
ಬೆಂಗಳೂರು : ಕೆಲ ಅತೃಪ್ತರನ್ನು ಹೊರತುಪಡಿಸಿ ಆಡಳಿತಾರೂಢ ಕಾಂಗ್ರೆಸ್ ಬಹುತೇಕ ಎಲ್ಲ ಶಾಸಕರು ಬಿಡದಿಯ ರೆಸಾರ್ಟ್‌ಗಳನ್ನು ಸೇರುತ್ತಿದ್ದಂತೆಯೇ, ಪ್ರತಿಪಕ್ಷ ಬಿಜೆಪಿ ‘ಪ್ಲ್ಯಾನ್ ಬಿ’ ಕಾರ್ಯಗತಗೊಳಿಸಲು ಮುಂದಾಗಿದ್ದು, ಆ ಪಕ್ಷದ ಶಾಸಕರು ಶನಿವಾರ ದೆಹಲಿ ಬಳಿಯ ಗುರುಗ್ರಾಮದ ಹೋಟೆಲ್, ರೆಸಾರ್ಟ್‌ಗಳನ್ನು ತೊರೆದು ಬೆಂಗಳೂರಿಗೆ ಬಂದಿಳಿಯಲಿದ್ದಾರೆ. ಇದರೊಂದಿಗೆ, ‘ಜನವರಿ 19ರ ಆಪರೇಷನ್ ಸಂಕ್ರಾಂತಿ’ಗೆ ಪರ್ಯಾಯ ಯೋಜನೆ ರೂಪುಗೊಂಡು ಜಾರಿಯಾಗುವ ಲಕ್ಷಣಗಳು ಕಂಡು ಬಂದಿವೆ.
ಸಮ್ಮಿಶ್ರ ಸರ್ಕಾರ ಪತನಗೊಳಿಸುವಷ್ಟುಸಂಖ್ಯೆಯ ಶಾಸಕರು ರಾಜೀನಾಮೆ ಕೊಡಲು ಸಾಧ್ಯವಾಗುತ್ತಿಲ್ಲವಾದ್ದರಿಂದ ಬಿಜೆಪಿ ನಾಯಕರು ಶುಕ್ರವಾರ ತಡರಾತ್ರಿ ತಮ್ಮ ತಂತ್ರವನ್ನೇ ಬದಲಿಸುವ ನಿರ್ಧಾರ ಕೈಗೊಂಡರು ಎಂದು ತಿಳಿದು ಬಂದಿದೆ.
ಈ ‘ಪ್ಲ್ಯಾನ್ ಬಿ’ ಅನುಸಾರ ಕಾಂಗ್ರೆಸ್ಸಿನ ಕೆಲವು ಅತೃಪ್ತ ಶಾಸಕರು ಶನಿವಾರ ಅಥವಾ ಭಾನುವಾರದ ವೇಳೆ ಫ್ಯಾಕ್ಸ್ ಮತ್ತು ಇ-ಮೇಲ್ ಮೂಲಕ ವಿಧಾನಸಭೆಯ ಸ್ಪೀಕರ್‌ಗೆ ರಾಜೀನಾಮೆ ಪತ್ರ ರವಾನಿಸುವ ಸಾಧ್ಯತೆಯಿದೆ. ಅಂದರೆ, ಸ್ಪೀಕರ್ ಅವರನ್ನು ಖುದ್ದಾಗಿ ಭೇಟಿ ಮಾಡಿ ರಾಜೀನಾಮೆ ಪತ್ರ ಸಲ್ಲಿಸುವ ಸಂಭವ ಕಡಿಮೆ. ಖುದ್ದು ಭೇಟಿ ಮಾಡಲು ಸ್ಪೀಕರ್‌ಗೆ ಅವಕಾಶ ಕೊಡದೆ ವಿಳಂಬ ತಂತ್ರ ಅನುಸರಿಸಬಹುದು ಎಂಬ ಲೆಕ್ಕಾಚಾರವೂ ಇದರ ಹಿಂದಿದೆ.
ಅತೃಪ್ತ ಶಾಸಕರ ರಾಜೀನಾಮೆ ಪತ್ರ ಸ್ಪೀಕರ್ ಕಚೇರಿಗೆ ತಲುಪಿದ ನಂತರ ಪ್ರತಿಪಕ್ಷದ ನಾಯಕರೂ ಆಗಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ತಮ್ಮ ‘ರಾಜಕೀಯ ಆಟ’ ಆರಂಭಿಸುವ ನಿರೀಕ್ಷೆಯಿದೆ. ಯಡಿಯೂರಪ್ಪ ನೇತೃತ್ವದ ಬಿಜೆಪಿ ನಾಯಕರ ನಿಯೋಗವೊಂದು ನೇರವಾಗಿ ರಾಜ್ಯಪಾಲರ ಬಳಿ ತೆರಳಿ ಸರ್ಕಾರ ಅಸ್ಥಿರಗೊಂಡಿದೆ. ಹೀಗಾಗಿ, ಬಹುಮತ ಸಾಬೀತುಪಡಿಸಲು ವಿಶೇಷ ಅಧಿವೇಶನ ಕರೆಯುವಂತೆ ಸೂಚಿಸಲು ಒತ್ತಾಯಿಸಬಹುದು.
ನಂತರ ರಾಜ್ಯಪಾಲರು ಮುಖ್ಯಮಂತ್ರಿಗಳನ್ನೂ ಕರೆಸಿ ಮಾತನಾಡಬಹುದು. ಜೊತೆಗೆ ಕಾನೂನು ತಜ್ಞರೊಂದಿಗೂ ಸಮಾಲೋಚನೆ ನಡೆಸಿ ವಿಶ್ವಾಸಮತ ಕೋರುವಂತೆ ಮುಖ್ಯಮಂತ್ರಿಗಳಿಗೆ ಸೂಚಿಸುವ ಸಾಧ್ಯತೆ ಎದುರಾಗಬಹುದು. ಆದರೆ, ಫೆ.6ರಿಂದ ವಿಧಾನಮಂಡಲದ ಉಭಯ ಸದನಗಳ ಜಂಟಿ (ಬಜೆಟ್) ಅಧಿವೇಶನ ಆರಂಭವಾಗುವ ನಿರೀಕ್ಷೆ ಇರುವುದರಿಂದ ಅದಕ್ಕೂ ಮೊದಲು ವಿಶ್ವಾಸಮತ ಕೋರುವಂತೆ ಮುಖ್ಯಮಂತ್ರಿಗಳಿಗೆ ನಿರ್ದೇಶನ ನೀಡುವ ಸಂಭವವೂ ಉದ್ಭವಿಸಬಹುದು.
ವಿಶ್ವಾಸಮತ ಯಾಚನೆಗೂ ಮೊದಲೇ ಇನ್ನಷ್ಟುಅತೃಪ್ತ ಶಾಸಕರು ರಾಜೀನಾಮೆ ನೀಡಬಹುದು. ಹಾಗಾದಲ್ಲಿ ಪ್ರಕ್ರಿಯೆ ಸುಗಮವಾಗಿ ಸರ್ಕಾರ ಪತನಗೊಳ್ಳಲಿದೆ. ಒಂದು ವೇಳೆ ಅದಕ್ಕೆ ಅವಕಾಶವೇ ಸಿಗದಿದ್ದಲ್ಲಿ ಬಹುಮತ ಸಾಬೀತುಪಡಿಸುವ ಸಲುವಾಗಿ ವಿಶ್ವಾಸಮತ ನಿರ್ಣಯದ ಪರವಾಗಿ ಮತ ಚಲಾಯಿಸುವಂತೆ ಸೂಚಿಸಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ತಮ್ಮ ಶಾಸಕರಿಗೆ ವಿಪ್ ನೀಡಬಹುದು. ಆದರೆ, ಅತೃಪ್ತ ಶಾಸಕರ ಪೈಕಿ ಕೆಲವರು ಈ ಮೊದಲೇ ರಾಜೀನಾಮೆ ಪತ್ರವನ್ನು ಮುಂಚೆಯೇ ನೀಡಿರುವುದರಿಂದ ಅಂಗೀಕಾರವಾಗದಿದ್ದರೂ ಅದನ್ನೇ ಮುಂದಿಟ್ಟುಕೊಂಡು ಮುಂದೆ ನ್ಯಾಯಾಲಯದಲ್ಲಿ ತಮ್ಮ ರಕ್ಷಣೆಗೆ ಬಳಸಿಕೊಳ್ಳಬಹುದು ಎನ್ನಲಾಗಿದೆ.
ಹಾಗೊಂದು ವೇಳೆ ಸರ್ಕಾರದ ಪತನಕ್ಕೆ ಬೇಕಾದಷ್ಟುಶಾಸಕರ ಕೊರತೆ ಎದುರಾದರೂ ಕೆಲವು ಅತೃಪ್ತ ಶಾಸಕರನ್ನು ಮನವೊಲಿಸಿ ಸರ್ಕಾರದ ವಿರುದ್ಧ ಮತ ಚಲಾಯಿಸುವಂತೆ ನೋಡಿಕೊಳ್ಳಬಹುದು. ಅದರಿಂದ ಮುಂದೆ ಅವರು ಆರು ವರ್ಷಗಳ ಕಾಲ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಸಿಗದಿದ್ದರೂ ಅವರ ಕುಟುಂಬದ ಸದಸ್ಯರಿಗೆ ಟಿಕೆಟ್ ನೀಡಿ ಗೆಲ್ಲಿಸಿಕೊಳ್ಳುವ ತಂತ್ರವನ್ನೂ ಹೆಣೆಯಲಾಗುತ್ತಿದೆ ಎಂದು ತಿಳಿದು ಬಂದಿದೆ.
ಬಿಜೆಪಿ ತಮ್ಮ ಶಾಸಕರನ್ನು ಸೆಳೆದು ರಾಜೀನಾಮೆ ಕೊಡಿಸಬಹುದು ಎಂಬ ಆತಂಕದಿಂದ ಶುಕ್ರವಾರ ಸಂಜೆ ಕಾಂಗ್ರೆಸ್ ಶಾಸಕರನ್ನು ಆ ಪಕ್ಷದ ನಾಯಕರು ರೆಸಾರ್ಟ್‌ಗೆ ಕರೆದೊಯ್ದರು. ನಿರೀಕ್ಷಿತ ಮಟ್ಟದ ಸಂಖ್ಯೆಯ ಶಾಸಕರು ಸದ್ಯಕ್ಕೆ ಲಭ್ಯವಾಗಿಲ್ಲದ ಕಾರಣ ಬಿಜೆಪಿ ಲೆಕ್ಕಾಚಾರವೂ ತಲೆಕೆಳಗಾಯಿತು. ಹೀಗಾಗಿ ತನ್ನ ಶಾಸಕರನ್ನು ವಾಪಸ್ ಕರೆಸಿಕೊಳ್ಳುವ ನಿರ್ಧಾರ ಕೈಗೊಂಡಿತು. ಈ ಬಗ್ಗೆ ಬಿಜೆಪಿ ಹೈಕಮಾಂಡ್ ಸೂಚನೆಯನ್ನೇ ರವಾನಿಸಿತು ಎಂದು ಮೂಲಗಳು ತಿಳಿಸಿವೆ.
ಮೇಲಾಗಿ ತಮ್ಮ ಶಾಸಕರನ್ನು ವಾಪಸ್ ಕರೆಸಿಕೊಂಡು ತಮ್ಮ ತಮ್ಮ ಕ್ಷೇತ್ರಗಳಲ್ಲಿನ ಬರ ಪರಿಸ್ಥಿತಿ ನಿರ್ವಹಣೆ ಮಾಡಲು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸೂಚಿಸಿದ್ದಾರೆ. ಈ ಮೂಲಕ ಆಡಳಿತಾರೂಢ ಕಾಂಗ್ರೆಸ್ ಮತ್ತು ಜೆಡಿಎಸ್‌ಗೆ ಟಾಂಗ್ ನೀಡಲು ಉದ್ದೇಶಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.