RSS ಮೂಲ ಪ್ರಶ್ನಿಸಿದ ಸಿದ್ದುಗೆ ಬಿಜೆಪಿ ತರಾಟೆ: ದೇಶ ಕಟ್ಟುವ ಸಂಸ್ಥೆ ಬಗ್ಗೆ ಮಾತನಾಡುವ ನೈತಿಕತೆ ಅವರಿಗಿಲ್ಲ!

By Govindaraj SFirst Published May 29, 2022, 3:10 AM IST
Highlights

ಆರೆಸ್ಸೆಸ್‌ ಮೂಲ ಯಾವುದು ಎಂದು ಪ್ರಶ್ನಿಸಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ ವಿರುದ್ಧ ಆಡಳಿತಾರೂಢ ಬಿಜೆಪಿ ಮುಗಿಬಿದ್ದಿದೆ. 

ಬೆಂಗಳೂರು (ಮೇ.29): ಆರೆಸ್ಸೆಸ್‌ ಮೂಲ ಯಾವುದು ಎಂದು ಪ್ರಶ್ನಿಸಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ ವಿರುದ್ಧ ಆಡಳಿತಾರೂಢ ಬಿಜೆಪಿ ಮುಗಿಬಿದ್ದಿದೆ. ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌, ಸಚಿವ ನಾಗೇಶ್‌, ಸಂಸದ ಪ್ರತಾಪಸಿಂಹ ಸೇರಿದಂತೆ ಅನೇಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿದ್ದರಾಮಯ್ಯ ಅವರು ಬೇಕಾಬಿಟ್ಟಿಮಾತನಾಡಿ ರಾಜ್ಯದಲ್ಲಿ ವೈಷಮ್ಯ ಹಬ್ಬಿಸುವ ಕೆಲಸ ಮಾಡುತ್ತಿದ್ದು, ದೇಶ ಕಟ್ಟುವ ಕೆಲಸ ಮಾಡುತ್ತಿರುವ ಆರ್‌ಎಸ್‌ಎಸ್‌ ಬಗ್ಗೆ ಮಾತನಾಡುವ ನೈತಿಕತೆ ಅವರಿಗೆ ಇಲ್ಲ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ಶುಕ್ರವಾರ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ನಡೆದ ಜವಾಹರ್‌ಲಾಲ್‌ ನೆಹರು ಪುಣ್ಯತಿಥಿ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಅವರು ಬಿಜೆಪಿ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ತರಾಟೆಗೆ ತೆಗೆದುಕೊಂಡಿದ್ದರು. ಅಪ್ರತಿಮ ದೇಶಭಕ್ತ ಭಗತ್‌ಸಿಂಗ್‌ ಪಠ್ಯವನ್ನು ತೆಗೆದುಹಾಕಿ ಹೆಡಗೇವಾರ್‌ ಭಾಷಣ ಹಾಕಿದ್ದಾರೆ. ಇದನ್ನು ಪ್ರಶ್ನಿಸಿದರೆ ದೇಶ ಬಿಟ್ಟು ಹೋಗಿ ಎನ್ನುತ್ತಾರೆ. ಯಾರು ದೇಶ ಬಿಟ್ಟು ಹೋಗಬೇಕಾದವರು? ಆರೆಸ್ಸೆಸ್‌ ಈ ದೇಶದ್ದಾ? ಅವರೇನು ದ್ರಾವಿಡರಾ? ದ್ರಾವಿಡರು ಈ ದೇಶದವರು. ಇದನ್ನೆಲ್ಲಾ ಪ್ರಶ್ನಿಸುತ್ತಾ ಹೋದರೆ ಏನಾಗುತ್ತದೆ ಗೊತ್ತಾ? ಅದಕ್ಕೇ ಚರಿತ್ರೆಯನ್ನು ಕೆದಕಲು ಹೋಗಬಾರದು ಎಂದು ಹೇಳಿದ್ದರು.

ಪ್ರಶ್ನೆ ಮಾಡಿದ್ದು RSS ಎಂಬ ಸಂಸ್ಥೆಯನ್ನ, ಬಿಜೆಪಿ ನಾಯಕರು ಏಕೆ ಎದೆ ಬಡಿದುಕೊಳ್ಳುತ್ತಿದ್ದಾರೆ?

ಇದಕ್ಕೆ ಶನಿವಾರ ಹುಬ್ಬಳ್ಳಿಯಲ್ಲಿ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಸಿದ್ದರಾಮಯ್ಯ ಅವರನ್ನು ಮೂಲ ಜಾಗದಿಂದ ಜನರು ಓಡಿಸಿದ್ದಾರೆ. ಬಹುಶಃ ಅವರು ಅದನ್ನು ಮರೆತಂತೆ ಕಾಣುತ್ತಿದೆ. ದೇಶದಲ್ಲಿ ಕಾಂಗ್ರೆಸ್‌ ತನ್ನ ಮೂಲ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿದೆ. ಆದರೆ ಸಿದ್ದರಾಮಯ್ಯ ಆರ್‌ಎಸ್‌ಎಸ್‌ನ ಮೂಲದ ಬಗ್ಗೆ ಕೆದಕುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ. ಮಂಗಳೂರಿನಲ್ಲಿ ನಳಿನ್‌ ಕುಮಾರ್‌ ಕಟೀಲ್‌ ಪ್ರತಿಕ್ರಿಯಿಸಿ, ನೆಹರು ಸಂತತಿಯಲ್ಲಿ ಭಿಕ್ಷಾಟನೆ ಮಾಡಿ ಅಧಿಕಾರ ಗಳಿಸಿದ ಮಾಜಿ ಸಿಎಂ ಸಿದ್ದರಾಮಯ್ಯಗೆ ಮತ್ತೆ ಸಿಎಂ ಆಗುವ ಹುಚ್ಚು ಆಸೆ ಶುರುವಾಗಿದೆ ಎಂದು ಮೂದಲಿಸಿದರು.

ಕೊಪ್ಪಳದಲ್ಲಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಮಾತನಾಡಿ, ಆರ್‌ಎಸ್‌ಎಸ್‌ ಇಟಾಲಿಯನ್‌ ಮೂಲ ಅಲ್ಲ ಎಂದು ಟಾಂಗ್‌ ನೀಡಿದ್ದಾರೆ. ಸಿದ್ದರಾಮಯ್ಯ ಅಧಿಕಾರದಲ್ಲಿದ್ದಾಗ ಆರ್‌ಎಸ್‌ಎಸ್‌ ಮೂಲ ತಿಳಿದುಕೊಂಡು ಏನಾದರೂ ಮಾಡಬಹುದಿತ್ತು ಎಂದಿದ್ದಾರೆ. ಸಂಸದ ಪ್ರತಾಪಸಿಂಹ ಅವರು, ಸಿದ್ದರಾಮಯ್ಯ ಆರ್‌ಎಸ್‌ಎಸ್‌ ಮೂಲ ಹುಡುಕುವ ಮೊದಲು ಸೋನಿಯಾ ಗಾಂಧಿ ಮೂಲ ಹುಡುಕಿ ಕರ್ನಾಟಕದ ಜನತೆಗೆ ಇದನ್ನು ಮೊದಲು ತಿಳಿಸಿ, ಆಮೇಲೆ ಬೇರೆಯವರ ಬಗ್ಗೆ ಪ್ರಶ್ನೆ ಮಾಡಿ ಎಂದು ಖಾರವಾಗಿ ಹೇಳಿದ್ದಾರೆ.

ಸಿದ್ದರಾಮಯ್ಯ ಅಲೆಮಾರಿ, ಅಧಿಕಾರದಾಹಿ: ಈಶ್ವರಪ್ಪ ವಾಗ್ದಾಳಿ

ಕಾಂಗ್ರೆಸ್‌ನವರು ಜಾತಿ ಬಗ್ಗೆ ಮಾತನಾಡುವುದು ಹೊಸತಲ್ಲ. ದ್ರಾವಿಡ, ಆರ್ಯ ಎಂದು ಯಾವುದೇ ಥಿಯರಿ ಇಲ್ಲ ಎಂದು ವಿಜ್ಞಾನವೇ ಪ್ರೂವ್‌ ಮಾಡಿದೆ. ಡಿಎನ್‌ಎ ಟೆಸ್ಟ್‌ನಲ್ಲಿ ಎಲ್ಲವೂ ಒಂದೇ ಎಂದು ತಿಳಿದು ಬಂದಿದೆ. ಹೀಗಿದ್ದರೂ ಕಾಂಗ್ರೆಸ್‌ ಈ ಬಗ್ಗೆ ಮಾತನಾಡುತ್ತಿದೆ. ಇದನ್ನೆಲ್ಲಾ ನೋಡಿದರೆ ಕಾಂಗ್ರೆಸ್‌ ಬೇರೆ ಏನೋ ಉದ್ದೇಶ ಇಟ್ಟುಕೊಂಡು ಮಾತನಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಜೆಡಿಎಸ್‌ನಲ್ಲಿದ್ದಾಗ ಸೋನಿಯಾ ಗಾಂಧಿ ಅವರನ್ನು ಏಕವಚನದಲ್ಲಿ ಮಾತನಾಡುತ್ತಿದ್ದರು. ಈಗ ಅವರದ್ದೇ ಪಕ್ಷಕ್ಕೆ ಹೋಗಿ ಮಹಾತಾಯಿ ಎನ್ನುತ್ತಿದ್ದಾರೆ. ಸಿದ್ದರಾಮಯ್ಯ ಮಹಾತಾಯಿ, ಮಹಾನಾಯಕಿ ಎಂದು ಒಪ್ಪಿಕೊಳ್ಳುವ ದಯನೀಯ ಸ್ಥಿತಿಯಲ್ಲಿದ್ದಾರೆ. 

click me!