'ಎಚ್‌.ಕೆ. ಪಾಟೀಲ್‌ ಮೋದಿ ಟೀಕಿಸಿ ರಾಷ್ಟ್ರ ನಾಯಕರಂತೆ ಬಿಂಬಿಸಿಕೊಳ್ತಿದ್ದಾರೆ'

By Kannadaprabha NewsFirst Published Jun 11, 2022, 10:12 AM IST
Highlights

*  ಬಿಜೆಪಿ ಯುವ ಮುಖಂಡ ಅನಿಲ ಮೆಣಸಿನಕಾಯಿ ವ್ಯಂಗ್ಯ
*  ಎಚ್ಕೆ ಗದಗ ಅಭಿವೃದ್ಧಿ ವಿರೋಧಿ
*  ದೇಶದಲ್ಲಿ ಯುಪಿಎ ಸರ್ಕಾರದ ಅವಧಿಯಲ್ಲಿ ಎಷ್ಟೊಂದು ಹಗರಣಗಳಾದವು? 

ಗದಗ(ಜೂ.11): ಮಾಜಿ ಸಚಿವ, ಶಾಸಕ ಎಚ್‌.ಕೆ. ಪಾಟೀಲರು ತಮ್ಮ ಸ್ವ ಕ್ಷೇತ್ರದಲ್ಲಿನ ಅಭಿವೃದ್ಧಿಗೆ ಕಿಂಚಿತ್ತು ಗಮನ ನೀಡದೇ ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತವನ್ನು ಟೀಕಿಸುವ ಮೂಲಕ ರಾಷ್ಟ್ರ ನಾಯಕ ಎಂದು ಬಿಂಬಿಸಿಕೊಳ್ಳಲು ಹೊರಟಿದ್ದಾರೆ ಎಂದು ಬಿಜೆಪಿ ಯುವ ಮುಖಂಡ ಅನಿಲ್‌ ಮೆಣಸಿನಕಾಯಿ ವ್ಯಂಗ್ಯವಾಡಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಮಾನವ ಸೂಚ್ಯಂಕ, ಹಸಿವಿನ ಸೂಚ್ಯಂಕ ಹೀಗೆ ವಿವಿಧ ಅಂಕಿ-ಅಂಶಗಳನ್ನು ನೀಡಿದ್ದು, ಅವೆಲ್ಲಾ ಯಾವ ಸಂಸ್ಥೆ ನೀಡಿದ್ದು? ಮುಖ್ಯವಾಗಿ ಅವರಿಗೆ ಇದೆಲ್ಲ ನೀಡಿದವರೇ ತಪ್ಪು ಮಾಹಿತಿ ನೀಡಿದ್ದು, ಅದರ ಬಗ್ಗೆ ಮೊದಲು ಅವರು ಪರಿಶೀಲನೆ ಮಾಡಿಕೊಳ್ಳಲಿ. ದೇಶದಲ್ಲಿ ಯುಪಿಎ ಸರ್ಕಾರದ ಅವಧಿಯಲ್ಲಿ ಎಷ್ಟೊಂದು ಹಗರಣಗಳಾದವು? ಯಾವ ಕಾರಣಕ್ಕಾಗಿ ನಿಮ್ಮ ಪಕ್ಷವನ್ನು ಜನ ದೇಶದಲ್ಲಿ ಸಾರಾಸಗಟಾಗಿ ತಿರಸ್ಕರಿಸಿದ್ದಾರೆ ಎನ್ನುವುದನ್ನು ಆತ್ಮಾವಲೋಕನ ಮಾಡಿಕೊಂಡು ಬಿಜೆಪಿ ಟೀಕೆ ಮಾಡಲಿ. ತಮ್ಮ ಪಕ್ಷದ ವರಿಷ್ಠರನ್ನು ಮೆಚ್ಚಿಸಲು ನೀವು ಮೋದಿ ಟೀಕೆ ಮಾಡಿದರೆ, ಮುಂದಿನ ಚುನಾವಣೆಯಲ್ಲಿ ಮತ್ತಷ್ಟುಸಮಸ್ಯೆಯನ್ನು ಕಾಂಗ್ರೆಸ್‌ ಪಕ್ಷ ಎದುರಿಸಲಿದೆ ಎಂದರು.

ಜಿಡಿಪಿ ಟೀಕಿಸುವ ಸಿದ್ದರಾಮಯ್ಯ ಅಂಕಿ-ಅಂಶ ನೀಡಲಿ: ಸಿ.ಸಿ. ಪಾಟೀಲ

ಶ್ರೀಲಂಕಾ, ಬಾಂಗ್ಲಾದೇಶ, ಪಾಕಿಸ್ತಾನಕ್ಕೆ ಭಾರತವನ್ನು ಹೋಲಿಕೆ ಮಾಡುವ ಮೂಲಕ ಸಮಸ್ತ ದೇಶದ ಜನತೆಗೆ ಅವಮಾನ ಮಾಡಿದ್ದಾರೆ. ಆ ದೇಶಗಳ ಸ್ಥಿತಿಗತಿ, ಅಲ್ಲಿನ ಆಡಳಿತ ನಮ್ಮ ದೇಶದಲ್ಲಿನ ಆಡಳಿತಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಕೋವಿಡ್‌ ಪರಿಸ್ಥಿತಿಯಲ್ಲಿ ಜಗತ್ತಿನ ಮುಂದುವರಿದ ರಾಷ್ಟ್ರಗಳೇ ತತ್ತರಿಸಿ ಹೋದಾಗಲೂ ನಮ್ಮ ದೇಶದ ಜನರಿಗೆ ತೊಂದರೆಯಾಗದಂತೆ ಅಧಿಕಾರ ನಡೆಸಿದ ಮೋದಿ ಅವರ ಆಡಳಿತವನ್ನು ಜಗತ್ತೇ ಮೆಚ್ಚಿಕೊಂಡಿದೆ. ಇದೆಲ್ಲ ವಿರೋಧ ಪಕ್ಷದವರಿಗೆ ಅರಗಿಸಿಕೊಳ್ಳಲು ಆಗದೇ ಟೀಕೆ ಮಾಡುತ್ತಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ನಗರಸಭೆ ಅಧ್ಯಕ್ಷೆ ಉಷಾ ದಾಸರ, ಸಂಗಮೇಶ ದುಂದೂರ, ಬಸವರಾಜ ಧಾರವಾಡ, ಸಿದ್ದು ಪಲ್ಲೇದ, ನಗರಸಭೆ ಸದಸ್ಯರಾದ ಅನಿತಾ ಗಡ್ಡಿ, ರಾಘವೇಂದ್ರ ಯಳವತ್ತಿ, ಅನಿಲ ಅಬ್ಬಿಗೇರಿ, ಮುತ್ತು ಮುಶಿಗೇರಿ, ವಿಜಯಲಕ್ಷ್ಮಿ ದಿಂಡೂರ ಮುಂತಾದವರು ಹಾಜರಿದ್ದರು.

ಎಚ್ಕೆ ಗದಗ ಅಭಿವೃದ್ಧಿ ವಿರೋಧಿ

ಎಚ್‌.ಕೆ. ಪಾಟೀಲರು ಗದಗ -ಬೆಟಗೇರಿ ಅವಳಿ ನಗರದ ಅಭಿವೃದ್ಧಿ ವಿರೋಧಿಯಾಗಿದ್ದಾರೆ. ನಮ್ಮ ಸರ್ಕಾರ ಅಭಿವೃದ್ಧಿಗಾಗಿ ನೀಡಿರುವ . 40 ಕೋಟಿ ವಿಶೇಷ ಅನುದಾನಕ್ಕೆ ನಗರಸಭೆಯಲ್ಲಿ ಸಿದ್ಧಪಡಿಸಿರುವ ಕ್ರಿಯಾಯೋಜನೆ ತರಿಸಿಕೊಂಡು ಕುಳಿತಿದ್ದಾರೆ. ಅದಕ್ಕೆ ಒಪ್ಪಿಗೆ ಸೂಚಿಸದೇ ಕಾಲಹರಣ ಮಾಡುತ್ತಿದ್ದಾರೆ. ನಗರಸಭೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೂ ಏನೂ ಮಾಡುತ್ತಿಲ್ಲ ಎಂದು ಜನರಿಗೆ ಬಿಂಬಿಸುವ ವ್ಯರ್ಥ ಪ್ರಯತ್ನ ಮಾಡುತ್ತಿದ್ದಾರೆ. ಇದೇ ರೀತಿ ಅವರು ನಿರ್ಲಕ್ಷ್ಯ ಮಾಡಿದರೆ ಮುಂಬರುವ ದಿನಗಳಲ್ಲಿ ಅವರ ಕಚೇರಿ ಮುಂದೆ ಎಲ್ಲ ಬಿಜೆಪಿ ಸದಸ್ಯರು ಪ್ರತಿಭಟನೆ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ಅನಿಲ ಮೆಣಸಿನಕಾಯಿ ಎಚ್ಚರಿಸಿದರು.

click me!