BJP ವಿಪಕ್ಷ ನಾಯಕ ಆಯ್ಕೆ ನಾಳೆ?: ಸಂಜೆ 6ಕ್ಕೆ ಶಾಸಕಾಂಗ ಸಭೆ, ಘೋಷಣೆ ಆಗುತ್ತಾ?

By Kannadaprabha NewsFirst Published Nov 16, 2023, 7:23 AM IST
Highlights

ಬಿಜೆಪಿಯ ನೂತನ ರಾಜ್ಯಾಧ್ಯಕ್ಷರಾಗಿ ಬಿ.ವೈ.ವಿಜಯೇಂದ್ರ ಅವರು ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಶುಕ್ರವಾರ ಶಾಸಕಾಂಗ ಪಕ್ಷದ ಸಭೆ ನಿಗದಿಯಾಗಿದ್ದು, ಸುಮಾರು ಆರು ತಿಂಗಳಿಂದ ಬಾಕಿ ಉಳಿದಿರುವ ಪ್ರತಿಪಕ್ಷದ ನಾಯಕನ ಆಯ್ಕೆ ಮಾಡುವ ಬಗ್ಗೆ ಚರ್ಚೆ ನಡೆಯಲಿದೆ. 

ಬೆಂಗಳೂರು (ನ.16): ಬಿಜೆಪಿಯ ನೂತನ ರಾಜ್ಯಾಧ್ಯಕ್ಷರಾಗಿ ಬಿ.ವೈ.ವಿಜಯೇಂದ್ರ ಅವರು ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಶುಕ್ರವಾರ ಶಾಸಕಾಂಗ ಪಕ್ಷದ ಸಭೆ ನಿಗದಿಯಾಗಿದ್ದು, ಸುಮಾರು ಆರು ತಿಂಗಳಿಂದ ಬಾಕಿ ಉಳಿದಿರುವ ಪ್ರತಿಪಕ್ಷದ ನಾಯಕನ ಆಯ್ಕೆ ಮಾಡುವ ಬಗ್ಗೆ ಚರ್ಚೆ ನಡೆಯಲಿದೆ. ಅಂದು ಸಂಜೆ 6 ಗಂಟೆಗೆ ಶಾಸಕಾಂಗ ಪಕ್ಷದ ಸಭೆ ನಡೆಯಲಿದ್ದು, ಬಿಜೆಪಿಯ ಕೇಂದ್ರ ಘಟಕದಿಂದ ವೀಕ್ಷಕರು ಆಗಮಿಸಲಿದ್ದಾರೆ. ಅವರು ಶಾಸಕರೊಂದಿಗೆ ಸಮಾಲೋಚನೆ ನಡೆಸಿ ವಿಧಾನಸಭೆಯ ಪ್ರತಿಪಕ್ಷದ ನಾಯಕನ ಜವಾಬ್ದಾರಿ ಹೊರುವ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಬಗ್ಗೆ ಅಭಿಪ್ರಾಯ ಸಂಗ್ರಹಿಸಲಿದ್ದಾರೆ. 

ಆದರೆ, ಅದೇ ದಿನ ಹೆಸರನ್ನು ಘೋಷಿಸುವ ಬಗ್ಗೆ ಸ್ಪಷ್ಟತೆ ಇಲ್ಲ. ವೀಕ್ಷಕರು ಇಲ್ಲಿ ಅಭಿಪ್ರಾಯ ಸಂಗಹಿಸಿ ದೆಹಲಿಗೆ ವಾಪಸಾದ ಬಳಿಕ ವರಿಷ್ಠರೊಂದಿಗೆ ಚರ್ಚಿಸಿ ನಂತರ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯೂ ಇದೆ. ಇದೇ ವೇಳೆ ವಿಜಯೇಂದ್ರ ಅವರು ಮುಂದಿನ ವಾರ ದೆಹಲಿಗೆ ತೆರಳುವುದರಿಂದ ಅವರು ವಾಪಸಾದ ಬಳಿಕ ಅಂತಿಮಗೊಳ್ಳುವ ಸಂಭವವೂ ಇದೆ ಎನ್ನಲಾಗಿದೆ. ಈ ಸ್ಥಾನಕ್ಕೆ ಶಾಸಕರಾದ ಆರ್‌.ಅಶೋಕ್‌, ಡಾ.ಸಿ.ಎನ್‌.ಅಶ್ವತ್ಥನಾರಾಯಣ ಹಾಗೂ ವಿ.ಸುನೀಲ್‌ಕುಮಾರ್ ಅವರ ಹೆಸರುಗಳು ಪ್ರಮುಖವಾಗಿ ಕೇಳಿಬರುತ್ತಿವೆ.

3ನೇ ಬಾರಿ ಮೋದಿ ಪ್ರಧಾನಿಯಾಗಲು ಕುರುಡುಮಲೆ ಗಣಪತಿಗೆ ವಿಜಯೇಂದ್ರ ವಿಶೇಷ ಪೂಜೆ

ಮೇಲ್ಮನೆ ವಿಪಕ್ಷ ನಾಯಕ ಆಗಲು ನಾನು ರೆಡಿ: ಪಕ್ಷ ಕಳೆದ ಬಾರಿ ನನಗೆ ವಿಪಕ್ಷ ನಾಯಕ ಸ್ಥಾನದ ಅವಕಾಶ ಕೊಟ್ಟಿತ್ತು. ಈ ಬಾರಿಯೂ ಅವಕಾಶ ಕೊಟ್ಟರೆ ನಿಭಾಯಿಸುತ್ತೇನೆ ಎಂದು ಹೇಳಿದ್ದೇನೆ ಎಂದು ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯಲ್ಲಿ 34 ಜನ ಮೇಲ್ಮನೆ ಸದಸ್ಯರಿದ್ದಾರೆ. ಇಂಥ ಹುದ್ದೆಗಳಿಗೆ ನಿರಾಸಕ್ತಿ ತೋರುವವರು ಇರಲಾರರು. ಹಾಗಾಗಿ ಎಲ್ಲರಿಗೂ ಆಸಕ್ತಿ ಇರುತ್ತದೆ. ಯಾರನ್ನು ಆಯ್ಕೆ ಮಾಡಬೇಕು ಎಂಬುದನ್ನು ಪಕ್ಷ ನಿರ್ಧರಿಸುತ್ತದೆ ಎಂದವರು ಹೇಳಿದರು. ಇನ್ನು, ಪಕ್ಷದ ಹೈಕಮಾಂಡ್ ಬಹಳ ಸಮರ್ಥ, ಯುವ ರಾಜ್ಯಾಧ್ಯಕ್ಷರನ್ನು ಆಯ್ಕೆ ಮಾಡಿದೆ ಎಂದ ಅವರು, ರಾಜ್ಯ ಬಿಜೆಪಿ ಇಡೀ ತಂಡವೇ ವಿಜಯೇಂದ್ರ ಅವರ ಜೊತೆ ಒಟ್ಟಾಗಿ ನಿಂತು ಕೆಲಸ ಮಾಡಲಿದೆ. ಮುಂದಿನ ಚುನಾವಣೆಯಲ್ಲಿ ಅದರ ಫಲಿತಾಂಶ ಹೊರಬೀಳಲಿದೆ ಎಂದು ವಿಶ್ವಾಸದಿಂದ ನುಡಿದರು.

click me!