ಸಿದ್ದರಾಮಯ್ಯ ಬರ್ತಾರಂದ್ರೆ ಜನತೆ ಭಯ ಪಡ್ತಾರೆ: ಬಿಜೆಪಿ ನಾಯಕ ನಾಗರಾಜ

By Kannadaprabha NewsFirst Published Nov 24, 2022, 12:00 PM IST
Highlights

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಆಗಮಿಸುತ್ತಾರೆ ಎಂದು ತಿಳಿದು ಕಾಂಗ್ರೆಸ್‌ನ ಕೆಲವು ಮುಖಂಡರು ಅವಿತು ಕುಳಿತಿದ್ದಾರೆ: ನಾಗರಾಜ 

ಕಾರವಾರ(ನ.24): ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜಿಲ್ಲೆಗೆ ಆಗಮಿಸುತ್ತಾರೆ ಎಂದರೆ ಜನರು ಭಯಪಡುತ್ತಾರೆ ಎಂದು ಬಿಜೆಪಿ ಮಾಧ್ಯಮ ವಕ್ತಾರ ನಾಗರಾಜ ನಾಯಕ ಲೇವಡಿ ಮಾಡಿದರು. ನಗರದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಬಾರಿ ಕುಮಟಾಕ್ಕೆ ಬಂದಾಗಲೇ ಪರೇಶ ಮೇಸ್ತ ಕಾಣೆಯಾಗಿದ್ದರು. ಎರಡು ದಿನದ ಬಳಿಕ ಕಳೇಬರ ಸಿಕ್ಕಿತ್ತು. ಮತ್ತೆ ಜಿಲ್ಲೆಗೆ ಸಿದ್ದರಾಮಯ್ಯ ಬಂದರೆ ಏನಾಗುತ್ತದೆಯೋ ಎನ್ನುವ ಭಯ ಜನರನ್ನು ಕಾಡುತ್ತಿದೆ ಎಂದು ಟೀಕಿಸಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಆಗಮಿಸುತ್ತಾರೆ ಎಂದು ತಿಳಿದು ಕಾಂಗ್ರೆಸ್‌ನ ಕೆಲವು ಮುಖಂಡರು ಅವಿತು ಕುಳಿತಿದ್ದಾರೆ. ನಾಮಪತ್ರ ಅರ್ಜಿ ನೀಡಲು ಲಕ್ಷ ಹಣ ನೀಡಬೇಕು ಎಂದಾದರೆ ಅಧಿಕಾರಕ್ಕೆ ಬಂದರೆ, ಉಳಿದ ಸ್ಥಾನಮಾನ ಸಿಗಬೇಕಾದರೆ ಏನೇನು? ಎಷ್ಟೆಷ್ಟು? ನೀಡಬೇಕು ಎಂದರು.

ಬಿಜೆಪಿ ಸಂಸದರು, ಶಾಸಕರು ರಾಜೀನಾಮೆ ನೀಡಲಿ: ಐವಾನ್‌ ಡಿಸೋಜಾ

ಬಿಜೆಪಿಗರಿಗೆ ಕಾಂಗ್ರೆಸ್‌ ಮುಖಂಡ ಐವನ್‌ ಡಿಸೋಜ ಸೇರಿದಂತೆ ಹಲವರು ಪ್ರಶ್ನಿಸಿದ್ದಾರೆ. ನಾಳೆ ಬರುವ ಮುಖಂಡರಿಗೆ ಬಿಜೆಪಿಯಿಂದ ಪ್ರಶ್ನೆ ಕೇಳುತ್ತೇವೆ. ಮಾತೆತ್ತಿದರೆ ಲಾಯರ್‌ಗಿರಿ ಮಾಡಿದ್ದೇನೆ ಎನ್ನುವ ಸಿದ್ದರಾಮಯ್ಯ ಇದಕ್ಕೆ ಉತ್ತರಿಸಬೇಕು ಎಂದರು.

ಪರೇಶ ಮೇಸ್ತ ಮೃತದೇಹ ಸಿಕ್ಕ ಕೆಲವೇ ಹೊತ್ತಿನಲ್ಲಿ ಅಂದಿನ ಡಿಸಿ ಬಳಿ ಸಹಜ ಸಾವು ಎಂದು ಹೇಳಿಸಿರುವುದು ಏಕೆ? ಅವರಿಗೆ ಏಕೆ? ಹೇಗೆ ಅಧಿಕಾರ ನೀಡಿದ್ದೀರಿ? ಶೆಟ್ಟಿಕೆರೆ ಬಳಿ ಕಳೇಬರ ಸಿಗುವ ಮೊದಲೇ ಅಧಿಕಾರಿಗಳನ್ನು, ಸಿಬ್ಬಂದಿ ನಿಯೋಜನೆ ಮಾಡಿರುವುದು ಏಕೆ? ಕಳೇಬರ ಸಿಕ್ಕರೆ ಸಮೀಪದ ಸರ್ಕಾರಿ ವೈದ್ಯರಿಂದ ಮರಣೋತ್ತರ ಪರೀಕ್ಷೆ ಮಾಡಬೇಕು? ಮಣಿಪಾಲದಿಂದ ವೈದ್ಯರನ್ನು ಏಕೆ ಕರೆಸಲಾಗಿತ್ತು? ಅಂತಹ ಅವಶ್ಯಕತೆ ಏನಿತ್ತು? ಡಿಸಿಗೆ ಮರಣೋತ್ತರ ವರದಿ ಯಾವಾಗ ಸಿಕ್ಕಿದೆ? ಪೊಲೀಸ್‌ ತನಿಖೆಯಲ್ಲಿ ಡಿಸಿ ಮೂಗು ತೂರಿಸಬಹುದೇ? ಎಂದು ಪ್ರಶ್ನೆಗಳ ಸುರಿಮಳೆಗೈದರು.

ಮೂಲ ಬಿಜೆಪಿ, ವಲಸೆ ಬಿಜೆಪಿಗ ಎಂಬ ಪ್ರಶ್ನೆ ನನ್ನೆದುರಿಗಿಲ್ಲ: ಸಚಿವ ಹೆಬ್ಬಾರ

ಒಂದು ತನಿಖಾ ತಂಡದಿಂದ ಮತ್ತೊಂದು ತಂಡಕ್ಕೆ ಪ್ರಕರಣ ಹಸ್ತಾಂತರ ಬೇಕಾದರೆ ಸಾಕ್ಷ್ಯ ಸರಿಯಾಗಿರಿಸುವ ಜವಾಬ್ದಾರಿ ರಾಜ್ಯ ಸರ್ಕಾರದ ಮೇಲೆ ಇರುತ್ತದೆ. ಎಷ್ಟುಜವಾಬ್ದಾರಿಯಿಂದ ಈ ಕೆಲಸ ಮಾಡಿದ್ದೀರಿ? ಕೊನೆ ಬಾರಿ ನೋಡಿದ ವ್ಯಕ್ತಿ ಹೇಳಿಕೆಯಲ್ಲಿ ಗೊಂದಲಗಳಿವೆ. ಏಕೆ ರೀತಿ ಗೊಂದಲ ಉಂಟಾಗಿದೆ ಎಂಬುದಕ್ಕೆ ಸಿದ್ದರಾಮಯ್ಯನವರೇ ಉತ್ತರಿಸಬೇಕು ಎಂದರು.

ಪ್ರಕರಣದಲ್ಲಿ ಏನೂ ಸತ್ಯಾಸತ್ಯತೆ ಇಲ್ಲವೆಂದು ಡಿಸಿ ಹೇಳಿಕೆ ನೀಡಿದ ಬಳಿಕ ಏಕೆ ಆರೋಪಿಗಳನ್ನು ಬಂಧಿಸಿದ್ದೀರಿ? ಐವನ್‌ ಡಿಸೋಜಾ ಮೊದಲು ನೀವು ಉತ್ತರಿಸಿ. ಬಳಿಕ ನಿಮ್ಮ ಪ್ರಶ್ನೆಗಳಿಗೆ ನಾವು ಉತ್ತರಿಸುತ್ತೇವೆ ಎಂದರು. ಸುದ್ದಿಗೋಷ್ಠಿಯಲ್ಲಿ ಮನೋಜ ಭಟ್‌, ನಾಗೇಶ ಕುರ್ಡೇಕರ, ರೇಷ್ಮಾ ಮಾಳ್ಸೇಕರ ಇದ್ದರು.
 

click me!