* ತಮ್ಮದೇ ಸರ್ಕಾರಕ್ಕೆ ಖಡಕ್ ಎಚ್ಚರಿಕೆ ಕೊಟ್ಟ ಬಿಜೆಪಿ ಶಾಸಕ
* ನನ್ನ ತೀರ್ಮಾನ ನಾನು ಮಾಡುತ್ತೇನೆ ಎಂದು ಎಚ್ಚರಿಕೆ
* ಪರೋಕ್ಷವಾಗಿ ಬಿಜೆಪಿ ತೊರೆಯುವ ಸಂದೇಶ ರವಾನೆ
ಬೆಂಗಳೂರು, (ಆ.13): ನಮ್ಮ ಧ್ವನಿಗೆ ನಮ್ಮ ಸರ್ಕಾರದಲ್ಲೇ ಯಾಕೋ ಬೆಲೆ ಸಿಗ್ತಿಲ್ಲ ಎಂದು ತಮ್ಮದೇ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಿದ್ದ ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಇದೀಗ ಬಿಜೆಪಿಗೆ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ.
ಬೆಂಗಳೂರಿನಲ್ಲಿ ಇಂದು (ಆ.13) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಕ್ಷೇತ್ರದ ಅನುದಾನಕ್ಕಾಗಿ ಹೋರಾಟ ಮಾಡುತ್ತಿದ್ದೇನೆ. ಮುಖ್ಯಮಂತ್ರಿಗಳು ಅನುದಾನ ಕೊಡುತ್ತೇನೆಂದು ಹೇಳಿದ್ದಾರೆ. ಅನುದಾನ ಕೊಡಲಿಲ್ಲ ಅಂದರೆ ನನ್ನ ತೀರ್ಮಾನ ನಾನು ಮಾಡುತ್ತೇನೆ ಎಂದು ಪರೋಕ್ಷವಾಗಿ ಬಿಜೆಪಿ ತೊರೆಯುವ ಎಚ್ಚರಿಕೆ ರವಾನಿಸಿದರು.
ಬಿಜೆಪಿ ಸರ್ಕಾರದ ವಿರುದ್ಧ ಬಿಜೆಪಿ ಶಾಸಕನಿಂದಲೇ ಧರಣಿ: ಮೂಡಿಗೆರೆ ಶಾಸಕನ ಪ್ರತಿಭಟನೆ!
ನನಗೆ ಸರಿಯಾಗಿ ಸ್ಪಂದನೆ ಸಿಕ್ಕಿಲ್ಲ. ಈ ಬಾರಿಯೂ ಅನುದಾನ ಸಿಗಲಿಲ್ಲ ಅಂದರೆ ಬೇರೆ ತರಹ ಯೋಚನೆ ಮಾಡಬೇಕಾಗುತ್ತದೆ. ಬೇರೆ ತರಹದ ಯೋಚನೆ ಮಾಡಿಯೇ ಮಾಡುತ್ತೇನೆ ಎಂದು ಸ್ಪಷ್ಟಪಡಿಸಿದರು.
ನನ್ನ ಕ್ಷೇತ್ರದಲ್ಲಿ ಕಳೆದ ಬಾರಿ ಪ್ರವಾಹವಾಗಿತ್ತು. ಅದರಿಂದ ಆರು ಜನ ಕೊಚ್ಚಕೊಂಡು ಹೋಗಿದ್ದರು. ಮನೆಗಳಿಗೆ ಹಾನಿಯಾಗಿತ್ತು. ಕ್ಷೇತ್ರದ ಜನರು ನನ್ನ ಮೇಲೆ ದಂಗೆ ಎದ್ದೇಳುತ್ತಾರೆ. ನನ್ಮ ಕ್ಷೇತ್ರಕ್ಕೆ ಸಿಎಂ ಬಂದಿದ್ದರು. ಸಚಿವ ಆರ್. ಅಶೋಕ್ ಬಂದಿದ್ದರು. ಬಂದಾಗಲೂ ಸಮಸ್ಯೆ ಬಗೆ ಹರಿದಿಲ್ಲ ಎಂದಾದರೆ ಜನ ಪ್ರಶ್ನೆ ಮಾಡುತ್ತಾರೆ ಎಂದು ಅಸಮಾಧಾನ ಹೊರಹಾಕಿದರು.
ವಿಪಕ್ಷ ನಾಯಕ ಸಿದ್ದರಾಮಯ್ಯ, ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಕ್ಷೇತ್ರದ ಪ್ರವಾಸ ಮಾಡುತ್ತೇನೆ ಎಂದು ಹೇಳಿದ್ದಾರೆ. ಅವರ ಬಂದು ಹೋದರೆ ಎಂಪಿ ಕುಮಾರಸ್ವಾಮಿ ಕೆಲಸ ಮಾಡಿಲ್ಲ ಎಂದು ಆರೋಪ ಮಾಡುತ್ತಾರೆ ಎಂದರು.