ಸದಾ ಒಂದಿಲ್ಲೊಂದು ಕಾರಣಕ್ಕೆ ಬಿಎಸ್ ಯಡಿಯೂರಪ್ಪ ವಿರುದ್ಧ ಕಿಡಿಕಾರುತ್ತಾ ಬಂದಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಇದೀಗ ಜಿಲ್ಲೆಗೆ ತಾರತಮ್ಯ ಬಗ್ಗೆ ಸದನದಲ್ಲಿ ಗುಡುಗಿದರು.
ಬೆಂಗಳೂರು, (ಮಾ.17): ವಿಧಾನಸೌಧ: ವಿಜಯಪುರ ಜಿಲ್ಲೆಗೆ ವಿಮಾನ ನಿಲ್ದಾಣದ ಅವಶ್ಯಕತೆ ಇದೆ. ಅಲ್ಲದೆ ವಿಜಯಪುರ ಐತಿಹಾಸಿಕ ನಗರ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಅವರು ಸದನದಲ್ಲಿ ಪ್ರಸ್ತಾಪ ಮಾಡಿದರು.
ಸದನದಲ್ಲಿಂದು ಮಾಧ್ಯಮದ ಜೊತೆ ಮಾತನಾಡಿದ ಅವರು, ವಿಜಯಪುರಕ್ಕೆ 217 ಕೋಟಿ ಕೊಟ್ಟಿದ್ದಾರೆ. ಆದರೆ, ಶಿವಮೊಗ್ಗಕ್ಕೆ 320 ಕೋಟಿ ಕೊಟ್ಟಿದ್ದಾರೆ. ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣ. ಈ ತಾರತಮ್ಯ ಸಲ್ಲದು, ನಮಗೂ ಸಮಾನ ಅನುದಾನಬೇಕು ಎಂದು ಯತ್ನಾಳ್ ಸರ್ಕಾರಕ್ಕೆ ಆಗ್ರಹಿಸಿದರು.
ಜಾರಕಿಹೊಳಿ ಸೆಕ್ಸ್ CD: ಸಂತ್ರಸ್ತ ಯುವತಿಯ ಭಾಷೆ ವ್ಯತ್ಯಾಸ ಕಂಡು ಹಿಡಿದ ಯತ್ನಾಳ್
ಯತ್ನಾಳ್ ಪ್ರಶ್ನೆಗೆ ಉತ್ತರಿಸಿದ ಮೂಲಸೌಕರ್ಯ ಸಚಿವ ಆನಂದ್ ಸಿಂಗ್ ಅವರು, ಶಿವಮೊಗ್ಗದಂತೆ ರಾಜ್ಯದ ಎಲ್ಲ ಜಿಲ್ಲೆಗೆ ವಿಮಾನಗಳು ಬೇಕು. ಶಿವಮೊಗ್ಗ, ವಿಜಯಪುರಕ್ಕೆ ತಾರತಮ್ಯ ಮಾಡಿಲ್ಲ, ಸಿಎಂ ಜೊತೆ ಮಾತನಾಡಿ ಸಮಸ್ಯೆ ಬಗೆಹರಿಸುತ್ತೇನೆ. ತಾಂತ್ರಿಕ ಕಾರಣದಿಂದ ಕಷ್ಟವಾಗುತ್ತಿದೆ ಎಂದು ಸ್ಪಷ್ಟನೆ ನೀಡಿದರು.
ಆನಂದ್ ಸಿಂಗ್ ಪ್ರತಿಕ್ರಿಯೆಗೆ ಮತ್ತೆ ಯತ್ನಾಳ್ ಅಸಮಾಧಾನ ವ್ಯಕ್ತಪಡಿಸಿದ್ದು, ಶಿವಮೊಗ್ಗ, ವಿಜಯಪುರಕ್ಕೆ ತಾರತಮ್ಯ ಬೇಡ. ಶಿವಮೊಗ್ಗಕ್ಕೆ ಕೊಡುವ ಅನುದಾನ ಇಲ್ಲಿಗೂ ಕೊಡಿ. ಅಲ್ಲೇನು ಸಮತಟ್ಟಾಗಿಲ್ಲ, ಶಿವಮೊಗ್ಗಕ್ಕೆ ಒಂದು ನಮಗೊಂದು ರೀತಿ ಯಾಕೆ ಮಾಡುತ್ತೀರಿ ಎಂದು ಪ್ರಶ್ನಿಸಿದರು.
ವಿಜಯಪುರ ನಿಲ್ದಾಣಕ್ಕೂ ಸಮಾನ ಅನುದಾನ ಕೊಡಿ. ಹೈಟೆನ್ಶನ್ ವೈರ್ ಕಾರಣ ಕೊಡಬೇಡಿ. ಶಿಫ್ಟ್ ಮಾಡೋಕೆ 15.20 ಕೋಟಿ ಖರ್ಚು ಆಗಬಹುದು. ಎಲ್ಲವನ್ನೂ ಶಿವಮೊಗ್ಗಕ್ಕೆ ಕೊಡ್ತೀರ ಎಂದು ಯತ್ನಾಳ್ ಅವರು ಸದನದಲ್ಲಿ ಅಸಮಾಧಾನ ಹೊರಹಾಕಿದರು.