100 ಕ್ಷೇತ್ರ ಹೊಣೆಗೆ ಬಿಜೆಪಿ ಭಿನ್ನರ ಬೇಡಿಕೆ: ವಿಜಯೇಂದ್ರ ಬಲಹೀನಕ್ಕೆ ಭಾರೀ ಪ್ಲ್ಯಾನ್‌!

By Girish Goudar  |  First Published Jan 10, 2025, 6:43 AM IST

ವಿಜಯೇಂದ್ರ ಅವರ ಬದಲಾವಣೆ ಸದ್ಯಕ್ಕೆ ಕಷ್ಟ ಎಂಬ ನಿಲುವಿಗೆ ಬಂದಿರುವ ಬಿಜೆಪಿಯ ಯತ್ನಾಳ ಬಣದ ಮುಖಂಡರು ಮುಂದಿನ ಚುನಾವಣೆ ಹೊತ್ತಿಗೆ ವಿಜಯೇಂದ್ರರನ್ನು ಬಲಹೀನಗೊಳಿಸಿ, ತಾವು ಮೇಲುಗೈ ಸಾಧಿಸಲು ತಂತ್ರ ರೂಪಿಸುತ್ತಿದ್ದಾರೆ. ಆ ತಂತ್ರದ ಭಾಗವಾಗಿ ಕ್ಷೇತ್ರಗಳ ಜವಾಬ್ದಾರಿ ಕೇಳಲು ಮುಂದಾಗಿದ್ದಾರೆ. 


ಬೆಂಗಳೂರು(ಜ.10): ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಬದಲಾವಣೆಗೆ ಪಟ್ಟು ಹಿಡಿದಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಬಣದ ಮುಖಂಡರು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನೂರು ಕ್ಷೇತ್ರಗಳ ಸಂಪೂರ್ಣ ಜವಾಬ್ದಾರಿ ತಮಗೆ ನೀಡುವಂತೆ ವರಿಷ್ಠರ ಮುಂದೆ ಬೇಡಿಕೆ ಇಡಲು ಚಿಂತನೆ ನಡೆಸಿದ್ದಾರೆ. ಮುಂದಿನ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ನೆರವಾಗುತ್ತೇವೆ ಎಂಬ ಭರವಸೆ ನೀಡುವ ಉದ್ದೇಶ ಒಂದು ಕಡೆಯಾದರೆ, ವಿಜಯೇಂದ್ರ ಮುಖ್ಯಮಂತ್ರಿ ಗಾದಿಗೆ ಬರದಂತೆ ತಡೆಯ ಬೇಕೆಂಬುದು ಇದರ ಹಿಂದಿನ 2ನೇ ಉದ್ದೇಶವೆನ್ನಲಾಗಿದೆ.

ನೂರು ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ತಮಗೆ ಬಿಡಬೇಕು. ಜತೆಗೆ ಆ ಕ್ಷೇತ್ರಗಳ ಖರ್ಚು ವೆಚ್ಚವನ್ನೂ ತಾವೇ ಭರಿಸುತ್ತೇವೆ ಎಂಬ ಭಾರೀ ಬೇಡಿಕೆ ಮುಂದಿಡುವ ಯೋಚನೆಯಿದೆ. ಆದರೆ, ಇದಕ್ಕೆ ಬಿಜೆಪಿ ವರಿಷ್ಠರು ಒಪ್ಪಿಗೆ ನೀಡುವ ಬಗ್ಗೆ ಅನುಮಾನವಿದೆ. 

Tap to resize

Latest Videos

ವಿಜಯೇಂದ್ರ ವಿರುದ್ಧ ಅಮಿತ್‌ ಶಾಗೆ ಯತ್ನಾಳ್‌ ಟೀಂ ಪ್ರತಿದೂರು

ನಾಲ್ಕು ದಿನಗಳ ಭೇಟಿಗಾಗಿ ದೆಹಲಿಗೆ ತೆರಳಿದ್ದ ಯತ್ನಾಳ ಬಣದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಮತ್ತಿತರರು ಗುರುವಾರ ಜೆಡಿಎಸ್ ರಾಜ್ಯಾಧ್ಯಕ್ಷರೂ ಆಗಿರುವ ಕೇಂದ್ರ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ನಡೆಸಿದ ಉಪಾಹಾರ ಸಭೆಯಲ್ಲಿ ಈ ವಿಷಯ ಪ್ರಸ್ತಾಪವಾಗಿದೆ ಎಂದು ವಿಶ್ವಸನೀಯ ಮೂಲಗಳಿಂದ ಗೊತ್ತಾಗಿದೆ. 

ಬಿವೈವಿ ಬಲಹೀನಕ್ಕೆ ಯತ್ನ: 

ವಿಜಯೇಂದ್ರ ಅವರ ಬದಲಾವಣೆ ಸದ್ಯಕ್ಕೆ ಕಷ್ಟ ಎಂಬ ನಿಲುವಿಗೆ ಬಂದಿರುವ ಬಿಜೆಪಿಯ ಯತ್ನಾಳ ಬಣದ ಮುಖಂ ಡರು ಮುಂದಿನ ಚುನಾವಣೆ ಹೊತ್ತಿಗೆ ವಿಜಯೇಂದ್ರರನ್ನು ಬಲಹೀನಗೊಳಿಸಿ, ತಾವು ಮೇಲುಗೈ ಸಾಧಿಸಲು ತಂತ್ರ ರೂಪಿಸುತ್ತಿದ್ದಾರೆ. ಆ ತಂತ್ರದ ಭಾಗವಾಗಿ ಕ್ಷೇತ್ರಗಳ ಜವಾಬ್ದಾರಿ ಕೇಳಲು ಮುಂದಾಗಿದ್ದಾರೆ. 

ಹೊಸವರ್ಷ ದಿನವೇ ಭಿನ್ನರ ವಿರುದ್ಧ ಶಾಗೆ ವಿಜಯೇಂದ್ರ ದೂರು

ಪ್ರಸಕ್ತ ಬಿಜೆಪಿಯಲ್ಲಿನ ಭಿನ್ನಮತ, ವಿಜಯೇಂದ್ರ ಅವರ ಕಾರ್ಯವೈಖರಿ ಬಗ್ಗೆ ರಮೇಶ್ ಜಾರಕಿಹೊಳಿ ಅವರು ಪ್ರಸ್ತಾಪಿಸಿ ಮಧ್ಯಸ್ಥಿಕೆ ವಹಿಸುವಂತೆ ಕುಮಾರಸ್ವಾಮಿ ಅವರಲ್ಲೂ ಮನವಿ ಮಾಡಿದ್ದಾರೆ. ಇದಕ್ಕೆ ತಾತ್ವಿಕವಾಗಿ ಒಪ್ಪಿ ಕೊಂಡಿರುವ ಕುಮಾರಸ್ವಾಮಿ ಅವರು ಪ್ರಧಾನಿ ಮೋದಿ ಹಾಗೂ ಕೇಂದ್ರ ಗೃಹ ಸಚಿವರೂ ಆಗಿರುವ ಬಿಜೆಪಿ ರಾಷ್ಟ್ರೀಯ ಘಟಕದ ಪ್ರಭಾವಿ ನಾಯಕ ಅಮಿತ್ ಶಾರೊಂದಿಗೆ ಮಾತುಕತೆ ನಡೆಸಲು ಪ್ರಯತ್ನಿಸುವುದಾಗಿ ಆಶ್ವಾಸನೆ ನೀಡಿದ್ದಾರೆ ಎನ್ನಲಾಗಿದೆ. 

ಚುನಾವಣೆ ಯಾವುದೇ ಸಮಯದಲ್ಲಿ ಎದುರಾದರೂ ತಾವು ಹೇಳಿದ ನೂರು ಕ್ಷೇತ್ರಗಳ ಜವಾಬ್ದಾರಿ ನಮಗೆ ನೀಡಿದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ನೆರವಾಗುತ್ತೇವೆ. ಆ ಬಗ್ಗೆ ಅನುಮಾನ ಬೇಡ. ಯಾವುದೇ ಕಾರಣಕ್ಕೂ ವಿಜಯೇಂದ್ರ ಮುಖ್ಯಮಂತ್ರಿಯಾಗಲು ಅವಕಾಶ ನೀಡುವುದು ಬೇಡ. ಮುಖ್ಯಮಂತ್ರಿ ಆಯ್ಕೆ ಪ್ರಕ್ರಿಯೆಯಲ್ಲಿ ಶಾಸಕರ ಸಂಖ್ಯಾ ಬಲವೇ ಪ್ರಮುಖ ಪಾತ್ರ ವಹಿಸುವುದರಿಂದ ಆ ಸಂಖ್ಯಾ ಬಲವನ್ನು ನಾವು ತಂದು ಕೊಡುತ್ತೇವೆ. ನಾವು ಹೇಳಿದ ನೂರು ವಿಧಾನಸಭಾ ಕ್ಷೇತ್ರಗಳಲ್ಲಿ ನಾವು ಸೂಚಿಸಿದವರಿಗೇ ಟಿಕೆಟ್ ನೀಡಬೇಕು. ಅವರ ಖರ್ಚು-ವೆಚ್ಚದ ಹೊಣೆಯನ್ನು ನಾವೇ ಹೊರುತ್ತೇವೆ. ಗೆಲ್ಲಿಸಿಕೊಂಡೂ ಬರುತ್ತೇವೆ. ಈ ಬಗ್ಗೆ ವರಿಷ್ಠರಲ್ಲಿ ಪ್ರಸ್ತಾಪಿಸಿ ಎಂದು ಜಾರಕಿಹೊಳಿ ಹೇಳಿದ್ದಾರೆ ಎಂದು ತಿಳಿದು ಬಂದಿದೆ. 

click me!