ಕಾಂಗ್ರೆಸ್ ಹೈಕಮಾಂಡ್ ದೆಹಲಿಯಲ್ಲಿ ಇಲ್ಲ. ಕಾಂಗ್ರೆಸ್ ಅನ್ನು ತಿರುಚುವ ತಾಕತ್ತು ಇರುವುದು ಸಿದ್ದರಾಮಯ್ಯಗೆ. ಕಾಂಗ್ರೆಸ್ ಗೆ ಸಿದ್ದರಾಮಯ್ಯ ಅವರೇ ಹೈಕಮಾಂಡ್ ಎಂದ ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ
ಮೈಸೂರು(ಜ.14): ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಕಾಲದಿಂದ ದರಿದ್ರವನ್ನು ಹೊತ್ತುಕೊಂಡು ಬಂದಿದೆ. ದರಿದ್ರ ಸರ್ಕಾರ ಇದು ಎಂದು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಕಿಡಿಕಾರಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತ ನಾಡಿದ ಅವರು, ಗ್ಯಾರಂಟಿ ಯೋಜನೆಗೆ ದಲಿತರ ದುಡ್ಡು ತಿಂದಿದ್ದಾರೆ. 25 ಸಾವಿರ ಕೋಟಿ ದಲಿತರ ಹಣ ಎಲ್ಲಿ ಹೋಯ್ತು ಅಂದ್ರೆ ಮುಖ್ಯಮಂತ್ರಿ ಹಾರಿಕೆಯ ಉತ್ತರ ಕೊಡುತ್ತಾರೆ. ದಲಿತರನ್ನು ವಿರೋಧಿಸುವ ಮಾಫಿಯಾವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದು ದೂರಿದರು.
ಅಮಿತ್ ಶಾ ವಿರುದ್ದ ಕಾಂಗ್ರೆಸ್ ಹೋರಾಟ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಪದೇ ಪದೇ ಅಂಬೇಡ್ಕರ್‌ಮತ್ತು ಸಂವಿಧಾನದ ಬಗ್ಗೆ ಮಾತನಾಡುವುದು ಕಾಂಗ್ರೆಸ್ ನವರಿಗೆ ಚಟವಾಗಿದೆ. ಅವರು ಬದುಕಿದ್ದ ಕಾಲದಲ್ಲಿ ಅಂಬೇಡ್ಕರ್‌ಗೆ ಕಾಂಗ್ರೆಸ್ ಗೌರವ ಕೊಡಲಿಲ್ಲ. ಸಂವಿಧಾನ ಪೀಠಿಕೆ ಬದಲಿಸಿದ್ದೇ ಕಾಂಗ್ರೆಸ್. ಈಗ ಸಂವಿಧಾನದ ಪರ ಇದ್ದೇವೆ ಎಂದು ನಂಬಿಸೋಕೆ ಸದಾ ಕೈಯಲ್ಲಿ ಸಂವಿಧಾನ ಹಿಡಿದುಕೊಂಡು ಓಡಾಡುತ್ತಾರೆ ಎಂದು ತಿರುಗೇಟು ನೀಡಿದರು.
ಈ ವಿಚಾರದಲ್ಲಿ ನಾವು ಕಾಂಗ್ರೆಸ್ ವಿರುದ್ಧ ಪ್ರತಿ ಹೋರಾಟ ಮಾಡುವುದಿಲ್ಲ. ನಾವು ಅಂಬೇಡ್ಕರ್‌ಗೆ ಗೌರವ ಕೊಡುವ ಕೆಲಸ ಬಿಜೆಪಿ ಏನು ಮಾಡಿದೆಯೋ ಅದನ್ನು ಜನರಿಗೆ ತಿಳಿಸುತ್ತೇವೆ. ಈ ದೇಶದಲ್ಲಿ ಸಂವಿಧಾನವನ್ನು 2 ವರ್ಷ ಜಾರಿಗೆ ತರದೇ ಆಡಳಿತ ಮಾಡಿದ್ದು ಕಾಂಗ್ರೆಸ್. ಅಂತಹ ತುರ್ತು ಪರಿಸ್ಥಿತಿ ಏನು ಬಂದಿತ್ತು. ಅಧಿಕಾರ ಉಳಿಸಿಕೊಳ್ಳೋಕೆ ತುರ್ತು ಪರಿಸ್ಥಿತಿ ಹೇರಿದ್ದರು ಎಂದರು.
75 ವರ್ಷದಿಂದ ಸಂವಿಧಾನ ಜಾರಿ ಮಾಡಲು ಆಗದೆ ಇದ್ರು. ಇದೀಗ ಮೋದಿ, ಅಮಿತ್ ಶಾ ಜಮ್ಮು- ಕಾಶ್ಮೀರದಲ್ಲಿ 370ನೇ ವಿಧಿ ತೆಗೆದು ಸಂವಿಧಾನ ಜಾರಿ ಮಾಡಿದ್ದಾರೆ. ಅಂಬೇಡ್ಕರ್ ಅಂಬೇಡ್ಕರ್ ಅನ್ನೋದನ್ನು ಫ್ಯಾಷನ್ ಮಾಡಿಕೊಂಡಿದ್ದಾರೆ ಅಂತ ಅಮಿತ್ ಶಾ ಹೇಳಿದ್ರು. ಅದಕ್ಕೆ ಕೋಪ ಬರುತ್ತೆ, ಅದಕ್ಕೆ ಯಾವತ್ತು ಇಲ್ಲದ ಅಂಬೇಡ್ಕರ್ ಫೋಟೋ, ನೀಲಿ ಶಾಲು ಹಾಕಿಕೊಂಡು ಓಡಾಡುತ್ತಿದ್ದಾರೆ. ಈ ಬಗ್ಗೆ ಹೋರಾಟ ಮಾಡುತ್ತಿರುವ ದಲಿತ ಸಂಘಟನೆಗಳಿಗೆ ಮನವಿ ಮೊದಲು ಯಾರು ಅಂಬೇಡ್ಕರ್‌ಗೆ ಮೋಸ ಮಾಡಿದ್ರು ಎಂಬುದನ್ನು ಅರ್ಥ ಮಾಡಿಕೊಳ್ಳಿ. ಕಾಂಗ್ರೆಸ್ ನವರು ದಲಿತ ಸಂಘಟನೆಗಳನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಅವರು ತಿಳಿಸಿದರು.
ಕಲಬುರಗಿ ಈಗ ‘ಪ್ರಿಯಾಂಕ್ ಖರ್ಗೆ ರಿಪಬ್ಲಿಕ್’: ಛಲವಾದಿ ನಾರಾಯಣಸ್ವಾಮಿ
ನಮ್ಮಲ್ಲಿ ರಾಜಕೀಯ ನಮ್ಮಲಿರುವುದು ಭಿನ್ನಾಭಿಪ್ರಾಯ. ವಿಭಿನ್ನ ಅಭಿಪ್ರಾಯ ಬಂದಾಗ ಹೈಕಮಾಂಡ್ ಸರಿ ಮಾಡುತ್ತದೆ. ಅದಕ್ಕಿಂತ ಬೇರೆ ಮಾರ್ಗ ಇಲ್ಲ. ಬೀದಿಯಲ್ಲಿ ಯಾರೂ ಜಗಳ ಮಾಡಬಾರದು. ಇಡೀ ದೇಶಕ್ಕೆ ಗೊತ್ತಿದೆ ನಮ್ಮ ಹೈಕಮಾಂಡ್ ಎಷ್ಟು ಸ್ಟ್ರಾಂಗ್ ಇದೆ ಎಂದು. ಕಾದು ನೋಡಿ, ಒಂದು ದಿನ ತೀರ್ಮಾನ ಮಾಡುತ್ತಾರೆ ಎಂದು ಅವರು ಹೇಳಿದರು.
ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಹಸುವಿನ ಕೆಚ್ಚಲು ಕೊಯ್ದಿರುವುದು ಅಮಾನವೀಯ ಘಟನೆ. ಈ ಕೃತ್ಯವನ್ನು ಖಂಡಿಸುತ್ತೇನೆ. ಸೂಕ್ತ ತನಿಖೆ ಮಾಡಬೇಕು. ತಪ್ಪಿತಸ್ಥರಿಗೆ ತಕ್ಕ ಶಿಕ್ಷೆ ನೀಡಬೇಕು ಎಂದು ಅವರು ಒತ್ತಾಯಿಸಿದರು.
ಕಾಂಗ್ರೆಸ್ ಹೈಕಮಾಂಡ್ ದೆಹಲಿಯಲ್ಲಿ ಇಲ್ಲ. ಕಾಂಗ್ರೆಸ್ ಅನ್ನು ತಿರುಚುವ ತಾಕತ್ತು ಇರುವುದು ಸಿದ್ದರಾಮಯ್ಯಗೆ. ಕಾಂಗ್ರೆಸ್ ಗೆ ಸಿದ್ದರಾಮಯ್ಯ ಅವರೇ ಹೈಕಮಾಂಡ್ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ತಿಳಿಸಿದ್ದಾರೆ.