‘ಹೊಸಬರಿಗೆ ಅವಕಾಶ ನೀಡುವ ಮಾಡೆಲ್ ಕರ್ನಾಟಕಕ್ಕೆ ಮಾದರಿಯಾಗಲಿ. ಅತಿ ಹೆಚ್ಚು ಬಾರಿ ಗೆದ್ದವರು ಅಥವಾ ವಯಸ್ಸಿನಲ್ಲಿ ಹಿರಿಯರು ಎನ್ನುವ ಕಾರಣಕ್ಕೆ ಟಿಕೆಟ್ ನೀಡದೆ ಹೊಸಬರಿಗೆ ಅವಕಾಶ ನೀಡಬೇಕು’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಮಹತ್ವದ ಹೇಳಿಕೆ ನೀಡಿದ್ದಾರೆ.
ಬೆಂಗಳೂರು (ಡಿ.09): ‘ಹೊಸಬರಿಗೆ ಅವಕಾಶ ನೀಡುವ ಮಾಡೆಲ್ ಕರ್ನಾಟಕಕ್ಕೆ ಮಾದರಿಯಾಗಲಿ. ಅತಿ ಹೆಚ್ಚು ಬಾರಿ ಗೆದ್ದವರು ಅಥವಾ ವಯಸ್ಸಿನಲ್ಲಿ ಹಿರಿಯರು ಎನ್ನುವ ಕಾರಣಕ್ಕೆ ಟಿಕೆಟ್ ನೀಡದೆ ಹೊಸಬರಿಗೆ ಅವಕಾಶ ನೀಡಬೇಕು’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಮಹತ್ವದ ಹೇಳಿಕೆ ನೀಡಿದ್ದಾರೆ. ಗುಜರಾತ್ ಚುನಾವಣೆ ಫಲಿತಾಂಶದ ಬಗ್ಗೆ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುಜರಾತ್‌ನಲ್ಲಿ ಬಿಜೆಪಿಯು ಹೊಸಬರಿಗೆ ಅವಕಾಶ ನೀಡಿದ ಮಾದರಿಯನ್ನು ಸಮರ್ಥಿಸಿದರು.
‘ನಮ್ಮಲ್ಲಿ ಅಭ್ಯರ್ಥಿಗಳ ಆಯ್ಕೆಯಲ್ಲೂ ಬದಲಾವಣೆ ಆಗಬೇಕಿದೆ. ಹಲವು ಬಾರಿ ಗೆದ್ದವರಿಗೆ ಟಿಕೆಟ್ ನೀಡುವ ಬಗ್ಗೆ ಮರು ಚಿಂತನೆ ಆಗಬೇಕು. ಎಂಟು ಬಾರಿ ಟಿಕೆಟ್ ಕೊಟ್ಟಿದ್ದೇವೆ, 9ನೇ ಬಾರಿಯೂ ಟಿಕೆಟ್ ಕೊಡಲು ಮುಂದಾಗಿದ್ದೇವೆ ಎಂಬುದು ಬದಲಾಗಬೇಕು. ಹಲವು ಬಾರಿ ಗೆದ್ದಿದ್ದಾರೆ ಎನ್ನುವ ಕಾರಣಕ್ಕೆ ಅವಕಾಶ ಬೇಡ’ ಎಂದು ಸ್ಪಷ್ಟಪಡಿಸಿದ್ದಾರೆ. ಜತೆಗೆ ‘ಅತಿ ಹೆಚ್ಚು ಬಾರಿ ಗೆದ್ದವರು ಅಥವಾ ಹಿರಿಯರು ಎನ್ನುವಂತಹವರಿಗೆ ಪರಿಷತ್‌ಗೆ ಕಳುಹಿಸಿಕೊಡಿ. ಹೊಸಬರಿಗೆ ವಿಧಾನಸಭೆ ಚುನಾವಣೆಗೆ ಅವಕಾಶ ನೀಡಬೇಕು. ಇದನ್ನು ಪಕ್ಷದ ವೇದಿಕೆಯಲ್ಲೂ ಹೇಳಿದ್ದೇನೆ’ ಎಂದರು. ತನ್ಮೂಲಕ ಓಲೈಕೆ ರಾಜಕಾರಣದ ನಕಾರಾತ್ಮಕ ಪರಿಣಾಮದ ಬಗ್ಗೆ ಎಚ್ಚರಿಸಿದರು.
ಎತ್ತಿನಹೊಳೆ ವೆಚ್ಚ ಡಬಲ್: ಪರಿಷ್ಕೃತ ಯೋಜನಾ ವೆಚ್ಚಕ್ಕೆ ಸಚಿವ ಸಂಪುಟ ಸಭೆ ಒಪ್ಪಿಗೆ
ಕಾಂಗ್ರೆಸ್‌ನಲ್ಲಿ ಸೈದ್ಧಾಂತಿಕ ಬದಲಾವಣೆ ಬೇಕು: ಜತೆಗೆ ಕಾಂಗ್ರೆಸ್ ಸೈದ್ಧಾಂತಿಕವಾಗಿ ಕೆಲವು ಬದಲಾವಣೆ ಮಾಡಬೇಕಾಗುತ್ತದೆ. ಅದು ಪಕ್ಷದ ವೇದಿಕೆಯಲ್ಲಿ ಚರ್ಚೆಯಾಗಿದೆ. ನಾವು ಮುಸ್ಲಿಂ ಸಮುದಾಯವನ್ನು ತೀರಾ ಓಲೈಕೆ ಮಾಡುವುದಿಲ್ಲ. ಎಸ್ಸಿ, ಎಸ್ಟಿಸಮುದಾಯಗಳನ್ನೂ ಸಹ ಸಮಾನವಾಗಿ ಕಾಣುತ್ತೇವೆ ಎಂದು ಹೇಳಿದರು.
ಗುಜರಾತ್ ಫಲಿತಾಂಶ ಪರಿಣಾಮ ಬೀರಲ್ಲ: ಗುಜರಾತ್ ಫಲಿತಾಂಶ ರಾಜ್ಯದ ಚುನಾವಣೆ ಮೇಲೆ ಪರಿಣಾಮ ಬೀರುತ್ತದೆಯೇ ಎಂಬ ಪ್ರಶ್ನೆಗೆ, ‘ಇಲ್ಲಿನ ಸಂಸ್ಕೃತಿ, ರಾಜಕೀಯ ಬೇರೆ ಇದೆ. ಅಲ್ಲಿನ ಸಂಸ್ಕೃತಿ, ರಾಜಕೀಯ ಹಾಗೂ ಆಚಾರ-ವಿಚಾರ ಬೇರೆ. ಉತ್ತರ ಭಾರತ ಚುನಾವಣೆಯ ಮಾದರಿಗೂ ದಕ್ಷಿಣ ಭಾರತದ ಚುನಾವಣೆ ಮಾದರಿಗೂ ಸಾಕಷ್ಟುವ್ಯತ್ಯಾಸವಿದೆ. ಹೀಗಾಗಿ ಗುಜರಾತ್ ಫಲಿತಾಂಶ ರಾಜ್ಯದ ಚುನಾವಣೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಅಭಿಪ್ರಾಯಪಟ್ಟರು.
ಎಲ್ಲ ಲೆಕ್ಕಾಚಾರ ತಪ್ಪಾಗಲಿಕ್ಕೆ ಹೇಗೆ ಸಾಧ್ಯ?: ನಮ್ಮ ನಿರೀಕ್ಷೆ ಗೆಲ್ಲುತ್ತೇವೆ, ಸರ್ಕಾರ ಮಾಡ್ತೀವಿ ಎಂದು ಇರಲಿಲ್ಲ. ಆದರೆ, ಇಷ್ಟುಕಡಿಮೆ ಮಟ್ಟದ ಪ್ರತಿಫಲ ದೊರಕುತ್ತದೆ, ಈ ರೀತಿಯ ಸೋಲಾಗುತ್ತದೆ ಎಂದು ಕೊಂಡಿರಲಿಲ್ಲ. ಸೋಲು ಗಮನಿಸಿದಾಗ ಮತ್ತೆ ಆತ್ಮಾವಲೋಕನ ಮಾಡಿಕೊಳ್ಳಬೇಕು. ಮಾಧ್ಯಮದಲ್ಲಿ 60ರಿಂದ 70 ಸೀಟ್ ಬರುತ್ತೆ ಎಂದು ಊಹಿಸಲಾಗಿತ್ತು. ಎಲ್ಲ ಲೆಕ್ಕಾಚಾರ ತಪ್ಪಾಗಲಿಕ್ಕೆ ಹೇಗೆ ಸಾಧ್ಯ?
ಪ್ರಜಾಪ್ರಭುತ್ವದಲ್ಲಿ ವಿಶ್ವಾಸವಿರುವವರು ಅವಲೋಕನ ಮಾಡಬೇಕಾಗಿದೆ ಎಂದು ಶಾಸಕ ಎಚ್.ಕೆ. ಪಾಟೀಲ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಮಾಚಲ ಪ್ರದೇಶದಲ್ಲಿ ಮಾಧ್ಯಮದ ಸರ್ವೇ ಅಂದಾಜಿನ ಪ್ರಕಾರ ಫಲಿತಾಂಶ ಬಂದಿದೆ. ಗುಜರಾತ್, ಹಿಮಾಚಲ ಪ್ರದೇಶ ಚುನಾವಣೆ ಪರಿಣಾಮ ಮುಂಬರುವ ರಾಜ್ಯದ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಬೀಳುತ್ತದೆ ಎಂದು ನಾನು ನಂಬುವುದಿಲ್ಲ. ಗುಜರಾತ್ ರಾಜಕೀಯ ಬೇರೆ, ಕರ್ನಾಟಕ ರಾಜಕೀಯವೇ ಬೇರೆ. ಚುನಾವಣಾ ಆಯೋಗ ಸ್ವಲ್ಪ ಮಟ್ಟಿಗಾದರೂ ಅವಲೋಕನ ಮಾಡಬೇಕು.
ರಾಜ್ಯಪಾಲರ ಆಗಮನದ ವೇಳೆ ಅಂಜನಾದ್ರಿಯಲ್ಲಿ ಪೂಜೆಗೆ ಪಟ್ಟು ಹಿಡಿದ ಅರ್ಚಕ ವಿದ್ಯಾದಾಸ ಬಾಬಾ
ಕಾನೂನಾತ್ಮಕವಾಗಿ ಹೇಗೆ ಸಾಧ್ಯವಾಗುತ್ತದೆ ಎನ್ನುವುದು ಗೊತ್ತಿಲ್ಲ. ಸತತವಾಗಿ ಗುಜರಾತ್‌ನಲ್ಲಿ ಬಿಜೆಪಿ ಜಯಗಳಿಸಿದೆ. ಪ್ರಜಾಪ್ರಭುತ್ವದಲ್ಲಿ ಅಧಿಕಾರ ವಿರೋಧಿ ಅಲೆ ಥಿಯೇರಿ ತಪ್ಪಾ? ಯಾವುದೇ ಸರ್ಕಾರದ ವಿರುದ್ಧ ವಿರೋಧ ಇಲ್ಲವಾದರೆ ಚುನಾವಣಾ ಆಯೋಗ ಪರಿಸ್ಥಿತಿಗೆ ಹೊಂದಾಣಿಕೆ ಮಾಡಿಕೊಂಡಿದೆ ಎಂದು ಭಾವಿಸಬೇಕು. ಗುಜರಾತ್ ರಾಜ್ಯದ ಚುನಾವಣೆ ಅಧ್ಯಯನ, ವಿಶ್ಲೇಷಣೆ ಮಾಡಬೇಕು. ಪ್ರಜಾಪ್ರಭುತ್ವದ ಒಳಿತಿಗೆ ಅಧ್ಯಯನ ವಿಶ್ಲೇಷಣೆ ಅಗತ್ಯ ಎಂದರು.