ಶ್ರೀರಾಮುಲು ಕಾಂಗ್ರೆಸ್‌ಗೆ ಬರಲಿ: ಶಾಸಕ ನಾಗೇಂದ್ರ

By Govindaraj SFirst Published Sep 26, 2022, 2:30 AM IST
Highlights

ಬಿಜೆಪಿ ಅಧಿಕಾರಕ್ಕೆ ಬಂದ 24 ತಾಸಿನೊಳಗೆ ಎಸ್ಟಿ ಸಮುದಾಯಕ್ಕೆ ಶೇ.7.5ರಷ್ಟು ಮೀಸಲಾತಿ ಕಲ್ಪಿಸುವುದಾಗಿ ಸಚಿವ ಶ್ರೀರಾಮುಲು ಭರವಸೆ ನೀಡಿದ್ದ ಭರವಸೆ ಹುಸಿಯಾಗಿದೆ. ಬಿಜೆಪಿಯಲ್ಲಿ ಶ್ರೀರಾಮುಲು ಹತಾಶರಾಗಿದ್ದು, ಬೇಕಿದ್ದರೆ ಅವರು ಪಕ್ಷ ತೊರೆದು ಕಾಂಗ್ರೆಸ್‌ ಸೇರಲಿ. 

ಬಳ್ಳಾರಿ (ಸೆ.26): ಬಿಜೆಪಿ ಅಧಿಕಾರಕ್ಕೆ ಬಂದ 24 ತಾಸಿನೊಳಗೆ ಎಸ್ಟಿ ಸಮುದಾಯಕ್ಕೆ ಶೇ.7.5ರಷ್ಟು ಮೀಸಲಾತಿ ಕಲ್ಪಿಸುವುದಾಗಿ ಸಚಿವ ಶ್ರೀರಾಮುಲು ಭರವಸೆ ನೀಡಿದ್ದ ಭರವಸೆ ಹುಸಿಯಾಗಿದೆ. ಬಿಜೆಪಿಯಲ್ಲಿ ಶ್ರೀರಾಮುಲು ಹತಾಶರಾಗಿದ್ದು, ಬೇಕಿದ್ದರೆ ಅವರು ಪಕ್ಷ ತೊರೆದು ಕಾಂಗ್ರೆಸ್‌ ಸೇರಲಿ. ಪಕ್ಷದ ತತ್ವ,ಸಿದ್ಧಾಂತ ಒಪ್ಪಿ ಬಂದರೆ ಅವರನ್ನು ಸೇರ್ಪಡೆ ಮಾಡಿಕೊಳ್ಳಲಾಗುವುದು ಎಂದು ಶಾಸಕ ನಾಗೇಂದ್ರ ಆಹ್ವಾನ ನೀಡಿದರು.

ಭಾನುವಾರ ಸುದ್ದಿಗಾರರ ಜತೆಗೆ ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು 3 ವರ್ಷಗಳೇ ಕಳೆದಿವೆ. ಆದರೂ ನಾಯಕ ಸಮುದಾಯಕ್ಕೆ ಮೀಸಲಾತಿ ಹೆಚ್ಚಿಸಲು ಸಾಧ್ಯವಾಗಿಲ್ಲ. ಬಿಜೆಪಿ ಸರ್ಕಾರದಲ್ಲಿ ಶ್ರೀರಾಮುಲು ಬರೀ ನಾಮ್‌ ಕೆ ವಾಸ್ತೆ ಮಂತ್ರಿ. ಮೀಸಲಾತಿ ಹೆಚ್ಚಿಸಲು ಸಾಧ್ಯವಾಗದಿದ್ದರೆ ಶ್ರೀರಾಮುಲು ಬಿಜೆಪಿಯಲ್ಲೇಕೆ ಇರಬೇಕು? ಶ್ರೀರಾಮುಲು ಸೇರಿ ಎಲ್ಲ ಪಕ್ಷಗಳ ಪರಿಶಿಷ್ಟ ಪಂಗಡದ ಶಾಸಕರು ಕಾಂಗ್ರೆಸ್‌ಗೆ ಬೆಂಬಲ ಕೊಡಲಿ. ನಾವು ಮೀಸಲಾತಿಯನ್ನು ಹೆಚ್ಚಳ ಮಾಡಿ ತೋರಿಸುತ್ತೇವೆ ಎಂದು ನಾಗೇಂದ್ರ ಹೇಳಿದರು.

ಕಾಂಗ್ರೆಸ್ಸಿಗರು ಆಲಿಬಾಬಾ ಚಾಲೀಸ್ ಪರ್ ಚಾರ್ ಚೋರ್‌ಗಳಿದ್ದಂತೆ: ಸಚಿವ ಶ್ರೀರಾಮುಲು ವ್ಯಂಗ್ಯ

ವಾಲ್ಮೀಕಿ ಜಯಂತಿ ಬಹಿಷ್ಕಾರ: ಪರಿಶಿಷ್ಟ ಪಂಗಡಕ್ಕೆ ಶೇ. 7.5 ಮೀಸಲಾತಿ ಹೆಚ್ಚಳ ವಿಚಾರದಲ್ಲಿ ಬಿಜೆಪಿ ಸರ್ಕಾರ ಮೋಸ ಮಾಡಿದೆ. ಸರ್ಕಾರ ಹಮ್ಮಿಕೊಳ್ಳುವ ವಾಲ್ಮೀಕಿ ಜಯಂತಿಗೆ ನಮ್ಮ ಪೀಠದ ಸ್ವಾಮೀಜಿ ಸೇರಿದಂತೆ ಎಲ್ಲರೂ ಬಹಿಷ್ಕರಿಸಿದ್ದಾರೆ ಎಂದು ಹೇಳಿದರು. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಮೀಸಲಾತಿ ಹೆಚ್ಚಳವಾಗುತ್ತದೆ ಎಂದು ನಮ್ಮ ಸಮುದಾಯ ನಂಬಿಕೊಂಡಿತ್ತು. ಆದರೆ, ಈ ಸರ್ಕಾರ ಭರವಸೆ ಹುಸಿ ಮಾಡಿದೆ. ಸಮುದಾಯಕ್ಕೆ ಅನ್ಯಾಯ ಎಸಗಿದೆ. ಹಾಗಾಗಿ ಈ ನಿರ್ಧಾರ. ಅಲ್ಲದೇ ಬಿಜೆಪಿ ಹಮ್ಮಿಕೊಳ್ಳುವ ಎಸ್ಟಿಸಮುದಾಯದ ಸಮಾವೇಶಕ್ಕೆ ವಾಲ್ಮೀಕಿ ಸಮಾಜದ ಯಾವುದೇ ವ್ಯಕ್ತಿ ಭಾಗವಹಿಸುವುದಿಲ್ಲ ಎಂದರು.

ಶುಗರ್‌ ಬಂದಿದೆ: ಎಸ್ಟಿ ಸಮುದಾಯಕ್ಕೆ ಮೀಸಲಾತಿ ಹೆಚ್ಚಳ ವಿಚಾರದಲ್ಲಿ ಶೀಘ್ರದಲ್ಲಿಯೇ ಸಿಹಿಸುದ್ದಿ ನೀಡುತ್ತೇವೆ ಎಂದು ಸಚಿವ ಬಿ. ಶ್ರೀರಾಮುಲು ಹೇಳುತ್ತಲೇ ಬಂದಿದ್ದಾರೆ. ಅವರ ಸಿಹಿ ಸುದ್ದಿ ಕೇಳಿ ಕೇಳಿ ಎಲ್ಲರಿಗೂ ಶುಗರ್‌ ಬಂದಿದೆ ಎಂದು ನಾಗೇಂದ್ರ ವ್ಯಂಗ್ಯವಾಡಿದರು. ಶ್ರೀರಾಮುಲು ಪರಿಶಿಷ್ಟಪಂಗಡದ ದೊಡ್ಡ ನಾಯಕರು ಎನಿಸಿಕೊಂಡಿದ್ದಾರೆ. ಆದರೆ, ತನ್ನದೇ ಸಮುದಾಯಕ್ಕೆ ಮೀಸಲಾತಿಯನ್ನು ಹೆಚ್ಚಿಸಲು ಅವರಿಗೆ ಸಾಧ್ಯವಾಗಿಲ್ಲ. ಅವರು ಮೀಸಲಾತಿ ಹೆಚ್ಚಿಸಿದರೆ ಮಾತ್ರ ಅವರನ್ನು ದೊಡ್ಡ ನಾಯಕ ಎಂದು ಒಪ್ಪಿಕೊಳ್ಳುತ್ತೇವೆ ಎಂದ ಶಾಸಕ ನಾಗೇಂದ್ರ ಸವಾಲು ಹಾಕಿದರು.

ಮೀಸಲು ವಿವಾದ: ವಾಲ್ಮೀಕಿ ಸಮುದಾಯಕ್ಕೆ ಮೀಸಲಾತಿ ಪ್ರಮಾಣ ಹೆಚ್ಚಿಸಲು ಬಿಜೆಪಿ ಸರ್ಕಾರ ಹಿಂದೇಟು ಹಾಕುತ್ತಿರುವ ಕಾರಣಕ್ಕಾಗಿ ಅ.9ರಂದು ಸರ್ಕಾರದಿಂದ ಆಚರಿಸುವ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ರಾಜ್ಯಾದ್ಯಂತ ಬಹಿಷ್ಕರಿಸಲು ನಿರ್ಧರಿಸಲಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ. ಸುದ್ದಿಗಾರರ ಜೊತೆ ಮಾತನಾಡಿ, ವಾಲ್ಮೀಕಿ ಸಮುದಾಯಕ್ಕೆ ಶೇ.7.5ರಷ್ಟುಮೀಸಲಾತಿ ಹೆಚ್ಚಿಸಲು ಬಿಜೆಪಿ ಸರ್ಕಾರ ಹಿಂದೇಟು ಹಾಕುತ್ತಿದೆ. 

ವಿಮ್ಸ್ ಆಸ್ಪತ್ರೆ ರೋಗಿಗಳ ಸಾವಿನ ಪ್ರಕರಣ: ಸಚಿವ ಶ್ರೀರಾಮುಲು-ಸುಧಾಕರ್ ಜಟಾಪಟಿ

ಸಚಿವ ಶ್ರೀರಾಮುಲು ಅವರು ಈ ಹಿಂದೆ ಮಾತನಾಡಿ, ಸಚಿವ ಸ್ಥಾನ ಸಿಕ್ಕಿದ 24 ಗಂಟೆಯೊಳಗೆ ಸಮುದಾಯಕ್ಕೆ ಮೀಸಲಾತಿ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದ್ದರು. ಈಗ ಅವರ ಅಧಿಕಾರಾವಧಿ ಮುಗಿಯುವ ಹಂತಕ್ಕೆ ಬಂದಿದೆ. ಇನ್ನೂ ಕೂಡಾ ಈ ವಿಚಾರಕ್ಕೆ ಸಂಬಂಧಿಸಿದಂತೆ ಯಾವುದೇ ಕ್ರಮ ಕೈಗೊಂಡಿಲ್ಲ. ಇದು ಬರೀ ರಾಜಕೀಯ ಆಶ್ವಾಸನೆಯಾಗಿ ಉಳಿದಿದೆ. ಈ ಕಾರಣಕ್ಕಾಗಿ ಅ.9ರಂದು ಸರ್ಕಾರದಿಂದ ಆಚರಿಸುವ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ರಾಜ್ಯಾದ್ಯಂತ ಬಹಿಷ್ಕರಿಸಲು ಈಗಾಗಲೇ ತೀರ್ಮಾನಿಸಲಾಗಿದೆ ಎಂದರು.

click me!