ಬಿಜೆಪಿ ಜನಸಂಕಲ್ಪ ಯಾತ್ರೆಯಲ್ಲಿ ಜನಜಾತ್ರೆ

By Govindaraj S  |  First Published Oct 19, 2022, 6:11 AM IST

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಬೀದರ್‌ ಜಿಲ್ಲೆಯ ಔರಾದ್‌ ಮತ್ತು ಹುಮನಾಬಾದ್‌ಗಳಲ್ಲಿ ಮಂಗಳವಾರ ನಡೆದ ಬಿಜೆಪಿಯ ಜನ ಸಂಕಲ್ಪ ಯಾತ್ರೆಗೆ ಜನಸ್ತೋಮವೇ ಹರಿದು ಬಂತು. 


ಬೀದರ್‌ (ಅ.19): ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಬೀದರ್‌ ಜಿಲ್ಲೆಯ ಔರಾದ್‌ ಮತ್ತು ಹುಮನಾಬಾದ್‌ಗಳಲ್ಲಿ ಮಂಗಳವಾರ ನಡೆದ ಬಿಜೆಪಿಯ ಜನ ಸಂಕಲ್ಪ ಯಾತ್ರೆಗೆ ಜನಸ್ತೋಮವೇ ಹರಿದು ಬಂತು. ಬೆಳಗ್ಗೆ 11.25ಕ್ಕೆ ಬೆಂಗಳೂರಿನಿಂದ ವಿಶೇಷ ವಿಮಾನದ ಮೂಲಕ ಬೀದರ್‌ ವಿಮಾನ ನಿಲ್ದಾಣಕ್ಕೆ ಬಂದಿಳಿದ ಸಿಎಂ, ಅಲ್ಲಿಂದ ಔರಾದ್‌ ತಾಲೂಕಿನ ಬಲ್ಲೂರ (ಜೆ) ಗ್ರಾಮಕ್ಕೆ ತೆರಳಿದರು. ಸೆಂಟ್ರಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಪೆಟ್ರೋಕೆಮಿಕಲ್ಸ್‌ ಎಂಜಿನಿಯರಿಂಗ್‌ ಹಾಗೂ ಟೆಕ್ನಾಲಜಿ (ಸಿಪೆಟ್‌) ಕೇಂದ್ರದ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು.

ಬಳಿಕ, ಔರಾದ್‌ಗೆ ಆಗಮಿಸಿದ ಅವರನ್ನು ತೆರೆದ ಲಾರಿಯಲ್ಲಿ ಮೆರವಣಿಗೆ ಮೂಲಕ ಅದ್ದೂರಿಯಾಗಿ ಸ್ವಾಗತಿಸಲಾಯಿತು. ಈ ವೇಳೆ, ಅಪ್ಪು ಅಭಿಮಾನಿಗಳು ಸಿಎಂಗೆ ಪುನೀತ್‌ ರಾಜಕುಮಾರ್‌ ಅವರ ಫೋಟೋ ನೀಡಿದರು. ಆ ಫೋಟೊವನ್ನು ಮೆರವಣಿಗೆಯಲ್ಲಿ ಲಾರಿಯ ಮುಂದೆ ಇಟ್ಟು, ಅಪ್ಪು ಅಭಿಮಾನಿಗಳಿಗೆ ಸ್ಪಂದಿಸಿದರು. ಬಳಿಕ, ಅಮರೇಶ್ವರ ದೇವಸ್ಥಾನಕ್ಕೆ ತೆರಳಿ, ಪೂಜೆ ನೆರವೇರಿಸಿ, ಅಲ್ಲಿಯೇ ಇದ್ದ ಗೋವಿಗೆ ಪೂಜಿಸಿ ಮುತ್ತಿಟ್ಟರು. ನಂತರ, ಅಮರೇಶ್ವರ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ಜನ ಸಂಪರ್ಕ ಯಾತ್ರಾ ಕಾರ್ಯಕ್ರಮ ಉದ್ಘಾಟಿಸಿದರು. ಈ ವೇಳೆ, ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ್‌ ಅವರು ಬೊಮ್ಮಾಯಿಗೆ ಲಂಬಾಣಿ ಸಾಂಪ್ರದಾಯಿಕ ಉಡುಗೆ ತೊಡಿಸಿ, ಗೌರವಿಸಿದರು.

Tap to resize

Latest Videos

ಆರೆಸ್ಸೆಸ್‌, ಸಿಎಂ, ಬಿಜೆಪಿ ಹೆಸರೆತ್ತದೆ ಸಿದ್ದು ಮಾತಾಡಲಿ: ಬೊಮ್ಮಾಯಿ ತಿರುಗೇಟು

ಬಳಿಕ, ಹುಮನಾಬಾದ್‌ಗೆ ತೆರಳಿ, ಅಲ್ಲಿನ ತೇರು ಮೈದಾನದಲ್ಲಿ ಆಯೋಜಿಸಿದ್ದ ಜನ ಸಂಕಲ್ಪ ಯಾತ್ರೆಯಲ್ಲಿ ಪಾಲ್ಗೊಂಡರು. ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಸಾರಿಗೆ ಸಚಿವ ಶ್ರೀರಾಮುಲು, ಕೇಂದ್ರ ಸಚಿವ ಭಗವಂತ ಖೂಬಾ, ನಗರಾಭಿವೃದ್ಧಿ ಖಾತೆ ಸಚಿವ ಬಸವರಾಜ ಭೈರತಿ, ಜಿಲ್ಲಾ ಉಸ್ತುವಾರಿ ಸಚಿವ ಶಂಕರ ಪಾಟೀಲ್‌ ಮುನೇನಕೊಪ್ಪ ಹಾಗೂ ಇತರ ನಾಯಕರು ಹಾಜರಿದ್ದರು. ಸಂಜೆ 5.40ಕ್ಕೆ ಬೀದರ್‌ ಏರ್‌ಬೇಸ್‌ಗೆ ಬಂದು, ವಿಶೇಷ ವಿಮಾನದಲ್ಲಿ ಬೆಂಗಳೂರಿಗೆ ವಾಪಸ್ಸಾದರು.

ಇಂದು ಹುಣಸಗಿ, ಮಹಾಗಾಂವ್‌ನಲ್ಲಿ ಯಾತ್ರೆ: ಬುಧವಾರ ಯಾದಗಿರಿ ಜಿಲ್ಲೆಯ ಹುಣಸಗಿ ಹಾಗೂ ಕಲಬುರಗಿ ಗ್ರಾಮೀಣ ಮತಕ್ಷೇತ್ರದಡಿ ಬರುವ ಮಹಾಗಾಂವ್‌ನಲ್ಲಿ ಜನಸಂಕಲ್ಪ ಯಾತ್ರೆ ನಡೆಯಲಿದೆ. ಸಿಎಂ, ಬಿಎಸ್‌ವೈ, ನಳಿನ ಕುಮಾರ್‌ ಕಟೀಲ್‌ ಪಾಲ್ಗೊಳ್ಳುವ ಸಾಧ್ಯತೆಯಿದೆ.

ದಿ. ಗುರುಪಾದಪ್ಪ ನಾಗಮಾರಪಳ್ಳಿ ಸ್ಮರಿಸಿದ ಸಿಎಂ ಬೊಮ್ಮಾಯಿ: ಔರಾದ್‌ನಲ್ಲಿ ನಡೆದ ಬಿಜೆಪಿಯ ಜನಸಂಕಲ್ಪ ಯಾತ್ರೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ದಿ. ಮಾಜಿ ಸಚಿವ ಗುರುಪಾದಪ್ಪ ನಾಗಮಾರಪಳ್ಳಿ ಅವರನ್ನು ಸ್ಮರಿಸಿಕೊಂಡರು. ಗುರುಪಾದಪ್ಪ ನಾಗಮಾರಪಳ್ಳಿ ಅವರು ಐದು ಬಾರಿ ಔರಾದ್‌ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ನನ್ನ ತಂದೆಗೆ ಅತ್ಯಂತ ಆತ್ಮೀಯರಾಗಿದ್ದರು. ನನ್ನ ತಂದೆಯೇ ಅವರನ್ನು ಮೊದಲ ಬಾರಿಗೆ ಸಚಿವರನ್ನಾಗಿ ಮಾಡಿದ್ದರು ಎಂದು ಹೇಳಿದರು.

ಚರ್ಮಗಂಟು ರೋಗ ತಡೆಗೆ 13 ಕೋಟಿ ಬಿಡುಗಡೆ: ಸಿಎಂ ಬೊಮ್ಮಾಯಿ ಸೂಚನೆ

ನಾಗಮಾರಪಳ್ಳಿ ಬಡವರು, ರೈತರ ಬಂಧುವಾಗಿ ಕೆಲಸ ಮಾಡಿದ್ದರು. ಅವರ ಪುತ್ರ ಸೂರ್ಯಕಾಂತ ಇಲ್ಲೇ ಇದ್ದಾರೆ. ಈ ನೆಲಕ್ಕೆ ಬಂದ ಸಂದರ್ಭದಲ್ಲಿ ನಾನು ಅವರನ್ನು ಸ್ಮರಿಸಿಕೊಳ್ಳುತ್ತಿರುವೆ ಎಂದು ನುಡಿದರು. ಔರಾದ್‌ ಪಟ್ಟಣದಲ್ಲಿ ಅವರು ನಾಗಮಾರಪಳ್ಳಿ ಅವರ ಮನೆಗೂ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ್‌, ಸಚಿವರಾದ ಗೋವಿಂದ ಕಾರಜೋಳ, ಶಂಕರ ಪಾಟೀಲ್‌ ಮುನೇನಕೊಪ್ಪ, ಸೂರ್ಯಕಾಂತ ನಾಗಮಾರಪಳ್ಳಿ ಸೇರಿದಂತೆ ಇದ್ದರು.

click me!