
ಬೆಂಗಳೂರು: ವಿಧಾನಪರಿಷತ್ತಿನ ಎರಡು ಪದವೀಧರ ಮತ್ತು ಎರಡು ಶಿಕ್ಷಕ ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಎನ್‌ಡಿಎ ಮೈತ್ರಿಕೂಟ ಆಡಳಿತಾರೂಢ ಕಾಂಗ್ರೆಸ್ ಪಕ್ಷವನ್ನು ಧೂಳೀಪಟ ಮಾಡಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಪಕ್ಷದ ಹಿರಿಯ ನಾಯಕರಾದ ಆರ್.ಅಶೋಕ್, ಬಸವರಾಜ ಬೊಮ್ಮಾಯಿ, ಪ್ರಹ್ಲಾದ್ ಜೋಶಿ ಮತ್ತಿತರರ ಜತೆಗೆ ಜೆಡಿಎಸ್ ರಾಜ್ಯಾಧ್ಯಕ್ಷರೂ ಆಗಿರುವ ಕೇಂದ್ರ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ಸೇರಿ ರೂಪಿಸಿದ ರಣತಂತ್ರಕ್ಕೆ ಜಯ ಸಿಕ್ಕಂತಾಗಿದೆ.
ಆಡಳಿತ ವೈಖರಿ, ಇತ್ತೀಚಿನ ಸ್ಟಿಂಗ್ ಆಪರೇಷನ್ ಸೇರಿ ಹಲವು ವಿಚಾರಗಳಿಗೆ ಸಂಬಂಧಿಸಿ ಬಿಜೆಪಿ-ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ಜಂಗೀ ಕುಸ್ತಿ ನಡೆಯುತ್ತಿರುವ ಈ ಸಂದರ್ಭದಲ್ಲಿ ಈ ಫಲಿತಾಂಶ ಎನ್‌ಡಿಎ ಮೈತ್ರಿಕೂಟಕ್ಕೆ ಹುಮ್ಮಸ್ಸು ತಂದು ಕೊಟ್ಟಿದೆ. ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಗೆಲ್ಲುವ ವಿಶ್ವಾಸವನ್ನೂ ಮೂಡಿಸಿದೆ.
ಚುನಾವಣೆ ಘೋಷಣೆಯಾಗುವ ಆರು ತಿಂಗಳು ಮೊದಲೇ ಒಟ್ಟು ನಾಲ್ಕು ಕ್ಷೇತ್ರಗಳ ಪೈಕಿ ಬಿಜೆಪಿ ಮೂರು ಕ್ಷೇತ್ರಗಳನ್ನು ಇಟ್ಟುಕೊಂಡು ಒಂದು ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟಿತು. ಈಶಾನ್ಯ ಶಿಕ್ಷಕರ ಕ್ಷೇತ್ರ, ಪಶ್ಚಿಮ ಪದವೀಧರ ಕ್ಷೇತ್ರ ಹಾಗೂ ಆಗ್ನೇಯ ಪದವೀಧರ ಕ್ಷೇತ್ರಗಳನ್ನು ಉಳಿಸಿಕೊಂಡ ಬಿಜೆಪಿ, ಬೆಂಗಳೂರು ಶಿಕ್ಷಕರ ಕ್ಷೇತ್ರವನ್ನು ಮಿತ್ರ ಪಕ್ಷ ಜೆಡಿಎಸ್‌ಗೆ ಬಿಟ್ಟುಕೊಟ್ಟಿತು.
ಈ ಬಗ್ಗೆ ಆರಂಭದಲ್ಲಿ ಜೆಡಿಎಸ್ ತುಸು ಅಸಮಾಧಾನ ಹೊರಹಾಕಿತು. ಆಗ್ನೇಯ ಪದವೀಧರ ಕ್ಷೇತ್ರವನ್ನು ತಮಗೆ ನೀಡುವಂತೆ ಬೇಡಿಕೆ ಇಟ್ಟಿತು. ಆದರೆ, ವಿಜಯೇಂದ್ರ ಸೇರಿ ಬಿಜೆಪಿ ನಾಯಕರು ಜೆಡಿಎಸ್ ನಾಯಕರ ಮನವೊಲಿಸುವಲ್ಲಿ ಯಶಸ್ವಿಯಾದರು. ಅಂತಿಮವಾಗಿ ಉಭಯ ಪಕ್ಷಗಳ ನಾಯಕರು ಒಗ್ಗಟ್ಟಿನಿಂದ ಚುನಾವಣಾ ಅಖಾಡಕ್ಕೆ ಇಳಿದರು.
ಪರಿಣಾಮ, ಕಳೆದ ಬಾರಿ ಗೆಲುವು ಸಾಧಿಸಿದ್ದ ಈಶಾನ್ಯ ಶಿಕ್ಷಕರ ಕ್ಷೇತ್ರ, ಪಶ್ಚಿಮ ಪದವೀಧರ ಕ್ಷೇತ್ರ ಹಾಗೂ ಆಗ್ನೇಯ ಪದವೀಧರ ಕ್ಷೇತ್ರಗಳಲ್ಲಿ ಬಿಜೆಪಿ ಮತ್ತೆ ಜಯಭೇರಿ ಬಾರಿಸುವಲ್ಲಿ ಸಫಲವಾಯಿತು. ಒಲ್ಲದ ಮನಸ್ಸಿನಿಂದಲೇ ಒಪ್ಪಿಕೊಂಡಿದ್ದ ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ಜೆಡಿಎಸ್ ಭರ್ಜರಿ ಗೆಲುವು ಸಾಧಿಸಿತು.
ಕಾಂಗ್ರೆಸ್‌ನ ಹಣಬಲ ಮತ್ತು ಅಧಿಕಾರಬಲದ ನಡುವೆಯೂ ಪದವೀಧರ ಮತ್ತು ಶಿಕ್ಷಕ ಕ್ಷೇತ್ರಗಳಲ್ಲಿನ ಮತದಾರರು ಎನ್‌ಡಿಎಯ ಅಭಿವೃದ್ಧಿಪರ ರಾಜಕಾರಣಕ್ಕೆ ನೀಡಿರುವ ಈ ಬೆಂಬಲ ನಮ್ಮ ಜವಾಬ್ದಾರಿಯನ್ನು ಇನ್ನಷ್ಟು ಹೆಚ್ಚಿಸಿದೆ ಎಂದು ವಿಜಯೇಂದ್ರ ಅಭಿಪ್ರಾಯಪಟ್ಟಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.