ಕಾಂಗ್ರೆಸ್ ಶಾಸಕರೇ ಬೇಸರದಲ್ಲಿದ್ದಾಗ ರಾಜ್ಯ ಸರ್ಕಾರದ ವೈಫಲ್ಯಗಳನ್ನು ಮುಚ್ಚಿ ಹಾಕಿಕೊಳ್ಳಲು ಬಿಜೆಪಿಯವರ ಬಗ್ಗೆ ಅನಗತ್ಯ ಹೇಳಿಕೆಗಳನ್ನು ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳು ನೀಡುತ್ತಿದ್ದಾರೆ ಎಂದು ಆರೋಪಿಸಿದ ಶಾಸಕ ಬಿ.ವೈ.ವಿಜಯೇಂದ್ರ
ಬೀದರ್(ನ.09): ಶಾಸಕರಿಗೆ ಕ್ಷೇತ್ರದ ಅಭಿವೃದ್ಧಿಗಾಗಿ ಬಿಡಿಗಾಸನ್ನೂ ಕೊಡದ ರಾಜ್ಯ ಸರ್ಕಾರದ ವರ್ತನೆಗೆ ಅವರ ಶಾಸಕರೇ ಬೇಸತ್ತು ಕಾಂಗ್ರೆಸ್‌ಗೆ ರಾಜಿನಾಮೆ ನೀಡಿ ಹೊರಬಂದಲ್ಲಿ ಅಚ್ಚರಿಪಡಬೇಕಿಲ್ಲ, ಇಂತಹ ಸಂದರ್ಭ ಸೃಷ್ಟಿಯಾಗುತ್ತಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ, ಶಾಸಕ ಬಿ.ವೈ.ವಿಜಯೇಂದ್ರ ಹೇಳಿದರು.
ಬೀದರ್ ದಕ್ಷಿಣ ಕ್ಷೇತ್ರದ ಬಾಪೂರ ಕ್ರಾಸ್ ಬಳಿ ಮತ್ತು ಬೈರನಳ್ಳಿ ಗ್ರಾಮದಲ್ಲಿ ಬರ ಪರಿಸ್ಥಿತಿ ಪರಿಶೀಲನೆ ನಡೆಸಿ ಔರಾದ್ (ಎಸ್) ಗ್ರಾಮದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಶಾಸಕರೇ ಬೇಸರದಲ್ಲಿದ್ದಾಗ ರಾಜ್ಯ ಸರ್ಕಾರದ ವೈಫಲ್ಯಗಳನ್ನು ಮುಚ್ಚಿ ಹಾಕಿಕೊಳ್ಳಲು ಬಿಜೆಪಿಯವರ ಬಗ್ಗೆ ಅನಗತ್ಯ ಹೇಳಿಕೆಗಳನ್ನು ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳು ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಬಿಜೆಪಿ ಅಧಿಕಾರಕ್ಕಾಗಿ ಯಾವ ಮಟ್ಟಕ್ಕಾದ್ರೂ ಇಳಿಬೋದು: ಸಚಿವ ಸಂತೋಷ್ ಲಾಡ್
ತೀವ್ರ ಬರಗಾಲವಿದೆ, ಆದರೆ ರಾಜ್ಯ ಸರ್ಕಾರ ಕಣ್ಣಿದ್ದರೂ ಕುರುಡನಂತೆ ವರ್ತಿಸುತ್ತಿದೆ. ಆನೆ ನಡೆದಿದ್ದೆ ದಾರಿ ಎಂಬಂತೆ ಅಧಿಕಾರದ ದರ್ಪ. 136 ಶಾಸಕರನ್ನು ಗೆದ್ದು ಬಿಟ್ಟಿದ್ದೇವೆ ನಾವು ನಡೆದಿದ್ದೇ ದಾರಿ ಎಂದು ದುರಹಂಕಾರದಲ್ಲಿ ರಾಜ್ಯ ಸರ್ಕಾರ ನಡೆಯುತ್ತಿದೆ. ನಾಡಿನ ರೈತರ ಸಂಕಷ್ಟಕ್ಕೆ ಸ್ಪಂದಿಸದಿರುವದು ಸರ್ಕಾರಕ್ಕೆ ಶೋಭೆ ತರುವಂಥದ್ದಲ್ಲ ಎಂದರು.
ಗ್ಯಾರಂಟಿಗಳಿಂದಾಗಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದು, ಕಳೆದ ಐದಾರು ತಿಂಗಳಲ್ಲಿಯೇ ದೇಶದ ಯಾವುದೇ ಪಕ್ಷದ ರಾಜ್ಯ ಸರ್ಕಾರ ಕಳೆದುಕೊಳ್ಳದಷ್ಟು ಜನಪ್ರಿಯತೆಯನ್ನು ಇದು ಕಳೆದುಕೊಂಡಿದೆ. ಕಾಂಗ್ರೆಸ್ ಸರ್ಕಾರಕ್ಕೆ ರಾಜ್ಯದ ಜನ ಶಾಪ ಹಾಕುತ್ತಿದ್ದಾರೆ. ಕ್ಷೇತ್ರದ ಅಭಿವೃದ್ಧಿಗೆ ಬಿಡಿಗಾಸನ್ನೂ ಕೊಡದೇ ಆಡಳಿತ ಪಕ್ಷದ ಶಾಸಕರೇ ತಲೆ ಎತ್ತಿಕೊಂಡು ಓಡಾಡದಂಥ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವ್ಯಂಗ್ಯವಾಡಿದರು.
ಸಾಲಕ್ಕೆ ಹೆದರಿ ಆತ್ಮಹತ್ಯೆಗೆ ಶರಣಾಗಬೇಡಿ: ಸಚಿವ ಈಶ್ವರ ಖಂಡ್ರೆ
ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳು ದಿಕ್ಕು ತಪ್ಪಿವೆ:
ಹಣ ಹೊಂದಿಸಲಾಗದೇ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳು ದಿಕ್ಕು ತಪ್ಪಿವೆ. ಹಳ್ಳ ಹಿಡಿಯುತ್ತಿರುವುದು ಕಾಣುತ್ತಿದ್ದೇವೆ. ಬರಗಾಲದ ಸಂದರ್ಭದಲ್ಲಿ 33 ಸಾವಿರ ಕೋಟಿ ರು. ಬೆಳೆ ನಷ್ಟ ಆಗಿದೆ. 17 ಸಾವಿರ ಕೋಟಿ ರು, ಬೇಕು ಎಂದು ಕೇಂದ್ರ ಸರ್ಕಾರಕ್ಕೆ ಕೇಳಿರುವ ರಾಜ್ಯ ಸರ್ಕಾರ ತಮ್ಮ ಕರ್ತವ್ಯವನ್ನೇ ಮರೆತುಬಿಟ್ಟಿದೆ. ಬರ ಪರಿಹಾರದ ವಿಚಾರದಲ್ಲಿ ಶೇ.1ರಷ್ಟು ಹಣವನ್ನೂ ವಿನಿಯೋಗ ಮಾಡಿಲ್ಲ. ಈಗ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ದೇಶದ ಬಹುತೇಕ ರಾಜ್ಯಗಳಲ್ಲಿ ಬರ ಆವರಿಸಿದೆ. ಎಲ್ಲ ರಾಜ್ಯಗಳಿಂದ ಬರದ ವರದಿ ತರಿಸಿಕೊಂಡು ಕೇಂದ್ರ ಸರ್ಕಾರ ಪರಿಹಾರ ಬಿಡುಗಡೆ ಮಾಡುತ್ತದೆ. ಕೇಂದ್ರಕ್ಕೆ ಈಗ ವರದಿ ಹೋಗಿದೆ. ಅದರ ಆಧಾರದ ಮೇಲೆ ಪರಿಹಾರ ಘೋಷಣೆ ಮಾಡಲಾಗುತ್ತದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಸೇರಿದಂತೆ ಮತ್ತಿತರ ಮುಖಂಡರು ಇದ್ದರು.