* ಡಿಕೆ ಶಿ ಆರೋಪಕ್ಕೆ ಸಿಟಿ ರವಿ ತಿರುಗೇಟು
* ಜೆಡಿಎಸ್ ಬೆಂಬಲ ಇಲ್ಲದಿದ್ದರೆ ಡಿಕೆ ಬ್ರದರ್ಸ್ ಗೆಲ್ಲುತ್ತಿರಲಿಲ್ಲ
* ಬಿಜೆಪಿ ನಾಯಕ ಸಿಟಿ ರವಿ ಅಚ್ಚರಿಕೆ ಹೇಳಿಕೆ
ಚಿಕ್ಕಮಗಳೂರು, (ಡಿ.09): ಹಾಲಿ ವಿಧಾನ ಪರಿಷತ್ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ(BJP) ಮತ್ತು ಜೆಡಿಎಸ್(JDS) ನಡುವೆ ಒಳಒಪ್ಪಂದ ಆಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೀಡಿರುವ ಹೇಳಿಕೆಗೆ ಬಿಜೆಪಿ ನಾಯಕ ಸಿ.ಟಿ.ರವಿ ತಿರುಗೇಟು ನೀಡಿದ್ದಾರೆ.
ಚಿಕ್ಕಮಗಳೂರಿನಲ್ಲಿ ಇಂದು (ಡಿ.09) ಸುದ್ದಿಗಾರರೊಂದಿಗೆ ಮಾತನಾಡಿದ ಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ(CT Ravi), ಜೆಡಿಎಸ್ ಬೆಂಬಲ ಇಲ್ಲದಿದ್ದರೆ ಡಿಕೆಶಿ ಸಹೋದರರು (DK Brothers) ಗೆಲ್ಲಲು ಸಾಧ್ಯವಾಗುತ್ತಿರಲಿಲ್ಲ. ಡಿಕೆಶಿ ಕೂಡ ಜೆಡಿಎಸ್ ಜೊತೆ ಒಳ ಒಪ್ಪಂದ ಮಾಡಿಕೊಳ್ಳದಿದ್ದರೆ ಶಾಸಕರಾಗುತಿರಲಿಲ್ಲ ಎಂದು ಡಿಕೆ ಶಿವಕುಮಾರ್(DK Shivakumar) ವಿರುದ್ಧ ಕಿಡಿಕಾರಿದರು.
undefined
MLC Election: 'ಬಿಜೆಪಿ ವೀಕ್ ಆಗಿದೆ ಎಂದು ಯಡಿಯೂರಪ್ಪರಿಂದ ಒಂದು ದೊಡ್ಡ ಸಂದೇಶ'
ಜೆಡಿಎಸ್ ಪಕ್ಷದಲ್ಲಿ ಕೆಲ ಮತ ಇದೆ. ಹೀಗಾಗಿ ಕೇಳಿದ್ದೇವೆ. ಆದರೆ ಬಿಜೆಪಿ-ಜೆಡಿಎಸ್ ನಡುವೆ ಯಾವುದೇ ಒಪ್ಪಂದ ಆಗಿಲ್ಲ. ಅದಕ್ಕೆ ಬಿಜೆಪಿ ವೀಕ್ ಆಗಿದೆ ಎಂದು ಡಿಕೆಶಿ ಹೇಳಿದ್ದಾರೆ. JDS ಇಲ್ಲದಿದ್ದರೆ ಡಿಕೆಶಿ ಸಹೋದರರು ಗೆಲ್ಲುತ್ತಿರಲಿಲ್ಲ ಎಂದು ಟಾಂಗ್ ಕೊಟ್ಟರು.
ಅವರ ಜೊತೆ ಸಂಬಂಧ ಅಷ್ಟೇ
ಕುಮಾರಸ್ವಾಮಿಯವರನ್ನು ಸಿಎಂ ಮಾಡಿ ಕೊನೆಗೆ ಅವರನ್ನ ಇಳಿಸಿದ್ದು ಯಾರು? ಇಳಿಸಲು ಅವರ ಪಕ್ಷದ ಶಾಸಕರನ್ನು ಕಳುಹಿಸಿದ್ದು ಯಾರು? ಕೂರಿಸಿದ್ದು ಅವರೇ, ಕಾಲು ಎಳೆಯುವ ಕೆಲಸ ಮಾಡಿದ್ದು ಅವರೇ. ನಮ್ದು ಜೆಡಿಎಸ್ ಜೊತೆ ಒಪ್ಪಂದ ಇಲ್ಲ, ಅವರ ಜೊತೆ ಸಂಬಂಧ ಅಷ್ಟೇ ಎಂದು ಶಾಸಕ ಸಿ ಟಿ ರವಿ ಸ್ಪಷ್ಟಪಡಿಸಿದರು.
ಇದೇ ವೇಳೆ ನರೇಂದ್ರ ಮೋದಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ವಿಚಾರವಾಗಿ ಪ್ರತಿಕ್ರಿಯಿಸಿದ ಸಿಟಿ ರವಿ, ತಾನು ಹೇಗಿರುತ್ತೇನೋ ಉಳಿದವರು ಹಾಗೇ ಇರಬೇಕು, ಸಿದ್ದರಾಮಯ್ಯ ಇರುವಂತೆಯೇ ಉಳಿದವರು ಕಾಣುತ್ತಾರೆ. ಜಗತ್ತಿನ ದೃಷ್ಟಿಯಲ್ಲಿ ಮೋದಿ ಒಬ್ಬ ಅಗ್ರಗಣ್ಯ ನಾಯಕ. ಸಿದ್ದರಾಮಯ್ಯನವರ ಸರ್ಟಿಫಿಕೆಟ್ ನಮಗೆ ಬೇಕಾಗಿಲ್ಲ. ದೇಶ-ವಿದೇಶ ಎಲ್ಲಿ ಹೋದ್ರೂ ಮೋದಿ ಮೋದಿ ಅಂತಾರೆ. ಕರ್ನಾಟಕದ ಆಚೆ ಹೋದ್ರೆ ಸಿದ್ದರಾಮಯ್ಯ ಹೆಸರು ಹೇಳಲ್ಲ. ಸಿದ್ದರಾಮಯ್ಯನ ಹೆಸರೂ ಹೇಳಲ್ಲ, ರಾಹುಲ್ ಗಾಂಧಿ ಹೆಸರು ಹೇಳಲ್ಲ. ಸಿದ್ದರಾಮಯ್ಯ ಹೆಸರು ಪಾಕಿಸ್ತಾನದಲ್ಲಿ ಮಾತ್ರ ಹೇಳಬಹುದು ಎಂದು ವ್ಯಂಗ್ಯವಾಡಿದರು.
ಡಿಕೆಶಿ ಹೇಳಿದ್ದೇನು?
ವಿಧಾನಪರಿಷತ್ ಚುನಾವಣೆಯಲ್ಲಿ ಬಿಎಸ್ ಯಡಿಯೂರಪ್ಪ ಅವರು ಬಹಿರಂಗವಾಗಿಯೇ ಜೆಡಿಎಸ್ ಬೆಂಬಲ ಕೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಡಿಕೆಶಿ, ಬಿಜೆಪಿ ಹಾಗೂ ಜೆಡಿಎಸ್ ನಡುವೆ ಒಳ ಒಪ್ಪಂದ ಆಗಿದೆ ಎಂದು ಹೇಳಿದ್ದರು.
ಬಿಜೆಪಿ, ಜೆಡಿಎಸ್ ಮೈತ್ರಿ ಬಗ್ಗೆ ಬಿಎಸ್ ಯಡಿಯೂರಪ್ಪ ತೀರ್ಮಾನಿಸಿದ್ದಾರೆ. ಈ ಮೂಲಕ ಬಿಎಸ್ ಯಡಿಯೂರಪ್ಪರಿಂದ ಭಾರತೀಯ ಜನತಾ ಪಾರ್ಟಿ ವೀಕ್ ಆಗಿದೆ ಎಂಬ ಸಂದೇಶ ರವಾನೆಯಾಗಿದೆ ಡಿಕೆಶಿ ಲೇವಡಿ ಮಾಡಿದ್ದರು.
ಕೇಂದ್ರ, ರಾಜ್ಯದಲ್ಲಿ ಎರಡೂ ಕಡೆ ಅವರದ್ದೇ ಸರ್ಕಾರವಿದೆ. ಆದರೂ ಅವರ ಅಭ್ಯರ್ಥಿ ಸೋಲುತ್ತಾರೆಂಬ ಭಯ ಬಂದಿದೆ. ಅವರ ಭಯಕ್ಕೆ ಇದಕ್ಕಿಂತಲೂ ಬೇರೆ ಸಾಕ್ಷಿ ಮತ್ತೊಂದಿಲ್ಲ ಎಂದಿದ್ದರು.