ಸಿಎಂ ವಿರುದ್ಧ ನಾವು ಷಡ್ಯಂತ್ರ ಮಾಡಿಲ್ಲ; ಮುಡಾ ಹಗರಣ ಬಯಲು ಮಾಡಿದ್ದೇ ಕಾಂಗ್ರೆಸ್‌ನವರು: ಯತ್ನಾಳ್

By Kannadaprabha NewsFirst Published Sep 30, 2024, 12:38 PM IST
Highlights

ರಾಜ್ಯದಲ್ಲಿ ಮುಖ್ಯಮಂತ್ರಿ ಆಗಲು ₹1,200 ಕೋಟಿ ಇಟ್ಟುಕೊಂಡು ಕಾದು ಕೂತವರು ಕಾಂಗ್ರೆಸ್‌ ಪಕ್ಷದಲ್ಲೂ ಇದ್ದಾರೆ, ಬಿಜೆಪಿಯಲ್ಲೂ ಇದ್ದಾರೆ ಎಂದು ವಿಜಯಪುರ ಕ್ಷೇತ್ರ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಹೇಳಿದರು.

ದಾವಣಗೆರೆ (ಸೆ.30) : ರಾಜ್ಯದಲ್ಲಿ ಮುಖ್ಯಮಂತ್ರಿ ಆಗಲು ₹1,200 ಕೋಟಿ ಇಟ್ಟುಕೊಂಡು ಕಾದು ಕೂತವರು ಕಾಂಗ್ರೆಸ್‌ ಪಕ್ಷದಲ್ಲೂ ಇದ್ದಾರೆ, ಬಿಜೆಪಿಯಲ್ಲೂ ಇದ್ದಾರೆ ಎಂದು ವಿಜಯಪುರ ಕ್ಷೇತ್ರ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಹೇಳಿದರು.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಗ್ಯಾರಂಟಿಯಿಂದ ಕಾಂಗ್ರೆಸ್ ಸರ್ಕಾರ ಸಂಪೂರ್ಣ ದಿವಾಳಿಯಾಗಿದೆ. ಕಾಂಗ್ರೆಸ್ ಸರ್ಕಾರ ವಿಸರ್ಜನೆಯಾದ ನಂತರ ಚುನಾವಣೆ ನಡೆದು ನಮ್ಮ ಪಕ್ಷವೇ ಅಧಿಕಾರಕ್ಕೆ ಬರುತ್ತದೆ. ನಾನು ಮುಖ್ಯಮಂತ್ರಿ ಆಗಬೇಕು. ನಾನು ಮುಖ್ಯಮಂತ್ರಿ ಆಗಲೇಬೇಕು ಅಂತ ಕೆಲವರು ತುದಿಗಾಲ ಮೇಲೆ ನಿಂತಿದ್ದಾರೆ ಎಂದು ಯಾರ ಹೆಸರನ್ನೂ ಪ್ರಸ್ತಾಪಿಸದೆ ಯತ್ನಾಳ್‌ ಕುಟುಕಿದರು.

Latest Videos

ಬಿಜೆಪಿ ಅತೃಪ್ತರಿಂದ 3ನೇ ಭಿನ್ನಮತೀಯ ಸಭೆ; ನನಗೆ ಇದು ಹೊಸದೇನಲ್ಲ ಎಂದ ವಿಜಯೇಂದ್ರ

ನಮ್ಮಲ್ಲೂ ದುಡ್ಡು ಇರುವಂತಹ ಕೆಲವರಿಗೆ ಕುದುರೆ ವ್ಯಾಪಾರದ ಆಸೆ ಇರಬಹುದು. ಭ್ರಷ್ಟಾಚಾರದಿಂದ ಮಾಡಿದ ಹಣ ಅಂಥವರಲ್ಲಿ ಇರಬಹುದು. ಏಕೆಂದರೆ ನೋಟು ಎಣಿಸುವ ಯಂತ್ರಗಳು ಸಿಕ್ಕಿದ್ದೂ ನಿಮಗೆ ಗೊತ್ತಿದೆ. ಆದರೆ, ಕುದುರೆ ವ್ಯಾಪಾರಕ್ಕೆ ನಮ್ಮ ಹೈಕಮಾಂಡ್ ಒಪ್ಪುವುದಿಲ್ಲ ಎಂದರು.

ಸಿದ್ದರಾಮಯ್ಯನವರ ವಿರುದ್ಧ ನಾವೇನೂ ಷಡ್ಯಂತ್ರ ಮಾಡುತ್ತಿಲ್ಲ. ಮುಡಾ ಹಗರಣದ ದಾಖಲೆ ನೀಡಿ, ಅದನ್ನು ಹೊರ ತೆಗೆದಿದ್ದೇ ಕಾಂಗ್ರೆಸ್‌ನವರು. ಇದರ ಬೆನ್ನಲ್ಲೇ ಇದೀಗ ಅದೇ ಕಾಂಗ್ರೆಸ್ಸಿಗರು ಅರ್ಕಾವತಿ ಅಸ್ತ್ರ ಪ್ರಯೋಗಿಸುತ್ತಿದ್ದಾರೆ. ಅರ್ಕಾವತಿಗೆ ಸಂಬಂಧಿಸಿದ ದಾಖಲೆಗಳನ್ನೂ ಅದೇ ಕಾಂಗ್ರೆಸ್ಸಿಗರೇ ಒದಗಿಸುತ್ತಿದ್ದಾರೆ. ನಂತರ ಮಲ್ಲಿಕಾರ್ಜುನ ಖರ್ಗೆಯವರ 5 ಎಕರೆ ಜಮೀನು ವಿವಾದ ತೆಗೆದಿದ್ದು ಅದೇ ಕಾಂಗ್ರೆಸ್ಸಿಗರು. ಕಾಂಗ್ರೆಸ್‌ನವರು ತಂದು ಕೊಟ್ಟ ದಾಖಲೆಗಳನ್ನು ಹಿಡಿದುಕೊಂಡೇ ನಾವು ಹೋರಾಟ ಮಾಡಿದ್ದೇವೆ. ಮುಖ್ಯಮಂತ್ರಿಯವರ ಸೈಟ್‌ಗಳ ಹಗರಣದ ದಾಖಲೆಗಳನ್ನು ಕೊಟ್ಟು, ಮೈಸೂರಿಗೆ ಪಾದಯಾತ್ರೆ ಮಾಡಿಸಿದ್ದೂ ಅದೇ ಕಾಂಗ್ರೆಸ್ಸಿನವರು ಎಂದು ಯತ್ನಾಳ್‌ ದೂರಿದರು.

ಕಾಂಗ್ರೆಸ್ಸಿನಲ್ಲಿ ಸಿದ್ದರಾಮಯ್ಯನವರನ್ನು ಮುಖ್ಯಮಂತ್ರಿ ಸ್ಥಾನದಿಂದ ಇಳಿಸುವ ಆಟ ಜೋರಾಗಿ ನಡೆಯುತ್ತಿದೆ. ಸಿದ್ದರಾಮಯ್ಯ ಪರಿಸ್ಥಿತಿ ಈಗ ಏನಾಗಿದೆ?. ಹೈಕೋರ್ಟ್ಗೆ ಹೋಗದೇ ಇದ್ದಿದ್ದರೂ ಪ್ರಾಸಿಕ್ಯೂಷನ್ ಆಗುತ್ತಿತ್ತು. ಎಫ್ಐಆರ್‌ ದಾಖಲಾಗುತ್ತಿತ್ತು. ಸಿದ್ದರಾಮಯ್ಯರನ್ನು ಕುರ್ಚಿಯಿಂದ ಕೆಳಗಿಳಿಸುವ ಕೆಲಸ ಕಾಂಗ್ರೆಸ್‌ನವರಿಂದಲೇ ಆಗುತ್ತಿದೆ. ಸಿದ್ದರಾಮಯ್ಯನವರ ಹಿಂದೆ ಇದ್ದವರೇ ಈಗ ತಾವೇ ಮುಖ್ಯಮಂತ್ರಿ ಎನ್ನುತ್ತಿದ್ದಾರೆ ಎಂದು ಯತ್ನಾಳ್ ಕುಟುಕಿದರು.

ಬಿಜೆಪಿಯಿಂದ ಮುಂದಿನ ಮುಖ್ಯಮಂತ್ರಿ ನಾನೇ: ಯತ್ನಾಳ್

ರಾಜ್ಯಾಧ್ಯಕ್ಷರ ಬದಲಾವಣೆಗೆ ಪಟ್ಟು ಹಿಡಿದಿಲ್ಲ: ‘ಯತ್ನಾಳ್‌ರಿಂದ ನಾನು ಕಲಿಯಬೇಕಾಗಿಲ್ಲ’ ಎಂಬ ಬಿ.ವೈ.ವಿಜಯೇಂದ್ರ ಹೇಳಿಕೆಗೆ ತಿರುಗೇಟು ನೀಡಿದ ಯತ್ನಾಳ್‌, ಬಿಜೆಪಿ ರಾಜ್ಯಾಧ್ಯಕ್ಷರಿಗೆ ಚಿತ್ರದುರ್ಗದಲ್ಲಿ ಒಂದು ಸಂಸ್ಕಾರ ಆಗಿದೆ. ಇನ್ನೊಂದು ಅವರದ್ದೇ ಮನೆಯಲ್ಲಿ ಆಗಿದೆ. ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆಗೆ ನಾವು ಪಟ್ಟು ಹಿಡಿದಿಲ್ಲ. ಅದರ ಬಗ್ಗೆ ಚರ್ಚೆಯೂ ಆಗಿಲ್ಲ. ನಾವು 38 ಜನ ಎಲ್ಲಿ ಹೇಳಬೇಕೋ ಅಲ್ಲಿಯೇ ಹೇಳಿದ್ದೇವೆ. ಮುಂದಿನ ಕ್ರಮ ಏನು ಕೈಗೊಳ್ಳಬೇಕೆಂಬುದು ಹೈಕಮಾಂಡ್‌ಗೆ ಬಿಟ್ಟ ವಿಚಾರ. ಬಹಿರಂಗವಾಗಿ ಮಾತನಾಡದಂತೆ ಹೈಕಮಾಂಡ್ ಸೂಚನೆ ನೀಡಿದೆ. ನಮ್ಮ ವರಿಷ್ಠರು ಯೋಗ್ಯ ನಿರ್ಣಯ ಕೈಗೊಳ್ಳುತ್ತಾರೆಂಬ ವಿಶ್ವಾಸವಿದೆ ಎಂದರು

click me!