ಬಿಎಸ್‌ವೈ ‘ಬಾಂಬ್‌’ನಿಂದ ಬಿಜೆಪಿ ವರಿಷ್ಠರಲ್ಲಿ ಗೊಂದಲ

By Kannadaprabha NewsFirst Published Jun 9, 2021, 7:54 AM IST
Highlights
  • ಪಕ್ಷದ ಹೈಕಮಾಂಡ್‌ ಬಯಸಿದರೆ ರಾಜೀನಾಮೆ ನೀಡಲು ಸಿದ್ಧ  ಎಂದ ಬಿ ಎಸ್ ವೈ
  • ಬಿಜೆಪಿ ವರಿಷ್ಠರನ್ನೇ ಗೊಂದಲಕ್ಕೀಡು ಮಾಡಿದ ಬಿ ಎಸ್‌ ವೈ ಹೇಳಿಕೆ
  • ಹೇಗೆ ಪ್ರತಿಕ್ರಿಯಿಸಬೇಕು ಎನ್ನುವುದು ತೋಚದೆ ಮೌನಕ್ಕೆ ಶರಣಾಗಿರುವ ನಾಯಕರು

ಬೆಂಗಳೂರು (ಜೂ.09): ಪಕ್ಷದ ಹೈಕಮಾಂಡ್‌ ಬಯಸಿದರೆ ರಾಜೀನಾಮೆ ನೀಡಲು ಸಿದ್ಧ ಎಂಬ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಹೇಳಿಕೆ ಬಿಜೆಪಿ ವರಿಷ್ಠರನ್ನೇ ಗೊಂದಲಕ್ಕೀಡು ಮಾಡಿದ್ದು, ಇದಕ್ಕೆ ಹೇಗೆ ಪ್ರತಿಕ್ರಿಯಿಸಬೇಕು ಎನ್ನುವುದು ತೋಚದೆ ಮೌನಕ್ಕೆ ಶರಣಾಗಿರುವುದು ಕುತೂಹಲ ಮೂಡಿಸಿದೆ.

ಒಂದು ರಾಜ್ಯದ ಮುಖ್ಯಮಂತ್ರಿಯಂಥ ಉನ್ನತ ಹುದ್ದೆಯಲ್ಲಿದ್ದವರು ಹೈಕಮಾಂಡ್‌ ಹೇಳಿದರೆ ರಾಜೀನಾಮೆ ನೀಡುವುದಾಗಿ ಬಹಿರಂಗವಾಗಿ ಹೇಳಿಕೆ ನೀಡಿದ ಬಳಿಕ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾಗಲಿ ಅಥವಾ ಪಕ್ಷದ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌ ಅವರಾಗಲಿ ಇದುವರೆಗೆ ಪ್ರತಿಕ್ರಿಯೆ ನೀಡಿಲ್ಲ. ಇವರಿಬ್ಬರಲ್ಲಿ ಒಬ್ಬರಾದರೂ ಅಧಿಕೃತವಾಗಿ ಹೇಳಿಕೆ ನೀಡಿದರೆ ಮಾತ್ರ ಅದಕ್ಕೆ ತೂಕ ಬರುತ್ತದೆ ಎಂಬ ಮಾತು ಬಿಜೆಪಿ ಪಾಳೆಯದಿಂದ ಕೇಳಿಬಂದಿದೆ.

ರಾಜೀನಾಮೆ ಬಗ್ಗೆ ಬಿಎಸ್‌ವೈ ಸ್ಫೋಟಕ ಹೇಳಿಕೆ: ಬಿಜೆಪಿ ನಾಯಕರ ಅಭಿಪ್ರಾಯ

ಆದರೆ, ರಾಜ್ಯದವರೇ ಆದ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ರಾಜ್ಯಾಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌, ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಅವರು ಯಡಿಯೂರಪ್ಪ ಅವರ ನಾಯಕತ್ವದಲ್ಲಿ ಯಾವುದೇ ಬದಲಾವಣೆ ಇಲ್ಲ. ಅವರೇ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ ಎಂಬ ಮಾತನ್ನು ಹೇಳಿದ್ದರೂ ರಾಜ್ಯ ಬಿಜೆಪಿಯಲ್ಲಿ ಮಾತ್ರ ಅನುಮಾನ ಮುಂದುವರೆದಿದೆ.

ಕಳೆದ ಹಲವು ದಿನಗಳಿಂದ ರಾಜ್ಯದಲ್ಲಿ ನಾಯಕತ್ವದ ವಿರುದ್ಧ ತೆರೆಮರೆಯಲ್ಲಿ ಚಟುವಟಿಕೆಗಳು ಸಾಂಗವಾಗಿಯೇ ಮುಂದುವರೆದಿದ್ದವು. ನಾಯಕತ್ವ ಬದಲಾವಣೆ ಬಗ್ಗೆ ಬಹಿರಂಗವಾಗಿ ಚರ್ಚೆ ನಡೆಯುತ್ತಿದ್ದರೂ ಹೈಕಮಾಂಡ್‌ ಮಾತ್ರ ಜಾಣತನದ ಅಂತರವನ್ನೇ ಕಾಪಾಡಿಕೊಂಡಿತ್ತು. ಆದರೆ, ಮುಖ್ಯಮಂತ್ರಿ ಯಡಿಯೂರಪ್ಪ ಅವರು ಏಕಾಏಕಿ ಇಂಥದೊಂದು ಹೇಳಿಕೆಯನ್ನು ನೀಡಬಹುದು ಎಂಬ ನಿರೀಕ್ಷೆಯೂ ಬಿಜೆಪಿ ಹೈಕಮಾಂಡ್‌ಗೆ ಇರಲಿಲ್ಲ. ಹೀಗಾಗಿ, ಇದೀಗ ಹೈಕಮಾಂಡ್‌ ಇದನ್ನು ಹೇಗೆ ನಿಭಾಯಿಸುವುದು ಎಂಬ ಯೋಚನೆಯಲ್ಲಿ ಮಗ್ನರಾಗಿದೆ ಎನ್ನಲಾಗುತ್ತಿದೆ.

ವಿರೋಧಿಗಳಿಗೆ ಟಕ್ಕರ್, ಹೈಕಮಾಂಡ್‌ಗೆ ಸಂದೇಶ, ಬಿಎಸ್‌ವೈ ರಾಜೀನಾಮೆ ಹೇಳಿಕೆ ಹಿಂದಿನ ಲೆಕ್ಕಾಚಾರವಿದು ...

ಒಟ್ಟಿನಲ್ಲಿ ಬಿಜೆಪಿ ಹೈಕಮಾಂಡ್‌ ಈಗ ಏನೇ ಹೇಳಿಕೆ ನೀಡುವುದಕ್ಕೂ ಹಿಂದೆ ಮುಂದೆ ನೋಡುತ್ತಿದೆ. ಹೀಗಾಗಿಯೇ ಸದ್ಯಕ್ಕೆ ಯಾರೂ ಬಹಿರಂಗ ಹೇಳಿಕೆ ನೀಡುವುದು ಬೇಡ ಎಂಬ ಸಂದೇಶವನ್ನು ರಾಜ್ಯ ನಾಯಕರಿಗೆ ರವಾನಿಸಿದ್ದು, ಶೀಘ್ರದಲ್ಲೇ ಪಕ್ಷದ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌ ಅವರನ್ನು ಕಳುಹಿಸಿ ಬಿಕ್ಕಟ್ಟು ಬಗೆಹರಿಸಲು ಪ್ರಯತ್ನಿಸಬಹುದು ಎಂದು ಮೂಲಗಳು ತಿಳಿಸಿವೆ.

click me!