ಆಗ್ರಹ

ಎಸಿಬಿಯ ಹಲ್ಲುಗಳನ್ನು ಮುರಿದು, ಉಗುರುಗಳನ್ನು ಮೊಂಡು ಮಾಡಿರುವ ಸಿದ್ಧರಾಮಯ್ಯ, ಯಾವುದೋ ವಿಡಿಯೋ ಬಗ್ಗೆ ಮಾತನಾಡುತ್ತಾರೆ ಎಂದರೆ ಅದು ಹಾಸ್ಯಾಸ್ಪದವೇ ಸರಿ. ತಮ್ಮ ಕೇಸುಗಳಿರುವ ಲೋಕಾಯುಕ್ತವನ್ನು ದುರ್ಬಲಗೊಳಿಸಿ, ಎಸಿಬಿಯನ್ನು ತಂದು ಲೋಕಾಯುಕ್ತವನ್ನು ರದ್ದು ಮಾಡಿದ್ದಾರೆ ಎಂದು ಆರೋಪಿಸಿದರು.

ಭ್ರಷ್ಟಾಚಾರದ ಆರೋಪ ಹೊತ್ತಿರುವ ಸಿದ್ದರಾಮಯ್ಯ ಮತ್ತೊಬ್ಬರ ಬಗ್ಗೆ ಆರೋಪ ಮಾಡಲು ನೈತಿಕತೆ ಇಲ್ಲ.  ಸಿದ್ಧರಾಮಯ್ಯ ಅವರ ಮೇಲೆ ಎಸಿಬಿಯಲ್ಲಿ ಒಂದೇ ಒಂದು ಕೇಸು ಇಲ್ಲ ಎಂದು ಅವರು ಹೇಳಿದರೆ, ಶಿವಮೊಗ್ಗದ ಗೋಪಿ ಸರ್ಕಲ್ ನಲ್ಲಿ ದೊಡ್ಡ ಹಾರ ಹಾಕಿ ಅವರನ್ನು ಸನ್ಮಾನಿಸುವೆ ಎಂದು ಟೀಕಿಸಿದರು.

ಬಿಎಸ್ ವೈ ಆಡಿಯೋ ಬಗ್ಗೆ ಬಿಜೆಪಿಯಲ್ಲಿ ಆಂತರಿಕ ತನಿಖೆ

ಆತನ ವ್ಯಾಕರಣದಲ್ಲಿ ಬಹುವಚನವೇ ಇಲ್ಲ. ಆತ ಅತ್ಯಂತ ಸುಳ್ಳ, ದುರಾಂಹಕಾರಿ, ಭಾಷೆ ಮೇಲೆ ಹಿಡಿತವಿಲ್ಲದ ವ್ಯಕ್ತಿಯಾಗಿದ್ದು, ಬೇರೆಯವರಿಗೆ ವ್ಯಾಕರಣದ ಬಗ್ಗೆ ಸಿದ್ಧರಾಮಯ್ಯ ಪಾಠ ಮಾಡುತ್ತಾರೆ ಎಂದು ಲೇವಡಿ ಮಾಡಿದರು.

ಇಂತಹ ಸಿದ್ಧರಾಮಯ್ಯ ಬಗ್ಗೆ ತಲೆ ಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲವಾಗಿದ್ದು, ಅವರ ಬಗ್ಗೆ ಕಾಂಗ್ರೆಸ್ನವರೇ ತಲೆ ಕೆಡಿಸಿಕೊಳ್ಳುತ್ತಿಲ್ಲ. ಹಾಗಾಗಿ ನಾವು ಕೂಡ ಅವರ ಬಗ್ಗೆ ತಲೆ ಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ ಎಂದು ಲೇವಡಿ ಮಾಡಿದರು.

ಆತ ಆಡುವ ಭಾಷೆ ಭಾಷೆಯಲ್ಲ.  ಆ ಮನುಷ್ಯನ ಭಾಷೆಗೆ ಯಾರೂ ತೂಕ ನೀಡಬಾರದು ಎಂದು ಏಕವಚನದಲ್ಲಿಯೇ  ಸಿದ್ಧರಾಮಯ್ಯ ವಿರುದ್ಧ ಕಿಡಿಕಾರಿದರು.

click me!