ಬಿಜೆಪಿ ಶಾಸಕರೇ ಬಂಡಾಯ ಎದ್ದಿದ್ದಾರೆ| ರಾಜ್ಯ ಸರ್ಕಾರ ದಿವಾಳಿಯಾಗಿ ಹೋಗಿದೆ
ಕೊಪ್ಪಳ(ಜೂ.04): ಸ್ವತಃ ಬಿಜೆಪಿ ಶಾಸಕರೇ ಬಂಡಾಯ ಎದ್ದಿದ್ದಾರೆ. ವಿಜಯಪುರದ ಬಸನಗೌಡ ಪಾಟೀಲ್ ಯತ್ನಾಳ್, ಯಡಿಯೂರಪ್ಪ ನಮ್ಮ ನಾಯಕ ಅಲ್ಲ, ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ನಮ್ಮ ನಾಯಕರು ಎಂದಿದ್ದಾರೆ. ಹೀಗಾಗಿ ಬಿಜೆಪಿಯಲ್ಲಿ ಬಂಡಾಯ ಇರುವುದು ದಿಟ ಎಂದು ವಿಧಾನಸಭಾ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.
ಬುಧವಾರ ಇಲ್ಲಿಯ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ಆಡಳಿತ ವಿರುದ್ಧ ತೀವ್ರ ವಾಗ್ದಾಳಿ ಮಾಡಿದರು.
ಇಬ್ಬರು ಸಿಎಂಗಳಿದ್ದಾರೆ:
ರಾಜ್ಯದಲ್ಲಿ ಇಬ್ಬರು ಮುಖ್ಯಮಂತ್ರಿಗಳಿದ್ದು, ಒಬ್ಬರು ಸಂವಿಧಾನಿಕವಾಗಿ ರುಜು ಮಾಡುತ್ತಾರೆ, ಮತ್ತೊಬ್ಬರು ಅಸಂವಿಧಾನಿಕವಾಗಿ ಆಡಳಿತ ಮಾಡುತ್ತಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ನೌಕರರ ಸಂಬಳ ಕೊಡಲು ಆಗುತ್ತಿಲ್ಲ. ಅಷ್ಟುದಿವಾಳಿಯಾಗಿ ಹೋಗಿವೆ. ಶಾಸಕರ ಅನುದಾನ ವಾಪಸ್ ತೆಗೆದುಕೊಂಡಿದ್ದಾರೆ. ಕೇಂದ್ರ ಸರ್ಕಾರದಲ್ಲಿ ಕೊರೋನಾ ಬಂದ ಮೇಲೆ ಅಲ್ಲ, ಅದಕ್ಕೂ ಮೊದಲೇ ಆರ್ಥಿಕ ಸಂಕಷ್ಟ ಎದುರಾಗಿದೆ ಎಂದರು.
ಒಳ್ಳೆ ಬಾಂಧವ್ಯವಿದೆ:
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ನನ್ನ ಮಧ್ಯೆ ಒಳ್ಳೆಯ ಬಾಂಧವ್ಯವಿದೆ. ನಮ್ಮ ಮಧ್ಯೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಅವರು ನಾವು ಚೆನ್ನಾಗಿಯೇ ಇದ್ದು, ಯಾವುದೇ ವೈಮನಸ್ಸು ಇರುವ ಪ್ರಶ್ನೆಯೇ ಇಲ್ಲ. ನಮ್ಮ ನಡುವೆ ಯಾವುದೇ ಸಮರವೂ ನಡೆದಿಲ್ಲ ಎಂದು ಹೇಳಿದರು.