
ಬೊಮ್ಮನಹಳ್ಳಿ (ಡಿ.09): ಗುಜರಾತ್ ಮಾದರಿಯಲ್ಲಿ ಕರ್ನಾಟಕದಲ್ಲಿ ಬಿಜೆಪಿ ಅತ್ಯಂತ ಹೆಚ್ಚು ಸ್ಥಾನವನ್ನು ಪಡೆದು ಅಧಿಕಾರಕ್ಕೆ ಬರಲಿದೆ ಎಂದು ವಿಧಾನಸಭಾ ಮುಖ್ಯ ಸಚೇತಕ ಶಾಸಕ ಎಂ.ಸತೀಶ್ ರೆಡ್ಡಿ ಹೇಳಿದರು. ಅವರ ಹುಟ್ಟುಹಬ್ಬದ ಅಂಗವಾಗಿ ಭಾನುವಾರ ಹಾಗೂ ಸೋಮವಾರ ಬೊಮ್ಮನಳ್ಳಿ ಕ್ಷೇತ್ರ ವ್ಯಾಪ್ತಿಯಲ್ಲಿ ಹಲವಾರು ಸೇವಾ ಕಾರ್ಯಕ್ರಮವನ್ನು ಕಾರ್ಯಕರ್ತರು ಹಾಗೂ ಮುಖಂಡರು ಹಮ್ಮಿಕೊಂಡಿದ್ದು, ಈ ಹಿನ್ನೆಲೆಯಲ್ಲಿ ಶುಕ್ರವಾರ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಗುಜರಾತಿನಲ್ಲಿ ಮೋದಿಯವರ ಅಭಿವೃದ್ಧಿಯ ಬಗ್ಗೆ ಜನ ಮೆಚ್ಚಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಶಾಸಕ ಸ್ಥಾನವನ್ನು ಗೆಲ್ಲಿಸಿ ಕೊಟ್ಟಿದ್ದಾರೆ. ಅದೇ ರೀತಿ ರಾಜ್ಯದಲ್ಲಿಯೂ ಕೂಡ ಬಿಜೆಪಿ ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನವನ್ನು ಪಡೆಯಲಿದೆ. ಕಾಂಗ್ರೆಸ್ ಪಕ್ಷ ಅಧಿಕಾರದ ಕನಸು ಕಾಣುತ್ತಿದೆ ಅಷ್ಟೇ ಎಂದರು. ಗುಜರಾತ್‌ನಲ್ಲಿ ಮೊದಲ ಬಾರಿಗೆ ಐತಿಹಾಸಿಕ ಗೆಲುವು ಸಾಧಿಸಿದ್ದೇವೆ. ನರೇಂದ್ರ ಮೋದಿ ಅವರ ಕಾರ್ಯಕ್ರಮಗಳನ್ನು ಜನ ಮೆಚ್ಚಿದ್ದಾರೆ. ಹಿಮಾಚಲ ಪ್ರದೇಶದಲ್ಲಿ ಕೆಲವು ಯುವಕರಿಗೆ ನಾವು ಟಿಕೆಟ್ ನೀಡಿದ್ದರಿಂದ ನಮ್ಮ ಪಕ್ಷದಿಂದ ಬಂಡಾಯ ಎದ್ದು ಚುನಾವಣೆಗೆ ಸ್ಪರ್ಧಿಸಿದ್ದರಿಂದ ಸಮಸ್ಯೆ ಆಗಿದೆ. ಅವುಗಳನ್ನು ಸರಿಪಡಿಸುವ ಕೆಲಸವನ್ನು ಪಕ್ಷ ಮಾಡಲಿದೆ ಎಂದು ತಿಳಿಸಿದರು.
ಕಾಂಗ್ರೆಸ್‌ನಲ್ಲಿ ಸೈದ್ಧಾಂತಿಕ ಬದಲಾವಣೆ ಬೇಕು: ಸತೀಶ್ ಜಾರಕಿಹೊಳಿ
ರೆಡ್ಡಿ ಸಹೋದರರು ನಮ್ಮ ಪಕ್ಷದಲ್ಲಿ ಇರುವುದರಿಂದ ಜನಾರ್ದನ ರೆಡ್ಡಿ ಪಕ್ಷ ಬಿಟ್ಟು ಹೋಗುವುದಿಲ್ಲ ಎನ್ನುವ ನಂಬಿಕೆ ಇದೆ. ಕೆಲವು ಸಮಸ್ಯೆಗಳಿಂದ ಅವರು ರಾಜಕಾರಣದಿಂದ ದೂರ ಉಳಿದಿದ್ದಾರೆ. ಆದರೆ ಈಗ ಸಕ್ರಿಯ ರಾಜಕಾರಣಕ್ಕೆ ಮರಳುತ್ತಿದ್ದು ಮುಂದಿನ ದಿನಗಳಲ್ಲಿ ಎಲ್ಲವೂ ಕೂಡ ಸರಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕಾಂಗ್ರೆಸ್ ಪಕ್ಷಕ್ಕೆ ಇಬ್ಬರು ಪ್ರಭಾವಿ ಸಚಿವರು ಸೇರ್ಪಡೆ ಆಗುತ್ತಾರೆ ಎನ್ನುವ ಹೇಳಿಕೆಗೆ ಉತ್ತರಿಸಿದ ಅವರು, ಯಾರೂ ಕೂಡ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಆಗುವ ಚರ್ಚೆ ಆಗಿಲ್ಲ. ಹಾಗೇನಾದರು ಆಗಿದ್ದರೆ ಅವರ ಹೆಸರನ್ನು ಬಹಿರಂಗಪಡಿಸಲಿ ಎಂದು ಸವಾಲು ಹಾಕಿದರು.
ಹೈಕಮಾಂಡ್ ಹೇಳಿದರೆ ವರುಣದಿಂದಲೇ ಸ್ಪರ್ಧೆ: ಸಿದ್ದರಾಮಯ್ಯ
ಹುಟ್ಟುಹಬ್ಬಕ್ಕೆ ವಿವಿಧ ಕಾರ‍್ಯಕ್ರಮ: ನನ್ನ ಹುಟ್ಟುಹಬ್ಬದ ಅಂಗವಾಗಿ ಕ್ಷೇತ್ರದ ಬಹುತೇಕ ಕಡೆ ಕ್ರೀಡಾಂಗಣ ಉದ್ಘಾಟನೆ, ಮಹಿಳಾ ಸಂಘಗಳ ಒಕ್ಕೂಟ ಉದ್ಘಾಟನೆ, ರಕ್ತದಾನ ಶಿಬಿರ, ಸರ್ಕಾರಿ ಶಾಲಾ ಕಟ್ಟಡ ಉದ್ಘಾಟನೆ, ಬಿಳೆಕಹಳ್ಳಿಯಲ್ಲಿ ಕ್ರೀಡಾಂಗಣ ಉದ್ಘಾಟನೆಗೆ ಐದು ಸಾವಿರಕ್ಕೂ ಹೆಚ್ಚು ಜನ ಸೇರಲಿದ್ದಾರೆ ಎಂದು ಸತೀಶ್ ರೆಡ್ಡಿ ಮಾಹಿತಿ ನೀಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.