
ಬೆಂಗಳೂರು (ನ.18): ಹಿಂದೆ 2018ರಲ್ಲಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಮತದಾರರ ಮಾಹಿತಿ ಸಂಗ್ರಹ ಮತ್ತು ಮತದಾರರ ಜಾಗೃತಿಯ ಕಾರ್ಯವನ್ನು ಚಿಲುಮೆ ಸಂಸ್ಥೆಗೆ ನೀಡಲಾಗಿದೆ. ಆಗ ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರು ಬಾಳೆಹಣ್ಣು ತಿನ್ನುತ್ತಿದ್ದರೇ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಖಾರವಾಗಿ ಪ್ರಶ್ನಿಸಿದ್ದಾರೆ.
ಗುರುವಾರ ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಪ್ರತಿ ವಿಷಯಕ್ಕೂ ಮುಖ್ಯಮಂತ್ರಿಗಳ ರಾಜೀನಾಮೆ ಕೇಳುವುದು ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರದ್ದು ಬಾಲಿಶ ವರ್ತನೆ. ಇದು ಕಾಂಗ್ರೆಸ್ ಪಕ್ಷದ ಟೂಲ್‌ಕಿಟ್‌ನ ಒಂದು ಭಾಗ ಎಂದು ಹರಿಹಾಯ್ದರು. ಈ ಸಂಸ್ಥೆಗೆ ಟೆಂಡರ್ ಇಲ್ಲದೆ ನೀವೇ ಅನುಮತಿ ಕೊಟ್ಟಿದ್ದೀರಿ. ಇದರಲ್ಲೇನೂ ಅಕ್ರಮ ನಡೆದಿಲ್ಲ. ಬಿಎಲ್‌ಒಗಳಿಗೆ ಗುರುತು ಚೀಟಿ ಕೊಟ್ಟಿದ್ದು ಗೊತ್ತಾದೊಡನೆ ಆದೇಶವನ್ನು ಹಿಂದಕ್ಕೆ ಪಡೆದಿದ್ದೇವೆ. ಕಾಂಗ್ರೆಸ್ ಮುಖಂಡರು ತಮ್ಮಲ್ಲಿರುವ ದಾಖಲೆಗಳನ್ನು ಬಿಡುಗಡೆ ಮಾಡಲಿ ಎಂದು ಆಗ್ರಹಿಸಿದರು.
ಜೆಡಿಎಸ್‌ನದ್ದು ಮೊಸರಲ್ಲಿ ಕಲ್ಲು ಹುಡುಕುವ ಯತ್ನ: ರವಿಕುಮಾರ್
2018ರಲ್ಲಿ ಒಂದು ದಿನಕ್ಕೆ 5 ಸಾವಿರ ರುಪಾಯಿಯಂತೆ ಈ ಸಂಸ್ಥೆಗೆ ಕೊಟ್ಟಿದ್ದಾರೆ. ಬಿಬಿಎಂಪಿ ಕಡೆಯಿಂದ ಲ್ಯಾಪ್‌ಟಾಪ್ ಕೊಟ್ಟಿದ್ದು, ಜಾಗೃತಿ ಮೂಡಿಸಲು ಬೇಕಿದ್ದ ಕರಪತ್ರಗಳು, ಬ್ಯಾನರ್‌ಗಳು, ಶಾಮಿಯಾನ ಮೈಕ್ ವ್ಯವಸ್ಥೆಗೆ ಸ್ವಲ್ಪ ಹಣ ಖರ್ಚು ಮಾಡಿದ್ದಾರೆ. ಅಕ್ರಮದ ತನಿಖೆ ಆಗಲಿ. ಉಪ್ಪು ತಿಂದವನು ನೀರು ಕುಡಿಯಲಿ ಎಂದು ಹೇಳಿದರು. ಬಿಜೆಪಿ ಎಸ್‌ಸಿ ಮೋರ್ಚಾ ರಾಜಾಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಇದ್ದರು.ಮಾತನಾಡಿ, ಮತದಾರರ ಪಟ್ಟಿಎಂಬುದು ಸಾರ್ವಜನಿಕ ದಾಖಲೆ. ಇದರಲ್ಲಿ ಮಾಹಿತಿ ಸೋರಿಕೆ ಆಗಲು ಏನಿದೆ? ಬುಧವಾರ ಆದೇಶ ಹಿಂಪಡೆದ ಮೇಲೆ ಗುರುವಾರ ಕಾಂಗ್ರೆಸ್ ಮುಖಂಡರು ಪತ್ರಿಕಾಗೋಷ್ಠಿ ಮಾಡಿದ್ದಾರೆ. ಸರ್ಕಾರ ಆದೇಶ ರದ್ದು ಮಾಡಿದ್ದನ್ನು ಮೆಚ್ಚಿಕೊಳ್ಳಬೇಕಿತ್ತು. ಅದರ ಬದಲಾಗಿ ರಾಜೀನಾಮೆ ಕೊಡಲು ಕೇಳುತ್ತಿದ್ದಾರೆ ಎಂದು ಟೀಕಿಸಿದರು.
ಸಿದ್ದರಾಮಯ್ಯಗೆ ದುರಂಹಕಾರ: ಸಾರಿಗೆ ಸಚಿವ ಶ್ರೀರಾಮುಲು ಅವರನ್ನು ಪೆದ್ದ ಎಂದಿರುವ ಸಿದ್ದರಾಮಯ್ಯ ತಾವೊಬ್ಬರೇ ಪ್ರಬ್ಧುರು, ಜಾಣರು ಅನ್ಕೊಂಡಿದ್ದಾರೆ. ಅವರಿಗೆ ದುರಹಂಕಾರ ಜಾಸ್ತಿ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಮಾತಿನಲ್ಲೇ ತಿರುಗೇಟು ನೀಡಿದ್ದಾರೆ. ಸಿದ್ದರಾಮಯ್ಯ ಒಬ್ರೆ ಜಾಣರಾ? ಅವರಿಗಷ್ಟೇ ಸಂವಿಧಾನ ಗೊತ್ತಾ? ಬೇರೆಯವರಿಗೆ ಗೊತ್ತಿಲ್ಲವಾ? ಪ್ರಬುದ್ಧತೆ, ಜಾಣತನ ಅದೇನ್ ಸಿದ್ದರಾಮಯ್ಯನವರೊಬ್ಬರೇ ಗುತ್ತಿಗೆ ಪಡೆದಿದ್ದಾರಾ? ಎಂದು ಮಾತಿನಲ್ಲೇ ಛೇಡಿಸಿರುವ ರವಿ ಕುಮಾರ್ ಪೆದ್ದ ಎಂದು ಕರೆದಿರೋ ಶ್ರೀರಾಮುಲು ಮುಂದೆಯೇ ಗೆಲ್ಲಲು ನೀವು ತಿಣುಕಾಡಬೇಕಾಯ್ತು, ಅದನ್ನು ಮೊದಲು ತಿಳಿದುಕೊಳ್ಳಿರಿ ಎಂದು ಸಿದ್ದರಾಮಯ್ಯನವರಿಗೆ ಸಲಹೆ ನೀಡಿದ್ದಾರೆ.
ಸಾವರ್ಕರ್‌ರಷ್ಟು ದೇಶಭಕ್ತಿ ರಾಗಾಗಿಲ್ಲ: ವಿಧಾನಪರಿಷತ್ ಸದಸ್ಯ ರವಿಕುಮಾರ್
ಅ.18, 19ರಂದು ಬೀದರ್, ಕಲಬುರಗಿ, ಯಾದಗಿರಿಯಲ್ಲಿ ನಡೆಯಲಿರುವ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯ ಪೂರ್ವಸಿದ್ಧತೆಗಾಗಿ ಆಗಮಿಸಿರುವ ರವಿಕುಮಾರ್ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಪಕ್ಷವನ್ನು ಹಿಗ್ಗಾಮುಗ್ಗಾ ಜರಿದರು. ಮೈಸೂರಿನ ಚಾಮುಂಡೇಶ್ವರಿಯಲ್ಲಿ 30 ಸಾವಿರಕ್ಕೂ ಹೆಚ್ಚು ಮತಗಳಿಂದ ಸೋಲಿಸಿದಾಗ ಬಾದಾಮಿಗೆ ಬಂದು ಅಲ್ಲಿ ತಿಣುಕಾಡುತ್ತ 1 ಸಾವಿರ ಮತಗಳ ಅಂತರದಲ್ಲಿ ಗೆದ್ದವರು ನೀವು, ಅಹಂಕಾರದ ಮಾತುಗಳು ಶೋಭೆ ತರೋದಿಲ್ಲ. ರಾಮುಲು ಅವರನ್ನು ಪೆದ್ದನೆಂದು ಹೇಳಿದ್ದಕ್ಕೆ ಸಿದ್ದರಾಮಯ್ಯ ಆಗಿರುವ ಪ್ರಮಾದ ಅರಿತು ಕ್ಷಮೆ ಯಾಚಿಸಬೇಕು ಎಂದು ರವಿಕುಮಾರ್ ಆಗ್ರಹಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.