ನಾವು ಪಾಕಿಸ್ತಾನದಲ್ಲಿ ಇದ್ದೀವಾ?: ‘ಜೈ ಶ್ರೀರಾಮ್‌’ ಕೂಗಿದವರ ಮೇಲೆ ಹಲ್ಲೆಗೆ ಬಿಜೆಪಿ ಕೆಂಡ

By Kannadaprabha NewsFirst Published Apr 19, 2024, 8:03 AM IST
Highlights

ಬೆಂಗಳೂರಿನಲ್ಲಿ ಜೈ ಶ್ರೀರಾಮ್‌ ಘೋಷಣೆ ಕೂಗಿದ್ದ ಹಿಂದೂ ಯುವಕರನ್ನು ತಡೆದು ಅನ್ಯಕೋಮಿನ ಯುವಕರು ಹಲ್ಲೆ ಮಾಡಿದ ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಬಿಜೆಪಿ ನಾಯಕರು, ಈ ರೀತಿಯ ಘಟನೆಗೆ ಕಾಂಗ್ರೆಸ್‌ ಸರ್ಕಾರದ ತುಷ್ಟೀಕರಣದ ನೀತಿಯೇ ಕಾರಣವಾಗಿದೆ.

ಬೆಂಗಳೂರು (ಏ.19): ಬೆಂಗಳೂರಿನಲ್ಲಿ ಜೈ ಶ್ರೀರಾಮ್‌ ಘೋಷಣೆ ಕೂಗಿದ್ದ ಹಿಂದೂ ಯುವಕರನ್ನು ತಡೆದು ಅನ್ಯಕೋಮಿನ ಯುವಕರು ಹಲ್ಲೆ ಮಾಡಿದ ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಬಿಜೆಪಿ ನಾಯಕರು, ಈ ರೀತಿಯ ಘಟನೆಗೆ ಕಾಂಗ್ರೆಸ್‌ ಸರ್ಕಾರದ ತುಷ್ಟೀಕರಣದ ನೀತಿಯೇ ಕಾರಣವಾಗಿದೆ. ಹಲ್ಲೆ ಮಾಡಿದ ಮುಸ್ಲಿಂ ಮೂಲಭೂತವಾದಿಗಳ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳದಿದ್ದರೆ ಸರ್ಕಾರದ ವಿರುದ್ಧ ತೀವ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಪ್ರತಿಪಕ್ಷದ ನಾಯಕ ಆರ್‌.ಅಶೋಕ್‌, ಶಾಸಕ ಡಾ। ಸಿ.ಎನ್‌.ಅಶ್ವತ್ಥನಾರಾಯಣ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸರ್ಕಾರದ ವಿರುದ್ಧ ಟೀಕಾಪ್ರಹಾರ ನಡೆಸಿದರು. 

ಸಿದ್ದರಾಮಯ್ಯ ಅವರು ಇಸ್ಲಾಮಿಕ್ ಮೂಲಭೂತವಾದಿಗಳಿಗೆ ಕರ್ನಾಟಕವನ್ನು ಧಾರೆ ಎರೆದಿದ್ದಾರೆ. ಸರ್ಕಾರ ಬಂದ ಬಳಿಕ ರಾಜ್ಯದಲ್ಲಿ ಹಿಂದೂಗಳು ಭಯದಿಂದ ಬದುಕುವ ವಾತಾವರಣ ನಿರ್ಮಾಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಟಿಪ್ಪು ಸಿದ್ಧಾಂತದ ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ಬಳಿಕ ರಾಜ್ಯದಲ್ಲಿ ಮೂಲಭೂತವಾದಿ ಇಸ್ಲಾಮಿಕ್ ಸಂಘಟನೆಗಳು, ಇಸ್ಲಾಮಿಕ್ ಕಾರ್ಯಕರ್ತರು, ಪಾಕಿಸ್ತಾನ ಬೆಂಬಲಿತ ಕಾರ್ಯಕರ್ತರು ಹಿಂದೂಗಳ ಮೇಲೆ ನಿರಂತರವಾಗಿ ಹಲ್ಲೆ ನಡೆಸುತ್ತಿದ್ದಾರೆ. ಅವಹೇಳನ, ಧಮ್ಕಿ, ಭಯೋತ್ಪಾದನಾ ಚಟುವಟಿಕೆ, ಬಾಂಬ್ ಹಾಕುವ ಘಟನೆಗಳು ಮಿತಿ ಮೀರಿವೆ ಎಂದು ಆರೋಪಿಸಿದರು.

ಕಳೆದ 10 ವರ್ಷಗಳಲ್ಲಿ ಪ್ರಧಾನಿ ಮೋದಿಗೆ ರೈತರ ಆರ್ತನಾದ ಕೇಳಿಸಿಲ್ಲ: ದೇವನೂರ ಮಹಾದೇವ ಕಿಡಿ

ಡಿಕೆಸು ಕಲ್ಲು ಬಂಡೆ ಇಟ್ಟುಕೊಳ್ಳಿ: ಲಕ್ಷ್ಮಣ ಸವದಿಯವರು ಸಾರ್ವಜನಿಕ ಸಭೆಯಲ್ಲಿ ಕೈಮುಗಿದು ವಿನಮ್ರವಾಗಿ ‘ನಾನು ಭಾರತ್ ಮಾತಾ ಕೀ ಜೈ ಅನ್ನಬಹುದೇ ಖರ್ಗೆ ಸಾಹೇಬರೇ’ ಎಂದು ಕೇಳಿದ್ದಾರೆ. ಖರ್ಗೆಯವರು ಅನುಮತಿ ಕೊಟ್ಟಿದ್ದಾರೆ. ಡಿ.ಕೆ.ಸುರೇಶ್ ಅವರು ರಾಮ ದೇವರಲ್ಲ, ನಾವು ಮನೆಯಲ್ಲಿ ಅವರ ಫೋಟೋ ಇಟ್ಟಿಲ್ಲ ಎನ್ನುತ್ತಾರೆ. ಡಿ.ಕೆ.ಸುರೇಶ್ ಅವರೇ, ನೀವು ಕಲ್ಲುಬಂಡೆ ವ್ಯಾಪಾರ ಮಾಡುವವರಲ್ಲವೇ? ಕಲ್ಲು ಬಂಡೆ ಇಟ್ಟುಕೊಳ್ಳಿ. ರಾಮನ ಫೋಟೋ ಯಾಕೆ ಇಡಬೇಕು ಎಂದು ಪ್ರಶ್ನಿಸಿದರು.

ಹಿಂದೂಗಳಿಗೆ ಭಯ: ರಾಜ್ಯದಲ್ಲಿ ಮುಸ್ಲಿಂ ಭಯೋತ್ಪಾದನಾ ಚಟುವಟಿಕೆಗಳು ಜಾಸ್ತಿಯಾಗಿವೆ. ರಾಮ ಮಂದಿರಕ್ಕೆ ಹೋಗುವ ಹಿಂದೂ ಕಾರ್ಯಕರ್ತರ ವಿರುದ್ಧ ಕೇಸು ದಾಖಲಿಸಲಾಗುತ್ತಿದೆ. ಡಿ.ಕೆ.ಸುರೇಶ್‌ ದೇಶ ಇಬ್ಭಾಗ ಮಾಡಬೇಕು ಎನ್ನುತ್ತಾರೆ. ಈ ರೀತಿಯ ಹೇಳಿಕೆಗಳಿಂದ ಅಲ್ಪಸಂಖ್ಯಾತ ಮೂಲಭೂತವಾದಿಗಳಿಗೆ ಹುರುಪು ಬಂದಿದೆ. ರಾಮೇಶ್ವರಂ ಕೆಫೆ ಬಾಂಬ್ ಹೊಗೆ ಏಳುತ್ತಿರುವಾಗಲೇ ಅದು ಹೋಟೆಲ್ ವೈಷಮ್ಯ ಎಂದಿದ್ದರು ಎಂದು ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದರು.

ನಾವು ಪಾಕಿಸ್ತಾನದಲ್ಲಿ ಇದ್ದೀವಾ?: ಶಾಸಕ ಅಶ್ವತ್ಥನಾರಾಯಣ ಮಾತನಾಡಿ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ನಡೆಯುತ್ತಿರುವ ತುಷ್ಟೀಕರಣ ರಾಜಕಾರಣದ ಬಿಸಿ, ಅದರ ಪ್ರಭಾವ ನಿತ್ಯ ಕಾಣುತ್ತಿದೆ. ವಿದ್ಯಾರಣ್ಯಪುರ ಘಟನೆ ನೋಡಿದಾಗ ನಾವೆಲ್ಲಿದ್ದೀವಿ ಎನ್ನುವ ಅನುಮಾನ ಬರುತ್ತದೆ. ನಾವು ಪಾಕಿಸ್ತಾನದಲ್ಲಿ ಇದ್ದೀವಾ, ‘ಅಲ್ಲಾ ಎಂದು ಮಾತ್ರ ಹೇಳಿ, ಜೈ ಶ್ರೀರಾಮ್‌ ಹೇಳಬೇಡಿ’ ಎಂದರೆ ಏನಿದು? ಇಂತವರಿಗೆಲ್ಲಾ ಕಾಂಗ್ರೆಸ್‌ ಪ್ರಚೋದನೆ ಇದೆ. ನಾವು ಏನು ಘೋಷಣೆ ಕೂಗಬೇಕು, ಏನು ಪೂಜೆ ಮಾಡಬೇಕು ಎನ್ನುವ ದುಸ್ಥಿತಿ ಬಂದಿದೆಯಾ? ಬಹುಸಂಖ್ಯಾತರ ಭಾವನೆಗಳಿಗೆ ಸ್ಪಂದಿಸದ ಸರ್ಕಾರ ಇರಬಾರದು, ಈ ಸರ್ಕಾರ ವಜಾ ಆಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಲೋಕಸಭೆ ಚುನಾವಣೆ ಬಳಿಕ ರಾಜ್ಯದ ಕಾಂಗ್ರೆಸ್‌ ಸರ್ಕಾರ ಪತನ: ದೇವೇಗೌಡ ಭವಿಷ್ಯ

ಇದೇ ವೇಳೆ ವಿದ್ಯಾರಣ್ಯಪುರದಲ್ಲಿ ಅನ್ಯ ಕೋಮಿನ ಯುವಕರಿಂದ ಹಲ್ಲೆಗೊಳಗಾದ ಯುವಕರ ಮನೆಗೆ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಅವರು ಬುಧವಾರ ತಡರಾತ್ರಿ ಭೇಟಿಯಾಗಿ ಧೈರ್ಯ ತುಂಬಿದ್ದಾರೆ ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಲ್ಲೆ ಘಟನೆಯನ್ನು ಖಂಡಿಸುತ್ತೇವೆ. ಇಡೀ ದೇಶದಲ್ಲಿ ರಾಮನವಮಿ ಆಚರಿಸಲಾಗುತ್ತಿದೆ. ಈ ಹುಡುಗರು ಭಗವಾಧ್ವಜ ಹಿಡಿದು ಹೋಗುವಾಗ ತಡೆದು ಹಲ್ಲೆ ಮಾಡಲಾಗಿದೆ. ಕೂಡಲೇ ಎಲ್ಲ ಆರೋಪಿಗಳನ್ನು ಬಂಧಿಸಬೇಕು. ಘಟನೆಯ ಹಿಂದೆ ಕಾಂಗ್ರೆಸ್‌ ಕುಮ್ಮಕ್ಕಿದ್ದರೆ ಸುಮ್ಮನೆ ಬಿಡುವುದಿಲ್ಲ. ಚುನಾವಣೆ ಸಂದರ್ಭದಲ್ಲಿ ಗಲಭೆ ಎಬ್ಬಿಸಿ ಕ್ಷೇತ್ರದಲ್ಲಿ ತೊಂದರೆ ನೀಡುವುದು, ಚುನಾವಣೆಗೆ ಅಡ್ಡಿಪಡಿಸಿದರೆ ನಾವು ಹೋರಾಟ ಮಾಡುತ್ತೇವೆ. ಯುವಕರು ಹೆದರುವ ಅಗತ್ಯವಿಲ್ಲ ಎಂದು ಹೇಳಿದರು.

click me!