ರಾಜ್ಯ ಸರ್ಕಾರದಿಂದ ಜನರ ನಂಬಿಕೆಗೆ ದ್ರೋಹ: ಶಾಸಕ ಸಿದ್ದು ಸವದಿ

By Kannadaprabha News  |  First Published Oct 21, 2023, 1:41 PM IST

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಗತ್ಯವಸ್ತುಗಳ ದರ ಏರಿಕೆ ಮಾಡುವ ಮೂಲಕ ರಾಜ್ಯದ ಜನತೆಯ ರಕ್ತ ಹೀರುವ ತಿಗಣೆಯಂತಾಗಿದ್ದು, ಬಡವರು, ಮಧ್ಯಮ ವರ್ಗದವರು ಇವರ ಸುಲಿಗೆಯಿಂದ ಬದುಕಲು ಹರಸಾಹಸ ಪಡುವಂತಾಗಿದೆ. 


ಬನಹಟ್ಟಿ (ಅ.21): ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಗತ್ಯವಸ್ತುಗಳ ದರ ಏರಿಕೆ ಮಾಡುವ ಮೂಲಕ ರಾಜ್ಯದ ಜನತೆಯ ರಕ್ತ ಹೀರುವ ತಿಗಣೆಯಂತಾಗಿದ್ದು, ಬಡವರು, ಮಧ್ಯಮ ವರ್ಗದವರು ಇವರ ಸುಲಿಗೆಯಿಂದ ಬದುಕಲು ಹರಸಾಹಸ ಪಡುವಂತಾಗಿದೆ. ರೈತರು-ನೇಕಾರರಿಗೆ ನಿರಂತರ ವಿದ್ಯುತ್ ನೀಡದಿದ್ದರೆ ಮುಂದಿನ ದಿನಗಳಲ್ಲಿ ತೀವ್ರ ಹೋರಾಟ ನಡೆಸಲಾಗುವುದು ಎಂದು ಶಾಸಕ ಸಿದ್ದು ಸವದಿ ಎಚ್ಚರಿಕೆ ನೀಡಿದರು. ರಾಜ್ಯ ಸರ್ಕಾರದ ಜನವಿರೋಧಿ ನೀತಿ ಖಂಡಿಸಿ ತಾಲೂಕು ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನಾ ರ್‍ಯಾಲಿ ಉದ್ದೇಶಿಸಿ ಮಾತನಾಡಿದ ಅವರು,

ಕಾಂಗ್ರೆಸ್ ಪಕ್ಷ ಚುನಾವಣೆಯಲ್ಲಿ ರಾಜ್ಯದ ಜನತೆಗೆ ಪಂಚಗ್ಯಾರಂಟಿ ಆಮಿಷ ಒಡ್ಡಿ ಅಧಿಕಾರಕ್ಕೆ ಬಂದಿದೆ. ಆದರೀಗ ಹಲವು ಷರತ್ತು ವಿಧಿಸಿ ಜನರಿಗೆ ದ್ರೋಹ ಎಸಗಿದೆ. ಬಿಟ್ಟಿ ಭಾಗ್ಯಗಳ ಹೆಸರಲ್ಲಿ ಬಿಟ್ಟಿಯಾಗಿ ಹಣ ಕಬಳಿಸುವ ಮತ್ತು ವರ್ಗಾವಣೆ ದಂಧೆಯಲ್ಲಿ ನಿರತವಾಗಿ ಹೈಕಮಾಂಡ್‌ಗೆ ಹಣ ಕಳಿಸುವ ಎಟಿಎಂ ಆಗಿದೆ. ಬರದಿಂದ ಕಂಗಾಲಾಗಿರುವ ರೈತರಿಗೆ ಸರ್ಕಾರ ವಿದ್ಯುತ್ ನೀಡದೇ ಬೆಳೆದ ಬೆಳೆಗಳೂ ಹಾಳಾಗಿ ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿಗೆ ದೂಡಿದೆ. ಬರ ನಿರ್ವಹಣೆಗೆ ಆದ್ಯತೆ ನೀಡದೆ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ಆರೋಪಿಸಿದರು.

Tap to resize

Latest Videos

ರಾಜ್ಯದಲ್ಲಿನ ಬರಗಾಲದಿಂದ ಶಾಸಕರಿಗೆ ಬಿಪಿ, ಶುಗರ್ ಹೆಚ್ಚಳ: ಎಂಎಲ್‌ಎ ಶಾಂತನಗೌಡ

ಮಳೆಯ ಕೊರತೆ ಕಾರಣ ಎಲ್ಲೆಡೆ ನದಿಗಳಲ್ಲಿ ನೀರಿಲ್ಲ. ಆದರೆ ನಮ್ಮ ಕ್ಷೇತ್ರದಲ್ಲಿ ಕೃಷ್ಣೆ, ಘಟಪ್ರಭೆಯಲ್ಲಿ ಹೇರಳ ನೀರಿದ್ದರೂ ವಿದ್ಯತ್ ಲೋಡ್‌ ಶೆಡ್ಡಿಂಗ್ ಜಾರಿಗೊಳಿಸಿ ರೈತರು ಬೆಳೆದ ಬೆಳೆ ಉಳಿಸಿಕೊಳ್ಳಲು ಹೆಣಗುತ್ತಿದ್ದರೆ, ನೆರೆ ರಾಜ್ಯಗಳಿಂದ ವಿದ್ಯುತ್ ಖರೀದಿಸಿ ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ. ನೇಕಾರಿಕೆ ಉದ್ಯಮಕ್ಕೆ ನೆರೆಯ ರಾಜ್ಯಗಳು ಹಲವಾರು ಸೌಕರ್ಯ ನೀಡಿದ್ದರೆ, ಸಿದ್ದರಾಮಯ್ಯ ಸರ್ಕಾರ ನೇಕಾರರಿಗೆ 20ಎಚ್.ಪಿ.ವರೆಗೆ ಉಚಿತ ವಿದ್ಯುತ್ ನೀಡುವುದಾಗಿ ಘೋಷಿಸಿ ಜಾರಿಗೊಳಿಸದೇ ವಚನಭ್ರಷ್ಟವಾಗಿದೆ. ತಕ್ಷಣ ನೇಕಾರರಿಗೆ ನಿರಂತರ, ಉಚಿತ ವಿದ್ಯುತ್ ನೀಡಬೇಕು. ಕನಿಷ್ಠ 6 ಗಂಟೆಯಾದರೂ ರೈತರಿಗೆ ನಿರಂತರ ವಿದ್ಯುತ್ ಪೂರೈಸಬೇಕು. ಇಲ್ಲದಿದ್ದರೆ ರೈತ-ನೇಕಾರರೊಡನೆ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.

ಸುರೇಶ ಅಕ್ಕಿವಾಟ, ಮಹಾಂತೇಶ ಹಿಟ್ಟಿನಮಠ, ಈಶ್ವರ ಪಾಟೀಲ, ರಾವಸಹೇಬ ಗುಬಚಿ, ಆನಂದ ಕಂಪು, ಸಂಜಯ ತೆಗ್ಗಿ ಮಾತನಾಡಿ, ರಾಜ್ಯ ಸರ್ಕಾರ ಲೋಡ್ ಶೆಡ್ಡಿಂಗ್ ಹೆಸರಲ್ಲಿ ಅನಿಯಮಿತವಾಗಿ ಮತ್ತು ಕೇವಲ 2 ತಾಸು ಮಾತ್ರ ವಿದ್ಯುತ್ ನೀಡುತ್ತ ರೈತರ ಜೀವನದೊಡನೆ ಚೆಲ್ಲಾಟವಾಡುತ್ತಿದ್ದು, ನಿರಂತರ 7 ಗಂಟೆಗಳ ಕಾಲ ವಿದ್ಯುತ್ ಪೂರೈಸದಿದ್ದರೆ ಕಚೇರಿ ಎದುರು ಅಹೋರಾತ್ರಿ ಧರಣಿ ನಡೆಸುವುದಾಗಿ ಎಚ್ಚರಿಸಿದರು. ರಬಕವಿಯ ಹಳೇ ಬಸ್‌ನಿಲ್ದಾಣದಿಂದ ಮೆರವಣಿಗೆ ಮೂಲಕ ಹೊಸ್ ಬಸ್ ನಿಲ್ದಾಣದ ಹೆಸ್ಕಾಂ ಕಚೇರಿಯತ್ತ ಸಾಗಿದ ಪ್ರತಿಭಟನಾಕಾರರು ರಾಜ್ಯ ಸರ್ಕಾರದ ರೈತ-ನೇಕಾರ ವಿರೋಧಿ ನೀತಿ ಖಂಡಿಸಿ ಘೋಷಣೆ ಕೂಗುತ್ತ ಹೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತ ಕಚೇರಿ ಎದುರು ಸಮಾವೇಶಗೊಂಡರು.

ಪ್ರತಿಭಟನೆಯಲ್ಲಿ ತೇರದಾಳ, ಮಹಾಲಿಂಗಪುರ, ಚಿಮ್ಮಡ, ಕುಲಹಳ್ಳಿ, ಜಗದಾಳ, ನಾವಲಗಿ, ಹಳಿಂಗಳಿ, ಹನಗಂಡಿ, ತಮದಡ್ಡಿ, ಯಲ್ಲಟ್ಟಿ, ಬನಹಟ್ಟಿ ರೈತರು, ಕಾರ್ಯಕರ್ತರು ಪಾಲ್ಗೊಂಡಿದ್ದರು. ನಗರ ಬಿಜೆಪಿ ಅಧ್ಯಕ್ಷ ಧರೆಪ್ಪ ಉಳ್ಳಾಗಡ್ಡಿ, ಶೇಖರ ಅಂಗಡಿ, ವಿದ್ಯಾಧರ ಸವದಿ, ಶ್ರೀಶೈಲ ಬೀಳಗಿ, ಭುಜಬಲಿ ವೆಂಕಟಾಪುರ, ಶಂಕರ ಬಟಕುರ್ಕಿ, ಹನುಮಂತ ತೇಲಿ, ಮಹಾದೇವ ಕೋಟ್ಯಾಳ, ಮಹಾವೀರ ಕೊಕಟನೂರ, ಜಯಪ್ರಕಾಶ ಸೊಲ್ಲಾಪುರ, ಸವಿತಾ ಹೊಸೂರ, ಪವಿತ್ರಾ ತುಕ್ಕಣ್ಣವರ, ಗೌರಿ ಮಿಳ್ಳಿ, ದುರ್ಗವ್ವ ಹರಿಜನ, ಬಸವರಾಜ ಅಮ್ಮಣಗಿ ನೇತೃತ್ವ ವಹಿಸಿದ್ದರು.

ಕಲಾವಿದರಿಂದಲೇ ರಂಗ ಚಳುವಳಿ ಬೆಳೆಸುವ ಕೆಲಸವಾಗಬೇಕು: ನಟ ಮಂಡ್ಯ ರಮೇಶ್

5 ತಾಸು ನಿರಂತರ ವಿದ್ಯುತ್ ಪೂರೈಸುವ ಭರವಸೆ: ಮನವಿ ಸ್ವೀಕರಿಸಿ ಮಾತನಾಡಿದ ಹೆಸ್ಕಾಂ ರಬಕವಿ ಕೇಂದ್ರದ ಕಾರ್ಯ ಪಾಲಕ ಅಭಿಯಂತರ, ರಾಜ್ಯದಲ್ಲಿ ಮಳೆಯಾಗದ ಕಾರಣ ಜಲ ವಿದ್ಯುತ್ ಕ್ಷಾಮ ಉಂಟಾಗಿದೆ. ನೆರೆಯ ರಾಜ್ಯಗಳು ವಿದ್ಯುತ್ ನೀಡಲು ಮುಂದಾಗದ ಕಾರಣ ಅಭಾವ ಸೃಷ್ಟಿಯಾಗಿದೆ. ಕೆಲವೇ ವಾರದಲ್ಲಿ ಸಕ್ಕರೆ ಕಾರ್ಖಾನೆಗಳು ಕಾರ್ಯಾರಂಭ ಮಾಡುವುದರಿಂದ ಮುಂಬರುವ ದಿನಗಳಲ್ಲಿ ಈ ಸಮಸ್ಯೆ ನಿವಾರಣೆಯಾಗಲಿದೆ ಎಂದು ಭರವಸೆ ನೀಡಿದರು. ಹಠ ಬಿಡದ ರೈತರು ನಮಗೆ ಎಷ್ಟು ಸಮಯ ನಿರಂತರ ವಿದ್ಯುತ್ ನೀಡುತ್ತೀರಿ ಎಂದು ಬಿಗಿಪಟ್ಟು ಹಿಡಿದಾಗ ಸದ್ಯ ಪೂರೈಕೆಯಲ್ಲಿ ಹೊಂದಾಣಿಕೆ ಮಾಡಿ 5 ತಾಸುಗಳ ಕಾಲ ನಿರಂತರ ವಿದ್ಯುತ್ ನೀಡುವ ಭರವಸೆ ನೀಡಿದರು.

click me!