ಲೋಕಸಭೆ ಚುನಾವಣೆ 2024: ಸುಮಲತಾ ಮನವೊಲಿಕೆಗೆ ಬಿಜೆಪಿ ವರಿಷ್ಠರಿಂದ ಪ್ರಯತ್ನ

By Kannadaprabha NewsFirst Published Mar 18, 2024, 4:32 AM IST
Highlights

ಬಿಜೆಪಿ ನಾಯಕರ ಆಹ್ವಾನದ ಮೇರೆಗೆ ದೆಹಲಿಗೆ ಆಗಮಿಸಿದ್ದೇನೆ. ಇಂದು ಜೆ.ಪಿ.ನಡ್ಡಾ ಅವರನ್ನು ಭೇಟಿಯಾಗುತ್ತೇನೆ. ಮಂಡ್ಯ ಲೋಕಸಭಾ ಕ್ಷೇತ್ರದ ಟಿಕೆಟ್‌ ಕುರಿತು ಚರ್ಚೆಯಾಗಲಿದೆ. ನಡ್ಡಾ ಭೇಟಿ ಬಳಿಕ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ಭೇಟಿ ಮಾಡಬೇಕೆ ಅಥವಾ ಬೇಡವೆ ಎಂಬುದರ ಬಗ್ಗೆ ಯೋಚಿಸುತ್ತೇನೆ. ಇಂದು ಎಲ್ಲ ವಿಚಾರ ಗೊತ್ತಾಗಲಿದೆ ಎಂದ ಸುಮಲತಾ ಅಂಬರೀಷ್‌ 

ಮಂಡ್ಯ/ನವದೆಹಲಿ(ಮಾ.18):  ಮಂಡ್ಯ ಲೋಕಸಭಾ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟಿರುವುದರಿಂದ ಮುನಿಸಿಕೊಂಡಿರುವ ಬಿಜೆಪಿ ಬೆಂಬಲಿತ ಹಾಲಿ ಸದಸ್ಯೆ ಸುಮಲತಾ ಅಂಬರೀಷ್‌ ಅವರ ಮನವೊಲಿಕೆ ಪ್ರಯತ್ನ ಆರಂಭವಾಗಿದೆ.
ಈ ಹಿನ್ನೆಲೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಸುಮಲತಾ ಅವರನ್ನು ಮಾತುಕತೆಗೆ ಆಹ್ವಾನಿಸಿದ್ದು, ಸುಮಲತಾ ಅವರು ಭಾನುವಾರ ದೆಹಲಿಗೆ ತಲುಪಿದ್ದಾರೆ.

ದೆಹಲಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಬಿಜೆಪಿ ನಾಯಕರ ಆಹ್ವಾನದ ಮೇರೆಗೆ ದೆಹಲಿಗೆ ಆಗಮಿಸಿದ್ದೇನೆ. ಸೋಮವಾರ ಜೆ.ಪಿ.ನಡ್ಡಾ ಅವರನ್ನು ಭೇಟಿಯಾಗುತ್ತೇನೆ. ಮಂಡ್ಯ ಲೋಕಸಭಾ ಕ್ಷೇತ್ರದ ಟಿಕೆಟ್‌ ಕುರಿತು ಚರ್ಚೆಯಾಗಲಿದೆ. ನಡ್ಡಾ ಭೇಟಿ ಬಳಿಕ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ಭೇಟಿ ಮಾಡಬೇಕೆ ಅಥವಾ ಬೇಡವೆ ಎಂಬುದರ ಬಗ್ಗೆ ಯೋಚಿಸುತ್ತೇನೆ. ಸೋಮವಾರ ಎಲ್ಲ ವಿಚಾರ ಗೊತ್ತಾಗಲಿದೆ ಎಂದರು.ಮಂಡ್ಯ ಕ್ಷೇತ್ರ ಬಿಟ್ಟು ಬೇರೆಲ್ಲೂ ಹೋಗುವುದಿಲ್ಲ. ಮಂಡ್ಯದಿಂದಲೇ ನನ್ನ ಸ್ಪರ್ಧೆ ಎನ್ನುತ್ತಿದ್ದ ಸುಮಲತಾ ಅಂಬರೀಷ್‌ ಅವರು ಮಂಡ್ಯ ಕ್ಷೇತ್ರವನ್ನು ಜೆಡಿಎಸ್‌ಗೆ ನೀಡಿರುವುದಕ್ಕೆ ಹಾಗೂ ಕ್ಷೇತ್ರದ ಟಿಕೆಟ್ ಸಿಗದಿರುವುದಕ್ಕೆ ತೀವ್ರ ಅಸಮಾಧಾನಗೊಂಡಿದ್ದಾರೆ.

Nikhil on Sumalatha: ನನ್ನ ವಿರುದ್ಧ ನಿಂತಿದ್ದ ಆ ತಾಯಿ ಗೆಲುವಿಗೆ ಕಾಂಗ್ರೆಸ್‌ ಕಾರಣ: ನಿಖಿಲ್ ಕುಮಾರಸ್ವಾಮಿ

ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಿತ್ರಪಕ್ಷದ ಮುಖಂಡರಾಗಿರುವುದರಿಂದ ಅವರೊಂದಿಗೆ ರಾಜಕೀಯ ದ್ವೇಷಕ್ಕೆ ಮುಂದಾಗದೆ ಮೈತ್ರಿ ಪಕ್ಷದ ಅಭ್ಯರ್ಥಿ ಪರ ಚುನಾವಣೆಯಲ್ಲಿ ಪ್ರಚಾರಕ್ಕಿಳಿದು ಗೆಲುವಿಗೆ ಶ್ರಮಿಸುವಂತೆ ಕೋರುವುದು, ಮುಂದಿನ ದಿನಗಳಲ್ಲಿ ಸುಮಲತಾ ರಾಜಕೀಯವಾಗಿ ಬಿಜೆಪಿ ವಿರೋಧಿ ನಡೆ ಅನುಸರಿಸದಂತೆ ತಡೆಯಲು ವರಿಷ್ಠರು ಮುಂದಾಗಿದ್ದಾರೆ ಎನ್ನಲಾಗುತ್ತಿದೆ.

Loksabha Elections 2024: ಸಂಸದೆ ಸುಮಲತಾ ಅಂಬರೀಶ್ ಮೌನ: ಮುಂದಿನ ನಡೆಯೇನು?

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡಿರುವುದರಿಂದ ಮಂಡ್ಯ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಡುವುದು ಅನಿವಾರ್ಯವಾಗಿದೆ. ಚುನಾವಣೆಯಲ್ಲಿ ಮೈತ್ರಿಧರ್ಮ ಪಾಲಿಸಬೇಕಾದ ಪರಿಸ್ಥಿತಿ ಎದುರಾಗಿದೆ. ಅದಕ್ಕೆ ಸಹಕಾರ ನೀಡುವಂತೆ ಹಾಗೂ ಮುಂದಿನ ದಿನಗಳಲ್ಲಿ ರಾಜಕೀಯ ಸ್ಥಾನಮಾನಗಳನ್ನು ಕಲ್ಪಿಸುವ ಭರವಸೆಯೊಂದಿಗೆ ಸುಮಲತಾ ಅಂಬರೀಷ್‌ ಮನವೊಲಿಸುವ ಪ್ರಯತ್ನಕ್ಕೆ ಇಳಿದಿದ್ದಾರೆ. ಮುಂದಿನ ದಿನಗಳಲ್ಲಿ ವಿಧಾನಪರಿಷತ್ ಸದಸ್ಯೆಯನ್ನಾಗಿಸುವ ಅಥವಾ ರಾಜ್ಯಸಭಾ ಸದಸ್ಯ ಸ್ಥಾನ ನೀಡುವ ಬಗ್ಗೆ ಭರವಸೆ ನೀಡಬಹುದು ಎಂದು ಮೂಲಗಳು ತಿಳಿಸಿವೆ.

ಇದೇ ವೇಳೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಟಿಕೆಟ್ ನೀಡುವ ಬಗ್ಗೆ ಬಿಜೆಪಿ ವರಿಷ್ಠರು ಪ್ರಸ್ತಾಪಿಸಬಹುದು ಎಂಬ ಮಾತೂ ಕೇಳಿಬರುತ್ತಿದೆ. ಆ ಕ್ಷೇತ್ರದಲ್ಲಿ ಮಾಜಿ ಸಚಿವ ಡಾ.ಕೆ.ಸುಧಾಕರ್ ಮತ್ತು ಶಾಸಕ ಎಸ್‌.ಆರ್‌.ವಿಶ್ವನಾಥ್ ಪುತ್ರ ಅಲೋಕ್ ಅವರ ನಡುವೆ ಟಿಕೆಟ್‌ಗಾಗಿ ತೀವ್ರ ಪೈಪೋಟಿ ಏರ್ಪಟ್ಟಿದೆ. ಇಬ್ಬರಲ್ಲಿ ಯಾರಿಗೇ ಟಿಕೆಟ್ ಸಿಕ್ಕರೂ ಮತ್ತೊಬ್ಬರು ತೆರೆಮರೆಯಲ್ಲಿಯಾದರೂ ವಿರೋಧ ಮಾಡುವ ಅನುಮಾನವಿದೆ. ಹೀಗಾಗಿ, ಬಲಿಜ ಮತ್ತು ಒಕ್ಕಲಿಗ ಸಮುದಾಯದ ಲೆಕ್ಕಾಚಾರದ ಮೇರೆಗೆ ಸುಮಲತಾ ಅವರನ್ನು ಕಣಕ್ಕಿಳಿಸುವ ಬಗ್ಗೆ ಚರ್ಚಿಸಬಹುದು ಎನ್ನಲಾಗುತ್ತಿದೆ.

click me!