‘ಕೈ’ ಆಡಿಯೋ ಬಾಂಬ್‌ಗೆ ಬಿಜೆಪಿಯಿಂದ ಪ್ರತಿತಂತ್ರ

By Kannadaprabha NewsFirst Published Nov 3, 2019, 7:57 AM IST
Highlights

ಆಡಳಿತಾರೂಢ ಬಿಜೆಪಿ ಪ್ರತಿತಂತ್ರ ರೂಪಿಸಲು ಮುಂದಾಗಿದೆ. ಕಾಂಗ್ರೆಸ್ ಆಡಿಯೋ ಬಾಂಬ್ ವಿರುದ್ಧ ಇದೀಗ ಬಿಜೆಪಿ ಪಾಳಯದಲ್ಲಿ ಮಾಸ್ಟರ್ ಪ್ಲಾನ್ ರೂಪಿಸಲಾಗುತ್ತಿದೆ. 

ಬೆಂಗಳೂರು (ನ.03):  ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಹುಬ್ಬಳ್ಳಿಯ ಪಕ್ಷದ ಸಭೆಯಲ್ಲಿ ಆಡಿದ್ದಾರೆ ಎನ್ನಲಾದ ಮಾತನ್ನು ಪ್ರತಿಪಕ್ಷಗಳು ರಾಜಕೀಯ ಮತ್ತು ಕಾನೂನು ಅಸ್ತ್ರವನ್ನಾಗಿ ಬಳಸಿಕೊಳ್ಳಲು ಮುಂದಾಗುತ್ತಿದ್ದಂತೆಯೇ ಎಚ್ಚೆತ್ತ ಆಡಳಿತಾರೂಢ ಬಿಜೆಪಿ ಪ್ರತಿತಂತ್ರ ರೂಪಿಸಲು ಮುಂದಾಗಿದೆ.

ಯಡಿಯೂರಪ್ಪ ಅವರು ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಬಿಡುಗಡೆಯಾಗಿದ್ದು ಶುಕ್ರವಾರ ಸಂಜೆ. ಆದರೆ, ಶನಿವಾರ ಬೆಳಗ್ಗೆ ಹೊತ್ತಿಗೆ ಪ್ರತಿಪಕ್ಷಗಳಾದ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಇದನ್ನು ಬಳಸಿಕೊಂಡು ಬಿಜೆಪಿ ಸರ್ಕಾರದ ವಿರುದ್ಧ ಮುಗಿಬಿದ್ದವು.

ಇದರ ಬೆನ್ನಲ್ಲೇ ತಿರುಗೇಟು ನೀಡಿದ ಬಿಜೆಪಿ ರಾಜ್ಯಾಧ್ಯಕ್ಷ, ವಿವಿಧ ಸಚಿವರು ಹಾಗೂ ಪಕ್ಷದ ನಾಯಕರು ಆಧಾರಗಳಿಲ್ಲದೇ ಹೇಳಿಕೆ ನೀಡುವುದು, ನಕಲಿ ಧ್ವನಿ ಸುರುಳಿ ಸೃಷ್ಟಿಸಿ ಜನರಲ್ಲಿ ಗೊಂದಲ ಮೂಡಿಸುವುದು ಕಾಂಗ್ರೆಸ್‌ಗೆ ಕರಗತವಾಗಿದೆ ಎಂದು ವಾಗ್ದಾಳಿ ನಡೆಸಿದರು. ಅನರ್ಹ ಶಾಸಕರ ಪ್ರಕರಣ ಸುಪ್ರೀಂಕೋರ್ಟ್‌ನಲ್ಲಿರುವಾಗ ಸುಳ್ಳು ಸಾಕ್ಷಿ ಸೃಷ್ಟಿಸಿ ನ್ಯಾಯಾಲಯದ ಮೇಲೆ ಪ್ರಭಾವ ಬೀರುವಂತೆ ಮಾಡುವುದು ಅಪರಾಧ. ಇದು ಕಾಂಗ್ರೆಸ್‌ಗೆ ಶೋಭೆ ತರುವುದಿಲ್ಲ ಎಂದೂ ಹರಿಹಾಯ್ದರು.

ಅಲ್ಲದೆ, ಈ ಪ್ರಕರಣವನ್ನು ಮುಂದಿಟ್ಟುಕೊಂಡು ಪ್ರತಿಪಕ್ಷಗಳು ನ್ಯಾಯಾಲಯದ ಮೆಟ್ಟಿಲು ಹತ್ತಿದರೂ ಯಾವುದೇ ಪ್ರಯೋಜನವಿಲ್ಲ. ಧ್ವನಿಮುದ್ರಿಕೆಗೆ ಮಾನ್ಯತೆಯಿಲ್ಲ ಎಂಬ ಪ್ರತಿವಾದ ಮಂಡಿಸಲು ಬಿಜೆಪಿ ನಿರ್ಧರಿಸಿದೆ.

ಇದಕ್ಕೆ ಪೂರಕವಾಗಿ ಎಂಬಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು, ಅನರ್ಹ ಶಾಸಕರು ಮುಂಬೈನಲ್ಲಿ ಇದ್ದದ್ದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಸೇರಿದಂತೆ ಎಲ್ಲರಿಗೂ ಗೊತ್ತಿತ್ತು ಎಂಬುದನ್ನು ಮಾತ್ರ ಹೇಳಿದ್ದೇನೆ ಹೊರತು ಬೇರೆ ಏನನ್ನೂ ಹೇಳಿಲ್ಲ. ಅನಗತ್ಯವಾಗಿ ಅವರ ಹೆಸರು ಎಳೆಯಬಾರದು ಎಂದು ಸ್ಪಷ್ಟನೆ ನೀಡಿದರು.

ಅನರ್ಹ ಶಾಸಕರಿಂದಲೇ ಬಿಜೆಪಿ ಸರ್ಕಾರ ರಚನೆಯಾಗಿದ್ದು ಎಂದ ಬಿಜೆಪಿ ಶಾಸಕ...

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್‌ ಅವರು, ಅನರ್ಹಗೊಂಡಿರುವ ಶಾಸಕರು ಮುಂಬೈನಲ್ಲಿ ಇದ್ದದ್ದು ಕೇಂದ್ರ ನಾಯಕರಿಗೂ ಗೊತ್ತಿರುವ ವಿಷಯ. ಸಿದ್ದರಾಮಯ್ಯ ಅವರು ಇಂತಹ ಧ್ವನಿ ಸುರುಳಿ ಮತ್ತು ಜನರ ಹೇಳಿಕೆಗಳ ಬಗ್ಗೆ ಸುಪ್ರೀಂಕೋರ್ಟ್‌ ಕೊಟ್ಟತೀರ್ಪುಗಳನ್ನು ಒಮ್ಮೆ ಅವಲೋಕಿಸಿ ನೋಡಲಿ, ಆಗ ಅವರಿಗೆ ಧ್ವನಿ ಸುರುಳಿಯ ಕಾನೂನಿನ ಮೌಲ್ಯ ಗೊತ್ತಾಗುತ್ತದೆ ಎಂದು ಹೇಳಿದ್ದಾರೆ.

click me!